»   » ದ್ವಾರಕೀಶ್ ಗೆ ಕಡೆಗೂ ದಕ್ಕದ 'ವಿಷ್ಣುವರ್ಧನ'!

ದ್ವಾರಕೀಶ್ ಗೆ ಕಡೆಗೂ ದಕ್ಕದ 'ವಿಷ್ಣುವರ್ಧನ'!

Posted By:
Subscribe to Filmibeat Kannada

ಸಾಹಸಸಿಂಹ ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಚಿತ್ರ ತೆಗೆಯುವ ನಿರ್ಮಾಪಕ ದ್ವಾರಕೀಶ್ ಕನಸು ಭಗ್ನವಾಗಿದೆ. 'ವಿಷ್ಣುವರ್ಧನ' ಶೀರ್ಷಿಕೆಯನ್ನು ಯಾರು ಬಳಕೆ ಮಾಡುವಂತಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಟೈಟಲ್ ಸಮಿತಿ ತೀರ್ಮಾನಿಸಿ ಶುಕ್ರವಾರ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ 'ವಿಷ್ಣುವರ್ಧನ' ಶೀರ್ಷಿಕೆ ವಿವಾದ ಹೊಸ ತಿರುವು ಪಡೆದುಕೊಂಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ, ನಿರ್ಮಾಪಕ ದ್ವಾರಕೀಶ್ ಕಾನೂನು ಪ್ರಕಾರ ಮುಂದಿನ ಅಡಿಯಿಡುತ್ತೇವೆ. ಬಲವಂತವಾಗಿ ವಿಷ್ಣುವರ್ಧನ ಶೀರ್ಷಿಕೆಯನ್ನು ಪಡೆಯುವ ಆಸೆ ನನಗಿಲ್ಲ ಎಂದಿದ್ದಾರೆ.ಚಿತ್ರದ ನಾಯಕ ನಟ ಸುದೀಪ್ ಹೇಳಿದಂತೆ ಮುಂದಿನ ನಡೆ ಎಂದು ದ್ವಾರಕೀಶ್ ಪ್ರತಿಕ್ರಿಯಿಸಿದ್ದಾರೆ.

ಚಿತ್ರದ ನಾಯಕ ನಟ ಸುದೀಪ್ ಮಾತನಾಡುತ್ತಾ, ಸಮಿತಿಯ ತೀರ್ಮಾನದಿಂದ ಬೇಸರವಾಗಿಲ್ಲ. ಅವರ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಇದನ್ನು ನಾವು ಸೋಲು ಎಂದು ಭಾವಿಸುವುದಿಲ್ಲ. ಭಾರತಿ ವಿಷ್ಣುವರ್ಧನ್ ಅವರ ಮೇಲೆ ನನಗೆ ಅಪಾರ ಗೌರವವಿದೆ. ಟೈಟಲ್ ಸಿಕ್ಕಿದ್ದರೆ ಎಷ್ಟು ಗೌರವವಿರುತ್ತಿತ್ತೋ ಈಗಲೂ ಅಷ್ಟೇ ಗೌರವವ ಅವರ ಮೇಲಿದೆ ಎಂದಿದ್ದಾರೆ.

ಈಗಾಗಲೆ 'ವಿಷ್ಣು' ಎಂಬ ಶೀರ್ಷಿಕೆಯನ್ನು ನಟ ಅಭಿಜಿತ್ ನೋಂದಾಯಿಸಿಕೊಂಡಿದ್ದು ಆ ಶೀರ್ಷಿಕೆ ಅವರ ಪಾಲಾಗಿದೆ. ಆದರೆ 'ವಿಷ್ಣು' ಶೀರ್ಷಿಕೆಯನ್ನು ಯಾವುದೇ ಕಾರಣಕ್ಕೂ ದ್ವಾರಕೀಶ್ ಅವರಿಗೆ ನೀಡುವುದಿಲ್ಲ ಎಂದು ನಟ ಅಭಿಜಿತ್ ಖಡಾಖಂಡಿತವಾಗಿ ಹೇಳಿದ್ದಾರೆ. ಟೈಟಲ್ ಸಮಿತಿಯಲ್ಲಿ ಯಾರ‌್ಯಾರು ಸದಸ್ಯರಿದ್ದರು ಎಂಬುದು ತಿಳಿದುಬಂದಿಲ್ಲ.

'ಪ್ರೊಡಕ್ಷನ್ ನಂಬರ್ 47' ಹೆಸರಿನಲ್ಲಿ ಈಗಾಗಲೆ ಸೆಟ್ಟೇರಿರುವ ಚಿತ್ರದಲ್ಲಿ ದ್ವಾರಕೀಶ್ ನಿರ್ಮಾಣದ ಜೊತೆಗೆ ನಟಿಸುತ್ತಿದ್ದಾರೆ. ಐದು ವರ್ಷಗಳ ಬಳಿಕ ದ್ವಾರಕೀಶ್ ನಿರ್ಮಿಸುತ್ತಿರುವ ಚಿತ್ರವಿದು. ಕನ್ನಡ ಚಿತ್ರರಂಗಕ್ಕೆ ಉತ್ಕೃಷ್ಟ ಚಿತ್ರಗಳನ್ನು ನೀಡಬೇಕು ಎಂಬುದು ನನ್ನ ಆಸೆ. ಯಾವುದೇ ಕಾರಣಕ್ಕೂ ಚಿತ್ರ ನಿರ್ಮಾಣವನ್ನು ನಾನು ನಿಲ್ಲಿಸುವುದಿಲ್ಲ ಎಂದು ದ್ವಾರಕೀಶ್ ಹೇಳಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada