»   »  ದಿಗಂತ್ ವಿರುದ್ಧ ಕೆಎಫ್ ಸಿಸಿಗೆ ಪ್ರಿಯಾ ಭಾರತಿ ದೂರು

ದಿಗಂತ್ ವಿರುದ್ಧ ಕೆಎಫ್ ಸಿಸಿಗೆ ಪ್ರಿಯಾ ಭಾರತಿ ದೂರು

Subscribe to Filmibeat Kannada

ಚಿತ್ರೀಕರಣ ಆರಂಭವಾಗಿ ಒಂದು ವರ್ಷಕಳೆಯುತ್ತಿದ್ದರೂ 'ಇ ಪ್ರೀತಿ' ಇನ್ನೂ ಬಿಡುಗಡೆಯ ಮೋಕ್ಷ ಕಂಡಿಲ್ಲ. ಹೀಗಾಗಲು ನೇರ ಕಾರಣ ನಟ ದಿಗಂತ್ ಮಂಚಲೆ ಎನ್ನುತ್ತಾರೆ ನಿರ್ದೇಶಕಿ ಪ್ರಿಯಾ ಭಾರತಿ. ದಿಗಂತ್ ವಿರುದ್ಧ ಕ್ರಮಕೈಗೊಳ್ಳುವಂತೆ ಚಲನಚಿತ್ರ ವಾಣಿಜ್ಯ ಮಂಡಳಿಯ ಮೊರೆ ಹೋಗಿದ್ದಾರೆ ಎನ್ ಆರ್ ಐ ನಿರ್ದೇಶಕಿ.

'ಇ ಪ್ರೀತಿ' ಚಿತ್ರದಲ್ಲಿ ನಟಿಸುವುದಾಗಿ ದಿಗಂತ್ ಸಹಿ ಮಾಡಿದ್ದರು.ಈಗ ಡೇಟ್ಸ್ ಹೊಂದಾಣಿಕೆಯಾಗುತ್ತ್ತಿಲ್ಲ ಎಂದು ಸಬೂಬು ಕೊಡುತ್ತಿದ್ದಾರೆ. ಚಿತ್ರದ ಮುಖ್ಯ ಸನ್ನಿವೇಶವೊಂದನ್ನು ಯುಎಸ್ ನಲ್ಲಿ ಚಿತ್ರೀಕರಿಸಬೇಕಾಗಿತ್ತು. ಸಮಯಕ್ಕೆ ಸರಿಯಾಗಿ ದಿಗಂತ್ ಕೈಕೊಟ್ಟ ಕಾರಣ ಏರ್ ಟಿಕೆಟನ್ನು ರದ್ದುಪಡಿಸಬೇಕಾಯಿತು ಎನ್ನುತ್ತಾರೆ ಪ್ರಿಯಾ.

ದಿಗಂತ್ ರನ್ನು ಹೇಗಾದರೂ ಮಾಡಿ ಯುಎಸ್ ಗೆ ಕರೆದೊಯ್ಯಬೇಕು ಎಂಬ ಛಲ ಅವರದು. ಇದಕ್ಕಾಗಿ ಯುಎಸ್ ನಿಂದ ಬೆಂಗಳೂರಿಗೆ ಬಂದಿಳಿದಿದ್ದಾರೆ. ಫೆಬ್ರವರಿ 2009ರಲ್ಲಿ ಎರಡು ವಾರಗಳ ಕಾಲ ವಾಷಿಂಗ್ಟನ್ ನಲ್ಲಿ ಚಿತ್ರೀಕರಣವಿತ್ತು. ಚಿತ್ರೀಕರಣಕ್ಕೆ ಆಗ ಬರುತ್ತೇನೆ ಈಗ ಬರುತ್ತೇನೆ ಎಂದು ದಿಗಂತ್ ಕೈಕೊಡುತ್ತಿದ್ದಾರೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಈಗ ಜುಲೈ 14ರಂದು ಯುಎಸ್ ಗೆ ಬರುವುದಾಗಿ ದಿಗಂತ್ ಹೇಳುತ್ತಿದ್ದಾರೆ. ಅವರು ಬರುತ್ತಾರೆ ಎಂಬ ನಂಬಿಕೆನನಗಿಲ್ಲ. ಹೇಗಾದರೂ ಮಾಡಿ ದಿಗಂತ್ ರನ್ನು ನನ್ನೊಂದಿಗೆ ಕರೆದೊಯ್ಯಬೇಕು ಎಂದು ತೀರ್ಮಾನಿಸಿರುವುದಾಗಿ ಪ್ರಿಯಾ ಭಾರತಿ ತಿಳಿಸಿದರು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಲು ದಿಗಂತ್ ಮಾತಿಗೆ ಸಿಗುತ್ತಿಲ್ಲ. ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ.

ಕನ್ನಡ ಚಿತ್ರೋದ್ಯಮ ನನ್ನನ್ನು ಹೆದರಿಸುತ್ತಿದೆ. ಮಹಿಳಾ ನಿರ್ದೇಶಕಿ ಎಂದರೆ ಬಹಳಷ್ಟು ನಟರಿಗೆ ಅಸಡ್ಡೆ. ಮಾಡೆಲಿಂಗ್ ಕ್ಷೇತ್ರದಿಂದ ಚಿತ್ರರಂಗಕ್ಕೆ ಅಡಿಯಿಡುತ್ತಿರುವ ಇವರಿಗೆ ನಟನೆಯ ಗಂಧಗಾಳಿ ಗೊತ್ತಿರಲ್ಲ. ಸ್ಕ್ರಿಪ್ಟನ್ನು ಸರಿಯಾಗಿ ಪ್ರಾಕ್ಟೀಸ್ ಮಾಡಲ್ಲ. ಇವರಿಗಿಂತ ರಂಗಭೂಮಿ ಕಲಾವಿದರು ನೂರು ಪಾಲು ಉತ್ತ್ತಮ. ಪ್ರತಿಭಾವಂತರು, ಚಿತ್ರಕತೆ ಬಗ್ಗೆ ಅವರಿಗೆ ಸ್ಪಷ್ಟತೆ ಇರುತ್ತದೆ ಎಂದು ತಮ್ಮ ಅಸಹನೆಯನ್ನು ತೋಡಿಕೊಂಡರು.

ಏನಿದು ಈ ಪ್ರೀತಿ ಕತೆ?
ಪ್ರತಿಭಾ ಪಲಾಯನ ಮಾಡುತ್ತಿರುವ ಯುವಕರ ಕಥೆಯನ್ನು 'ಇ-ಪ್ರೀತಿ' ಹೊಂದಿದೆ. ಅಮೆರಿಕಾದಲ್ಲಿನ ತಮ್ಮ ಗೆಳೆಯರ ನಿಜಜೀವನದಲ್ಲಿ ನಡೆದ ಕಥೆಯನ್ನು ಪ್ರಿಯಾ ಭಾರತಿ ಬೆಳ್ಳಿತೆರೆಗೆ ತರುತ್ತಿದ್ದಾರೆ. ಕಥೆಯಲ್ಲಿ ಹಾಸ್ಯ, ಪ್ರೀತಿ, ಪ್ರೇಮ, ತಂತ್ರಜ್ಞಾನ ಎಲ್ಲವೂ ಹದವಾಗಿ ಮಿಳಿತವಾಗಿವೆಯಂತೆ. ನಾಯಕ ಇಂಜಿನಿಯರಿಂಗ್ ಮುಗಿಸಿ ವಿದೇಶಕ್ಕೆ ಹೋಗಿರುತ್ತಾನೆ. ಅಲ್ಲೊಬ್ಬ ಬೆಡಗಿ ಅವನ ಹೃದಯವನ್ನು ಕದಿಯುತ್ತಾಳೆ. ಅವಳೊಂದಿಗೆ ಬೆರೆತು, ನಲಿಯುತ್ತಾನೆ. ಕೊನೆಗೆ ಅವನಿಗೆ ಜ್ಞಾನೋದಯವಾಗಿ ನಮಗೆ ನಮ್ಮ ದೇಶವೇ ಚಂದ ಎಂದುಕೊಳ್ಳುತ್ತಾನೆ.

ಪ್ರಿಯಾ ಭಾರತಿ ಯಾರು?
ಪ್ರಿಯಾ ಭಾರತಿ ಅವರಿಗೆ ಮುಂಚಿನಿಂದಲೂ ಚಿತ್ರರಂಗದೊಂದಿಗೆ ಒಡನಾಟವಿದೆ. ಅವರು ಈ ಹಿಂದೆ 2001ರಲ್ಲಿ 'ಗುಟ್ಟು' ಎಂಬ ಚಿತ್ರವನ್ನು ಕಿರುತೆರೆಗಾಗಿ ಮಾಡಿದ್ದರು. ವಿಶೇಷವೆಂದರೆ ಈ ಕಿರುಚಿತ್ರದ ಮೂಲಕವೇ ಕಾಮಿಡಿ ಟೈಮ್ ಗಣೇಶ್ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದು. ಆಗ ತಾನೇ ಗಣೇಶ್ ಆದರ್ಶ ಫಿಲ್ಮ್ ಸಂಸ್ಥೆಯಿಂದ ನಟನೆಯ ಪಟ್ಟುಗಳನ್ನು ಕಲಿತು ಹೊರಬಂದಿದ್ದರು. ತಮ್ಮ ಕಿರುಚಿತ್ರಕ್ಕಾಗಿ ಪ್ರಿಯಾ ಭಾರತಿ ಪಾತ್ರದ ಅನ್ವೇಷಣೆಯಲ್ಲಿದ್ದರು. ಗಣೇಶ್ ಕಣ್ಣಿಗೆ ಬಿದ್ದಿದ್ದೇ ತಡ ಅವರನ್ನು ಆಯ್ಕೆ ಮಾಡಿಕೊಂಡಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada