»   » ದುನಿಯಾ ವಿಜಯ್ ಮೇಲೆ ಕಿಡಿಕಾರಿದ ಎಸ್.ನಾರಾಯಣ್!

ದುನಿಯಾ ವಿಜಯ್ ಮೇಲೆ ಕಿಡಿಕಾರಿದ ಎಸ್.ನಾರಾಯಣ್!

Posted By: Staff
Subscribe to Filmibeat Kannada

ದುನಿಯಾ ವಿಜಯ್ ಗೆ ಕೀರ್ತಿ ಮದವೇ? ವಿಜಯ್ ಅಶಿಸ್ತಿನ ಸಿಪಾಯಿಯೇ? ಈ ಬಗ್ಗೆ ಈವರೆಗೆ ಯಾರದೂ ದೂರಿಲ್ಲ. ಆದರೆ ಈಗಿನ ಯುವನಟರ ಬಗ್ಗೆ ಪ್ರಸ್ತಾಪಿಸಿದ ನಿರ್ದೇಶಕ ಎಸ್.ನಾರಾಯಣ್, ನೇರವಾಗಿ ಹೆಸರು ಹೇಳದೇ ಪರೋಕ್ಷವಾಗಿ ದುನಿಯಾ ನಾಯಕ ವಿಜಯ್ ಅವರನ್ನು ಟೀಕೆ ಮಾಡಿದ್ದಾರೆ. ಅವರ ಮೇಲೆ ಗೂಬೆ ಕೂರಿಸಿದ್ದಾರೆ. 

'ಚೆಲುವಿನ ಚಿತ್ತಾರ'ಶತದಿನೋತ್ಸವ ಸಮಾರಂಭದಲ್ಲಿ ಮಾತನಾಡುತ್ತಿದ್ದ ನಾರಾಯಣ್, ಚಿತ್ರ ಜಗತ್ತಿನ ಅನೇಕ ಸಂಗತಿಗಳನ್ನು ಹಂಚಿಕೊಂಡರು. 'ಚಿತ್ತಾರ' ಸಂಭ್ರಮದ ಜೊತೆಗೆ ಟೀಕೆಯ ಚಾಟಿ ಬೀಸತೊಡಗಿದರು. ನಾರಾಯಣ್ ನಿರ್ದೇಶನದ 'ಚಂಡ'ಚಿತ್ರದಲ್ಲಿ ವಿಜಯ್ ಅಭಿನಯಿಸುತ್ತಿದ್ದು, ಅವರ ನಡವಳಿಕೆಯನ್ನು ಮನಸ್ಸಿನಲ್ಲಿಟ್ಟುಕೊಂಡು ನಾರಾಯಣ್ ಮಾತನಾಡುತ್ತಿದ್ದಾರೆ ಎಂಬ ಅನುಮಾನಕ್ಕೆ ಅಲ್ಲಿ ಸಾಕ್ಷಿಗಳಿದ್ದವು. 

'ನಾನು ಈಗ ತಾನೇ ಒಂದು ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ಬಂದಿದ್ದೇನೆ. ನನ್ನ ಮನಸ್ಸಿಗೆ ನೋವಾಗಿದೆ. ಯುವ ನಟರ ನಡವಳಿಕೆಯಿಂದ ಬೇಸರವಾಗಿದೆ. ನನ್ನ ವೃತ್ತಿ ಬದುಕಿನಲ್ಲಿ ಎಂದೂ ಹೀಗೆ ಆಗಿರಲಿಲ್ಲ. ಈಗಿನ ನಾಯಕರು ಚಿತ್ರೀಕರಣದ ವೇಳೆ ಸಾಕಷ್ಟು ಹಿಂಸೆ ಕೊಡುತ್ತಾರೆ'ಎಂದರು ನಾರಾಯಣ್.

ಯಶಸ್ಸಿನಿಂದ ಕೆಲವರಿಗೆ ತಲೆ ನಿಲ್ಲುತ್ತಿಲ್ಲ. ಅರ್ಧರಾತ್ರಿಯಲ್ಲಿ ಕೊಡೆ ಹಿಡಿಯುವ ಸ್ವಭಾವ ಒಳ್ಳೆಯದಲ್ಲ. ಎಂದಿಗೂ ಯಶಸ್ಸು ಮತ್ತು ಕೀರ್ತಿ ಶಾಶ್ವತವಲ್ಲ. ಒಳ್ಳೆತನವಷ್ಟೇ ಕೊನೆಗೆ ಉಳಿಯುತ್ತದೆ. ನಾನು ಹೊಸಬರನ್ನು ಸ್ವಾಗತಿಸುತ್ತೇನೆ. ಆದರೆ ಅವರ ಅಶಿಸ್ತನ್ನು ಸಹಿಸುವುದಿಲ್ಲ ಎಂದ ನಾರಾಯಣ್, ವಿಜಯ್ ಮೇಲೆ ಅಪರೋಕ್ಷ ಮಾತಿನ ದಾಳಿ  ಮುಂದುವರೆಸಿದರು.

ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ರವಿಚಂದ್ರನ್ ಸೇರಿದಂತೆ ಅನೇಕರೊಂದಿಗೆ ನಾನು ಈವರೆಗೆ ಕೆಲಸ ಮಾಡಿದ್ದೇನೆ. ಅವರು ನನಗೆ ಗೌರವ ನೀಡಿದ್ದಾರೆ. ನನ್ನ ಕೆಲಸವನ್ನು ಅಭಿನಂದಿಸಿದ್ದಾರೆ. ಒಂದು ಸಲ ಚಿತ್ರೀಕರಣಕ್ಕೆ ಕೇವಲ 15ನಿಮಿಷ ತಡವಾಗಿ ಬಂದ ರಾಜ್, ನನ್ನಲ್ಲಿ ಕ್ಷಮೆ ಯಾಚಿಸಿದರು. ಇಂಥ ಸನ್ನಿವೇಶಗಳು ಈಗಿಲ್ಲ ಎಂದು ನಾರಾಯಣ್ ವಿಷಾದಿಸಿದರು.

(ದಟ್ಸ್ ಕನ್ನಡ ಸಿನಿ ವಾರ್ತೆ)

    ವಿಜಯ್ ಮೇಲೆ ಗೂಬೆ ಕೂರಿಸಿದ ನಾರಾಯಣ್ ಅಸಲಿ ಬಣ್ಣ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada