»   »  'ಶ್ವೇತನಾಗು' ಡಬ್ಬಿಂಗ್ ವಿರುದ್ಧ ಸಿಡಿದೆದ್ದ ಕಲಾವಿದರು

'ಶ್ವೇತನಾಗು' ಡಬ್ಬಿಂಗ್ ವಿರುದ್ಧ ಸಿಡಿದೆದ್ದ ಕಲಾವಿದರು

Posted By:
Subscribe to Filmibeat Kannada

'ಶ್ವೇತನಾಗು' ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿರುವ ಬಗ್ಗೆ ನಟರಾದಡಾ.ವಿಷ್ಣುವರ್ಧನ್ ಮತ್ತು ರವಿಚಂದ್ರನ್ ತೀವ್ರವಾಗಿ ವಿರೋಧಿಸಿದ್ದಾರೆ. ಈ ತಪ್ಪಿಗೆ ಕೆಸಿಎನ್ ಚಂದ್ರಶೇಖರ್ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಡಬ್ಬಿಂಗ್ ಚಿತ್ರವನ್ನು ಮಾಡಿರುವ ನಿರ್ಮಾಪಕರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ(ಕೆಎಫ್ ಸಿಸಿ) ದಂಡ ಕಟ್ಟಲಿ. ಆ ದುಡ್ಡು ಚಿತ್ರೋದ್ಯಮದ ಚಟುವಟಿಕೆಗಳಿಗೆ, ಅಭಿವೃದ್ಧಿಗೆ ವಿನಿಯೋಗವಾಗುತ್ತದೆ. ಇದೊಂದು ಅಕ್ಷಮ್ಯ ಅಪರಾಧ. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು ಎಂದು ಕ್ರೇಜಿ ಸ್ಟಾರ್ ಆಗ್ರಹಿಸಿದರು.

ಒಂದು ವೇಳೆ ತಮಿಳು, ತೆಲುಗು ಚಿತ್ರರಂಗದಲ್ಲಿ ಈ ರೀತಿ ಆಗಿದ್ದರೆ ದೊಡ್ಡ ಪ್ರಮಾಣದಲ್ಲಿ ದಂಡ ವಸೂಲಿ ಮಾಡುತ್ತಿದ್ದರು. ಡಬ್ಬಿಂಗ್ ನಲ್ಲಿ ಭಾಗಿಯಾರುವ ನಿರ್ಮಾಪಕರು ಸ್ಯಾಟಲೈಟ್ ಹಕ್ಕುಗಳಲ್ಲಿ ಬಂದಿರುವ ಹಣವನ್ನು ದಂಡದ ರೂಪದಲ್ಲಿ ಕಟ್ಟಲಿ ಎಂದು ರವಿಚಂದ್ರನ್ ಹೇಳಿದರು.

ಒಳಗಿನವರೇ ಹೀಗೆ ಮಾಡಿದ್ದಾರೆ ಎಂದರೆ ಇದು ನಿಜಕ್ಕೂ ನೋವಿನ ಸಂಗತಿ. ಈ ಬೆಳವಣಿಗೆಯಿಂದ ನನ್ನ ಮನಸ್ಸಿಗೆ ತುಂಬ ನೋವಾಗಿದೆ. ಇದೊಂದು ದುರದೃಷ್ಟಕರ ಸಂಗತಿ ಎಂದು ನಿರ್ಮಾಪಕರು ಹೇಳಿದ್ದಾರೆ. ತಪ್ಪು ಎಂದು ಗೊತ್ತಿದ್ದು, ಅದನ್ನು ಮಾಡಿದ ನಂತರ ಹೀಗೆ ಹೇಳುವುದು ಸಭ್ಯತೆ ಎನ್ನಿಸಿಕೊಳ್ಳುವುದಿಲ್ಲ. ಕನ್ನಡ ಪರ ಸಂಘಟನೆಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಾಹಸ ಸಿಂಹ ವಿಷ್ಣು ಗರ್ಜಿಸಿದ್ದಾರೆ.

ಶ್ವೇತನಾಗು ಡಬ್ಬಿಂಗ್ ವಿವಾದ ಕೆಎಫ್ ಸಿಸಿಯೊಂದಿಗೆ ತೀವ್ರ ಚರ್ಚೆಯಾದ ಬಳಿಕ, ಕೆಸಿಎನ್ ಚಂದ್ರಶೇಖರ್ ಮತ್ತು ಇಬ್ಬರು ನಿರ್ಮಾಪಕರಾದ ಎಚ್ ಎನ್ ಮಾರುತಿ ಮತ್ತು ಅಜಂತ ರಾಜು ಪತ್ರಿಕಾಗೋಷ್ಠಿ ಕರೆದಿದ್ದರು. ಆದಷ್ಟು ಈ ವಿವಾದದಿಂದ ದೂರವಿರಲು ಕೆಫಿಸಿಸಿ ಬಯಸಿತ್ತು. ಎಲ್ಲೋ ತಪ್ಪಾಗಿದೆ ದಯವಿಟ್ಟು ಕ್ಷಮಿಸಿ ಎಂದು ತಿಪ್ಪೆ ಸಾರಿಸುವ ಕೆಲಸವನ್ನು ಶ್ವೇತನಾಗು ಚಿತ್ರನಿರ್ಮಾಪಕರು ಮಾಡಿದ್ದರು.

ಗಣ್ಯ ಸ್ಥಾನದಲ್ಲಿರುವ ಇವರು ಹೀಗೆ ಮಾಡುವುದು ಸರಿನಾ? ನಾಳೆ ಬೆಳಗ್ಗೆ ಬೇರೆಯವರಿಗೆ ಮುಖ ತೋರಿಸುವುದಾದರೂ ಹೇಗೆ? ಇವರನ್ನು ಹೀಗೆ ಬಿಟ್ಟರೆ ನಾಳೆ ಮತ್ತೊಬ್ಬರು ಇವರ ಹಾದಿಯನ್ನೇ ತುಳಿಯುತ್ತಾರೆ ಎಂದು ಶ್ರೀನಿವಾಸ ಮೂರ್ತಿ ಕಿಡಿಕಾರಿದ್ದಾರೆ. ಇದೊಂದು ನೈತಿಕತೆಯ ಪ್ರಶ್ನೆಯಾದ ಕಾರಣ ನಿರ್ಮಾಪಕರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಶ್ವೇತನಾಗು ಡಬ್ಬಿಂಗ್ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದ್ದರೆ ಕೆಎಫ್ ಸಿಸಿ ಮಾತ್ರ ಮಗುಮ್ಮಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ನನಗೆ ಸ್ವಲ್ಪ ಕಾಲಾವಕಾಶ ಕೊಡಿ. ನಿರ್ಮಾಪಕರು ನಮಗೆ ಪತ್ರ ಮುಖೇನ ಈ ಬಗ್ಗೆ ತಿಳಿಸಿದ್ದಾರೆ. ನಿರ್ಮಾಪಕರ ವಿರುದ್ಧ ಏನು ಕ್ರಮ ತೆಗೆದುಕೊಳ್ಳಬೇಕು ಎಂದು ನೋಡುತ್ತಿದ್ದೇವೆ ಎಂದು ಕೆಎಫ್ ಸಿಸಿ ಅಧ್ಯಕ್ಷೆ ಜಯಮಾಲಾ ಪ್ರತಿಕ್ರಿಯಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada