ಯೋಗರಾಜ್ ಭಟ್ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ. ವಿಕಟಕವಿ ಅಂತಲೇ ಖ್ಯಾತಿ ಪಡೆದಿರುವ ಇವರು, 1972ರ ಅಕ್ಟೋಬರ್ 8ರಂದು ಜನಿಸಿದರು. ಯೋಗರಾಜ್ ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಂದಾರ್ತಿಯವರು. ತಮ್ಮ ಬಾಲ್ಯವನ್ನು ಮಂದಾರ್ತಿಯಲ್ಲಿ ಕಳೆದರು. ಆನಂತರ ಅವರ ಕುಟುಂಬ ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಲೆಸಿತು. ಯೋಗರಾಜ್ ಭಟ್ ತಮ್ಮ ಕಾಲೇಜು ಶಿಕ್ಷಣವನ್ನು ಮ್ಯಸೂರಿನಲ್ಲಿ ಮುಗಿಸಿದ್ದಾರೆ.
ವೃತ್ತಿಜೀವನ
ಗಿರೀಶ್ ಕಾಸರವಳ್ಳಿ, ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶನದ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಯೋಗರಾಜ್ ಭಟ್, ಕಿರುತೆರೆಯಲ್ಲಿ ಚಕ್ರ ಎಂಬ ಸೀರಿಯಲ್ ಕೂಡ ನಿರ್ದೇಶನ ಮಾಡಿದ್ದಾರೆ. 2003ರಲ್ಲಿ ತೆರಕಂಡ ಮಣಿ ಚಿತ್ರದಿಂದ ಸಿನಿಮಾ ನಿರ್ದೇಶನಕ್ಕಿಳಿದರು. ಈ ಚಿತ್ರ ಉತ್ತಮ ವಿಮರ್ಶೆ ಪಡೆದು, ನಾಲ್ಕು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆಯಿತು.
ನಂತರ ರಂಗ SSLC, ಮುಂಗಾರು ಮಳೆ, ಗಾಳಿಪಟ, ಮನಸಾರೆ, ಪಂಚರಂಗಿ, ಪರಮಾತ್ಮ, ದನ ಕಾಯೋನು, ವಾಸ್ತು ಪ್ರಕಾರ, ಡ್ರಾಮಾ, ಮುಗುಳುನಗೆ ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದರು. ಭಟ್ಟರು ನಿರ್ದೇಶಿಸಿದ ಬಹುತೇಕ ಎಲ್ಲಾ ಚಿತ್ರಗಳು ಬಾಕ್ಸಾಪೀಸ್‌ನಲ್ಲಿ ಉತ್ತಮ ಕಲೆಕ್ಷನ್ ಜೊತೆ ಒಳ್ಳೆಯ ವಿಮರ್ಶೆ ಕೂಡ ಪಡೆದಿವೆ.
ಚಿತ್ರಸಾಹಿತಿ
ಯೋಗರಾಜ್ ಭಟ್ ನಿರ್ದೇಶಕ ಮಾತ್ರವಲ್ಲ, ಚಿತ್ರಸಾಹಿತಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಮುಂಗಾರು ಮಳೆ, ಗಾಳಿಪಟ, ಜಂಗ್ಲಿ, ಜಾಕಿ, ಮನಸಾರೆ, ಪರಮಾತ್ಮ, ವಿಕ್ಟರಿ, ಹುಡುಗರು, ಬಚ್ಚನ್, ಅಧ್ಯಕ್ಷ, ಗಜಕೇಸರಿ ಮುಂತಾದ ಸಿನಿಮಾಗಳಿಗೆ ಸಾಹಿತ್ಯ ನೀಡಿದ್ದಾರೆ.