»   »  'ಹೋರಿ'ಯ ಒದೆತಕ್ಕೆ ನಿರ್ಮಾಪಕನೇ ಹೈರಾಣ!

'ಹೋರಿ'ಯ ಒದೆತಕ್ಕೆ ನಿರ್ಮಾಪಕನೇ ಹೈರಾಣ!

By: *ಚಿದಾನಂದ ಪಟೇಲ್
Subscribe to Filmibeat Kannada

ಮಾಗಡಿ ಪಾಂಡು ನಿರ್ದೇಶಿಸುತ್ತಿರುವ, ವಿನೋದ್ ಪ್ರಭಾಕರ್ ಅಭಿನಯದ 'ಹೋರಿ' ಚಿತ್ರ ಎಲ್ಲಿಗೆ ಬಂದಿದೆ? ಅದರ ನಿರ್ಮಾಪಕ ಲಿಂಗೇಗೌಡರನ್ನು ಕೇಳಿದರೆ 'ಸ್ವಾಮಿ, ಹೋರಿ ವಿಪರೀತ ಹುಲ್ಲು ತಿನ್ತೈತೆ. ಈ ಕಡೆ ಕಟ್ಟಿ ಹಾಕೋದಕ್ಕೂ ಆಗದೆ, ವಿಲೇವಾರಿನೂ ಮಾಡಕ್ಕಾಗದೆ ಒಂದೇ ಒದೆತ. ಹಾಳು ಬಿದ್ದು ಹೋಗಲಿ ಎಂದು ಬಿಟ್ಟು ಹೋಗೋ ಹಾಗೂ ಇಲ್ಲ. ಬೇಜಾನ್ ದುಡ್ಡು ಹಾಕ್ಬಿಟ್ಟೀವ್ನಿ' ಅಂತ ನೊಂದುಕೊಳ್ಳುತ್ತಾರೆ.

'ಹೋರಿ'ಸಿನಿಮಾ ಟೈಗರ್ ಪ್ರಭಾಕರ್ ಶಿಷ್ಯನೊಬ್ಬ, ಟೈಗರ್ ಪ್ರಭಾಕರ್ ಕಟ್ಟಾಭಿಮಾನಿಯಿಂದ ಹಣ ಹಾಕಿಸಿ, ಟೈಗರ್ ಪ್ರಭಾಕರ್ ಮಗ ವಿನೋದ್ ನ ಹೀರೋ ಮಾಡಿಕೊಂಡು ತಯಾರಿಸುತ್ತಿರುವ ರೀಮೇಕ್ ಚಿತ್ರ. ನಾಲ್ಕು ತಿಂಗಳ ಹಿಂದೆ ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತವಾಯ್ತು. ಮಲಯಾಳಂ ಚಿತ್ರ 'ಮೀಸೆ ಮಾದವನ್' ರೀಮೇಕ್ ಆದ 'ಹೋರಿ'ಗೆ ರಮನಿತೋ ಚೌಧರಿ, ಗೌರಿ ಮುಂಜಾಲ್ ನಾಯಕಿಯರು.

ನಿರ್ದೇಶಕ ಪಾಂಡು ಮೊದಲಿಗೆ ಜಗ್ಗೇಶಣ್ಣನ ಕಾಲ್ ಶೀಟ್ ಕೇಳಿದರಾದರೂ, ಅವರು ಆಗಾಕಿಲ್ಲ ಅಂದು ಬಿಟ್ಟರು. ಅಂಥ ಸಮಯದಲ್ಲಿ ಲಿಂಗೇಗೌಡ್ರು ಎಂಬುವವರನ್ನು ಪಾಂಡುಗೆ ಪರಿಚಯಿಸಿದವರು ಅದೇ ಲಿಂಗೇಗೌಡರ ಗೆಳೆಯ ಮಹೇಶ್ ರಾಮಸ್ವಾಮಿ.

ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದ ಲಿಂಗೇಗೌಡರು, ಟೈಗರ್ ಪ್ರಭಾಕರ್ ಅಭಿಮಾನಿ ಎಂಬುದು ಬಿಟ್ಟರೆ ಬೇರೆ ರೀತಿಯ ಸಿನಿಮಾ ಸಂಬಂಧವೂ ಇಲ್ಲ. ಅಂಥವರು ಸಿಕ್ಕ ತಕ್ಷಣ ಪಕ್ಕಕ್ಕೆ ಕೂರಿಸಿಕೊಂಡು ವಿನೋದ್ ಪ್ರಭಾಕರ್ ಹೀರೋ. 'ಹೋರಿ' ಸಿನಿಮಾ ಹೆಸರು. ಒಂದು ಕೋಟಿ ಅರುವತ್ತ್ತು ಲಕ್ಷಕ್ಕೆ ಸಿನಿಮಾ ಕಂಪ್ಲೀಟ್ ಮಾಡಿ ಕೊಡ್ತೀನಿ ಅಂತ ಪಾಂಡು ಫುಲ್ಲು ಕತೆ ಹೇಳಿದ್ದಾರೆ.

ಲಿಂಗೇಗೌಡರು ಸಹ ಹೋರಿನೋ ಕರಾನೋ ಹೇಳಿದಷ್ಟು ಅಮೌಂಟಿಗೆ ಸಿನಿಮಾ ಮಾಡಿಕೊಡಿ ಸಿವಾ ಅಂದಿದ್ದಾರೆ. ಹಾಗೆ ಶುರುವಾಗಿದ್ದು ರಾಕ್ ಲೈನ್ ಸ್ಟುಡಿಯೋ, ಕೌಶಿಕ್ ಸ್ಟುಡಿಯೋ ಹೀಗೆ ಬೇರೆ ಬೇರೆ ಕಡೆ ಮೂವತ್ತರಷ್ಟು ದಿನ ಚಿತ್ರೀಕರಣವಾಗಿದೆ. ಅಲ್ಲಿಗೆ ಶೇಕಡಾ ಐವತ್ತರಷ್ಟು ಚಿತ್ರೀಕರಣ ಮುಗಿದಿದೆ. ಒಂದು ಕೋಟಿ ಎಂಬತ್ತು ಲಕ್ಷ ಖರ್ಚಿನ ಬಾಬತ್ತು ಸೇರಿದೆ.

ಟೈಗರ್ ಪ್ರಭಾಕರ್ ಹೆಸರೊಂದನ್ನು ಬಿಟ್ಟು ಸಿನಿಮಾ ರಂಗದ ಬಗ್ಗೆ ಏನೂ ಗೊತ್ತಿಲ್ಲದ ಲಿಂಗೇಗೌಡರು, ನೀಟಾಗಿ ತಲೆ ಬಾಚಿಕೊಂಡು ಬಂದು ಯಾವಾಗ ಡೆರೆಕ್ಟ್ರೇ ಸಿನ್ಮಾ ರೀಲೀಜು ಅಂದಿದ್ದಾರೆ. ಒಂದು ಕೋಟಿ ಅರುವತ್ತು ಲಕ್ಷಕ್ಕೆ ಸಿನಿಮಾ ಮುಗಿಯುತ್ತೆ ಅಂದವರಿಗೆ, ಇಪ್ಪತ್ತು ಲಕ್ಷ ಹೆಚ್ಚಿಗೇನೇ ಕೊಟ್ಟಿದ್ದೀನಲ್ಲಾ ಅಲ್ಲಿಗೆ ಸಿನಿಮಾ ಮುಗಿದಿದೆ ಎಂಬುದು ಅವರ ಅಂದಾಜು.

ಆಗ ಪಾಂಡು, ಸಿನಿಮಾ ಆಗಿಲ್ಲ. ಲೆಕ್ಕಾಚಾರ ಬೇಕಾದ್ರೆ ಪ್ರೊಡಕ್ಷನ್ ಮೇನೇಜರ್ ವಜ್ರೇಶ್ವರಿ ಮಲ್ಲಿಕಾರ್ಜುನ್ ಅವರನ್ನು ಕೇಳಿ ಅಂದಿದ್ದಾರೆ. ಲಿಂಗೇಗೌಡರು ಮಲ್ಲಿಕಾರ್ಜುನ್ ನ ಕೇಳಿದರೆ, ನಂಗೇನು ಗೊತ್ತಿಲ್ಲ ಬುದ್ಧಿ ಅಂದು ಬಿಟ್ಟಿದ್ದಾರೆ. ಕಂಗಾಲಾದ ಲಿಂಗೇಗೌಡರು ಎದ್ದೇನೋ ಬಿದ್ದೆನೋ ಅಂತ ಜಗ್ಗೇಶ್ ಅವರ ಹತ್ತಿರ ಹೋಗಿ ಅಲವತ್ತುಕೊಂಡಿದ್ದಾರೆ.

ಪಾಂಡುನ ತಕ್ಷಣ ಕರೆಸಿದ ಜಗ್ಗೇಶ್, ಏನೋ ಆಗಿದ್ದು ಆಗಿದೆ. ಹೆಚ್ಚು ಕಡಿಮೆ ನೋಡಿಕೊಂಡು ಸಿನಿಮಾ ಮುಗಿಸಿಕೊಡಿ ಎಂದಿದ್ದಾರೆ. ಅದಕ್ಕೂ ಮುಂಚೆ ಪತ್ರಿಕಾಗೋಷ್ಠಿಯೊಂದರಲ್ಲಿ 'ಹೋರಿ' ಬಜೆಟ್ ಮೂರುವರೆ ಕೋಟಿ ಎಂದಿದ್ದರು ಪಾಂಡು. ಒಂದು ಕೋಟಿ ಅರುವತ್ತು ಲಕ್ಷ ಅಂತ ಲಿಂಗೇಗೌಡರು ಆಫ್ ದಿ ರೆಕಾರ್ಡ್ ಹೇಳ್ತಿದ್ದರೆ ಪತ್ರಕರ್ತರು 'ಎಂಗೆ ಹಿಂಗಾದ್ರೆ?' ಎಂದಿದ್ದರು.

ಅಲ್ಲಿಂದ ಆಚೆ ಬಂದ ಲಿಂಗೇಗೌಡರು ಸಿನಿಮಾದ ಬಜೆಟ್ ಮೂರುವರೆ ಕೋಟಿ ಅಂದರೆ ವ್ಯವಹಾರಕ್ಕೆ ಅನುಕೂಲ ಆಗುತ್ತೆ ಅಂತ ಡೈರೆಕ್ಟ್ರು ಹೇಳಿದ್ರು. ಅದಕ್ಕೆ ಹೇಳಿದೆ ಅಂತ ನಿಜಾನೇ ಹೇಳಿದ್ದರು. ಈಗ ಇನ್ನೂ ಒಂದು ಕೋಟಿ ಕೊಟ್ಟರಷ್ಟೇ ಸಿನಿಮಾ ಮುಗಿಸಿ ಕೊಡ್ತೀನಿ ಅಂತಿದ್ದಾರೆ ಪಾಂಡು.

ಪ್ರೊಡಕ್ಷನ್ ಮ್ಯಾನೇಜರ್ ಮಲ್ಲಿಕಾರ್ಜುನ, ನಿರ್ದೇಶಕ ಪಾಂಡು ಇಬ್ಬರೂ ಸೇರಿ ಏನೂ ಗೊತ್ತಿಲ್ಲದ ನಿರ್ಮಾಪಕ ಲಿಂಗೇಗೌಡರಿಗೆ ಯಾಮಾರಿಸುತ್ತಿದ್ದಾರೆ ಅನ್ನುತ್ತಿದೆ 'ಹೋರಿ' ಚಿತ್ರ ತಂಡ. ಮಾತೆತ್ತಿದರೆ ದರ್ಶನ್ ಲೆವೆಲ್ ಸಿನಿಮಾ, ರಿಚ್ ಆಗಿದೆ ಕಣ್ರೇ. ಖರ್ಚಾಗದೆ ಇರುತ್ತಾ ಮತ್ತೆ? ಎಂದು ಕೇಳುವ ನಿರ್ದೇಶಕರಿಗೆ ವಿನೋದ್ ಪ್ರಭಾಕರ್ ಇಮೇಜು, ಮಾರ್ಕೆಟ್ ಎಷ್ಟು ಎಂದು ಗೊತ್ತಿಲ್ಲವೆ?

ಲಿಂಗೇಗೌಡರೇನೋ ತಮ್ಮ ಚಿತ್ರ ಸಂಪೂರ್ಣ ಆಗಲಿ ಎಂಬ ಕಾರಣಕ್ಕೆ ಒಂದು ಕೋಟಿ ಹಣ ಹೊಂದಿಸಿ ಕೊಡಲು ಸಜ್ಜಾಗಿದ್ದಾರೆ. ಏಳೆಂಟು ಚಿತ್ರ ನಿರ್ದೇಶನ ಮಾಡಿರುವ ಪಾಂಡು ಅಂಥವರು ಹಸುವಿನಂಥ ಲಿಂಗೇಗೌಡರು ಸಿಕ್ಕಿದರೂ ಅಂತ ಕೆಚ್ಚಲು ಕ್ಯುಯ್ಯುವುದಕ್ಕೆ ಹೋರಟರೆ ಹೇಗೆ?

ಇದೆಲ್ಲದರ ಮಧ್ಯೆ ಸಂಗೀತ ನಿರ್ದೇಶಕ ರೇಣು ಕುಮಾರ್ ಗೆ ಹಣ ಹಾಕಿ ಎಂದು ಲಿಂಗೇಗೌಡ್ರು ದುಂಬಾಲು ಬಿದ್ದ ಬಗ್ಗೆಯೂ ಸುದ್ದಿ ಇದೆ. ಸದ್ಯಕ್ಕೆ 'ಹೋರಿ' ದಾರಿ ತಪ್ಪಿದೆ. ಯಜಮಾನ ಹಗ್ಗ ತಂದು ಕಟ್ಟಿಹಾಕಬೇಕಿದೆ. ನಿರ್ದೇಶಕ ಪಾಂಡು ಕೆಡವಿ ತಮಾಷೆ ನೋಡುವ ಕೆಲಸ ಬಿಟ್ಟು, ನಿರ್ಮಾಪಕರನ್ನು ಉಳಿಸಿ, ಸಿನಿಮಾ ಪ್ರೀತಿಯನ್ನು ಉಳಿಯುವಂತೆ ಮಾಡಲಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada