»   »  ಕನ್ನಡ ಚಿತ್ರಗಳನ್ನು ಸಾಯಿಸುತ್ತಿದ್ದಾರೆ: ಬಾಬು

ಕನ್ನಡ ಚಿತ್ರಗಳನ್ನು ಸಾಯಿಸುತ್ತಿದ್ದಾರೆ: ಬಾಬು

Posted By:
Subscribe to Filmibeat Kannada

''ಪರಭಾಷಾ ಚಿತ್ರಗಳ ಹಾವಳಿ ಮಿತಿಮೀರಿದೆ. ಇದು ಹೀಗೇ ಮುಂದುವರಿದರೆ ಕನ್ನಡ ಚಿತ್ರಗಳಿಗೆ ಉಳಿಗಾಲವಿಲ್ಲ. ಕನ್ನಡ ಚಿತ್ರ ನಿರ್ಮಾಪಕರು ಬೀದಿ ಬೀಳುತ್ತಾರೆ. ಪರಭಾಷಾ ಚಿತ್ರಗಳ ಹಾವಳಿಯನ್ನು ತಡೆಯಿರಿ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಕನ್ನಡ ಚಿತ್ರ ನಿರ್ಮಾಪಕರ ಸಂಘ ಇಂದು ಒಕ್ಕೊರಲ ಧ್ವನಿಯಲ್ಲಿ ಪ್ರತಿಭಟಿಸಿತು.

ಕನ್ನಡ ಚಿತ್ರಗಳನ್ನು ಸಾಯಿಸುತ್ತ್ತಿದ್ದಾರೆ
ಕನ್ನಡ ಚಿತ್ರ ನಿರ್ಮಾಪಕ ಎಸ್ ವಿ ರಾಜೇಂದ್ರಸಿಂಗ್ ಬಾಬು ಮಾತನಾಡುತ್ತಾ, ಪರಭಾಷಾ ಚಿತ್ರಗಳ ಹಾವಳಿ ಮಿತಿಮೀರಿದೆ. ಈ ಹಿಂದೆ ಅಮಿತಾಬ್ ಬಚ್ಚನ್ ರ ಚಿತ್ರ ಬಿಡುಗಡೆಯನ್ನು ವಿರೋಧಿಸಿದ್ದಕ್ಕೆ ಡಾ.ರಾಜ್ ಅವರನ್ನು ಹಿಟ್ಲರ್ ಎಂದು ಜರಿದಿದ್ದರು. ಪರಭಾಷಾ ಚಿತ್ರದ ವಿತರಕರು ಕನ್ನಡ ಚಿತ್ರಗಳನ್ನು ಸಾಯಿಸುತ್ತಿದ್ದಾರೆ. ಏನೇ ಕಾನೂನು, ನೀತಿ ನಿಯಮಗಳನ್ನು ರೂಪಿಸಿದರೂ ಪ್ರಯೋಜನವಾಗಿಲ್ಲ. ಚಾಪೆ ಕೆಳಗೆ, ರಂಗೋಲಿ ಕೆಳಗೆ ನುಸುಳುವಷ್ಟು ನಿಸ್ಸೀಮರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಂಗರಾಜು ವಿರುದ್ಧ ಸಿಂಗ್ ಬಾಬು ಕಿಡಿ
''ಪರಭಾಷಾ ಚಿತ್ರಗಳು ರಾಜ್ಯದಲ್ಲಿ ಏಳು ವಾರಗಳ ನಂತರ ಬಿಡುಗಡೆಯಾಗಬೇಕು. ಆದರೆ ಈ ನಿಯಮವನ್ನು ಗಾಳಿಗೆ ತೂರಿ ಮೊದಲ ವಾರದಲ್ಲೇ ಬಿಡುಗಡೆಯಾಗುತ್ತಿವೆ.ನಮ್ಮ ಹೋರಾಟಕ್ಕೆ ಫಲ ಸಿಕ್ಕಿಲ್ಲ. ಇದರ ವಿರುದ್ಧ ನಿರಂತರವಾಗಿ ನಾವು ಹೋರಾಡುತ್ತಿದ್ದೇವೆ. ಮೊದಲು ಕನ್ನಡ ಚಿತ್ರಗಳಿಗೆ ಆದ್ಯತೆ ನೀಡಬೇಕು. ಮೊದಲು ನಾವು ಬದುಕ ಬೇಕು ನಂತರ ಉಳಿದವರ ಬಗ್ಗೆ ಯೋಚಿಸೋಣ. ನಮ್ಮ ಚಿತ್ರರಂಗ ಅಧೋಗತಿಗೆ ಇಳಿದಿದೆ. ಇಂದು ಪರಭಾಷಾ ಚಿತ್ರಗಳು ಹಾವಳಿ ಮಿತಿಮೀರಲು ಚೇಂಬರ್ ನ ಅಧ್ಯಕ್ಷರಾಗಿದ್ದ ಎಚ್ ಡಿ ಗಂಗರಾಜು ಅಂತಹವರೇ ಕಾರಣ'' ಎಂದು ಸಿಂಗ್ ಬಾಬು ಕಿಡಿ ಕಾರಿದರು.

ಇವರ ದಬ್ಬಾಳಿಕೆ ಸಹಿಸಲು ಸಾಧ್ಯವಿಲ್ಲ
''ಚಿರಂಜೀವಿ ಚಿತ್ರ ರು.3 ಲಕ್ಷ ಇದ್ದದ್ದು ಇಂದು ರು.4 ಕೋಟಿ ಆಗಿದೆ. ರಜನಿ ಚಿತ್ರ ರು.5 ಕೋಟಿ ಆಗಿದೆ. ನಮ್ಮ ಚಿತ್ರಗಳನ್ನು ಕೇಳುವವರೇ ಇಲ್ಲ.ರಾಜ್ಯದಲ್ಲಿ ಬಿಡುಗಡೆಯಾಗುತ್ತಿರುವ ಪರಭಾಷಾ ಚಿತ್ರಗಳಿಂದ ಅಪಾರ ಪ್ರಮಾಣದ ತೆರಿಗೆ ಹಣವನ್ನು ಕಬಳಿಸುತ್ತಿದ್ದಾರೆ. ಆರ್ ಟಿ ನಗರ, ಇಂದಿರಾನಗರದಲ್ಲಿ ಇರೋರೆಲ್ಲಾ ಕನ್ನಡಿಗರೇ. ಹೀಗಿದ್ದೂ ಅಲ್ಲೂ ಪರಭಾಷಾ ಚಿತ್ರಗಳ ಹಾವಳಿ ಮಿತಿಮೀರಿದೆ. ಕಾವೇರಿ ಚಿತ್ರಮಂದಿರವನ್ನು ಕನ್ನಡಿಗರಿಂದ ಕಿತ್ತುಕೊಂಡರು. ಇನ್ನೆಷ್ಟು ದಿನ ಇವರ ದಬ್ಬಾಳಿಕೆಯನ್ನು ಸಹಿಸುವುದು. ಏನೇ ಆಗಲಿ ಈ ಬಾರಿ ಬಿಡುವುದಿಲ್ಲ. ಹೋರಾಡುತ್ತೇವೆ'' ಸಿಂಗ್ ಬಾಬು ವಾಗ್ದಾಳಿ ಮುಂದುವರಿದಿತ್ತು.

ಬೇಲಿಯೇ ಎದ್ದು ಹೊಲ ಮೇಯ್ದರೆ...
ನಿರ್ಮಾಪಕಿ ವಿಜಯಲಕ್ಷ್ಮಿಸಿಂಗ್ ಮಾತನಾಡುತ್ತಾ, ಮಗಧೀರನ ನೇರ ಹೊಡೆತಕ್ಕೆ ಸಿಕ್ಕ ನಿರ್ಮಾಪಕಿ ಎಂದರೆ ನಾನೇ ಎಂದರು. ಮಳೆ ಬರಲಿ ಮಂಜು ಇರಲಿ ಚಿತ್ರ ಬಿಡುಗಡೆಯಾಗಿರುವ ಪಕ್ಕದ ಚಿತ್ರಮಂದಿರದಲ್ಲೇ ಮಗಧೀರ ಬಿಡುಗಡೆಯಾಗಿದೆ. ಇದರ ನೇರ ಪರಿಣಾಮ ನನ್ನ ಚಿತ್ರದ ಮೇಲಾಯಿತು. ಇಷ್ಟು ದಿನ ಮನೆಯಲ್ಲೇ ಪರಿಹರಿಸಿಕೊಳ್ಳುತ್ತಿದ್ದ ಸಮಸ್ಯೆ ಇಂದು ಪೆಡಂಭೂತವಾಗಿದೆ. ಹಾಗಾಗಿ ವಿಧಿಯಿಲ್ಲದೆ ನ್ಯಾಯಕ್ಕಾಗಿ ರಸ್ತೆ ಇಳಿದಿದ್ದೇವೆ. ಬೇಲಿಯೇ ಎದ್ದು ಹೊಲ ಮೇಯುತ್ತಿದೆ ಎಂದು ಕೆಎಫ್ ಸಿಸಿ ಅಧ್ಯಕ್ಷರೇ ಹೇಳಿದ ಮೇಲೆ ನಾವೇನು ಮಾಡುವುದು ಎಂದರು.

ಕನ್ನಡ ಚಿತ್ರಗಳ ಸರ್ವನಾಶಕ್ಕಿದು ಕುತಂತ್ರ
ಪ್ರಮುಖ ನಿರ್ಮಾಪಕರಲ್ಲೊಬ್ಬರಾದ ಕೆ ಮಂಜು ಮಾತನಾಡುತ್ತಾ, ಕನ್ನಡ ಭಾಷೆಯ ಚಿತ್ರಗಳನ್ನು ಸರ್ವನಾಶ ಮಾಡಬೇಕೆಂದಿದ್ದಾರೆ. ನಮ್ಮ ಪ್ರಾಣವನ್ನು ಒತ್ತೆಯಿಟ್ಟಾದರೂ ನ್ಯಾಯಕ್ಕಾಗಿ ಹೋರಾಡುತ್ತೇವೆ. ಉಗ್ರ ಹೋರಾಟಕ್ಕೆ ನಾವು ಸದಾ ಸಿದ್ಧ. ಪರಭಾಷಾ ಚಿತ್ರಗಳ ಹಾವಳಿ ನಿಲ್ಲಬೇಕು. ನಿಯಮಗಳನ್ನು ಉಲ್ಲಂಘಸಿ ಪರಭಾಷಾ ಚಿತ್ರಗಳನ್ನು ಬಿಡುಗಡೆ ಮಾದುವ ವಿತರಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜೈಲಿಗೆ ಹೋಗಲೂ ಸಿದ್ಧ: ಸಿಂಗ್ ಬಾಬು
ರಾಜ್ ಚಿತ್ರ ಎಲ್ಲೆಲ್ಲಿ ಬಿಡುಗಡೆಯಾಗುತ್ತಿದೆಯೋ ಅಲ್ಲೆಲ್ಲಾ ಮಗಧೀರ ಸಹ ಬಿಡುಗಡೆಯಾಗಿದೆ. ನಿರ್ದೇಶಕ ಪ್ರೇಮ್ ಗೆ ಸಹ ಈ ಬಗ್ಗೆ ಎಚ್ಚರಿಸಿದ್ದೇವೆ. ಪರಭಾಷಾ ಚಿತ್ರಗಳ ಹಾವಳಿ ಹೀಗೇ ಮುಂದುವರಿದರೆ ನಮ್ಮ ಹೋರಾಟ ಉಗ್ರರೂಪ ಪಡೆಯಲಿದೆ. ಪ್ರಿಂಟ್ ಗಳನ್ನು ಸುಡುತ್ತೇವೆ. ಚಿತ್ರಮಂದಿರಗಳನ್ನು ಹೊಡೆಯಲು ಹೇಸುವುದಿಲ್ಲ. ನಮಗೆ ನ್ಯಾಯ ದೊರಕಬೇಕು ಅಷ್ಟೇ. ಇದಕ್ಕಾಗಿ ನಾವು ಜೈಲಿಗೆ ಹೋಗಲು ಸಿದ್ಧ ಎಂದು ಸಿಂಗ್ ಬಾಬು ಪರಭಾಷಾ ಚಿತ್ರಗಳ ವಿರುದ್ಧ ರೋಶ ವ್ಯಕ್ತಪಡಿಸಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada