For Quick Alerts
  ALLOW NOTIFICATIONS  
  For Daily Alerts

  2022: ಈ ವರ್ಷ ನಮ್ಮನ್ನಗಲಿದ ಸ್ಯಾಂಡಲ್‌ವುಡ್ ತಾರೆಯರಿವರು

  |

  2022 ಚಂದನವನದ ಪಾಲಿಗೆ ಅದೃಷ್ಟದ ವರ್ಷ ಎಂದೇ ಹೇಳಲಾಗುತ್ತಿದೆ. ಕನ್ನಡ ಚಿತ್ರರಂಗದ ಸಿನಿಮಾಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿನುಗಿದ ವರ್ಷ ಇದು.

  ಹಲವು ಹೊಸ, ಗುಣಮಟ್ಟದ, ಕಂಟೆಂಟ್ ಆಧರಿತ ಸಿನಿಮಾಗಳು ಕನ್ನಡ ಚಿತ್ರರಂಗದಿಂದ ಬಂದಿದ್ದು ಮಾತ್ರವಲ್ಲ ನೂರಾರು ಕೋಟಿ ಗಳಿಕೆಯನ್ನೂ ಮಾಡಿವೆ. 2022 ವರ್ಷವನ್ನು ಕನ್ನಡ ಚಿತ್ರರಂಗ ಬೆಂಚ್ ಮಾರ್ಕ್‌ ಮಾದರಿಯಲ್ಲಿ ನೆನಪಿಟ್ಟುಕೊಳ್ಳಲಿದೆ.

  ಆದರೆ ಈ ವರ್ಷ ಎಲ್ಲವೂ ಸಿಹಿಯೇ ಆಗಿರಲಿಲ್ಲ. ಹಲವು ಖ್ಯಾತ ಕಲಾವಿದರು ನಮ್ಮನ್ನಗಲಿ ಹೋಗಿದ್ದಾರೆ. ಈ ವರ್ಷ ಅಗಲಿದ ಹಿರಿತೆರೆ, ಕಿರುತೆರೆಯ ಕಲಾವಿದರ ಪಟ್ಟಿ ಇಲ್ಲಿದೆ.

  ಆಘಾತ ತಂದ ಬಾಲಕಲಾವಿದೆ ಸಮನ್ವಿ ಸಾವು

  ಆಘಾತ ತಂದ ಬಾಲಕಲಾವಿದೆ ಸಮನ್ವಿ ಸಾವು

  ವರ್ಷದ ಆರಂಭದಲ್ಲಿಯೇ 'ನಮ್ಮಮ್ಮ ಸೂಪರ್ ಸ್ಟಾರ್' ಖ್ಯಾತಿಯ ಬಾಲನಟಿ ಸನಮ್ವಿ ಅಪಘಾತದಲ್ಲಿ ನಿಧನ ಹೊಂದಿದರು. ಸಮನ್ವಿ ಖ್ಯಾತ ಹರಿಕಥೆ ದಾಸರಾದ ಗುರುರಾಜ ನಾಯ್ಡು ಅವರ ಮೊಮ್ಮಗಳು. ನಟಿ ಅಮೃತಾ ನಾಯ್ಡು ಮಗಳು. ಚಿಕ್ಕ ವಯಸ್ಸಿನಲ್ಲಿಯೇ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಕಿರು ತೆರೆ ವೀಕ್ಷಕರ ಮೆಚ್ಚುಗೆ ಗಳಿಸಿದ್ದರು. ಅದೇ ರಿಯಾಲಿಟಿ ಶೋ ಮುಗಿಸಿ ಮನಗೆ ತೆರಳುವಾಗ ಅಪಘಾತದಲ್ಲಿ ದುರ್ಮರಣ ಹೊಂದಿದರು.

  ಹಿರಿಯ ನಟ ಅಶೋಕ್ ರಾವ್

  ಹಿರಿಯ ನಟ ಅಶೋಕ್ ರಾವ್

  ಸ್ಯಾಂಡಲ್‌ವುಡ್‌ನ ಹಿರಿಯ ಪೋಷಕ ನಟ ಅಶೋಕ್ ರಾವ್ ಅವರು ಫೆಬ್ರವರಿ 02ರಂದು ನಿಧನ ಹೊಂದಿದರು. ಕ್ಯಾನ್ಸರ್‌ನಿಂದ ಅವರು ಬಳಲುತ್ತಿದ್ದರು. ಅಶೋಕ್ ರಾವ್ ಕನ್ನಡ ಚಿತ್ರರಂಗದ ಹಿರಿಯ ನಟರಾಗಿದ್ದು ಡಾ.ರಾಜ್‌ಕುಮಾರ್, ಶಂಕರ್ ನಾಗ್ ಸೇರಿದಂತೆ ಹಲವು ದಿಗ್ಗಜ ನಟರೊಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ಡಾ.ರಾಜ್‌ಕುಮಾರ್ ನಟಿಸಿದ್ದ 'ಪರುಶುರಾಮ' ಸಿನಿಮಾದಲ್ಲಿ ಖಳನಾಯಕ ಪಾತ್ರದಲ್ಲಿ ನಟಿಸಿದ್ದ ಅಶೋಕ್ ರಾವ್, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಬಾ ನಲ್ಲೆ ಮಧು ಚಂದ್ರಕೆ' ಸಿನಿಮಾದಲ್ಲಿ ತನಿಖಾಧಿಕಾರಿಯ ಪಾತ್ರದಲ್ಲಿ ಹೆಚ್ಚು ಜನಪ್ರಿಯರು.

  ಹಿರಿಯ ನಟಿ ಭಾರ್ಗವಿ ನಾರಾಯಣ್

  ಹಿರಿಯ ನಟಿ ಭಾರ್ಗವಿ ನಾರಾಯಣ್

  ಕನ್ನಡದ ಕಿರುತೆರೆ, ರಂಗಭೂಮಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ಕಲಾವಿದೆ ಭಾರ್ಗವಿ ನಾರಾಯಣ್ ಫೆಬ್ರವರಿ 14 ರಂದು ನಿಧನರಾದರು. ಸ್ಯಾಂಡಲ್‌ವುಡ್‌ನ ನಟರಾದ ಪ್ರಕಾಶ್ ಬೆಳವಾಡಿ ಮತ್ತು ಸುಧಾ ಬೆಳವಾಡಿ ಅವರ ಅಮ್ಮ ಭಾರ್ಗವಿ ನಾರಾಯಣ್. ಇವರು 'ಬಾ ನಲ್ಲೆ ಮಧುಚಂದ್ರಕೆ', 'ಎರಡು ಕನಸು', 'ಪಲ್ಲವಿ ಅನುಪಲ್ಲವಿ', ಜಂಬೂ ಸವಾರಿ, ಇದೊಳ್ಳೆ ರಾಮಾಯಣ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ರಾಜಕುಮಾರ' ಸಿನಿಮಾದಲ್ಲೂ ಚಿಕ್ಕದೊಂದು ಪಾತ್ರದಲ್ಲಿ ನಟಿಸಿದ್ದರು.

  ಕಲಾತಪಸ್ವಿ ರಾಜೇಶ್

  ಕಲಾತಪಸ್ವಿ ರಾಜೇಶ್

  ಕನ್ನಡ ಚಿತ್ರರಂಗದ ಹಿರಿಯ ನಟ 'ಕಲಾತಪಸ್ವಿ' ರಾಜೇಶ್ ಫೆಬ್ರವರಿ 19 ರಂದು ಮುಂಜಾನೆ ನಿಧನ ಹೊಂದಿದರು. ಖ್ಯಾತ ನಟ ಅರ್ಜುನ್ ಸರ್ಜಾರ ಮಾವ ಆಗಿದ್ದ ರಾಜೇಶ್ ಕನ್ನಡದ ಹಲವಾರು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾಯಕ ನಟನಾಗಿ, ಪೋಷಕ ನಟನಾಗಿ, ವಿಲನ್ ಆಗಿ ಸಹ ರಾಜೇಶ್ ನಟಿಸಿದ್ದಾರೆ. ಅವರನ್ನು 'ಕಲಾತಪಸ್ವಿ' ರಾಜೇಶ್ ಎಂದೇ ಕರೆಯಲಾಗುತ್ತಿತ್ತು.

  ಹಾಸ್ಯನಟ ಮೋಹನ್ ಜುನೇಜ

  ಹಾಸ್ಯನಟ ಮೋಹನ್ ಜುನೇಜ

  ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯನಟ ಮೋಹನ್ ಜುನೇಜ ಮೇ 07 ರಂದು ನಿಧನ ಹೊಂದಿದರು. 'ಕೆಜಿಎಫ್' ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅವರು ಹಾಸ್ಯನಟನಾಗಿ, ಪೋಷಕ ನಟನಾಗಿ ಕಾಣಿಸಿಕೊಂಡಿದ್ದರು. ಹಲವಾರು ಧಾರಾವಾಹಿಗಳಲ್ಲಿಯೂ ಮೋಹನ್ ಜುನೇಜ ನಟಿಸಿದ್ದರು.

  ಚೇತನಾ ರಾಜ್ ಜೀವ ತೆಗೆದ ಕಾಸ್ಮೆಟಿಕ್ ಸರ್ಜರಿ

  ಚೇತನಾ ರಾಜ್ ಜೀವ ತೆಗೆದ ಕಾಸ್ಮೆಟಿಕ್ ಸರ್ಜರಿ

  ಕನ್ನಡ ಕಿರುತೆರೆ ನಟಿ ಚೇತನಾ ರಾಜ್ ಮೇ 17ರಂದು ನಿಧನರಾದರು. ಇವರ ಸಾವನ್ನು ನಾಯಕಿಯರು ಪಾಠವಾಗಿ ತೆಗೆದುಕೊಳ್ಳಬೇಕು ಎಂಬ ಚರ್ಚೆ ಸಹ ಆಯಿತು. ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿದ್ದ ನಟಿ ಚೇತನಾ ರಾಜ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ರಾಜಾಜಿನಗರ ಬಳಿ ಇರುವ ಶೆಟ್ಟಿ ಆಸ್ಪತ್ರೆಯಲ್ಲಿ ಫ್ಯಾಟ್ ರಿಯಾಕ್ಷನ್ ಸರ್ಜರಿಗೆ ಚೇತನಾ ಒಳಗಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಬಳಿಕ ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಾಗಿ ಆಸ್ಪತ್ರೆಯನ್ನು ಮುಚ್ಚಲಾಯಿತು.

  ಯೋಗರಾಜ್ ಭಟ್ ಮಾವ ಸತ್ಯ ಉಮ್ಮತ್ತಾಲ್ ನಿಧನ

  ಯೋಗರಾಜ್ ಭಟ್ ಮಾವ ಸತ್ಯ ಉಮ್ಮತ್ತಾಲ್ ನಿಧನ

  ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರ ಮಾವ ಹಾಗೂ ಸ್ವತಃ ನಟರಾಗಿದ್ದ ಸತ್ಯ ಉಮ್ಮತ್ತಾಲ್ ಅವರು ಜೂನ್ 04 ರಂದು ನಿಧನರಾದರು. ಯೋಗರಾಜ್ ಭಟ್ಟರ ಶಿಷ್ಯರಲ್ಲಿ ಒಬ್ಬರಾದ ಪವನ್ ಕುಮಾರ್ ನಿರ್ದೇಶಿಸಿದ ಮೊದಲ ಸಿನಿಮಾ 'ಲೈಫು ಇಷ್ಟೇನೆ' ಸಿನಿಮಾ ಮೂಲಕ ನಟನೆ ಆರಂಭಿಸಿದ್ದ ಸತ್ಯ ಉಮ್ಮತ್ತಾಲ್, ಆ ನಂತರ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದರು. 'ದನ ಕಾಯೋನು' ಸೇರಿದಂತೆ ಸೂರಿಯ 'ಕಡ್ಡಿಪುಡಿ', 'ಕೆಂಡ ಸಂಪಿಗೆ', ಮಂಸೋರೆಯ 'ಆಕ್ಟ್ 1978', 'ಜಯಮ್ಮನ ಮಗ', 'ಪ್ರೀತಿ ಗೀತಿ ಇತ್ಯಾದಿ' ಇನ್ನು ಹಲವು ಕನ್ನಡ ಸಿನಿಮಾಗಳಲ್ಲಿ ಭಟ್ಟರು ಸತ್ಯ ಉಮ್ಮತ್ತಾಲ್ ನಟಿಸಿದ್ದರು.

  ಅಣ್ಣಾವ್ರೊಟ್ಟಿಗೆ ನಟಿಸಿದ್ದ ಹಿರಿಯ ನಟಿ ಹೇಮಲತಾ

  ಅಣ್ಣಾವ್ರೊಟ್ಟಿಗೆ ನಟಿಸಿದ್ದ ಹಿರಿಯ ನಟಿ ಹೇಮಲತಾ

  ಗುಬ್ಬಿ ವೀರಣ್ಣ ಮೊಮ್ಮಗಳು, ಕನ್ನಡ ಚಿತ್ರರಂಗದ ಹಿರಿಯ ನಟಿ ಹೇಮಲತಾ ಜುಲೈ 04 ರಂದು ನಿಧನ ಹೊಂದಿದರು. ಹೇಮಲತಾ ಅವರು ಡಾ ರಾಜ್‌ಕುಮಾರ್, ಉದಯ್ ಕುಮಾರ್ ಸೇರಿದಂತೆ ಹಲವು ಸ್ಟಾರ್ ನಟರೊಟ್ಟಿಗೆ ನಟಿಸಿದ್ದಾರೆ. ಗುಬ್ಬಿ ವೀರಣ್ಣ ಅವರ ಪುತ್ರಿಯಾಗಿದ್ದ ಹೇಮಲತಾ ದೊಡ್ಡಬಳ್ಳಾಪುರದ ಸೋಮೇಶ್ವರ ಬಡವಾಣೆಯಲ್ಲಿ ವಾಸವಾಗಿದ್ದರು. 'ಎಮ್ಮೆ ತಮ್ಮಣ್ಣ', 'ಕಲಾವತಿ' ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಹೇಮಲತಾ ನಟಿಸಿದ್ದರು.

  ಗಾಯಕ ಶಿವಮೊಗ್ಗ ಸುಬ್ಬಣ್ಣ

  ಗಾಯಕ ಶಿವಮೊಗ್ಗ ಸುಬ್ಬಣ್ಣ

  ರಾಷ್ಟ್ರಪ್ರಶಸ್ತಿ ವಿಜೇತ ಗಾಯಕ ಶಿವಮೊಗ್ಗ ಸುಬ್ಬಣ್ಣ ಆಗಸ್ಟ್ 12 ರಂದು ನಿಧನ ಹೊಂದಿದರು. ಹಲವು ದಿನಗಳಿಂದ ಸುಬ್ಬಣ್ಣನವರು ಅನಾರೋಗ್ಯದಿಂದ ಬಳಲುತ್ತಿದ್ದರು. ಸುಗಮನ ಸಂಗೀತ ಕ್ಷೇತ್ರದಲ್ಲಿ ಸುಬ್ಬಣ್ಣನವರದ್ದು ದೊಡ್ಡ ಹೆಸರು. 'ಕಾಡು ಕುದುರೆ' ಸಿನಿಮಾಕ್ಕಾಗಿ ಶಿವಮೊಗ್ಗ ಸುಬ್ಬಣ್ಣ ಹಾಡಿದ 'ಕಾಡು ಕುದುರೆ ಓಡಿ ಬಂದಿತ್ತ' ಹಾಡಿಗೆ ರಾಷ್ಟ್ರಪ್ರಶಸ್ತಿ ಸಹ ಲಭಿಸಿತ್ತು.

  ಜನಪ್ರಿಯ ನಟ ಮಂಡ್ಯ ರವಿ ಸಾವು

  ಜನಪ್ರಿಯ ನಟ ಮಂಡ್ಯ ರವಿ ಸಾವು

  ಜನಪ್ರಿಯ ಕಿರುತೆರೆ ಹಾಗೂ ಹಿರಿತೆರೆ ನಟ ಮಂಡ್ಯ ರವಿ ಸೆಪ್ಟೆಂಬರ್ 14 ರಂದು ನಿಧನ ಹೊಂದಿದರು. ಲಿವರ್​ಸಿರೋಸಿಸ್ ಖಾಯಿಲೆಯಿಂದ ಅವರು ಬಳಲುತ್ತಿದ್ದರು. ಮಂಡ್ಯ ರವಿ, ಟಿ.ಎನ್.ಸೀತಾರಾಮ್ ನಿರ್ದೇಶನದ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಜೊತೆಗೆ ಹಲವು ಸಿನಿಮಾಗಳಲ್ಲಿಯೂ ಮಂಡ್ಯ ರವಿ ಪೋಷಕ ನಟರಾಗಿ ಕಾಣಿಸಿಕೊಂಡಿದ್ದರು. ಪುಟ್ಟಗೌರಿ ಮದುವೆ, ಮಗಳು ಜಾನಕಿ, ಯಶೋಧೆ, ಚಿತ್ರಲೇಖ, ನಮ್ಮನೆ ಯುವರಾಣಿ, ಮಹಾಮಾಯಿ ಇನ್ನೂ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು.

  ಹಿರಿಯ ನಟ ಲೋಹಿತಾಶ್ವ

  ಹಿರಿಯ ನಟ ಲೋಹಿತಾಶ್ವ

  ಹಿರಿಯ ನಟ ಲೋಹಿತಾಶ್ವ ನವೆಂಬರ್ 08 ರಂದು ನಿಧನ ಹೊಂದಿದರು. ಸುಮಾರು ಐನೂರಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಲೋಹಿತಾಶ್ವ ನಟಿಸಿದ್ದರು. ಸಿನಿಮಾ ಮಾತ್ರವೇ ಅಲ್ಲದೆ ರಂಗಭೂಮಿ, ಧಾರಾವಾಹಿಗಳಲ್ಲಿಯೂ ಲೋಹಿತಾಶ್ವರದ್ದು ದೊಡ್ಡ ಹೆಸರು. ಅವರ ಪುತ್ರ ಶರತ್ ಲೋಹಿತಾಶ್ವ ಸಹ ಜನಪ್ರಿಯ ನಟರಾಗಿ ಗುರುತಿಸಿಕೊಂಡಿದ್ದಾರೆ.

  ಕೆಜಿಎಫ್ ತಾತ ಕೃಷ್ಣ ಜಿ ರಾವ್

  ಕೆಜಿಎಫ್ ತಾತ ಕೃಷ್ಣ ಜಿ ರಾವ್

  ಕೆಜಿಎಫ್' ಹಾಗೂ 'ಕೆಜಿಎಫ್ 2' ಸಿನಿಮಾಗಳಲ್ಲಿ ನಟಿಸಿರುವ ಕೃಷ್ಣ.ಜಿ ರಾವ್ ಡಿಸೆಂಬರ್ 07 ರಂದು ನಿಧನ ಹೊಂದಿದ್ದಾರೆ. ಅವರಿಗೆ ಸುಮಾರು 85 ವರ್ಷ ವಯಸ್ಸಾಗಿತ್ತು. ಕೆಜಿಎಫ್ ಸಿನಿಮಾದ ಮೂಲಕ ಬಹಳ ವೈರಲ್ ಆಗಿದ್ದ ಕೃಷ್ಣ.ಜಿ ರಾವ್ ಗೆ ಆ ನಂತರ ಹಲವು ಸಿನಿಮಾಗಳಲ್ಲಿ ಅವಕಾಶ ಲಭಿಸಿತು. 'ನ್ಯಾನೊ ನಾರಾಯಣಪ್ಪ' ಹೆಸರಿನ ಸಿನಿಮಾಕ್ಕೆ ಇವರೇ ನಾಯಕ. ಸುಧಾರಾಣಿ, ಶಶಿಕುಮಾರ್ ನಟನೆಯ 'ವಿಧಿ 370' ಸಿನಿಮಾದಲ್ಲಿ ಕಾಶ್ಮೀರಿ ಪಂಡಿತನ ಪಾತ್ರದಲ್ಲಿ ಕೃಷ್ಣಾಜಿ ರಾವ್ ನಟಿಸಿದ್ದರು.

  ಗಂಡಸಿ ನಾಗರಾಜ್

  ಗಂಡಸಿ ನಾಗರಾಜ್

  ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಸಿನಿಮಾಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿ ಹಾಗೂ ಕೆಲವು ಸಿನಿಮಾಗಳಲ್ಲಿ ಹಾಸ್ಯ ನಟರಾಗಿಯೂ ಕೆಲಸ ಮಾಡಿದ್ದ ಗಂಡಸಿ ನಾಗರಾಜ್ ಡಿಸೆಂಬರ್ 12 ರಂದು ನಿಧನರಾಗಿದ್ದಾರೆ. ಗಂಡಸಿ ನಾಗರಾಜ್ ಅವರು ನವರಸ ನಾಯಕ ಜಗ್ಗೇಶ್ ಅವರ ಆಪ್ತ ಕಾಸ್ಟ್ಯೂಮ್ ಡಿಸೈನರ್ ಆಗಿದ್ದರು. ಜಗ್ಗೇಶ್ ಅವರ ಜೊತೆ 35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. 35 ವರ್ಷಕ್ಕೂ ಹೆಚ್ಚು ಕಾಲ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದರು ಗಂಡಸಿ ನಾಗರಾಜ್.

  FB Artcles
  English summary
  2022: Sandalwood and Kannada Tv celebrities who passed away this year. Here is the full list.
  Wednesday, December 14, 2022, 18:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X