»   »  ಮಾದು,ಮಲ್ಲಿಯೆಂಬ ಸಬ್ಸಿಡಿ ಮೊಸರಿನ ಬೆಕ್ಕುಗಳು!

ಮಾದು,ಮಲ್ಲಿಯೆಂಬ ಸಬ್ಸಿಡಿ ಮೊಸರಿನ ಬೆಕ್ಕುಗಳು!

By: * ಜಯಂತಿ
Subscribe to Filmibeat Kannada

ಮೊಸರು ತಿಂದು ಇನ್ಯಾರದೋ ಬಾಯಿಗೆ ಒರೆಸುವ ಮಾದು, ಮಲ್ಲಿಯರು ನಿಮಗೆ ಗೊತ್ತಾ? ಇದೊಂದು ಸಿನಿಮಾ ಕಥೆಯ ತರಹವೇ ಇರುವ ಕಥೆ. ಕೆಲವರ ಪ್ರಕಾರ ಇದು ಸತ್ಯ. ಇನ್ನು ಕೆಲವರು ಏನು ಸಾಕ್ಷಿ ಅಂತ ಕೇಳುತ್ತಾರೆ. ಈ ಕಥೆ ನಮ್ಮ ವ್ಯವಸ್ಥೆಯ ಅಧ್ವಾನವನ್ನು ಹೇಳುವುದರಿಂದ ಕೇಳುವಂಥವರಾಗಿ...

ಅವರಿಬ್ಬರ ಹೆಸರು ಮಾದು, ಮಲ್ಲಿ. ವಾರ್ತಾ ಇಲಾಖೆಯಲ್ಲಿ ತಿಂದುಂಡು ರೂಢಿ. ಸಿನಿಮಾ ಪ್ರಶಸ್ತಿಗಳನ್ನು ನಿರ್ಧರಿಸುವ ಹಾಗೂ ಸಬ್ಸಿಡಿಗೆ ಚಿತ್ರಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಇಬ್ಬರ ಕೈಬಾಯಿ ವಿಪರೀತ ಬ್ಯುಸಿ. ಈ ಸಲ ಕೂಡ ಮಾದು, ಮಲ್ಲಿ ಅದೇ ಚುರುಕುತನದಿಂದ ಕೆಲಸ ಮಾಡಿದರು.

ಇಬ್ಬರ ಮೋಡಸ್ ಆಫ್ ಅಪರೆಂಡಿ ಸರಳ. ಕೆಲವು ಚಿತ್ರಗಳಿಗೆ ಸಬ್ಸಿಡಿ ಸಿಕ್ಕೇ ಸಿಗುತ್ತದೆ ಎಂಬುದು ಮೊದಲೇ ಗೊತ್ತಿರುತ್ತದೆ. ಯಾವ್ಯಾವ ಚಿತ್ರಗಳಲ್ಲಿ ಮೆಸೇಜುಗಳಿವೆ ಎಂಬುದನ್ನು ತಿಳಿಯಲು ಮಾದು, ಮಲ್ಲಿ ಥಿಯೇಟರ್‌ಗೇನೂ ಹೋಗುವುದಿಲ್ಲ. ಕೂತಲ್ಲೇ ಎಲ್ಲಾ ಮಾಹಿತಿ ಬಂದು ಬೀಳುತ್ತದೆ. ಗಾಂಧಿನಗರದಲ್ಲೂ ಇವರಿಗೆ ಗೆಳೆಯರುಂಟು. ಅವರೆಲ್ಲಾ ಸಂದರ್ಭಾನುಸಾರ ಮೀಡಿಯೇಟರುಗಳಾಗುತ್ತಾರೆ. ಖುದ್ದು ಇವರಿಬ್ಬರೂ ಪ್ರೀತಿಯಿಂದ ಚಿತ್ರ ನಿರ್ಮಾಪಕರಿಗೆ, ನಿರ್ದೇಶಕರಿಗೆ ಫೋನ್ ಮಾಡಿ ಉಭಯಕುಶಲೋಪರಿ ವಿಚಾರಿಸುವ ಅಭ್ಯಾಸವೂ ಇದೆ. ಹಾಗೆ ಮಾತಿನ ವರಸೆಯಲ್ಲೇ ವ್ಯವಹಾರ ಕುದುರಿಸುವುದು ಕರಗತ.

ಹಿಂಗೇ ಒಂದು ಎನ್ತ್ ಟೈಮಲ್ಲಿ ಮಾದು, ಕವಿತಾ ಲಂಕೇಶ್‌ಗೆ ಫೋನಾಯಿಸಿದ. ನಿಮ್ಮ 'ಅವ್ವ' ಪಿಚ್ಚರ್ ಸೂಪರ್ರಾಗಿದೆ ಚಿಗವ್ವ. ನಾನು ಅಪ್ಪೋರ ಅಭಿಮಾನಿ. ಅವರ ಮಗಳಾದ ನಿಮ್ಮ ಸಿನಿಮಾಕ್ಕೆ ಸಬ್ಸಿಡಿ ಸಿಗದಿದ್ರೆ ಹೆಂಗೆ? ನಾನು ಇದೀನಲ್ಲ. ಯೋಚನೆ ಮಾಡಬ್ಯಾಡಿ. ಸ್ವಲ್ಪ ಬಿಡುವು ಮಾಡಿಕೊಂಡು ಇತ್ತ ಬಂದುಹೋಗಿ ಅಂತ ನೇರವಾಗಿ ವಿಷಯಕ್ಕೇ ಇಳಿದ. ಕವಿತಾ ಮೇಡಂಗೆ ಇವೆಲ್ಲಾ ಹೊಸದೇನಲ್ಲ. ಹೇಳಿ ಕೇಳಿ ನಾನು ನಿರ್ದೇಶಕಿ. ನಿಮ್ಮನ್ನ ನಿರ್ಮಾಪಕರು ಭೇಟಿಯಾಗಬೇಕಲ್ವೆ? ನಾನು ಬಂದರೆ ಏನೂ ಪ್ರಯೋಜನವಿಲ್ಲ ಅಂದದ್ದೇ ಅವರು ಮೊಬೈಲ್ ಕಟ್ ಮಾಡಿದ್ದಾರೆ.

ಆಮೇಲೆ ಮಾದು, ಮಲ್ಲಿ ಇಬ್ಬರೂ ಮಾತುಕತೆ ನಡೆಸಿ, ನಿರ್ಮಾಪಕರೊಟ್ಟಿಗೇ ವ್ಯವಹಾರ ಕುದುರಿಸಿದ್ದರೂ ಅಚ್ಚರಿಯಿಲ್ಲ. 'ಅವ್ವ' ಚಿತ್ರದ ಹೆಸರು ಸಬ್ಸಿಡಿ ಪಟ್ಟಿಯಲ್ಲಿ ಇದೆ. ಆ ಚಿತ್ರಕ್ಕೊಂದು ರಾಜ್ಯ ಪ್ರಶಸ್ತಿಯೂ ಬಂದಿದೆ. ಅಂದಮೇಲೆ ಸಬ್ಸಿಡಿ ಸಿಗುವುದರಲ್ಲಿ ಅನುಮಾನವೇ ಇರುವುದಿಲ್ಲ. ಹಾಗಾಗಿ ಮಾದು, ಮಲ್ಲಿ ಸಮಿತಿಯನ್ನು ಇಂಥ ವಿಷಯದಲ್ಲಿ ಓಲೈಸುವ ಅಗತ್ಯವೇ ಇಲ್ಲ.

ಇದು ಇಬ್ಬರ ಕಾರ್ಯವೈಖರಿಯ ನಮೂನೆ. ಲಂಚದ ಹಣದಲ್ಲೇ ನಿರ್ಮಿಸಿದ ಲಂಚ ಸಾಮ್ರಾಜ್ಯ, ಬಿಡಿಎನಲ್ಲಿ ದುಡಿದುಡಿದು ದುಡ್ಡು ಮಾಡಿದ ಚೆನ್ನಗಂಗಪ್ಪನವರ ಚಿತ್ರ ಚಿಕ್ಕಮಗಳೂರ ಚಿಕ್ಕಮಲ್ಲಿಗೆ ಇವು ಸಮಿತಿಯ ಗಮನ ಸೆಳೆದ ಚಿತ್ರಗಳು. ದೇವರ ದರ್ಶನ ತೋರಿಸಿದ ಚಿತ್ರಗಳಲ್ಲೂ ಒಂದು ಮೆಸೇಜ್ ಇದೆ ನೋಡಿ, ಅದಕ್ಕೇ ಸಬ್ಸಿಡಿ ಕೊಡುವುದು ಮಸ್ಟು. ಭಕ್ತರನ್ನು ಸಂತೋಷ ಪಡಿಸುವುದು ಸರ್ಕಾರದ ಕರ್ತವ್ಯವಲ್ಲವೇ?

ಗಾಳಿಪಟದಲ್ಲಿ ಏನು ಮೆಸೇಜ್ ಇದೆ ಅಂತ ಪ್ರಶಸ್ತಿ ಕೊಡೋದು? ಹೀಗೆ ಸಮಿತಿ ಮಾತಾಡಿಕೊಂಡಿದ್ದು ಮಾದು, ಮಲ್ಲಿ ಕಿವಿಗೆ ಬಿದ್ದಿದೆ. ಈ ವಿಷಯವನ್ನು ಚೆನ್ನಾಗಿ ಕುದಿಸಿ, ಗಾಂಧಿನಗರದ ಆಯಕಟ್ಟಿನ ಜಾಗಕ್ಕೇ ಅವರು ತಂದು ಸುರಿದಿದ್ದಾರೆ. ಯಾಕೆಂದರೆ, ಇಂತಿ ನಿನ್ನ ಪ್ರೀತಿಯ ಚಿತ್ರಕ್ಕೆ ಸಬ್ಸಿಡಿ ಕೊಡಿಸಿಕೊಡಿ ಅಂತ ಇವರಿಬ್ಬರಿಗೂ ಹಣ ಸಂದಾಯವಾಗಿತ್ತಂತೆ. ದುನಿಯಾ ಸೂರಿ, ಯೋಗರಾಜ ಭಟ್ ಲಂಚ ಕೊಡುವ ಮಟ್ಟಕ್ಕೆ ಬಂದರಾ ಅಂತ ಸಮಿತಿಯ ಅಧ್ಯಕ್ಷ ಸಿದ್ದಲಿಂಗಯ್ಯ ಹುಬ್ಬೇರಿಸಿದ್ದೂ ಮಾದು, ಮಲ್ಲಿಗೆ ಗೊತ್ತಾಗಿದೆ. ಇನ್ನು ಆ ವ್ಯವಹಾರಕ್ಕೇ ವಿಪರೀತ ಜಗ್ಗಾಡುತ್ತಾ ಕೂತರೆ, ಬೇರೆ ಡೀಲುಗಳು ಕೈತಪ್ಪಿ ಹೋದಾವು ಅಂತ ಮಾದು, ಮಲ್ಲಿ ಯಥಾಪ್ರಕಾರ ತಮ್ಮ ಟೇಬಲ್ಲುಗಳ ಕೆಳಗೆ ಕೈಯೊಡ್ಡಿ ಕೂತಿದ್ದಾರೆ.

ಸಮಿತಿ ಮೆಂಬರುಗಳೆಲ್ಲಾ ಎಂಬತ್ತೈದು ಸಿನಿಮಾ ನೋಡಿ ಹೈರಾಣಾದ ಮೇಲೆ ಒಂದು ಮೀಟಿಂಗ್ ಮಾಡಿ ಪಟ್ಟಿ ಸಿದ್ಧಪಡಿಸಿದ್ದಾಯಿತು. ಮಾದು, ಮಲ್ಲಿಗೆ ಅದನ್ನು ನೋಡುವುದು ಕಷ್ಟವೇನೂ ಅಲ್ಲ ಬಿಡಿ. ಅದರ ಆಧಾರದ ಮೇಲೆ ಇನ್ನಷ್ಟು ಡೀಲುಗಳನ್ನು ಮಾಡಿಕೊಂಡು ಇಬ್ಬರೂ ಇನ್‌ವೆಸ್ಟ್‌ಮೆಂಟಿನ ದಾರಿಗಳನ್ನು ಹುಡುಕುತ್ತಿದ್ದಾರಂತೆ. ಪಾಪ, ಸಿದ್ದಲಿಂಗಯ್ಯ ಕೈಕೈ ಹಿಸುಕಿಕೊಳ್ಳುತ್ತಿದ್ದಾರಂತೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada