twitter
    For Quick Alerts
    ALLOW NOTIFICATIONS  
    For Daily Alerts

    ಮಣಿರತ್ನಂ ಎಂಬ 'ಸಿನಿಮಾ ಮಾಸ್ಟರ್' ನಡೆದು ಬಂದ ಹಾದಿ

    |

    ಅದು 1980-90 ರ ದಶಕ. ಭಾರತವೆಂದರೆ ಹಿಂದಿ ಸಿನಿಮಾ ಎನ್ನುತ್ತಿದ್ದ ಕಾಲವದು. ಅತ್ಯುತ್ತಮ ಸಿನಿಮಾ ಎಂದರೆ ಶೋಲೆ, ದಿವಾರ್ ಎಂಬ ಉತ್ತರ ಬರುತ್ತಿತ್ತು. ಆದರೆ ಮಣಿರತ್ನಂರ 'ನಾಯಗನ್' ಸಿನಿಮಾ ಬಿಡುಗಡೆ ಆದ ನಂತರ ಇಡೀಯ ಹಿಂದಿ ಚಿತ್ರರಂಗ ಬಾಯಿ ಮೇಲೆ ಬೆರಳಿಟ್ಟುಕೊಂಡಿತ್ತು. 'ರೋಜಾ' ಅಂತೂ ಬಾಲವುಡ್ಡಿಗರ ಅಹಂ ಅನ್ನೆಲ್ಲಾ ನೆಲಕ್ಕೆ ಚಚ್ಚಿ, ಹಿಂದಿ ಸಿನಿಮಾ ಹಾಗೂ ದಕ್ಷಿಣ ಭಾರತ ಸಿನಿಮಾ ಎಂಬ ಗಡಿಯನ್ನು ಅಳಿಸಿ ಹಾಕಿಬಿಟ್ಟಿತು.

    ಭಾರತದಲ್ಲಿ ಹಲವಾರು ಸಿನಿಮಾ ನಿರ್ದೇಶಕರಿದ್ದಾರೆ. ಒಂದೂ ಫ್ಲಾಪ್ ನೀಡದ ನಿರ್ದೇಶಕರೂ ಇದ್ದಾರೆ ಆದರೆ ಮಣಿರತ್ನಂ ಅಂತೆ 'ಸಿನಿಮಾ ಭಾಷೆ'ಯ ಮೇಲೆ ಹಿಡಿತವುಳ್ಳ ನಿರ್ದೇಶಕ ಮತ್ತೊಬ್ಬರಿಲ್ಲ. 'ಸಿನಿಮಾ ಮಾಸ್ಟರ್' ಮಣಿರತ್ನಂಗೆ ಇಂದು 65ನೇ ವರ್ಷದ ಹುಟ್ಟುಹಬ್ಬ. ಈ ಸಮಯದಲ್ಲಿ ಅವರ ಸಿನಿ ಪಯಣದ ಮೇಲೆ. ಅವರು ಸೃಷ್ಟಿಸಿ ಕೊಟ್ಟ ಕಲಾ ಅದ್ಭುತದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ.

    'ಸಿನಿಮಾ ನೋಡುವುದು ಸಮಯದ ವ್ಯರ್ಥ' ಎಂದು ಭಾವಿಸಿದ್ದರು ಮಣಿರತ್ನಂ, ಸಿನಿಮಾ ಕುಟುಂಬದ ಹಿನ್ನೆಲೆಯಿದ್ದರೂ ಸಿನಿಮಾ ನೋಡುವುದು ಅಪರಾಧ ಎಂಬಂತೆ ಮಣಿರತ್ನಂ ಹಾಗೂ ಅವರ ಸಹೋದರರನ್ನು ಬೆಳೆಸಿದ್ದರು ಪೋಷಕರು. ಹಾಗಾಗಿಯೇ ಎಂಬಿಎ ಮುಗಿದ ಮೇಲೆ ಸಿನಿಮಾದ ಬದಲಿಗೆ ಕನ್ಸಲ್ಟೆನ್ಸಿ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದರು ಮಣಿ. ಆದರೆ ಮಣಿರತ್ನಂ ಜೀವನ ಬದಲಿಸಿದ್ದು ಕೆ.ಬಾಲಚಂದರ್ ನಿರ್ದೇಶನದ ಸಿನಿಮಾಗಳು. ಬಾಲಚಂದರ್ ಸಿನಿಮಾಗಳು, ಭಾರತಿರಾಜ ನಿರ್ದೇಶಿಸಿದ '16 ವಯತ್ತಿನಿಲೆ' ಇನ್ನೂ ಕೆಲವು ಸಿನಿಮಾಗಳು ಮಣಿರತ್ನಂ ಅನ್ನು ಸಿನಿಮಾದ ಕಡೆಗೆ ಸೆಳೆದವು.

    ಅದೇ ಸಮಯದಲ್ಲಿ ಖ್ಯಾತ ನಿರ್ದೇಶಕ ಬಿ.ಆರ್.ಪಂಥುಲು ಮಗ ರವಿ ಶಂಕರ್ ತನ್ನ ಮೊದಲ ಸಿನಿಮಾ ನಿರ್ದೇಶಿಸಲು ಯತ್ನಿಸುತ್ತಿದ್ದರು. ಮಣಿರತ್ನಂ ಅವರನ್ನು ಸೇರಿಕೊಂಡು, ಜೊತೆಗೆ ಬಾಲಚಂದರ್ ಮಗನನ್ನೂ ಸೇರಿಸಿಕೊಂಡು ಚಿತ್ರಕತೆ ತಯಾರಿಸಿ. ಕನ್ನಡದಲ್ಲಿ ಸಿನಿಮಾ ಮಾಡಲು ತಯಾರಾದರು. ವಿಷ್ಣುವರ್ಧನ್, ಅಂಬರೀಶ್, ಲಕ್ಷ್ಮಿ, ರೋಜಾ ರಮಣಿ ನಟಿಸುವುದು ಖಾತ್ರಿಯಾಗಿ. ಕೋಲಾರದಲ್ಲಿ ಚಿತ್ರೀಕರಣ ಸಹ ಪ್ರಾರಂಭವಾಯಿತು. ಚಿತ್ರೀಕರಣ ಸೆಟ್‌ನಲ್ಲಿ ತಾನಿರಬೇಕೆಂಬ ಆಸೆಯಿಂದ ಇದ್ದ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬಂದು ಬಿಟ್ಟರು ಮಣಿರತ್ನಂ. ಆದರೆ ಸಿನಿಮಾ ನಿಂತು ಹೋಯಿತು.

    ಕನ್ನಡದಲ್ಲಿ ಮೊದಲ ಸಿನಿಮಾ ನಿರ್ದೇಶನ

    ಕನ್ನಡದಲ್ಲಿ ಮೊದಲ ಸಿನಿಮಾ ನಿರ್ದೇಶನ

    ಕೆಲಸ ಬಿಟ್ಟ ನಂತರ ಹಲವು ಚಿತ್ರಕತೆಗಳನ್ನು ರಚಿಸಿಕೊಂಡು ನಿರ್ಮಾಪಕರಿಗೆ ಕತೆ ಹೇಳಲು ತೊಡಗಿದರು ಮಣಿರತ್ನಂ. ಕೊನೆಗೆ ಮಣಿರತ್ನಂ ಚಿಕ್ಕಪ್ಪ ಕೃಷ್ಣಮೂರ್ತಿ ಸಿನಿಮಾ ನಿರ್ಮಿಸಲು ಒಪ್ಪಿದರಾದರೂ ಕೆಲವು ಷರತ್ತುಗಳನ್ನು ವಿಧಿಸಿದರು. 'ಸಿನಿಮಾವನ್ನು ಕನ್ನಡದಲ್ಲಿಯೇ ನಿರ್ದೇಶಿಸಬೇಕು, ಹಾಗೂ ಕಡಿಮೆ ಬಜೆಟ್‌ನಲ್ಲಿ ನಿರ್ದೇಶನ ಮಾಡಬೇಕು'. ಇದಕ್ಕೆ ಒಪ್ಪಿದ ಮಣಿರತ್ನಂ, ತಮ್ಮದೇ ಗೆಳೆಯರ ತಂಡವನ್ನು ಸೇರಿಸಿಕೊಂಡು ಕನ್ನಡದಲ್ಲಿ 'ಪಲ್ಲವಿ ಅನುಪಲ್ಲವಿ' ನಿರ್ದೇಶನ ಮಾಡಿದರು. ಈ ಸಿನಿಮಾ ಬಾಲಿವುಡ್‌ನ ಖ್ಯಾತ ನಟ 'ಅನಿಲ್‌ ಕಪೂರ್' ಮೊದಲ ಸಿನಿಮಾ ಆಯಿತು. ಸಿನಿಮಾ ಹಿಟ್ ಆಗಲಿಲ್ಲ. ಹಿಟ್ ಆಗಿದ್ದಿದ್ದರೆ ಮಣಿರತ್ನಂ ಕನ್ನಡದಲ್ಲಿಯೇ ಉಳಿಯುತ್ತಿದ್ದರೋ ಏನೋ. ಆದರೆ ಮೊದಲ ಸಿನಿಮಾದಲ್ಲಿಯೇ ಮಣಿರತ್ನಂ ಪ್ರತಿಭೆ ಗುರುತಿಸಿದ ಕರ್ನಾಟಕವು 'ಪಲ್ಲವಿ ಅನುಪಲ್ಲವಿ' ಸಿನಿಮಾಕ್ಕೆ ಅತ್ಯುತ್ತಮ ಚಿತ್ರಕತೆ ರಾಜ್ಯ ಪ್ರಶಸ್ತಿಯನ್ನು ಮಣಿರತ್ನಂಗೆ ನೀಡಿತು.

    ಸತತ ಎರಡು ಸಿನಿಮಾಗಳು ಸೋತವು

    ಸತತ ಎರಡು ಸಿನಿಮಾಗಳು ಸೋತವು

    'ಪಲ್ಲವಿ ಅನುಪಲ್ಲವಿ' ಸೋತರು ಸಹ ಹಲವು ನಿರ್ದೇಶಕರ, ತಂತ್ರಜ್ಞರ ಗಮನ ಸೆಳೆದಿತ್ತು. ಆ ಸಿನಿಮಾ ನೋಡಿದ್ದ ಮಲಯಾಳಂ ನಿರ್ಮಾಪಕ ಎನ್‌.ಜಿ.ಜಾನ್, ಮಲಯಾಳಂ ಸಿನಿಮಾ ನಿರ್ದೇಶಿಸುವಂತೆ ಮಣಿರತ್ನಂಗೆ ಆಹ್ವಾನ ನೀಡಿದರು. ಬೇರೆಯವರು ಬರೆದಿದ್ದ ಚಿತ್ರಕತೆಯನ್ನು 'ಉನಾರು' ಹೆಸರಿನ ಸಿನಿಮಾ ಮಾಡಿದರು ಮಣಿ. ಮೋಹನ್‌ಲಾಲ್ ಇದ್ದಾಗ್ಯೂ ಆ ಸಿನಿಮಾ ಸಹ ಸೋತಿತು. ನಿರ್ಮಾಪಕರೊಂದಿಗೆ ಉಂಟಾದ ಭಿನ್ನಾಭಿಪ್ರಾಯದಿಂದ ಸಿನಿಮಾ ಸೋಲುವಂತಾಯಿತು ಎಂದು ಮಣಿರತ್ನಂ ನಂತರದ ದಿನಗಳಲ್ಲಿ ಹೇಳಿದರು. ನಂತರ ತಮಿಳಿನಲ್ಲಿ 'ಪಗಲ್ ನಿಲವು', ಹಾಗೂ 'ಇದೆಯ ಕೋವಿಲ್' ಸಿನಿಮಾಗಳನ್ನು ನಿರ್ದೇಶಿಸಿದರು. 'ಇದೆಯ ಕೋವಿಲ್' ಸೂಪರ್ ಹಿಟ್ ಆಯಿತು. ಆದರೆ 'ಪಲ್ಲವಿ-ಅನುಪಲ್ಲವಿ' ಬಿಟ್ಟು ಇನ್ನಾವ ಸಿನಿಮಾವನ್ನೂ ಮನಸ್ಸಿಗೆ ತೃಪ್ತಿ ಕೊಟ್ಟಿರಲಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ ಮಣಿ.

    ದಾಖಲೆ ಬರೆದ 'ನಾಯಗನ್'

    ದಾಖಲೆ ಬರೆದ 'ನಾಯಗನ್'

    ಯಾವುದೇ 'ಕಾಂಪ್ರೊಮೈಸ್‌'ಗಳಿಗೆ ಒಳಗಾಗದೆ ತಮ್ಮ ಕಲ್ಪನೆಯನ್ನು ತೆರೆಯ ಮೇಲೆ ತರಲು ಆರಂಭಿಸಿದ್ದು 1986ರ ಆಚೆಗೆ. 1986 ರಲ್ಲಿ ನಿರ್ದೇಶಿಸಿದ 'ಮೌನ ರಾಗಂ' ಸಿನಿಮಾ ತಮಿಳು ಹಳ್ಳಿಬದುಕಿನ ನಿಜ ದರ್ಶನ ಮಾಡಿಸಿತು. ಆದರೆ ಅದರ ಮುಂದಿನ ವರ್ಷ ಬಿಡುಗಡೆ ಆದ 'ನಾಯಗನ್' ಭಾರತೀಯ ಸಿನಿಮಾ ರಂಗವೇ ಮಣಿರತ್ನಂ ಕಡೆಗೆ ತಿರುಗಿ ನೋಡುವಂತೆ ಮಾಡಿಬಿಟ್ಟಿತು. 'ನಾಯಗನ್' ಸಿನಿಮಾವನ್ನು ಭಾರತದ 'ಗಾಡ್ ಫಾದರ್' ಎಂದು ಈಗಲೂ ಹೊಗಳಲಾಗುತ್ತದೆ. ಸಾರ್ವಕಾಲಿಕ ಶ್ರೇಷ್ಟ ಸಿನಿಮಾಗಳ ಪಟ್ಟಿಯಲ್ಲಿ ಸತ್ಯಜಿತ್ ರೇ ನಿರ್ದೇಶಿತ 'ಅಪ್ಪು ಟ್ರಿಯಾಲಜಿ' ಗುರುದತ್ ನಿರ್ದೇಶನದ 'ಪ್ಯಾಸಾ' ಸಿನಿಮಾಗಳ ಜೊತೆಗೆ 'ನಾಯಗನ್' ಸಹ ಸ್ಥಾನ ಪಡೆಯಿತು. ಹಲವಾರು ರಾಷ್ಟ್ರ ಪ್ರಶಸ್ತಿಗಳು ಸಿನಿಮಾಕ್ಕೆ ಬಂದವು. 60ನೇ ಆಸ್ಕರ್ ಪ್ರಶಸ್ತಿಗೆ ಭಾರತದ ಅಧಿಕೃತ ಸಿನಿಮಾ ಆಗಿ ಆಯ್ಕೆ ಆಯಿತು 'ನಾಯಗನ್'.

    'ನಾಯಗನ್' ಗೆಲುವಿನ ಬಳಿಕ ಪ್ರಯೋಗಗಳು

    'ನಾಯಗನ್' ಗೆಲುವಿನ ಬಳಿಕ ಪ್ರಯೋಗಗಳು

    'ನಾಯಗನ್' ನಂತರ ಮಣಿರತ್ನಂ ನಿರ್ದೇಶಿಸಿದ 'ಅಗ್ನಿ ನಚ್ಚತ್ತಿರಮ್' ಸಿನಿಮಾದಲ್ಲಿ ಹಲವು ಪ್ರಯೋಗಗಳನ್ನು ಮಾಡಿದರು. ಅದೂ ಸಹ ಹಿಟ್ ಆಯಿತು. ನಂತರದ್ದು ನಾಗಾರ್ಜುನ ಜೊತೆಗೆ ಮಾಡಿದ 'ಗೀತಾಂಜಲಿ'. ಈ ಸಿನಿಮಾ ಈಗಲೂ ಭಾರತದ ಅತ್ಯುತ್ತಮ ಪ್ರೇಮಕತೆ ಸಿನಿಮಾ ಆಗಿ ನಿಂತಿದೆ. ಮಣಿರತ್ನಂ ಎಂಥಹಾ 'ಕಲಾವಿದ' ಎಂಬುದನ್ನು ಈ ಸಿನಿಮಾದ ಹಾಡುಗಳು, ದೃಶ್ಯಗಳು ಸಾಕ್ಷಿ. ಆ ಸಿನಿಮಾದ ನಂತರ ಕತೆಯ ಮೂಲಕ ಮಾಡಿದ ಪ್ರಯೋಗ 'ಅಂಜಲಿ' ಬೇಬಿ ಶಾಮಿಲಿ ನಟಿಸಿದ್ದ ಆ ಸಿನಿಮಾ ಸೂಪರ್ ಹಿಟ್ ಆಯಿತು. 'ಅಂಜಲಿ' ಸಹ ಭಾರತದಿಂದ ಆಸ್ಕರ್‌ಗೆ ಹೋಯಿತು. 'ಅಂಜಲಿ' ಅಂಥಹಾ ಭಾವನಾತ್ಮಕ ಸಿನಿಮಾದ ನಂತರ ಮಣಿರತ್ನಂ ಮತ್ತೆ ಅಂಡರ್ವರ್ಲ್ಡ್ ಸಿನಿಮಾದತ್ತ ಮುಖ ಮಾಡಿದರು. ಅದುವೇ ರಜನೀಕಾಂತ್, ಮುಮ್ಮಟಿ ನಟನೆಯ 'ದಳಪತಿ'. ಸಿನಿಮಾ ಸೂಪರ್ ಡೂಪರ್ ಹಿಟ್ ಆಯಿತು.

    'ರೋಜಾ' ಸಿನಿಮಾ ಬಗ್ಗೆ ಹೇಳುವುದಕ್ಕೆ ಉಳಿದಿರುವುದೇ ಕಡಿಮೆ

    'ರೋಜಾ' ಸಿನಿಮಾ ಬಗ್ಗೆ ಹೇಳುವುದಕ್ಕೆ ಉಳಿದಿರುವುದೇ ಕಡಿಮೆ

    ದಳಪತಿ ನಂತರ 'ರೋಜಾ' ಸಿನಿಮಾ ನಿರ್ದೇಶಿಸಿದರು ಮಣಿರತ್ನಂ. ಈ ಸಿನಿಮಾ ಬಗ್ಗೆ ಹೆಚ್ಚಿಗೆ ಹೇಳುವ ಅವಶ್ಯಕತೆಯೇ ಇಲ್ಲ. ಭಾರತದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು 'ರೋಜಾ'. ಹಲವಾರು ಅಂತರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರಶಸ್ತಿ ಗೆದ್ದ 'ರೋಜಾ' ಆ ಕಾಲಕ್ಕೆ ಸಿನಿಮಾ ಪ್ರೇಮಿಗಳಿಗೆ ದೃಶ್ಯ ಸಂಯೋಜನೆ, ಸಂಗೀತ, ಕತೆ ಹಲವು ವಿಭಾಗಗಳಲ್ಲಿ ಭಿನ್ನ ಅನುಭೂತಿ ಕೊಟ್ಟಿತ್ತು. 'ರೋಜಾ'ದಂಥಹಾ ಗಂಭೀರ ಸಿನಿಮಾದ ಬಳಿಕ ಹಾಸ್ಯ ಮಿಶ್ರಿತ 'ತಿರುಡಾ-ತಿರುಡಾ' ಸಿನಿಮಾ ನಿರ್ದೇಶಿಸಿದರು ಮಣಿ. ಇದಕ್ಕೆ ಚಿತ್ರಕತೆ ಬರೆದಿದ್ದು ರಾಮ್‌ ಗೋಪಾಲ್ ವರ್ಮಾ. 'ತಿರುಡಾ-ತಿರುಡಾ' ನಂತರ ಸಾಮಾಜಿಕ ಸಂದೇಶವುಳ್ಳ 'ಬಾಂಬೆ' ಸಿನಿಮಾ ನಿರ್ದೇಶಿಸಿದರು ಮಣಿರತ್ನಂ. ಆ ನಂತರ ಐಶ್ವರ್ಯ ರೈ ನಟಿಸಿದ ಮೊದಲ ಸಿನಿಮಾ 'ಇರುವರ್' ನಿರ್ದೇಶಿಸಿದರು ಮಣಿ. ಪ್ರಕಾಶ್ ರೈ, ಮೋಹನ್‌ಲಾಲ್ ನಟಿಸಿದ್ದ ರಾಜಕೀಯ ಕತೆಯುಳ್ಳ 'ಇರುವರ್' ಹಿಟ್ ಆಗುವ ಜೊತೆಗೆ ವಿಮರ್ಶಕರಿಂದ ಭಾರಿ ಪ್ರಶಂಸೆಗೆ ಪಾತ್ರವಾಯಿತು.

    'ದಿಲ್‌ ಸೇ' ಮೂಲಕ ಹೃದಯ ಗೆದ್ದ ಮಣಿರತ್ನಂ

    'ದಿಲ್‌ ಸೇ' ಮೂಲಕ ಹೃದಯ ಗೆದ್ದ ಮಣಿರತ್ನಂ

    ನಂತರದ್ದು ಶಾರುಖ್ ಖಾನ್ ನಟಿಸಿದ್ದ 'ದಿಲ್‌ ಸೇ' ಸಿನಿಮಾ. ಭಯೋತ್ಪಾದನೆ, ಪ್ರೇಮಕತೆ ಮಿಳಿತವಾಗಿದ್ದ ಈ ಸಿನಿಮಾ ಹಿಂದಿ, ತಮಿಳಿನಲ್ಲಿ ಏಕಕಾಲದಲ್ಲಿ ಬಿಡುಗಡೆ ಆಯಿತು. ಇದೇ ಸಿನಿಮಾ ಮೂಲಕ ಪ್ರೀತಿ ಜಿಂಟಾ ನಟಿಯಾಗಿ ಪಾದಾರ್ಪಣೆ ಮಾಡಿದರು. ನಂತರ ಪೂರ್ಣ ಪ್ರೇಮಕತೆ ಆರಿಸಿಕೊಂಡ ಮಣಿ ಮಾಧವನ್-ಶಾಲಿನಿ ನಟಿಸಿದ್ದ 'ಅಲಯ್‌ಪಾಯುತೆ' ನಿರ್ದೇಶಿಸಿದರು. ಅದರ ನಂತರ ಶ್ರೀಲಂಕಾ ತಮಿಳರ ಹೋರಾಟ ಹಾಗೂ ತಾಯಿ-ಮಗುವಿನ ಆಪ್ತತೆಯ ಕತೆ ಹೊಂದಿದ್ದ 'ಕಣ್ಣತ್ತಿಲ್ ಮುತ್ತಮಿತ್ತಾಳ್' ನಿರ್ದೇಶಿಸಿದರು. ಆ ಸಿನಿಮಾ ಸಹ ಆಸ್ಕರ್ ಅಂಗಳಕ್ಕೆ ಹೋಗಿ ಬಂತು. ನಂತರದ್ದು ಯುವ ಶಕ್ತಿ ಹಾಗೂ ರಾಜಕೀಯ ಕುರಿತಾದ 'ಆಯುಧ ಎಳುತ್ತು' ದೊಡ್ಡ ಹಿಟ್ ಆಗದಿದ್ದರೂ ಬಹುವಾಗಿ ಗಮನ ಸೆಳೆಯಿತು. ಈ ಸಿನಿಮಾ ಹಿಂದಿಗೂ ರೀಮೇಕ್ ಆಯಿತು. ನಂತರ ಹಿಂದಿಯ 'ಗುರು' ಮೂಲಕ ಮೊದಲ ಬಾರಿಗೆ ಜೀವನ ಕತೆಯನ್ನು ಸಿನಿಮಾ ಮಾಡಿದರು ಮಣಿರತ್ನಂ. ಧೀರೂಭಾಯಿ ಅಂಬಾನಿ ಕತೆಯನ್ನು ತೆರೆಗೆ ತಂದರು. ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ನಟಿಸಿದ್ದರು.

    ರಾವಣನ ಪಾತ್ರದಿಂದ ಪ್ರೇರಿತರಾಗಿ 'ರಾವಣ್' ನಿರ್ದೇಶನ

    ರಾವಣನ ಪಾತ್ರದಿಂದ ಪ್ರೇರಿತರಾಗಿ 'ರಾವಣ್' ನಿರ್ದೇಶನ

    'ಗುರು' ನಂತರ ಮೂರು ವರ್ಷ ಬ್ರೇಕ್ ಪಡೆದ ಮಣಿ, 2010 ರಲ್ಲಿ 'ರಾವಣ್' ಹೆಸರಿನ ದ್ವಿಭಾಷಿ ಸಿನಿಮಾ ಮಾಡಿದರು. 'ರಾವಣ'ನ ಪಾತ್ರ ಆಧರಿಸಿ ಮಾಡಿದ ಆ ಸಿನಿಮಾ ತಮಿಳಿನಲ್ಲಿ ಹಿಟ್ ಆಯಿತು. ಆದರೆ ಹಿಂದಿಯಲ್ಲಿ ಸೋತಿತು. ಬಣ್ಣಗಳನ್ನು ಢಾಳಾಗಿ ಬಳಸಿ ಬಹಳ ಭಿನ್ನವಾಗಿ ಸಿನಿಮಾ ಮಾಡಿದ್ದರು ಮಣಿರತ್ನಂ. ಮೊದಲ ಬಾರಿಗೆ ಜಂಪ್ ಶಾಟ್‌ಗಳನ್ನು ಸಿನಿಮಾದಲ್ಲಿ ಬಳಸಿದ್ದರು. ಆದರೆ ನಂತರ 2013 ರಲ್ಲಿ ನಿರ್ದೇಶಿಸಿದ 'ಕಡಲ್' ಸಿನಿಮಾ ಇನ್ನಿಲ್ಲದಂತೆ ಸೋತಿತು. ಮಣಿರತ್ನಂ ವಿರುದ್ಧ ವಿತರಕರು ದೂರುಗಳನ್ನು ಸಹ ದಾಖಲಿಸಿದರು. ಆದರೆ ಮಣಿ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ 2015 ರಲ್ಲಿ ದುಲ್ಕರ್-ನಿತ್ಯ ಮನೆನ್ ನಟಿಸಿದ 'ಓ ಕಾದಲ್ ಕಣ್ಮಣಿ' ಸಿನಿಮಾ ನಿರ್ದೇಶಿಸಿದರು ಸಿನಿಮಾ ಸೂಪರ್ ಹಿಟ್ ಆಗಿ ಹಿಂದಿಯಲ್ಲಿಯೂ ರೀಮೇಕ್ ಆಯಿತು. 'ಅಲಯ್‌ಪಾಯುತೆ' ನಿರ್ದೇಶಿಸಿದ್ದ ಮಣಿ ಹೊಸಬರ ಕಾಲದ ಪ್ರೇಮಕತೆಯನ್ನು ಅಷ್ಟೇ ಸುಂದರವಾಗಿ ತೆರೆಗೆ ತಂದಿದ್ದರು.

    ಭಾರಿ ಬಜೆಟ್‌ನ 'ಪೊನ್ನಿಯನ್ ಸೆಲ್ವಂ' ಸಿನಿಮಾ ಮಾಡುತ್ತಿದ್ದಾರೆ

    ಭಾರಿ ಬಜೆಟ್‌ನ 'ಪೊನ್ನಿಯನ್ ಸೆಲ್ವಂ' ಸಿನಿಮಾ ಮಾಡುತ್ತಿದ್ದಾರೆ

    2017 ರಲ್ಲಿ ಕಾರ್ಗಿಲ್ ಯುದ್ಧ ಆಧರಿಸಿದ 'ಕಾಟ್ರು ವಿಳೆಯಾಡು' ಸಿನಿಮಾ ನಿರ್ದೇಶಿಸಿದರು ಮಣಿ. ಆ ಸಿನಿಮಾ ದೊಡ್ಡ ಯಶಸ್ಸು ಗಳಿಸಲಿಲ್ಲ. ನಂತರ ಮತ್ತೆ ಗ್ರಾಂಗ್‌ಸ್ಟರ್‌ ಕತೆಗೆ ಬಂದ ಮಣಿ, 'ಚೆಕ್ಕ ಚಿವಂತ ವಾನಂ' ಹೆಸರಿನ ಗ್ಯಾಂಗ್‌ಸ್ಟರ್‌ ಕುಟುಂಬವೊಂದರ ಸಿನಿಮಾ ಮಾಡಿದರು. ಸಿನಿಮಾ ಸಾಧಾರಣ ಯಶಸ್ಸು ಗಳಿಸಿತು. ಸಿನಿಮಾದ ಕ್ಲೈಮ್ಯಾಕ್ಸ್‌ ಬಗ್ಗೆ ತುಸು ಭಿನ್ನ ಅಭಿಪ್ರಾಯಗಳು ವ್ಯಕ್ತವಾದವು. ಇದೀಗ 'ಪೊನ್ನಿಯನ್ ಸೆಲ್ವಂ' ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ ಮಣಿರತ್ನಂ. ಸಿನಿಮಾದಲ್ಲಿ ಐಶ್ವರ್ಯಾ ರೈ, ವಿಕ್ರಂ, ಪ್ರಕಾಶ್ ರೈ, ಜಯಂ ರವಿ, ಕಾರ್ತಿ, ತ್ರಿಶಾ, ವಿಕ್ರಂ ಪ್ರಭು, ಶೋಭಿತಾ, ಆರ್.ಶರತ್ ಕುಮಾರ್, ಕನ್ನಡದ ಕಿಶೋರ್ ಇನ್ನೂ ಹಲವರು ನಟಿಸುತ್ತಿದ್ದಾರೆ.

    English summary
    Ace director Mani Ratnam's movie journey. He started his directorial career from doing Kannada movie.
    Thursday, June 3, 2021, 9:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X