»   »  ದುನಿಯಾ ವಿಜಿಗೆ ಪಿತ್ತ ನೆತ್ತಿಗೇರಿದೆಯೇ ?

ದುನಿಯಾ ವಿಜಿಗೆ ಪಿತ್ತ ನೆತ್ತಿಗೇರಿದೆಯೇ ?

Posted By:
Subscribe to Filmibeat Kannada

ಯಾವುದೇ ಗಾಡ್ ಫಾದರ್ ಗಳಿಲ್ಲದೆ ನಿರ್ದೇಶಕ ಸೂರಿ ಗರಡಿಯಿಂದ ಬೆಳಕಿಗೆ ಬಂದ ದುನಿಯಾ ವಿಜಿ ಅಲಿಯಾಸ್ ವಿಜಯ್ ಎಂಬ ನಟನ ಪಿತ್ತ ನೆತ್ತಿಗೇರಿದೆಯಾ ? ಪಾಪ ಅಬ್ಬೇಪಾರಿಯಂತಹ ಹುಡುಗ ತುಂಬ ಕಷ್ಟಪಟ್ಟು ಗಾಂಧಿನಗರದಲ್ಲಿ ಗುರುತಿಸಿಕೊಂಡಿದ್ದಾನೆ ಎಂದು ಆತನನ್ನು ಸಾಧ್ಯವಾದಷ್ಟು ಮೇಲಕ್ಕೆತ್ತಿದ ಪತ್ರಕರ್ತರದು ತಪ್ಪಾ ? ಹೊಳೆ ದಾಟಿದ ಮೇಲೆ ಅಂಬಿಗನ ನಂಟೇಕೆ ಎನ್ನುವ ಮನಸ್ಥಿತಿಯಾ ? ಏರಿದ ಏಣಿಯನ್ನು ಒದೆಯುವಷ್ಟು ದುರಹಂಕಾರವಾ ? ಶಿವಮೊಗ್ಗದಲ್ಲಿ ವಾಹಿನಿಯೊಂದರ ಕ್ಯಾಮರಾಮನ್ ಮೇಲೆ ದಾಳಿ ನಡೆಸಿದ ವಿಜಿ ಕನ್ನೆಗೆ ಬಾರಿಸಿರುವುದು ಶುದ್ಧ ತಪ್ಪು.

*ಮೃತ್ಯುಂಜಯ ಕಲ್ಮಠ

ವಿಜಯ್ ಮುಖ್ಯ ಪಾತ್ರದ ತಾಕತ್ ಚಿತ್ರ ಬಿಡುಗಡೆಯಾಗಿ ಸುಮಾರಾಗಿ ಓಡತೊಡಗಿದೆ. ಶಿವಮೊಗ್ಗಕ್ಕೆ ತೆರಳಿದ್ದ ವಿಜಿ ಅಲ್ಲಿನ ಚಿತ್ರಮಂದಿರದಲ್ಲಿ ಪ್ರೇಕ್ಷಕರೊಂದಿಗೆ ಚಿತ್ರ ವೀಕ್ಷಿಸಿ ನಂತರ ಜ್ಯೋತಿಷಿಯೊಬ್ಬರು ಮನೆಗೆ ವಿಜಿ ಹಾಗೂ ನಟಿ ಶುಭ ಪುಂಜಾ ತೆರಳಿದ್ದಾರೆ. ವಿಜಿ ಒಬ್ಬ ಜನಪ್ರಿಯ ನಟ ? ಆಗಿರುವ ಹಿನ್ನೆಲೆಯಲ್ಲಿ ಆತನನ್ನು ಪತ್ರಕರ್ತರು ಹಿಂಬಾಲಿಸುವುದು ಸಹಜ.

ಒಬ್ಬ ನಟನಿಗೆ ಸಹನೆ, ತಾಳ್ಮೆ ಇರಬೇಕಾಗಿರುವುದು ಅವಶ್ಯ. ತಾವು ಸಾರ್ವಜನಿಕ ವ್ಯಕ್ತಿ ಎನ್ನುವುದನ್ನು ಕಲಾವಿದರು ಅರಿತಿರಬೇಕು. ಮಾಧ್ಯಮದವರನ್ನು ಹೇಗೆ ನಿಭಾಯಿಸಬೇಕು ಎನ್ನುವುದು ಗೊತ್ತಿರದಿದ್ದರೂ ಇತರನ್ನು ನೋಡಿಯಾದರೂ ಕಲಿಯಬೇಕು. ವಾಹಿನಿಯೊಂದರ ಕ್ಯಾಮರಾಮನ್ ಹಿಂಬಾಲಿಸಿ ಚಿತ್ರೀಕರಣ ಮಾಡುತ್ತಿರುವುದನ್ನು ಕಂಡ ವಿಜಯ್ ಕೋಪಗೊಂಡ ಆತನ ಕೆನ್ನೆಗೆ ಬಾರಿಸಿದ್ದಾನೆ. ಸುದ್ದಿ ತಿಳಿದ ಶಿವಮೊಗ್ಗ ಪತ್ರಕರ್ತರು ಸ್ಥಳಕ್ಕೆ ಧಾವಿಸಿ ವಿಜಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಪತ್ರಿಕಾಗೋಷ್ಠಿ ನಡೆಸಿದ ವಿಜಯ್, ನನ್ನಿಂದ ತಪ್ಪಾಗಿದ್ದರೆ, ಪತ್ರಕರ್ತರು ಹಾಗೂ ಶಿವಮೊಗ್ಗ ಜಿಲ್ಲೆಯ ಜನರು ಮನ್ನಿಸಿ ಎಂದು ಕ್ಷಮೆ ಕೇಳಿಕೊಳ್ಳುವ ಮೂಲಕ ವಿವಾದವನ್ನು ಸುಖಾಂತ್ಯಗೊಳಿಸಿದ್ದಾರೆ.

ನಿಮಗೆ ನೆನಪಿರಬಹುದು, ಚಿತ್ರವೊಂದರ ಡಬ್ಬಿಂಗ್ ಗೆ ಸಂಬಂಧಿಸಿದಂತೆ ನಿರ್ದೇಶಕ, ನಿರ್ಮಾಪಕ ಎಸ್ ನಾರಾಯಣ್ ಅವರೊಂದಿಗೆ ಬಹಿರಂಗ ಯುದ್ಧ ಸಾರಿದ್ದ ವಿಜಿ ಮೇಲೆ ನಿಷೇಧ ತೂಗು ಕತ್ತಿ ನೇತಾಡುತ್ತಿತ್ತು. ಉದ್ಯಮದ ಕೆಲ ಮಂದಿ ವಿಜಿಯನ್ನು ಶತಾಯಗತಾಯ ತುಳಿಯಲೇಬೇಕು ಎಂದು ತೊಡೆತಟ್ಟಿನಿಂತಾಗ, ಆಗ ಆತನ ರಕ್ಷಣೆಗೆ ಧಾವಿಸಿದ್ದು ಇದೇ ಪತ್ರಕರ್ತರ ಸಮೂಹ. ಆದರೆ, ಅದನ್ನು ಇಷ್ಟೇ ಬೇಗ ಮರೆತಿರುವ ವಿಜಿ, ಪತ್ರಕರ್ತರ ಮೇಲೆ ದಾಳಿ ನಡೆಸುವಷ್ಟು ಮುಂದಕ್ಕೆ ಹೋಗಿರುವುದು ಒಳ್ಳೆಯ ಲಕ್ಷಣವಂತೂ ಅಲ್ಲ. ವಿನಾಶ ಕಾಲಕ್ಕೆ ವಿಪರೀತ ಬುದ್ಧಿ ಎಂಬಂತೆ ಈ ವಿಜಿ ಎಂಬ ನಟನ ತಲೆಯಲ್ಲಿ ಅದೇನು ತುಂಬಿದೆಯೋ ಗೊತ್ತಿಲ್ಲ.

ಇಂದಿಗೂ ಕೂಡಾ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ವಿಜಯ್ ಅಂದಾಕ್ಷಣ ಜನರಲ್ಲಿ ಒಂದು ಒಳ್ಳೆಯ ಭಾವನೆ ಇದೆ. ಈ ಇಬ್ಬರಿಗೂ ಒಂದೇ ಸಮಯದಲ್ಲಿ ರಾಜ್ಯಾದ್ಯಂತ ಮನೆಮಾತಾದವರು. ಇಬ್ಬರಿಗೂ ಗಾಢ್ ಫಾದರ್ ಗಳಿಲ್ಲ. ಇದೇ ಕಾರಣಕ್ಕೆ ಮಾಧ್ಯಮ ಮಿತ್ರರೂ ಕೂಡಾ ಈ ಇಬ್ಬರು ಕಲಾವಿದರಿಗೆ ವಿಶೇಷ ಅದ್ಯತೆಯನ್ನು ನೀಡಿದರು. ಗಣೇಶ್ ಈ ವಿಷಯದಲ್ಲಿ ಜಾಣತನ ಮೆರೆದಿದ್ದಾರೆ. ಅವರ ಮದುವೆಗೆ ಸಂಬಂಧಿಸಿದಂತೆ ಅನೇಕ ಪತ್ರಿಕೆಗಳು ತನ್ನ ಮೂಗಿನ ನೇರಕ್ಕೆ ಬರೆದರೂ ತುಟಿ ಬಿಚ್ಚದೆ ಶಾಣ್ಯಾತನ ತೋರಿಸಿದರು. ಆದರೆ, ಇದೇನಿದು ವಿಜಿ ಎಂಬ ನಟನ ವರ್ತನೆ ?

ಕನ್ನಡ ಚಿತ್ರರಸಿಕರ ಆರಾಧ್ಯ ದೈವ ಎನಿಸಿರುವ ರಾಜ್ ಕುಮಾರ್ ಅವರು ಎಂದಿಗೂ ಸಾರ್ವಜನಿಕವಾಗಿ ಅನುಚಿತವಾಗಿ ವರ್ತಿಸಲಿಲ್ಲ. ಅಷ್ಟೇ ಏಕೆ, ವಿಷ್ಣುವರ್ಧನ್, ಅಂಬರೀಷ್, ತಮಿಳ ಚಿತ್ರರಂಗದ ಅನಭಿಷಕ್ತ ದೊರೆ ಕನ್ನಡಿಗ ರಜನಿಕಾಂತ್, ಕಲೆಯನ್ನು ಅರೆದು ಕುಡಿದಿರುವ ಕಮಲಹಾಸನ್ ಅವರಂತ ಶ್ರೇಷ್ಠ ನಟರು ಎಂದಿಗೂ ಇಂತಹ ಕೆಟ್ಟ ಸುದ್ದಿಗೆ ಹೆಸರು ಮಾಡಲಿಲ್ಲ. ಪಿತ್ತನೆತ್ತಿಗೇರದಂತೆ ಕಾಳಜಿ ವಹಿಸಿದರು. ಇದರಿಂದ ಇಂದಿಗೂ ಅವರಿಗೆ ಉದ್ಯಮದಲ್ಲಿ ಅವರದೇ ಆದ ಘನತೆ, ಗೌರವವಿದೆ.

ವಿಜಿ ಎಂಬ ಉದಯೋನ್ಮುಖ ನಟರು ಇಂಥವರಿಂದ ತಿಳಿದುಕೊಳ್ಳಬೇಕಾಗಿರುವುದು ತುಂಬಾ ಇದೆ. ನಟಿಸಿದ್ದು ಬೆರಳಣಿಕೆಯಷ್ಟು ಸಿನಿಮಾ, ವರ್ತನೆ ಫಾಲ್ಕೆ ಪ್ರಶಸ್ತಿ ಪಡೆದ ಪೋಸ್. ವಿಜಿ ಎಂಬ ನಟನೆ ವರ್ತನೆ ಹೀಗೆ ಮುಂದುವರೆದಲ್ಲಿ ಮುಂದೊಂದು ದಿನ ಕಳೆದು ಹೋಗುವ ಸಾಧ್ಯತೆ ಇದೆ. ಆದಷ್ಟು ಬೇಗ ವಿಜಯ್ ವಾಸ್ತವ್ಯ ಅರಿತರೆ ಆತನ ಕರಿಯರ್ ಗೆ ಉತ್ತಮ ಭವಿಷ್ಯವಿದೆ. ಮಾಧ್ಯಮಕ್ಕೂ ಚಿತ್ರರಂಗಕ್ಕೂ ಬಿಡಿಸಲಾರದಂತಹ ನಂಟು. ಹಾಗಂತ ತಲೆ ಮೇಲೆ ಹೊತ್ತುಕೊಂಡು ಕುಣಿಯುವುದಕ್ಕೆ ವಿಜಯ್ ಏನು ಆಸ್ಕರ್ ಪುರಸ್ಕೃತ ನಟನೇ ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada