ಸಂಗೀತಾ ಕಟ್ಟಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದರು ಮತ್ತು ಖ್ಯಾತ ಹಿನ್ನಲೆ ಗಾಯಕಿ. ಸಂಗೀತ ಭಾರತಿ ಎಂಬ ಬಿರುದಿನಿಂದ ಕರೆಯಲ್ಪಡುವ ಇವರು ಸಂಗೀತ ನಿರ್ದೇಶಕಿಯಾಗಿಯೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.ಹಿಂದೂಸ್ಥಾನಿ,ವಚನ,ದಾಸವಾಣಿ,ಅಭಂಗಗಳು,ಭಾವಗೀತೆ,ಜನಪದ, ಚಿತ್ರಗೀತೆಗಳು ಮುಂತಾದ ಸಂಗೀತದ ಎಲ್ಲಾ ಪ್ರಕಾರಗಳು ಇವರಿಗೆ ಸುಲಲಿತ.
1970 ರಲ್ಲಿ ಧಾರವಾಡದಲ್ಲಿ ದಸರಾದ ಸರಸ್ವತಿ ಪೂಜಾ ದಿನ ಜನಿಸಿದರು.ಕೇವಲ ನಾಲ್ಕು ವರ್ಷದವರಿದ್ದಾಗ ಪ್ರಸಿದ್ಧ ಸಂಗೀತ ನಿರ್ದೇಶಕ ನೌಷದ ಅಲಿಯವರ ಸಂಪರ್ಕಕ್ಕೆ ಬಂದ ಸಂಗೀತಾ ಅಲ್ಲಿಂದ ಅವರ ವಿಧ್ಯಾರ್ಥಿಯಾದರು.ನಂತರ ಪಂಡಿತ್ ಬಸವರಾಜ್ ರಾಜಗುರು ಅವರಿಂದ ಸುಮಾರು 12 ವರ್ಷಗಳ ತರಬೇತಿ ಪಡೆದರು. ರಸಾಯನ ಶಾಸ್ತ್ರದಲ್ಲಿ ಪದವಿ ಪಡೆದಿರುವ ಇವರು ತಮ್ಮ ನಾಲ್ಕನೇ ವಯಸ್ಸಿನಲ್ಲಿ ಮೊದಲ ಸಂಗೀತ ಕಚೇರಿ ನೀಡಿದ್ದರು.
ಹಿನ್ನಲೆ ಗಾಯಕಿಯಾಗಿ ಸುಮಾರು 5000 ಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಸಂಗೀತಾ ಕಟ್ಟಿಯವರು ಇಂಗ್ಲೆಂಡ್,ಅಮೇರಿಕಾ,ಕೆನಡಾ, ಅಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಹಾಂಗ್‌ಕಾಂಗ್, ಬಹ್ರೇನ್ ಮುಂತಾದ ದೇಶಗಳಲ್ಲಿ ಹಲವಾರು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.