ಶ್ವೇತಾ ಚೆಂಗಪ್ಪ ಕನ್ನಡ ಚಲನಚಿತ್ರರಂಗದ ನಟಿ, ನಿರೂಪಕಿ ಮತ್ತು ಪ್ರಖ್ಯಾತ ಕಿರುತೆರೆ ಅಭಿನೇತ್ರಿ. ಸುಮತಿಯಾಗಿ ಕಿರುತೆರೆಗೆ ಬಂದ ಇವರು ಕಾದಂಬರಿಯಾಗಿ ಇಡೀ ಕನ್ನಡ ಕಿರುತೆರೆ ಲೋಕವನ್ನೇ ಗೆದ್ದರು.ಇವರು ಕೊಡಗಿನ ಸೋಮವಾರ ಪೇಟೆಯಲ್ಲಿ 1987 ಫೆಬ್ರವರಿ 9 ರಂದು ಜನಿಸಿದರು.
ಕಿರುತೆರೆ ಪಯಣ
ಎಸ್. ನಾರಾಯಣ ನಿರ್ದೇಶನದ `ಸುಮತಿ' ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿದ ಶ್ವೇತಾ 2006 ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾದ `ಕಾದಂಬರಿ' ಸೀರಿಯಲ್ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೇರಿದರು. ಈ ಧಾರಾವಾಹಿ ಆ ಕಾಲದಲ್ಲಿ ಸೃಷ್ಟಿಸಿದ್ದ ಕ್ರೇಜ್ ಅಭೂತಪೂರ್ವವಾಗಿತ್ತು.ಮುಂದೆ ಈ ಟಿವಿ ಕನ್ನಡದಲ್ಲಿ ಪ್ರಸಾರವಾದ `ಸುಕನ್ಯ' ಮತ್ತು `ಅರುಂಧತಿ' ಧಾರಾವಾಹಿಯಲ್ಲಿಯೂ ಅಭಿನಯಿಸಿ ಪ್ರೇಕ್ಷಕರ ಮನಗೆದ್ದರು.
ನಿರೂಪಕಿ
ನಟನೆ ಮಾತ್ರವಲ್ಲದೇ ನಿರೂಪಣೆಗೂ ಇಳಿದ ಶ್ವೇತಾ ಕಿರುತೆರೆಯಲ್ಲಿ `ಯಾರಿಗುಂಟು ಯಾರಿಗಿಲ್ಲಾ' ಎಂಬ ಕಾರ್ಯಕ್ರಮ ರೂಪಿಸಿ ಸೈ ಎನಸಿಕೊಂಡರು.ನಂತರ ಜೀ ಕನ್ನಡದಲ್ಲಿ `ಕುಣಿಯೋಣ ಬಾರಾ' ಎಂಬ ಚಿಣ್ಣರರ ನೃತ್ಯ ಶೋ ಅನ್ನು ನಿರೂಪಿಸಿದರು. `ಡ್ಯಾನ್ಸ್ ಜ್ಯೂನಿಯರ್ಸ್ ಡ್ಯಾನ್ಸ್' ಮುಂತಾದ ರಿಯಾಲಿಟಿ ಶೋಗಳ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ.
ಸಿನಿಪಯಣ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ತಂಗಿಗಾಗಿ' ಚಿತ್ರದಲ್ಲಿ ದರ್ಶನ್ ಅವರ ತಂಗಿ ಪಾತ್ರದಲ್ಲಿ ಅಭಿನಯಿಸುವ ಮೂಲಕ ಸಿನಿಪಯಣ ಆರಂಭಿಸಿದರು.ನಂತರ ಸಾಹಸಸಿಂಹ ವಿಷ್ಣುವರ್ಧನ ಅಭಿನಯದ `ವರ್ಷ' ಚಿತ್ರದಲ್ಲಿ ನಟಿಸಿ ತಮ್ಮ ಅಭಿನಯ ಪ್ರೌಡಿಮೆ ಮೆರೆದರು. `ಕೃಷ್ಣನ್ ಮ್ಯಾರೇಜ್ ಸ್ಟೋರಿ',`ಗನ್' ಮುಂತಾದ ಚಿತ್ರಗಳಲ್ಲಿ ಕಂಠದಾನ ಕಲಾವಿದೆಯಾಗಿ ಕೂಡ ಮೆಚ್ಚುಗೆ ಗಳಿಸಿದರು.
ಬಿಗ್ ಬಾಸ್ ಕನ್ನಡ
ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ 2 ನೇ ಸೀಜನ್ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ ಇವರು ನಾಲ್ಕನೆ ಸ್ಥಾನಗಳಿಸಿದರು. ಇವರ ಜೊತೆ ಅಕುಲ್ ಬಾಲಾಜಿ,ಸೃಜನ್ ಲೋಕೇಶ್,ಶಕೀಲಾ,ನೀತು ಮುಂತಾದವರು ಈ ಸೀಸನ್‌ನಲ್ಲಿ ಭಾಗವಹಿಸಿದ್ದರು.
ಮಜಾಟಾಕೀಸ್
ಪ್ರಸ್ತುತ ಸೃಜನ್ ಲೋಕೇಶ್ ನಿರೂಪಣೆಯ `ಮಜಾಟಾಕೀಸ್' ಕಾಮಿಡಿ ಶೋನಲ್ಲಿ ರಾಣಿ ಪಾತ್ರಧಾರಿಯಾಗಿ ಸೃಜನ್ ಜೊತೆ ಸೇರಿ ಪ್ರೇಕ್ಷಕರಿಗೆ ಕಚಗುಳಿ ಇಡುತ್ತಿದ್ದಾರೆ.
ಎರಡು ಬಾರಿ ಜೀ ಕನ್ನಡದ ಬೆಸ್ಟ್ ಆಂಕರ್ ಪ್ರಶಸ್ತಿ ಪಡೆದಿದ್ದಾರೆ.`ಅರುಂಧತಿ' ಸೀರಿಯಲ್‌ನಲ್ಲಿನ ನಟನೆಗಾಗಿ ಕರ್ನಾಟಕ ಸರಕಾರ ನೀಡುವ ಮಧ್ಯಂಸನ್ಮಾನ ಪ್ರಶಸ್ತಿ ಕೂಡ ಪಡೆದಿದ್ದಾರೆ.
ನಟಿಸಿದ ಧಾರಾವಾಹಿಗಳು
ಕಾದಂಬರಿ,ಸುಮತಿ,ಸುಕನ್ಯ,ಆರುಂಧತಿ,ಸೌಂದರ್ಯ
ಭಾಗವಹಿಸಿದ/ನಿರೂಪಿಸಿದ ರಿಯಾಲಿಟಿ ಶೋಗಳು
ಡೀ ಡ್ಯಾನ್ಸ್ ಶೋ- ಈ ಟಿವಿ ಕನ್ನಡ
ಯಾರಿಗುಂಟು ಯಾರಿಗಿಲ್ಲ (ನಿರೂಪಕಿ)- ಜೀ ಕನ್ನಡ
ಕುಣಿಯೋಣ ಬಾರ (ನಿರೂಪಕಿ)- ಈ ಟಿವಿ ಕನ್ನಡ
ಬಿಗ್‌ಬಾಸ್ ಸೀಸನ್ 2 (ಸ್ಪರ್ಧಿ)- ಈ ಟಿವಿ ಕನ್ನಡ
ಸೂಪರ್ ಮಿನಿಟ್ (ಸ್ಪರ್ಧಿ) -ಈ ಟಿವಿ ಕನ್ನಡ
ಮಜಾ ಟಾಕೀಸ್ - ಕಲರ್ಸ್ ಕನ್ನಡ
ಡ್ಯಾನ್ಸಿಂಗ್ ಸ್ಟಾರ್ - ಕಲರ್ಸ್ ಕನ್ನಡ
ಡ್ಯಾನ್ಸ್ ಡ್ಯಾನ್ಸ್ ಜ್ಯೂನಿಯರ್ಸ - ಸ್ಟಾರ್ ಸುವರ್ಣ