»   » ಪೂಜಾಗಾಂಧಿ, ದಯಾಳ್ ನಡುವೆ ಕದನ ವಿರಾಮ

ಪೂಜಾಗಾಂಧಿ, ದಯಾಳ್ ನಡುವೆ ಕದನ ವಿರಾಮ

Subscribe to Filmibeat Kannada

ನಟಿ ಪೂಜಾಗಾಂಧಿ ಮತ್ತು ನಿರ್ದೇಶಕ ದಯಾಳ್ ಪದ್ಮನಾಭನ್ ನಡುವಿನ ವಿವಾದ ತಣ್ಣಗಾಗಿದೆ. 'ಶ್ರೀ ಹರಿಕಥೆ' ಚಿತ್ರದ ಪ್ರಚಾರ ಕಾರ್ಯಗಳಿಗೆ ಪೂಜಾಗಾಂಧಿ ಬರುತ್ತಿಲ್ಲಎಂಬುದು ದಯಾಳ್ ಆರೋಪ. ಇದಕ್ಕೆ ಪ್ರತಿಯಾಗಿ ದಯಾಳ್ ಗೆ ಪೂಜಾಗಾಂಧಿ ತಿರುಗೇಟು ನೀಡಿದ್ದರು. ಹಾಗಾಗಿ ಇವರಿಬ್ಬರ ನಡುವೆ ದ್ವೇಷದ ಕಂದಕ ನಿರ್ಮಾಣವಾಗಿತ್ತು. ಇದೀಗ ಈ ಕಂದಕವನ್ನು ನಟ ಅಂಬರೀಷ್ ಮುಚ್ಚಿಹಾಕಿದ್ದಾರೆ.

'ಶ್ರೀ ಹರಿಕಥೆ' ಚಿತ್ರದ ಪ್ರಚಾರಕ್ಕಾಗಿ ಒಂದು ಶನಿವಾರ ನಿಗದಿಯಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಪೂಜಾಗಾಂಧಿ ಬರಲಿಲ್ಲ. ಶುಕ್ರವಾರ ಕಾರ್ಯಕ್ರಮದ ಬಗ್ಗೆ ತಿಳಿಸಲಾಯಿತು.ಆದರೆ ಮನೆಯಲ್ಲಿ ಶನಿವಾರ ಬೇರೆ ಕಾರ್ಯಕ್ರಮವಿತ್ತು. ಹಾಗಾಗಿ 'ಶ್ರೀ ಹರಿಕಥೆ' ಪ್ರಚಾರ ಕಾರ್ಯಕ್ಕೆ ಬರಲು ಸಾಧ್ಯವಾಗಲಿಲ್ಲ. ಮುಂಚಿತವಾಗಿ ತಿಳಿಸಿದ್ದರೆ ನಾನು ಬೇರೆ ಏರ್ಪಾಟುಗಳನ್ನು ಮಾಡಿಕೊಳ್ಳುತ್ತಿದ್ದೆ ಎಂಬುದು ಪೂಜಾ ನೀಡುವ ವಿವರ.

ಪೂಜಾಗಾಂಧಿ ಕೈಕೊಟ್ಟ ಕಾರಣ ನಿರ್ದೇಶಕ ದಯಾಳ್ ರ ಪಿತ್ತ ನೆತ್ತಿಗೇರಿತ್ತು. ಪೂಜಾಗಾಂಧಿ ವಿರುದ್ಧ ದಯಾಳ್ ಸಿಡಿದು ಬೀಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನೇನು ಇವರಿಬ್ಬರ ನಡುವೆ ಯುದ್ಧ ಘೋಷಣೆಯಾಗುವುದರಲ್ಲಿತ್ತು. ಅಷ್ಟರಲ್ಲಿ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಶ್ ಮಧ್ಯಪ್ರವೇಶಿಸಿ ಕದನ ವಿರಾಮ ಘೋಷಿಸಿದ್ದಾರೆ.

ಸಾರ್ವಜನಿಕವಾಗಿ ಒಬ್ಬರ ಮೇಲೊಬ್ಬರು ಆಪಾದಿಸಿಕೊಳ್ಳುವುದು ಸರಿಯಲ್ಲ ಎಂದು ಅಂಬಿ ಇಬ್ಬರಿಗೂ ಬುದ್ಧಿಮಾತು ಹೇಳಿದ್ದಾರೆ. ಅಂಬಿ ಅವರ ಮಧ್ಯಪ್ರವೇಶದಿಂದ ಪೂಜಾಗಾಂಧಿ ಮತ್ತು ದಯಾಳ್ ನಡುವಿನ ವಿವಾದ ತಣ್ಣಗಾಗಿದೆ. 'ಶ್ರೀ ಹರಿಕಥೆ' ಚಿತ್ರದ ಮುಂದಿನ ಕಾರ್ಯಗಳಲ್ಲಿ ಒಟ್ಟಿಗೆ ಕೆಲಸ ಮಾಡುವುದಾಗಿ ಇಬ್ಬರೂ ಸಹಮತ ವ್ಯಕ್ತಪಡಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada