»   » ದುನಿಯಾ ವಿಜಯ್ ಗೆ ಹಳೆ ಗೆಳೆಯರಿಂದ ಗೂಸಾ?

ದುನಿಯಾ ವಿಜಯ್ ಗೆ ಹಳೆ ಗೆಳೆಯರಿಂದ ಗೂಸಾ?

Posted By:
Subscribe to Filmibeat Kannada

ಆಕ್ಷನ್ ಸ್ಟಾರ್ ದುನಿಯಾ ವಿಜಯ್ ಸದ್ಯಕ್ಕೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಹಳೆಯ ಗೆಳೆಯರು ವಿಜಯ್ ಮೇಲೆ ದಾಳಿ ಮಾಡಿ ಎದ್ವಾ ತದ್ವಾ ತದುಕಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಗುಲ್ಲೆಬ್ಬಿಸಿದೆ. ಸೃಜನ್ ಲೋಕೇಶ್ ಹುಟ್ಟುಹಬ್ಬದ ದಿನ ಜೂನ್ 27ರಂದು ಗಡದ್ದಾಗಿ ಗುಂಡು ಹಾಕಿದ್ದ ವಿಜಯ್ ಅವರನ್ನು ಗೆಳೆಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನುತ್ತವೆ ಮೂಲಗಳು.

ಆದರೆ ವಿಜಯ್ ಮಾತ್ರ ಇದೆಲ್ಲಾ ಸುಳ್ಳು ಎಂದಿದ್ದಾರೆ. "ಪಾರ್ಟಿಯಲ್ಲಿದ್ದದ್ದು ನಿಜ. ಕುಡಿದಿದ್ದು ನಿಜ, ಹಳೆಯ ಗೆಳೆಯರನ್ನು ಭೇಟಿ ಮಾಡಿದ್ದು ನಿಜ. ಒಬ್ಬರಿಗೊಬ್ಬರು ಜೋರಾಗಿ ಮಾತನಾಡಿಕೊಂಡದ್ದು ನಿಜ. ಆದರೆ ಅವರು ನನಗೆ ಹೊಡೆದದ್ದು ಮಾತ್ರ ಸುಳ್ಳು" ಎಂದು ವಿಜಿ ಹೇಳಿದ್ದಾರೆ.

ನನಗೆ ಸಖತ್ ಆಗಿ ಮಡಗಿದರು ಎಂಬುದನ್ನು ಯಾರೋ ಚೆನ್ನಾಗಿ ಕಥೆ ಕಟ್ಟಿ ಹೇಳಿದ್ದಾರೆ. ನನ್ನ ಮೇಲೆ ನಾಲ್ಕು ಮಂದಿ ಬಂದರೂ ಹೆಡೆ ಮುರಿ ಕಟ್ಟುವ ತಾಕತ್ ನನಗಿದೆ ಎಂದು ಬೆಂಗಳೂರು ಮಿರರ್ ಪತ್ರಿಕೆಯೊಂದಿಗೆ ದೂರವಾಣಿ ಮೂಲಕ ವಿಜಯ್ ಹೇಳಿದ್ದಾರೆ. ಆದರೆ ಪ್ರತ್ಯಕ್ಷದರ್ಶಿಗಳು ಹೇಳುವ ಕಥೆ ಕೊಂಚ ಭಿನ್ನವಾಗಿದೆ.

ಸೃಜನ್ ಲೋಕೇಶ್ ಅವರ ಹುಟ್ಟುಹಬ್ಬಕ್ಕೆ ಕತ್ರಿಗುಪ್ಪೆಯ ಅವರ ಮನೆಗೆ ವಿಜಯ್ ಬಂದಿದ್ದರು. ಆಗ ಸಮಯ ರಾತ್ರಿ 9 ಗಂಟೆ. ಗುಂಡು ಹಾಕುತ್ತಾ ವಿಜಯ್ ಕುಳಿದಿದ್ದರು. ಅದೇ ಸಮಯಕ್ಕೆ ಮತ್ತೊಬ್ಬ ನಟನ ಗೆಳೆಯರು ಅಲ್ಲಿಗೆ ಬಂದರು. ಗುಂಡಿನ ಗಮ್ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು ಕೈಕೈ ಮಿಸಲಾಯಿಸಿದರು.

ಅದರಲ್ಲೊಬ್ಬ ಬಾಡಿ ಬಿಲ್ಡರ್ ವಿಜಯ್ ಗೆ ಸರಿಯಾಗಿ ಮಡಗಿದ್ದಾನೆ. ಅಷ್ಟಕ್ಕೆ ವಿಜಯ್ ಕೆಳಗೆ ಬಿದ್ದುಬಿಟ್ಟ. ಎಚ್ಚೆತ್ತುಕೊಳ್ಳುವಷ್ಟರಲ್ಲಿ ಪಂಚ್ ಮಾಡಿದ ವ್ಯಕ್ತಿ ಅಲ್ಲಿಂದ ಕಾಲು ಕಿತ್ತಿದ್ದ. ಬಳಿಕ ವಿಜಯ್ ತನ್ನ್ನ ಗೆಳೆಯರಿಗೆ ಕರೆ ಮಾಡಿ ಹೊಡೆದವನನ್ನು ವಿಚಾರಿಸಿಕೊಳ್ಳಲು ಹೇಳಿ ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ ಎನ್ನುತ್ತವೆ ಮೂಲಗಳು. ವಿಜಯ್ ಮೇಲೆ ಕೈ ಮಾಡಲು ಹಳೆಯ ವೈಷಮ್ಯವೇ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ವಿಜಯ್ ಆಗಿನ್ನು ಹೀರೋ ಆಗಿರಲಿಲ್ಲ. ನಟನೊಬ್ಬನ ಜೊತೆ ಇದ್ದ. ಆ ನಟನ ಹೊಸ ಚಿತ್ರ ಬಿಡುಗಡೆಯಾಗಿದ್ದಾಗ ವಿಜಯ್ ಕುಡಿದು ಗಲಾಟೆ ಮಾಡಿದ್ದ. ಆಗ ಆ ನಟನ ಗೆಳೆಯರು ವಿಜಯ್ ಮೇಲೆ ಕೈ ಮಾಡಿದ್ದರಂತೆ. ಅದೇ ಗೆಳೆಯರು ಸೃಜನ್ ಹುಟ್ಟುಹಬ್ಬದಲ್ಲಿ ಕಾಣಿಸಿಕೊಂಡಾಗ ವಿಜಯ್ ಪಿತ್ತ ನೆತ್ತಿಗೇರಿದೆ. ಮಾತಿಗೆ ಮಾತು ಬೆಳೆದು ಮದ್ದಾನೆಗಳ ಕಾದಾಟದಲ್ಲಿ ವಿಜಯ್ ಖೆಡ್ಡಾಗೆ ಬಿದ್ದಿದ್ದಾನೆ ಎಂಬುದು ಸುದ್ದಿ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada