»   »  ಸುದೀಪ್ ಅತ್ತರು, ಅಳಲು ತೋಡಿಕೊಂಡರು

ಸುದೀಪ್ ಅತ್ತರು, ಅಳಲು ತೋಡಿಕೊಂಡರು

Posted By: * ಜಯಂತಿ
Subscribe to Filmibeat Kannada

ನಾನು ಮನುಷ್ಯನೇ ಅಲ್ಲವೇ ಎಂದರು ಸುದೀಪ್! ಅವರ ಮಾತಿಗೆ ಸಾಕ್ಷಿಯೆನ್ನುವಂತೆ ಕಣ್ಣಲ್ಲಿ ನೀರಿತ್ತು. ಸುದೀಪ್ ಮಾತುಗಳಿಗಾಗಿ ತಡಕಾಡಿದರು. ಆಡಿದ ಕೆಲ ಮಾತುಗಳಲ್ಲಿ ಕಿಚ್ಚಿರಲಿಲ್ಲ, ಹೊಗೆಯೂ ಇರಲಿಲ್ಲ. ಇದ್ದುದು ತಣ್ಣನೆ ವಿಷಾದ.

ಸುದೀಪ್ ಮಂಕಾಗಲಿಕ್ಕೆ, ಮಾತುಗಳನ್ನು ಮರೆಯಲಿಕ್ಕೆ, ಮೌನದ ಮೊರೆ ಹೋಗಲಿಕ್ಕೆ ಕಾರಣ ಇಷ್ಟು: ಸುದೀಪ್‌ಗೆ ಮೈಕ್ ಹಿಡಿದ ಕಿರುತೆರೆ ಪತ್ರಕರ್ತರೊಬ್ಬರು- ನಟಿ ರಾಗಿಣಿ ಜೊತೆ ನಿಮಗೆ ಅಫೇರ್ ಇದೆಯಂತೆ, ನಿಜವಾ? ಎಂದು ಮುಖದ ಮೇಲೆ ಹೊಡೆದಂತೆ ಪ್ರಶ್ನಿಸಿದ್ದರು. ಆ ಕ್ಷಣಕ್ಕೆ ತೋಚಿದ್ದ ಏನನ್ನೋ ಹೇಳಿ ಸುದೀಪ್ ಕ್ಯಾಮೆರಾ ಬೆಳಕಿನಿಂದ ಹೊರಬಂದರು. ಪಕ್ಕಕ್ಕೆ ಬಂದಿದ್ದೇ ತಡ, ಅವರ ಕಣ್ಣಲ್ಲಿ ನೀರು.

ಎಂಥ ಪ್ರಶ್ನೆ ಕೇಳ್ತಾರೆ? ರಾಗಿಣಿ ಜೊತೆಗೆ ಅಫೇರ್ ಅಂತೆ. ನನಗೆ ಮೂವತ್ತೈದಾಯಿತು. ಆಕೆಗಿನ್ನೂ ಹತ್ತೊಂಬತ್ತು. ಇಬ್ಬರಿಗೂ ನಂಟಂತೆ. ಇಂಥ ಸುದ್ದಿಗಳನ್ನಾದರೂ ಯಾರು ಹಬ್ಬಿಸುತ್ತಾರೆ. ಅವರಿಗೆ ಧೈರ್ಯವಿದ್ದರೆ ನನ್ನ ಎದುರು ಬಂದು ಹೇಳಲಿ... ರಮ್ಯಾ ಜೊತೆಗೂ ನಂಟು ಕಲ್ಪಿಸುತ್ತಾರೆ. ಈ ಅಫೇರ್‌ಗಳಿಂದ ನನ್ನ ಹೆಂಡತಿಯನ್ನು ನಾನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲವಂತೆ...

ಸುದೀಪ್ ತಮ್ಮ ಮನಸ್ಸಿನಲ್ಲಿದ್ದ ಕಹಿಯನ್ನೆಲ್ಲ ತೋಡಿಕೊಳ್ಳುತ್ತಾ ಹೋದರು. ಅದು, ಎಷ್ಟು ದಿನಗಳ ಕಹಿಯೋ?

ಸುದೀಪ್ ಅಳಲಾದದ್ದು ಜಸ್ಟ್ ಮಾತ್ ಮಾತಲ್ಲಿ ಚಿತ್ರದ ಸುದ್ದಿಗೋಷ್ಠಿಯಲ್ಲಿ. ಆ ಸುದ್ದಿಗೋಷ್ಠಿಯೂ ಅವರ ಪಾಲಿಗೆ ಸುಲಿದ ಬಾಳೆಹಣ್ಣಿನಂತಿರಲಿಲ್ಲ. ಚಿತ್ರತಂಡದ ಪ್ರತಿಯೊಬ್ಬರೂ ಸುದೀಪ್‌ರನ್ನು, ಅವರ ಪ್ರತಿಭೆಯನ್ನು, ಕಾರ್ಯಕ್ಷಮತೆಯನ್ನು ಬಣ್ಣಿಸಿದರು. ಇದೇಕೊ ಅತಿಯಾಗುತ್ತಿದೆ ಎಂದು ಯುವ ಪತ್ರಕರ್ತರೊಬ್ಬರಿಗೆ ಅನ್ನಿಸಿತು. ಅವರು-

"ಏನು ನಡೀತಿದೆ ಇಲ್ಲಿ. ಸಿನಿಮಾದ ಬಗ್ಗೆ ಒಬ್ಬರೂ ಏನನ್ನೂ ಹೇಳುತ್ತಿಲ್ಲ. ಬರೀ ಸುದೀಪ್ ಗುಣಗಾನದಲ್ಲಿ ತೊಡಗಿದ್ದಾರೆ. ಇದು ಸರಿಯಾ?" ಎಂದರು. ಸುದೀಪ್ ಕಕ್ಕಾಬಿಕ್ಕಿ. ಆನಂತರ ಚೇತರಿಸಿಕೊಂಡು- "ಸ್ವಲ್ಪ ಸಹನೆಯಿರಲಿ. ಸುದ್ದಿಗೋಷ್ಠಿ ಇನ್ನೂ ಇದೆ. ಪ್ರಶ್ನೆ ಕೇಳುವ ನಿಮ್ಮ ಹಕ್ಕಿನ ಬಗ್ಗೆ ನಮಗೆ ಗೌರವವಿದೆ. ಸಿನಿಮಾದ ಬಗ್ಗೆ ನಿಮಗೆ ಏನೇನು ಮಾಹಿತಿ ಬೇಕೊ, ಅದೆಲ್ಲವನ್ನು ನಾನು ಕೊಡುತ್ತೇನೆ" ಎಂದು ಸಮಾಧಾನದಿಂದ ಹೇಳಿದರು.

ಅಂದಹಾಗೆ, ಸಮಾಧಾನಿ ಸುದೀಪ್‌ರನ್ನು ಕಂಡು ಪತ್ರಕರ್ತರಿಗೆ ಅಚ್ಚರಿ. ಸಾಮಾನ್ಯವಾಗಿ ಸುದೀಪ್ ಎಂದರೆ ಅಲ್ಲಿ ಮಾತಿನ ಮೆರವಣಿಗೆ. ಸುದೀಪ್ ಚಿತ್ರದ ಸುದ್ದಿಗೋಷ್ಠಿ ಎಂದರೆ ಅದು ಒನ್‌ಮ್ಯಾನ್ ಶೋ. ಮಾತಿನಲ್ಲಿ ಕರಾರುವಾಕ್ಕಾದ, ಖಡಕ್ಕಾದ, ಕೊಂಚ ಅಹಂ ಎನ್ನಿಸುವಷ್ಟು ಆತ್ಮವಿಶ್ವಾಸದ ಆಸಾಮಿ ಈ ಸುದೀಪ್. ಇಂತಿಪ್ಪ, ಈ ಶತಮಾನದ ವೀರ ಮದಕರಿ ವಿಪರೀತ ಸಾವಧಾನದಿಂದ ವರ್ತಿಸಿದ್ದು ಕೆಲವರಿಗೆ ಕೃತಕವಾಗಿ ಕಂಡಿದ್ದರಲ್ಲಿ ಆಶ್ಚರ್ಯವಿಲ್ಲ.

ಸುದೀಪ್ ಬಗ್ಗೆ ಗಾಸಿಪ್‌ಗಳೂ ಹೊಸತಲ್ಲ. ಆದರೆ ಯಾವತ್ತೂ ಮಾಧ್ಯಮದೆದುರು ಕಂಗಾಲಾಗದ, ಅಳಲು ತೋಡಿಕೊಳ್ಳದ ಸುದೀಪ್ ಮೊನ್ನೆ ಅತ್ತರು. ಅದು ಸೋಜಿಗವೋ? ಸುದೀಪ್ ಬದಲಾಗಿರುವ ದ್ಯೋತಕವೋ?- ಸದ್ಯಕ್ಕೆ ಹೇಳುವುದು ಕಷ್ಟ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada