ಶಿವರಾಜ್ ಕುಮಾರ್ ರು.16 ಕೋಟಿ ಬಾಕಿ ಚುಕ್ತಾ?
ಚಿತ್ರೀಕರಣ ವಿಚಾರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಶಿಸ್ತಿನ ಸಿಪಾಯಿ. ಈ ಬಗ್ಗೆ ಎರಡು ಮಾತಿಲ್ಲ, ಚಿತ್ರೀಕರಣಕ್ಕೆ ಕೈಕೊಟ್ಟಿದ್ದಾಗಲಿ, ನಖರ ಮಾಡಿದ್ದಾಗಲಿ, ನಿರ್ಮಾಪಕರಿಂದ ಹೆಚ್ಚುವರಿ ಹಣ ಪೀಕಿದ್ದಾಗಲಿ ನಡೆದೇ ಇಲ್ಲ . ಪ್ರತಿ ಚಿತ್ರವನ್ನೂ ತಮ್ಮ ಸ್ವಂತ ನಿರ್ಮಾಣದ ಚಿತ್ರವೇನೋ ಎಂಬಂತೆ ತೊಡಗಿಕೊಳ್ಳುವುದೇ ಶಿವಣ್ಣನ ವಿಶಿಷ್ಟ ಗುಣ.
ಇದುವರೆಗೂ ಶಿವಣ್ಣ 99 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಗಳ ಸೋಲು ಗೆಲುವಿನ ಲೆಕ್ಕಾಚಾರ ಪಕ್ಕಕ್ಕಿಟ್ಟರೆ ಶಿವಣ್ಣನಿಗೆ ನಿರ್ಮಾಪಕರಿಂದ ಇನ್ನೂ ಸಾಕಷ್ಟು ಬಾಕಿ ಹಣ ಬರಬೇಕಿತ್ತು. ಆದರೆ ನಿರ್ಮಾಪಕರನ್ನು ಹಣ ಕೊಡುವಂತೆ ಶಿವಣ್ಣ ಎಂದೂ ಪೀಡಿಸಿಲ್ಲ. ಮೂಲಗಳ ಪ್ರಕಾರ ಶಿವಣ್ಣನಿಗೆ ನಿರ್ಮಾಪಕರಿಂದ ರು.16 ಕೋಟಿ ಬಾಕಿ ಹಣ ಸಂದಾಯವಾಗಬೇಕಿದೆ.
ಯಾವ ನಿರ್ಮಾಪಕ ಎಷ್ಟೊಷ್ಟು ಬಾಕಿ ಹಣ ಕೊಡಬೇಕು ಎಂಬ ವಿವರಗಳನ್ನು ಶೀಘ್ರದಲ್ಲೆ ತಿಳಿಸುವುದಾಗಿ ಶಿವಣ್ಣ ಅವರ ಧರ್ಮಪತ್ನಿ ಗೀತಾ ಅವರು ತಿಳಿಸಿದ್ದಾರೆ. ಶಿವಣ್ಣ ಅವರಿಗೆ ಸಂದಾಯವಾಗಬೇಕಿರುವ ಒಟ್ಟಾರೆ ಮೊತ್ತ ರು.16 ಕೋಟಿಗೂ ಹೆಚ್ಚು ಎನ್ನುತ್ತವೆ ಮೂಲಗಳು. ಆದರೆ ನಿರ್ಮಾಪಕರು ಶಿವಣ್ಣನಿಗೆ ಬಾಕಿ ಹಣ ಕೊಡುತ್ತಾರೋ ಪಂಗನಾಮ ಹಾಕುತ್ತಾರೋ ಎಂಬುದನ್ನು ಕಾಲವೇ ನಿರ್ಧರಿಸಬೇಕು. [ಶಿವರಾಜ್ ಕುಮಾರ್]


Click it and Unblock the Notifications











