»   » ಅಡಿಕೆಗೆ ಹೋದ ಮಾನ ಆನೆ ಕೊಟ್ಟರೆ ಬಂದೀತೆ

ಅಡಿಕೆಗೆ ಹೋದ ಮಾನ ಆನೆ ಕೊಟ್ಟರೆ ಬಂದೀತೆ

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts
  Nagathihalli Chandrashekar, Aindrita Ray
  ನಮ್ಮಲ್ಲೊಂದು ಗಾದೆ ಮಾತಿದೆ. 'ಅಡಿಕೆಗೆ ಹೋದ ಮಾನ, ಆನೆ ಕೊಟ್ಟರೆ ಬಂದೀತೆ'? ಹೌದು, ಇಂತಹದ್ದೊಂದು ಪ್ರಶ್ನೆ ಉದ್ಭವವಾಗಿದ್ದು ಮೊನ್ನೆ ಮೊನ್ನೆಯಷ್ಟೆ ಸುದ್ದಿಗೆ ಗ್ರಾಸವಾಗಿದ್ದ ಅಂದ್ರಿತಾ ರೇ, ನಾಗತ್ತಿಹಳ್ಳಿ ಪ್ರಕರಣ. ಇದನ್ನು ಬರೆಯಬೇಕೋ ಬೇಡವೋ ಎಂಬ ಜಿಜ್ಞಾಸೆಗೆ ನಡುವೆ ಇದನ್ನು ಚರ್ಚೆಗೆ ತಂದಿದ್ದೇನೆ. ಇದು ಯಾಕೆ ಚರ್ಚೆಗೆ ಬರಬೇಕು? ಹಾನಿ ಯಾರಿಗೆ? ಸಮಾಜದ ಮೇಲೆ ಇದು ಎಂತಹ ಪರಿಣಾಮ ಬಿರುತ್ತದೆ? ಅಷ್ಟಕ್ಕೂ ಇಂತಹ ಪ್ರಕರಣಗಳು ಯಾಕಾದರೂ ಜರುಗುತ್ತವೆ ಎಂಬುದು ಮೂಲ ಪ್ರಶ್ನೆ.

  * ಅರಕಲಗೂಡು ಜಯಕುಮಾರ್, ಹಾಸನ

  ಹೇಳಿ ಕೇಳಿ ನಾಗತಿಹಳ್ಳಿ ಚಂದ್ರಶೇಖರ್ ಸೂಕ್ಷ್ಮ ಗ್ರಹಿಕೆಯ ಸಂವೇದನಾಶೀಲ ಮನಸ್ಥಿತಿಯ ಪ್ರಬುದ್ದ ಸಾಹಿತಿ ಮತ್ತು ನಿರ್ದೇಶಕರು. ಭಾವನಾತ್ಮಕವಾದ ಸಂಬಂಧಗಳನ್ನು ಅತ್ಯುತ್ತಮವಾಗಿ ಸೆಲ್ಯೂಲಾಯ್ಡ್ ಮಾಧ್ಯಮದಲ್ಲಿ ಬಿಂಬಿಸಬಲ್ಲ ಛಾತಿಯ ಮನುಷ್ಯ. ಇವರು ನಿರ್ದೇಶಿಸಿದ ಸಾಧಾರಣ ಕಥೆಯ 'ಉಂಡೂ ಹೋದ ಕೊಂಡು ಹೋದ' ಸಿನಿಮಾದ ಯಶಸ್ಸು ಅಮೇರಿಕಾ ಅಮೇರಿಕಾ, ನನ್ನ ಪ್ರೀತಿಯ ಹುಡುಗಿ, ಅಮೃತಧಾರೆ, ಮಾತಾಡ್ ಮಾತಾಡ್ ಮಲ್ಲಿಗೆ, ಬಾ ನಲ್ಲೆ ಮಧುಚಂದ್ರಕೆ, ಹೂಮಳೆ ಇತ್ತೀಚೆಗಿನ ಒಲವೇಜೀವನ ಲೆಕ್ಕಾಚಾರದಂತಹ ಸೂಪರ್ ಚಿತ್ರಗಳನ್ನು ತೆರೆಗೆ ನೀಡಿದ್ದಾರೆ. ಕಾಡಿನ ಬೆಂಕಿ ಚಿತ್ರದ ಮೂಲಕ ಸಿನಿಬದುಕು ಆರಂಭಿಸಿದರು. ಸಂಗೀತವೇ ಪ್ರಧಾನವಾಗಿದ್ದ ಹೊಸ ಮುಖಗಳನ್ನ ಹೊಂದಿದ 'ಪ್ಯಾರಿಸ್ ಪ್ರಣಯ" ವಿದೇಶದಲ್ಲಿ ಚಿತ್ರೀಕರಣ ಗೊಂಡ ಚಿತ್ರವಾಗಿದ್ದು ವಿಭಿನ್ನ ಅನುಭವ ನೀಡಿತ್ತು.

  100ಕ್ಕೂ ಹೆಚ್ಚು ಹಾಡುಗಳನ್ನು ರಚಿಸಿರುವ ನಾಗತ್ತಿಹಳ್ಳಿ ಉತ್ತಮ ಗೀತ ರಚನೆಕಾರರೂ ಹೌದು. ಇದುವರೆಗೂ 15ಕನ್ನಡ ಸಿನಿಮಾಗಳನ್ನ ನಿರ್ದೇಶಿಸಿರುವ ನಾಗತ್ತಿಹಳ್ಳಿ 10ಕಿರುತೆರೆ ಧಾರಾವಾಹಿಗಳನ್ನು ನಿರ್ದೇಶಿಸಿ ಹೆಸರು ಮಾಡಿದ್ದಾರೆ. ಅಂತರರಾಷ್ಟ್ರೀಯ ಕ್ಯಾನೆ ಸಿನಿಮಾ ಫೆಸ್ಟಿವಲ್ ನಲ್ಲಿಯೂ ಪ್ರಂಶಸೆಗೆ ಪಾತ್ರರಾಗಿದ್ದಾರೆ. ಮೈಸೂರು ವಿವಿ ಯಲ್ಲಿ ಕನ್ನಡ ಸಾಹಿತ್ಯದಲ್ಲಿ ಎಂಎ ಮುಗಿಸಿದ ನಾಗತ್ತಿಹಳ್ಳಿ 8 ಚಿನ್ನದ ಪದಕ ಮತ್ತು 2ನಗದು ಬಹುಮಾನ ಪಡೆದ ಪ್ರತಿಭಾವಂತ. ಬೆಂಗಳೂರು ವಿವಿ ಯಲ್ಲಿ ಪ್ರಾಧ್ಯಾಪಕ ವೃತ್ತಿಯಲ್ಲಿದ್ದ ನಾಗತ್ತಿಹಳ್ಳಿ, ಸಾಪ್ಟ್ ವೇರ್ ಇಂಜಿನಿಯರ್ ಶೋಭಾರನ್ನು ಅಂತರ್ ಜಾತೀಯ ವಿವಾಹವಾಗಿದ್ದಾರೆ. ಸಿಹಿ ಮತ್ತು ಕನಸು ಎಂಬ ಇಬ್ಬರು ಮಕ್ಕಳು ಇವರಿಗುಂಟು. ಸಧ್ಯ ಅವರು ಅಮೇರಿಕಾದಲ್ಲಿ ನೆಲೆಸಿದ್ದಾರೆ! ಸಿನಿಮಾನೇ ವೃತ್ತಿ ಮತ್ತು ಪ್ರೀತಿ ಬದುಕಾಗಿಸಿಕೊಂಡ ನಾಗತ್ತಿಹಳ್ಳಿ ಮಾತ್ರ ಇಲ್ಲಿಯೇ ಇದ್ದಾರೆ.

  ಇನ್ನು ಅಂದ್ರಿತಾ ರೇ ವಿಷಯಕ್ಕೆ ಬರೋಣ. ಈಕ ಮೂಲತಹ ಬಂಗಾಳಿ, ಹುಟ್ಟಿದ್ದು ರಾಜಸ್ಥಾನದಲ್ಲಿ, ಬೆಳೆದಿದ್ದು ಬೆಂಗಳೂರಿನಲ್ಲಿ, ಕಳೆ ದ 18ವರ್ಷಗಳಿಂದ ಅವರ ಕುಟುಂಬ ಬೆಂಗಳೂರಿನಲ್ಲಿಯೇ ನೆಲೆಸಿದೆ. ತಂದೆ ಎ ಕೆ ರೇ ಭಾರತೀಯ ವಾಯುಪಡೆಯಲ್ಲಿ ಡೆಂಟಿಸ್ಟ್ ಆಗಿ ನಿವೃತ್ತರಾಗಿದ್ದಾರೆ. ಆದರೂ ಬೆಂಗಳೂರಿನ ರಿಚ್ ಮಂಡ್ ರಸ್ತೆಯಲ್ಲಿ ಇವತ್ತಿಗೂ ಸ್ವಂತ ಕ್ಲಿನಿಕ್ ನಲ್ಲಿ ಪ್ರಾಕ್ಟೀಸ್ ನಡೆಸುತ್ತಾರೆ. ತಾಯಿ ಸುನೀತಾ ರೇ ಮಕ್ಕಳ ಸೈಕಾಲಜಿಸ್ಟ್ ಆಗಿದ್ದಾರೆ. ಐಂದ್ರಿತಾ ಬಾಲ್ಯ ಮತ್ತು ಪ್ರಾಥಮಿಕ ವಿಧ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಾಲ್ಡ್ ವಿನ್ ಪ್ರೌಢಶಾಲೆಯಲ್ಲಿ. ಈಗ ತಂದೆಯಂತೆಯೇ ಡೆಂಟಿಸ್ಟ್ ಆಗುವ ಕನಸು ಕಾಣುತ್ತಿರುವ ಅಂದ್ರಿತ ಅಂಬೇಡ್ಕರ್ ಡೆಂಟಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದಾರೆ. ಈ ನಡುವೆ ಮುಂಬೈಗೆ ತೆರಳಿ ಸಣ್ಣಪುಟ್ಟ ಜಾಹಿರಾತು ಮತ್ತು ಮಾಡೆಲಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದ ಅಂದ್ರಿತಾ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಪಡೆದದ್ದು ಮಹೇಶಬಾಬು ನಿರ್ದೆಶನದ ಮೆರವಣಿಗೆ ಚಿತ್ರದ ಮೂಲಕ. ಇಲ್ಲಿಯವರೆಗೆ ಆಕೆ ಕನ್ನಡದಲ್ಲಿ ಅಭಿನಯಿಸಿದ್ದು 7ಚಿತ್ರಗಳು, ತೆಲುಗಿನಲ್ಲಿ ಒಂದು ಮತ್ತು ಹಿಂದಿಯಲ್ಲಿ ಒಂದು. ಇಂತಹ ಅಂದ್ರಿತಾ ನಾಗತ್ತಿಹಳ್ಳಿ ನಿರ್ದೇಶನದ "ನೂರು ಜನ್ಮಕೂ " ಚಿತ್ರದಲ್ಲಿ ಅಭಿನಯಿಸಲು ಹಾಕಾಂಗ್ ಗೆ ತೆರಳಿದ್ದರು.

  ಡಿಸೆಂಬರ್ 10 ರಂದು ತಂಡ ಭಾರತಕ್ಕೆ ವಾಪಾಸ್ ಆದಾಗ ಆದ ರಂಪರಾಮಾಯಣ ನಿಮಗೆಲ್ಲರಿಗೂ ತಿಳಿದದ್ದೇ. ಇಡೀ ಪ್ರಕರಣದಲ್ಲಿ ಮೇಲ್ನೋಟಕ್ಕೆ ನಿರ್ದೇಶಕ ನಾಗತ್ತಿಹಳ್ಳಿ ಚಂದ್ರಶೇಖರ್ ತಪ್ಪಿತಸ್ಥರಂತೆ ಕಾಣಿಸುತ್ತಿದ್ದರಾದರೂ, ಅವರ ಪರ ವಕಾಲತ್ತು ವಹಿಸಿದವರೇ ಹೆಚ್ಚು. ಮೇಷ್ಟ್ರು ನಮ್ಮವರು ಎಂಬ ಕಾರಣಕ್ಕೋ ಏನೋ. ಇಡೀ ಘಟನೆಗೆ ಸಂಬಂಧಿಸಿದಂತೆ ಐಂದ್ರಿತಾ ರೇ ಮಾಹಿತಿ ನೀಡಿ ಮೇಷ್ಟ್ರು ವುಮನೈಸರ್ ಎಂದು ಸ್ಪಷ್ಟ ಮಾತುಗಳಲ್ಲಿ ಆರೋಪಿಸಿದರು. ಆದರೆ ನಾಗತ್ತಿಹಳ್ಳಿ ಮತ್ತು ಮಾಧ್ಯಮಗಳು ಕಪಾಳ ಮೋಕ್ಷ ಪ್ರಕರಣವನ್ನೇ ಮುಖ್ಯ ವಾಹಿನಿಗೆ ತಂದರಲ್ಲದೇ ಅಸಲಿ ಆರೋಪವನ್ನು ಮರೆಮಾಚಿದರು. ಇಲ್ಲಿ ನಾಗತ್ತಿಹಳ್ಳಿ ತಪ್ಪಿತಸ್ಥರು ಎಂದು ಹೇಳುತ್ತಿಲ್ಲವಾದರೂ ಆರೋಪದ ವಾಸ್ತವ ನೆಲೆಗಟ್ಟಿನ್ಲಲಿ ಸಮರ್ಪಕ ಚರ್ಚೆಯಾಗಿದ್ದರೆ, ಸಿನಿಮಾ ಮಂದಿಗೆ ಸರಿಯಾದ ಸಂದೇಶ ರವಾನೆಯಾಗುತ್ತಿತ್ತು, ಆದರೆ ಆದದ್ದೇ ಬೇರೆ.

  ಅಷ್ಟಕ್ಕೂ ಸದರಿ ವಿಚಾರದ ಚರ್ಚೆ ಏಕೆಂದರೆ ನಾಗತ್ತಿಹಳ್ಳಿ ಮತ್ತು ಐಂದ್ರಿತಾ ಇಬ್ಬರೂ ಸಾರ್ವಜನಿಕ ವ್ಯಕ್ತಿಗಳು. ಅವರ ನಡವಳಿಕೆಗಳು ಮತ್ತು ನಿಲುವುಗಳು ಸಾರ್ವಜನಿಕವಾಗಿ ಸಭ್ಯವಾಗಿರಬೇಕಾಗುತ್ತದೆ.

  ಅದರಲ್ಲೂ ಸಿನಿಮಾ ಮಾಧ್ಯಮ ಇತರ ಮಾಧ್ಯಮಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಜನರನ್ನು ತಲುಪುತ್ತದೆ. ಅವರ ಕ್ರಿಯೆಗಳನ್ನು ಜನ ಗಮನಿಸುತ್ತಾರೆ ಮತ್ತು ಅವಿವೇಕಿಗಳೂ ಅದನ್ನು ಅನುಕರಿಸುತ್ತಾರೆ. ಈಪೈಕಿ ಎರಡನೇ ಕೆಟಗರಿಯ ಜನರೇ ಹೆಚ್ಚು! ಹಾಗಾಗಿ ವಾಸ್ತವಾಂಶಗಳು ಚರ್ಚಾರ್ಹ ಹಾಗೂ ತಪು ಒಪ್ಪುಗಳು ತಿಳಿಯುತ್ತವೆ. ಸಿನಿಮಾ ಮಂದಿಯೆಂದರೆ ಮೊದಲೇ ಜನರಿಗೆ ಅಸಡ್ಡೆ 'ಶೀಲ' ಕಳೆದುಕೊಂಡವರು, ಮಜಾ ಮಾಡುವವರು ಎಂಬಿತ್ಯಾದಿ ಕಲ್ಪನೆಗಳು ಇವೆ. ಇವುಗಳಲ್ಲಿ ಕೆಲವು ನಿಜವಾದರೂ ಕೆಲವಕ್ಕೆ ರೆಕ್ಕೆ ಪುಕ್ಕ ಎರಡೂ ಇರುವುದಿಲ್ಲ. ಅಷ್ಟಕ್ಕೂ ಸಿನಿಮಾ ಲೋಕದಲ್ಲಿ ಇಂತಹ ಘಟನೆಗಳು ಇದೇ ಮೊದಲೇನಲ್ಲ.

  ಹಿಂದೆ ಪುಟ್ಟಣ್ಣ ಕಣಗಾಲ್ ರಂತ ಹ ನಿರ್ದೇಶಕರು ಅಂದು ಕೊಂಡ ನಟನೆ ಬಾರದಿದ್ದಾಗ ಕಪಾಳ ಮೋಕ್ಷ ಮಾಡಿದ ಉದಾಹರಣೆಯಿದೆ. ರವಿಚಂದ್ರನ್ ಹಳ್ಳಿಮೇಷ್ಟ್ರು ಚಿತ್ರಕ್ಕೆ ಕರೆತಂದ ನಾಯಕಿ ರವಿಚಂದ್ರನ್ ಮೇಲೆ ರೇಪ್ ಕೇಸು ದಾಖಲಿಸಿದ ಘಟನೆಯಿದೆ.ಮೊನ್ನೆ ಮೊನ್ನೆಯಷ್ಟೇ ಮೈಸೂರು ಲೋಕೇಶ್ ಮಗ ಆದಿಲೋಕೇಶನ ಅವಾಂತರ ಬಯಲಿಗೆ ಬಂದಿದೆ. ಶೃತಿಯ ಸಹೋದರ ಶರಣ್ ಪ್ರೀತಿಸಿ ವಂಚಿಸಿ ಮದುವೆಯಾದ ನಿದರ್ಶನವಿದೆ, ಸಾಯಿ ಪ್ರಕಾಶ್ ಸೆಟ್ ನಲ್ಲಿ ನಟಿಯರೊಂದಿಗೆ ಅಸಹ್ಯವಾಗಿ ನಡೆದುಕೊಂಡ ಪ್ರಕರಣ, ನಟಿ ಮಹಾಲಕ್ಷ್ಮಿಯೊಂದಿಗೆ ನಟ ಜೈಜಗದೀಶ್ ಅಸಭ್ಯವಾಗಿ ವರ್ತಿಸಿ ತಪರಾಕಿ ಪಡೆದ ಘಟನೆ, ಪ್ರಭಾಕರ್ ಬಗೆಗೆ ಅಸಹ್ಯದ ಕಥೆಗಳಿವೆ ಹೀಗೆ ಹಲವು.

  ಇವು ವಾಸ್ತವ ಜಗತ್ತಿನಲ್ಲಿ ಸಿನಿಮಾ ಮಂದಿಯ ಬಗ್ಗೆ ಅಸಹ್ಯವನ್ನು ಹುಟ್ಟುಹಾಕುತ್ತವೆ. ಸಿನಿಮಾ ಜಗತ್ತಿನ ಕೆಲವು ಮಂದಿ ನಿರ್ಧೇಶಕರು, ನಿರ್ಮಾಪಕರು, ಸಹ ನಿರ್ಧೇಶಕರು , ನಟರು ತೆರೆಯ ಹಿಂದೆ ಎಷ್ಟೋ ಮಂದಿ ಹೆಣ್ಣು ಮಕ್ಕಳ ಬದುಕು ಹಾಳುಮಾಡಿದ ನಿದರ್ಶನಗಳಿವೆ. ಇಂದಿಗೂ ಅದು ಜಾರಿಯಲ್ಲಿದೆ ತೆರೆಯಮರೆಯಲ್ಲಿ! ಆದರೆ ವೃತ್ತಿ ಬದುಕು ಕಂಡು ಕೊಳ್ಳುವ ಮಂದಿ ಇದನ್ನೆಲ್ಲಾ ಸಹಿಸಿಕೊಂಡು ಸಿಕ್ಕ ಅವಕಾಶಗಳನ್ನು ಪಡೆದುಕೊಂಡು ಇಂದಿಗೂ ಅತಂತ್ರ ಬದುಕು ಸವೆಸುತ್ತಿದ್ದಾರೆ.

  ಸಿನಿಮಾ ನಾಟಕ ನಮ್ಮ ಸಂಸ್ಕೃತಿಯ ಭಾಗ. ಅವು ಸದಭಿರುಚಿಯ ವಿಚಾರಗಳನ್ನು ನಮ್ಮ ನಡುವೆ ಉಳಿಸಬೇಕು, ತರಬೇಕು ಆದರೆ ಇದಕ್ಕೆಲ್ಲಾ ವ್ಯತಿರಿಕ್ತವಾದ ಕ್ರಿಯೆಗಳು ಜಾರಿಯಲ್ಲಿವೆ. ಸಹ್ಯವೆನಿಸುವಂತಹ ವಾತಾವರಣ ಕಣ್ಮರೆಯಾಗಿದೆ. ಇದು ಆರೋಗ್ಯವಂತ ಸಮಾಜ ದ ಲಕ್ಷಣಗಳಲ್ಲ. ಹೇಳೋದು ವೇದಾಂತ ಮಾಡೋದು ಅನಾಚಾರ, ಸಮಾಜಕ್ಕೊಂದು ಮುಖ ಅಂತರಂಗಕ್ಕೆ ಮತ್ತೊಂದು ಮುಖ ಎಂಬಂತಿದೆ ಸದ್ಯದ ಸ್ಥಿತಿ. ಇಂತಹವೆಲ್ಲಾ ಸಮಾಜದ ಸ್ವಾಸ್ಥ್ಯ ಕೆಡಿಸದೇ ಇರಬಲ್ಲವೇ? ಒಳ್ಳೆಯ ಸಂಗತಿಗಳನ್ನೂ ಕಾಮಾಲೆ ಕಣ್ಣಿನಿಂದ ನೋಡುವಂತೆ ಇಂತಹ ಸಂಗತಿಗಳು ಮಾಡಬಲ್ಲವಲ್ಲವೇ?

  ಕೃಪೆ : ಅಭಿವ್ಯಕ್ತಿ http://reporterjay.blogspot.com/

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more