»   » ಭಾರತಿ ಅವರನ್ನು ಬೀದಿಗೆ ತಂದ ದ್ವಾರಕೀಶ್!

ಭಾರತಿ ಅವರನ್ನು ಬೀದಿಗೆ ತಂದ ದ್ವಾರಕೀಶ್!

Posted By: * ಮೃತ್ಯುಂಜಯ ಕಲ್ಮಠ
Subscribe to Filmibeat Kannada
Bharathi Vishnuvardhan
ಕೊನೆಗೂ ಭಾರತಿ ವಿಷ್ಣುವರ್ಧನ್ ಬೀದಿಗಿಳಿದಿದ್ದಾರೆ. ಮೆಜೆಸ್ಚಿಕ್ ನ ನಡುರಸ್ತೆಯಲ್ಲಿ ನಿಂತು ಸಾಹಸಸಿಂಹ ವಿಷ್ಠುವರ್ಧನ್ ಅವರನ್ನು ನಿರ್ಮಾಪಕ ದ್ವಾರಕೀಶ್ ಮನಸಾರೆ ಹೊಗಳುತ್ತಿದ್ದಾರೆ? ಆದರೆ, ಅವರ ಧರ್ಮಪತ್ನಿ ಭಾರತಿ ವಿಷ್ಣುವರ್ಧನ್ ಅವರ ವಿರುದ್ಧ ಮಾಧ್ಯಮ ಮುಂದೆ ಏಕವಚನದಲ್ಲಿ ಕೂಗಾಡುತ್ತಿದ್ದಾರೆ.

ಆಕೆಗೆ ನಾನೇನು ಎಂದು ತೋರಿಸುತ್ತೇನೆ. ವಿಷ್ಣುವರ್ಧನ್ ಎಂದು ನನ್ನ ಚಿತ್ರಕ್ಕೆ ಹೆಸರಿಡುವೆ. ಅದು ಯಾರು ಬಂದು ಅಡ್ಡಿಪಡಿಸುತ್ತಾರೋ ನಾನು ನೋಡುತ್ತೇನೆ ಎಂದು ಎಗರಾಡುತ್ತಿದ್ದಾರೆ. ಸ್ವಪ್ರತಿಷ್ಠೆಗೂ, ದುರಹಂಕಾರಕ್ಕೂ ಒಂದು ಮಿತಿ ಬೇಡವೇ.

ಕನ್ನಡ ಚಿತ್ರರಂಗದಲ್ಲಿ ಈ ಇಬ್ಬರು ಮಹನೀಯರು ಹಿರಿಯ ಕಲಾವಿದರು. ಜನಪ್ರಿಯತೆಯ ಉತ್ತುಂಗವನ್ನು ಅನುಭವಿಸಿದವರು ಬೇರೆ. ಅಫ್ಟರಾಲ್ ಟೈಟಲ್ ಗೆ ಸಂಬಂಧಿಸಿದಂತೆ ಹೀಗೆ ಬೀದಿ ರಂಪ ಮಾಡಿಕೊಳ್ಳುವುದು ಬೇಕಿತ್ತಾ ? ಕಥೆ, ಚಿತ್ರಕಥೆ ಉತ್ತಮವಾಗಿದ್ದರೇ ಸಾಕು. ಟೈಟಲ್, ನಾಯಕ, ನಾಯಕಿಯರ ಯಾವ ಹಂಗು ಬೇಡ. ಮುಂಗಾರುಮಳೆ, ದುನಿಯಾದಂತಹ ಚಿತ್ರಗಳು ಗಾಂಧಿ ನಗರಕ್ಕೆ ಪಾಠ ಕಲಿಸಿವೆ. ಹೀಗಿದ್ದಾಗಲೂ ಟೈಟಲ್ ಏಕೆ ಗುದ್ದಾಟ.

ಇಷ್ಟಕ್ಕೂ ವಿಷ್ಣುವರ್ಧನ್ ಎಂದು ಚಿತ್ರಕ್ಕೆ ಟೈಟಲ್ ಇಡುವುದು ದ್ವಾರಕೀಶ್ ಅವರ ತಪ್ಪಾ ? ಭಾರತಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದ್ವಾರಕೀಶ್ ಚಿತ್ರಕ್ಕೆ ಟೈಟಲ್ ಇಟ್ಟುಕೊಳ್ಳಬೇಕಿತ್ತಾ ? ವಿಷ್ಣುವರ್ಧನ ಹೊಯ್ಸಳ ಮಹಾರಾಜ. ರಾಜನ ಹೆಸರನ್ನು ಚಿತ್ರಕ್ಕೆ ಇಡುವುದು ಕೂಡಾ ತಪ್ಪೇ ? ಇಂತಹ ಅನೇಕ ಪ್ರಶ್ನೆಗಳು ನಿಮಗೂ ಬಂದಿರಬಹುದು.

ಕ್ರೀಡಾಪಟುಗಳು, ಸಿನಿಮಾ ಹೀರೋಗಳನ್ನು ಆರಾಧಿಸುವವರು, ಪ್ರೀತಿಸುವವರು ಕೋಟ್ಯಂತರ ಮಂದಿ. ಅವರ ಮೇಲಿರುವ ಅಭಿಮಾನಕ್ಕಾಗಿ ಅವರ ಮಕ್ಕಳಿಗೆ, ನೂತನ ಮನೆಗೆ, ಅಂಗಡಿಗಳು, ವಾಹನಗಳ ಮೇಲೆ ಹೀಗೆ ಅವರವರ ಇಷ್ಟದ ವ್ಯಕ್ತಿಗಳನ್ನು ಹೆಸರಿಟ್ಟುಕೊಳ್ಳುವುದು ರೂಢಿ.

ಆದರೆ, ಹೆಸರಿಟ್ಟುಕೊಳ್ಳಬೇಡ ಎಂದು ಹೇಳಲು ಸಾಧ್ಯವೆ ? ಬಹುಶಃ ಕ್ರಿಕೆಟ್ ರಂಗದ ಸರ್ವಶ್ರೇಷ್ಠ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಹೆಸರನ್ನಿಟ್ಟುಕೊಂಡವರು ಭಾರತದಲ್ಲಿ ಕೋಟ್ಯಂತರ ಜನ ಇದ್ದಾರೆ. ಜೊತೆಗೆ ಹೃತ್ತಿಕ್, ಶಾರೂಕ್, ಸಲ್ಮಾನ್, ಅಮೀರ್, ಅಮಿತಾಬ್ ಹೆಸರುಗಳಿಗೇನೂ ಕಮ್ಮಿಯಿಲ್ಲ. ಹಾಗಂತ ಅವರಾರು ತಕರಾರು ತೆಗೆದಿಲ್ಲ ಭಾರತಿ ವಿಷ್ಣುವರ್ಧನ್ ಅವರ ಹಾಗೆ?

ನಟ ವಿಷ್ಣುವರ್ಧನ್ ಕನ್ನಡಿಗರ ಅಭಿಮಾನಿಗಳ ಆಸ್ತಿ. ಅವರ ಹೆಸರನ್ನು ಯಾರು ಬೇಕಾದರೂ ಇಟ್ಟುಕೊಳ್ಳಬಹುದು. ಒಂದು ಕಾಲದಲ್ಲಿ ದ್ವಾರಕೀಶ್ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ಗಳಸ್ಯ ಕಂಠಸ್ಯರಂತಿದ್ದವರು. ಜೊತೆಗೆ ದ್ವಾರಕೀಶ್ ನಿರ್ಮಾಣದಲ್ಲಿ ವಿಷ್ಣುವರ್ಧನ್ ನಟಿಸಿದ್ದಾರೆ. ಹಾಗೂ ಈ ಇಬ್ಬರೂ ಜೊತೆಯಾಗಿ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇದೆಲ್ಲವೂ ಸರಿ, ಆದರೆ, ವಿಷ್ಣುವರ್ಧನ್ ಟೈಟಲ್ ಇಡಲು ನಾವು ಅನುಮತಿ ಕೊಡುವುದಿಲ್ಲ ಎಂದು ಭಾರತಿ ಅವರ ಹೇಳುತ್ತಿರುವುದ್ಯಾಕೆ ಎನ್ನುವುದು ಮಾತ್ರ ಗೊತ್ತಿಲ್ಲ.

ದ್ವಾರಕೀಶ್ ಪ್ರಕಾರ ಚಿತ್ರಕ್ಕೆ ಟೈಟಲ್ ಸಜಸ್ಟ್ ಮಾಡಿದ್ದು ಸುದೀಪ್, ಹಾಗೂ ಈ ಚಿತ್ರಕ್ಕೆ ಸುದೀಪ್ ನಾಯಕ ನಟ ಬೇರೆ. ನಾವಿಬ್ಬರೂ ಸೇರಿಕೊಂಡು ವಿಷ್ಣುವರ್ಧನ್ ಎಂದು ಟೈಟಲ್ ಇಡಲು ನಿರ್ಧರಿಸಿದ್ದೇವೆ ಎನ್ನುತ್ತಾರೆ. ಟೈಟಲ್ ಗೆ ಸಂಬಂಧಿಸಿದಂತೆ ಭಾರತಿ ಅಮ್ಮನನ್ನು ಕಂಡು ಮಾತನಾಡುವೆ ಎಂದು ಹೇಳಿದ್ದ ಸುದೀಪ್ ಈ ವರೆಗೊ ಅವರನ್ನು ಕಂಡಿಲ್ಲ. ಇದನ್ನು ಭಾರತಿ ಅವರೇ ಮಾಧ್ಯಮದ ಮುಂದೆ ಸ್ಪಷ್ಟಪಡಿಸಿದ್ದಾರೆ.

ಆದರೆ, ಚಿತ್ರದ ನಾಯಕ ಸುದೀಪ್ ಕೂಡಾ,ಟೈಟಲ್ ಗೆ ಸಂಬಂಧಿಸಿದಂತೆ ಈ ರೇಂಜ್ ಲ್ಲಿ ವಿವಾದ ಉಂಟಾಗಲಿದೆ ಎಂದುಕೊಂಡಿರಲಿಲ್ಲ. ಭಾರತಿ ಅಮ್ಮನ ಮನಸ್ಸು ನೋಯಿಸಲು ನಾನು ತಯಾರಿಲ್ಲ. ಅದು ನನ್ನ ಮನೆ. ಅವರ ಮನಸ್ಸಿಗೆ ನೋವುಂಟು ಮಾಡಿ ಚಿತ್ರ ನಿರ್ಮಾಣ ಮಾಡುವುದಿಲ್ಲ, ಅವರ ಮನವೂಲಿಸುತ್ತೇವೆ. ಅವರನ್ನು ಶೀಘ್ರ ಭೇಟಿ ಮಾಡಿ ಚರ್ಚಿಸುವೆ ಎಂದಷ್ಟೇ ಹೇಳಿದ್ದಾರೆ.

ನಾನು ಎಂದಿಗೂ ಬೀದಿ ಬಂದಿರಲಿಲ್ಲ. ಆದರೆ, ಇವರು ನನ್ನನ್ನು ಬೀದಿ ಬರುವಂತೆ ಮಾಡಿದ್ದಾರೆ. ನಾನೀಗಾಗಲೇ ಸಾಕಷ್ಟು ನೋವುಗಳನ್ನು ಅನುಭವಿಸಿದ್ದೇನೆ ಎನ್ನುತ್ತಾರೆ ಭಾರತಿ ಮೇಡಮ್. ಆದರೆ, ಭಾರತಿ ಅವರ ನೋವನ್ನು ಅರಿಯದಷ್ಟು ದಡ್ಡರಲ್ಲ ದ್ವಾರಕೀಶ್.

ನಿರ್ವಿಘ್ನವಾಗಿ ನೆರವೇರಿದ ಮಹೂರ್ತ: ಹೀಗಿದ್ದಾಗಲೂ ಅವರ ವಿರೋಧದ ನಡುವೆಯೂ ಗುರುವಾರ ಭಾರಿ ಬಿಗಿ ಭದ್ರತೆ ನಡುವೆ ಚಿತ್ರಕ್ಕೆ ಪ್ರೂಡಕ್ಷನ್ ನಂ47 ಎಂಬ ಹೆಸರಿನಲ್ಲಿ ಇಂದು ಅಬ್ಬಾಯಿನಾಯ್ಡು ಸ್ಟುಡಿಯೋದಲ್ಲಿ ಮಹೂರ್ತ ನಡೆಸಲಾಗಿದೆ. ಪಟ್ಟು ಬಿಡದ ದ್ವಾರಕೀಶ್ ಕೊನೆಗೂ ಚಿತ್ರದ ಮಹೂರ್ತವನ್ನು ಪೂರ್ಣಗೊಳಿಸಿದ್ದಾರೆ.

ವಿಷ್ಣುವರ್ಧನ್ ಅವರು ನಿಧನಕ್ಕೂ ಮುಂಚೆ ದ್ವಾರಕೀಶ್ ಅವರನ್ನು ದೂರಇಟ್ಟಿದ್ದರು. ಆಪ್ತಮಿತ್ರ ಚಿತ್ರದ ನಂತರ ವಿಷ್ಣು ದ್ವಾರ್ಕಿ ಸ್ನೇಹಿ ಸಂಪೂರ್ಣ ಹಳಸಿತ್ತು. ತದನಂತರದಲ್ಲಿ ಎಲ್ಲಿಯೂ ಈ ಇಬ್ಬರು ಜೊತೆಯಾಗಿ ಕಾಣಲಿಲ್ಲ. ಯಾರು ಯಾರಿಗೆ ನಂಬಿಕೆ ದ್ರೋಹ ಮಾಡಿದರೂ ಗೊತ್ತಿಲ್ಲ. ಆದರೆ, ಭಾರತಿ ಅವರ ಪ್ರಕಾರ, ನಾನು ನಿಜ ಹೇಳಿದರೆ ಆಗುವುದೇ ಬೇರೆ ಎಂದು ಹೇಳಿದ್ದಾರೆ. ಹಾಗಾದರೇ ಅವರಿಬ್ಬರೆ ನಡುವೆ ನಡೆದಿರುವುದಾದರೂ ಏನು ಎನ್ನುವುದು ನಿಗೂಢವಾಗಿದೆ.

ಒಟ್ಟಿನಲ್ಲಿ ನಾನು ಹೇಳುವುದೊಂದೇ ದ್ವಾರಕೀಶ್ ಅವರ ಚಿತ್ರಕ್ಕೆ ವಿಷ್ಣುವರ್ಧನ್ ಹೆಸರಿಡಲು ಅವಕಾಶ ನೀಡುವುದಿಲ್ಲ ಎಂದು ಭಾರತಿ ಹೇಳಿದ್ದಾರೆ. ಚಲನಚಿತ್ರ ಮಂಡಳಿಯೂ ಭಾರತಿ ಅವರ ವಾದವನ್ನು ಸಮರ್ಥಿಸಿಕೊಂಡಿದೆ. ವಿಷ್ಣು ಅಭಿಮಾನಿಗಳು ದ್ವಾರಕೀಶ್ ಅವರನ್ನು ಮನಬಂದಂತೆ ನಿಂದಿಸುತ್ತಿದ್ದಾರೆ. ಇದೆಲ್ಲ ಬೇಕಿತ್ತಾ ಎನ್ನುವುದು ಅನೇಕರ ಅಭಿಪ್ರಾಯವಾಗಿದೆ.

ಟೈಟಲ್ ಯಾರಪ್ಪನ ಸೊತ್ತು ಅಲ್ಲ. ಆದರೆ, ಭಾರತಿ ಅವರು ವಿಷ್ಣು ಅವರ ಹೆಸರು ಬೇಡ ಎಂದರೆ ದ್ವಾರಕೀಶ್ ಕೈಬಿಡುವುದು ಲೇಸು. ಅನಾವಶ್ಯಕವಾಗಿ ಜಗಳ ಕಾಯುವುದಕ್ಕಿಂತ ಬೇರೆ ಹೆಸರಿಡುವುದು ಸೂಕ್ತ. ಕನ್ನಡ ಚಲನಚಿತ್ರ ಉದ್ಯಮ ಚಿಕ್ಕ ಉದ್ಯಮ. ಈ ಹಿರಿಯ ಕಲಾವಿದರು ಉದ್ಯಮ ಬೆಳೆಸುವ ಕೆಲಸ ಮಾಡಬೇಕೆ ಹೊರತು. ಸ್ವಪ್ರತಿಷ್ಠೆಗಾಗಿ, ಸ್ವಹಿತಾಸಕ್ತಿಗಾಗಿ ಉದ್ಯಮದಲ್ಲಿ ಪಂಗಡಗಳನ್ನು ಮಾಡುವುದು ಸರಿಯಲ್ಲ. ಮಂಡಳಿ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುವುದು ಭಾರಿ ಛೋಲೂ ಅನಿಸ್ತೈತಿ ಅಲ್ರಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada