»   »  ಬಿಸಿಲ ಹೊತ್ತು ಪಾರ್ವತಮ್ಮ ರಾಂಗಾದರು!

ಬಿಸಿಲ ಹೊತ್ತು ಪಾರ್ವತಮ್ಮ ರಾಂಗಾದರು!

By: * ಜಯಂತಿ
Subscribe to Filmibeat Kannada
Parvathamma Rajkumar
ಮಾತು ಆಡಿದರೆ ಹೋಯ್ತು. ಮುತ್ತು ಒಡೆದರೆ ಹೋಯ್ತು ಎನ್ನುವ ಮಾತು ಗೊತ್ತಲ್ಲ! ಈ ನಾಣ್ಣುಡಿ ನಟ ಶಿವರಾಜ್‌ಕುಮಾರ್‌ಗೆ ಗೊತ್ತೋ ಇಲ್ಲವೋ ತಿಳಿದಿಲ್ಲ. ಆದರೆ, ಅಂಥ ಅನುಭವ ಅವರಿಗೆ ಹೊಸದೇನೂ ಅಲ್ಲ.

ಸಿನಿಮಾದಿಂದ ಸಮಾಜ ಸುಧಾರಣೆ ಸಾಧ್ಯವಿಲ್ಲ. ಜನ ಸಿನಿಮಾ ನೋಡಿ ಏನನ್ನೂ ಕಲಿಯೊಲ್ಲ ಎಂದು ಬಿಡುಬೀಸಾಗಿ ಹೇಳಿದ್ದ ಶಿವಣ್ಣ ಆಮೇಲೆ ಕೈಕೈ ಹಿಸುಕಿಕೊಂಡಿದ್ದರು. ನಂತರದ ದಿನಗಳಲ್ಲಿ ಪತ್ರಕರ್ತರಿಗೆ ಮುಖಾಮುಖಿ ಆದಾಗಲೆಲ್ಲ ಅವರ ಮಾತಿಗೊಂದು ಫಿಲ್ಟರ್ ಇರುತ್ತಿತ್ತು. ಕಬ್ಬನ್ ಉದ್ಯಾನದ ಹವೆಯ ತಂಪೋ ಏನೋ, ಕಳೆದ ವಾರ ಪತ್ರಕರ್ತರ ಜೊತೆ ಮಾತಿಗೆ ಕೂತಾಗ ಮಾತ್ರ ಅವರು ಮುಕ್ತವಾಗಿ ಮಾತನಾಡತೊಡಗಿದರು. ಆ ಸಮಯದಲ್ಲೇ ಅವರು- ವೀರಪ್ಪನ್‌ಗೆ ಕಪ್ಪ ಸಲ್ಲಿಸಿದ್ದು ನಿಜ ಎಂದು ಒಪ್ಪಿಕೊಂಡಿದ್ದು.

ಅಪ್ಪಾಜಿ ಎಷ್ಟು ದೊಡ್ಡ ನಟರು. ಅಭಿಮಾನಿಗಳಿಗೂ ಅವರನ್ನು ಕಂಡರೆ ಪ್ರಾಣ. ಮುಕ್ಕೋಟಿ ಕನ್ನಡಿಗರ, ಚತುಷ್ಕೋಟಿ ಕನ್ನಡಿಗರ ಆರಾಧ್ಯದೈವ ಅವರು. ಇಂಥ ದೇವರನ್ನೂ ಕಾಡುಗಳ್ಳ ಅಪಹರಿಸಿಬಿಟ್ಟ...

ಶಿವರಾಜ್ ಮಾತುಗಳಲ್ಲಿ ನೆನಪುಗಳ ಭಾರವಿತ್ತು. ಆ ದುರ್ಬಲ ಕ್ಷಣದಲ್ಲಿ, ರಾಜ್ ಬಿಡುಗಡೆಗೆ ಒತ್ತೆ ಹಣ ಕೊಟ್ಟಿದ್ದು ನಿಜಾನಾ ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದರು. ಮತ್ತೆ? ಎನ್ನುವುದು ಶಿವರಾಜ್ ಮರುಪ್ರಶ್ನೆ. ಕೂಡಲೇ ಕೆಲವು ಪತ್ರಕರ್ತರ ರೋಮರೋಮಗಳೂ ನಿಮಿರಿದವು. ಎಷ್ಟು ಕೊಟ್ಟಿರಿ ಸಾರ್ ಎನ್ನುವುದು ಯುವ ಪತ್ರಕರ್ತನೊಬ್ಬನ ಪ್ರಶ್ನೆ. ನೋ. ಅದೆಲ್ಲ ಹೇಳೊಕಾಗೊಲ್ಲ ಎಂದರು ಶಿವಣ್ಣ.

ವೀರಪ್ಪನ್‌ಗೆ ಕಪ್ಪ ಸಲ್ಲಿಸಿದ್ದು ನಾಡಿಗೆಲ್ಲ ಗೊತ್ತಿರುವ ಸಂಗತಿ. ಆದರೆ, ಶಿವಣ್ಣ ಮಾತನಾಡಿದ ಮರುದಿನ ಪತ್ರಿಕೆಯೊಂದರ ಮುಖಪುಟದಲ್ಲಿ ಈ ಸುದ್ದಿ ರಾರಾಜಿಸುತ್ತಿತ್ತು, ಈ ಸುದ್ದಿಯನ್ನು ಈಗಷ್ಟೇ ಶೋಧಿಸಿ ತೆಗೆಯುತ್ತಿರುವ ಉತ್ಸಾಹ ಪತ್ರಿಕೆಯದು. ಪತ್ರಿಕೆಗೇ ಇಷ್ಟೊಂದು ಸಂಭ್ರಮವಾದರೆ ವಾಹಿನಿಗಳು ಸುಮ್ಮನಿದ್ದಾವಾ? ಒಬ್ಬರಿಗೊಬ್ಬರು ಜೊತೆಯಾದ ವಾಹಿನಿಗಳ ಸುದ್ದಿಕರ್ತರು ಸದಾಶಿವನಗರದ ದಾರಿ ಹಿಡಿದೇಬಿಟ್ಟರು.

ಏನ್ರಪ್ಪಾ ಬಂದ್ರಿ ಅಂದರು ಪಾರ್ವತಮ್ಮ. ಮೇಡಂ. ಶಿವಣ್ಣ ಹೀಗೆ ಹೇಳಿದ್ದಾರೆ. ವೀರಪ್ಪನ್‌ಗೆ ಕೊಟ್ಟಿದ್ದು ಎಷ್ಟು ದುಡ್ಡು? ದಯವಿಟ್ಟು ಖಚಿತಪಡಿಸಿ ಎಂದರು ಟೀವಿ ಪತ್ರಕರ್ತರು.

ಮೊದಲೇ ಕೆಂಡದಂಥ ಬಿಸಿಲು. ಜೊತೆಗೆ ಗೋರಿ ತೋಡುವ ಸುದ್ದಿಕರ್ತರ ಉತ್ಸಾಹ. ಪಾರ್ವತಮ್ಮ ರಾಂಗಾದರು. ಯಾರಪ್ಪ ಹೇಳಿದ್ದು ಇದನ್ನೆಲ್ಲ. ಉಳಿದದ್ದನ್ನೂ ಅವರಿಂದಲೇ ಕೇಳ್ಕೊ ಹೋಗಿ ಎಂದು ಮೆದುವಾಗಿಯೇ ಗದರಿಕೊಂಡರು.

ಬಂದ ದಾರಿಗೆ ಸುಂಕವಿಲ್ಲದಂತೆ ಎಲ್ಲರೂ ವಾಪಸ್ಸಾದರು. ಆಮೇಲೆ ಫೋನುಗಳು ಎಲ್ಲಿಂದೆಲ್ಲಿಗೆ ಹಾರಾಡಿದರು; ಯಾರು ಯಾರನ್ನು ಗದರಿಕೊಂಡರು ಎನ್ನುವುದೆಲ್ಲ ಓದುಗರ ಊಹೆಗೆ ಬಿಟ್ಟ ವಿಷಯ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada