For Quick Alerts
ALLOW NOTIFICATIONS  
For Daily Alerts

ತಾಕತ್ತಿದ್ರೆ ರಾಜ್‌ಕುಮಾರ್ ವಿರುದ್ಧ ಬರೀರೋ ಬಾಸ್ಟರ್ಡ್ಸ್!

By Rajendra
|

ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಅವರ "ಆಫ್ ದಿ ರೆಕಾರ್ಡ್" ಚೌಕಟ್ಟಿಲ್ಲದ ಚಿತ್ರಪಟಗಳು ಪುಸ್ತಕ ರೂಪದಲ್ಲಿ ಹೊರಬಂದಿದೆ. ಈ ಪುಸ್ತಕ ಕನ್ನಡ ಚಿತ್ರರಂಗದ ಗುಟ್ಟುಗಳನ್ನೆಲ್ಲಾ ರಟ್ಟು ಮಾಡುತ್ತಾ ಹೋಗುತ್ತದೆ. ಪುಸ್ತಕ ಕೈಗೆತ್ತಿಕೊಂಡರೆ ಮೊದಲ ಪುಟದಿಂದ ಕೊನೆಯ ತನಕ ಓದಿ ಮುಗಿಸುವ ತನಕ ನಿಮಗೆ ನಿದ್ದೆ ಬಂದ್ರೆ ಕೇಳಿ.

ಅಷ್ಟೊಂದು ಚಾಕಚಕ್ಯತೆಯಿಂದ, ಓದುಗನನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಮಾಂತ್ರಿಕ ಶಕ್ತಿ ಈ ಪುಸ್ತಕಕ್ಕಿದೆ. ಗಣೇಶ್ ಕಾಸರಗೋಡು ಅವರ ಒಂದೊಂದು ಲೇಖನವೂ ನಿಮ್ಮನ್ನು ಸಂಪೂರ್ಣ ಆವರಿಸಿಕೊಳ್ಳುತ್ತವೆ. ಸ್ಯಾಂಪಲ್‌ಗೆಂದು ಈ ಕೃತಿಯ "ತಾಕತ್ತಿದ್ರೆ ರಾಜ್ಕುಮಾರ್ ವಿರುದ್ಧ ಬರೀರೋ ಬಾಸ್ಟರ್ಡ್ಸ್" ಲೇಖನವನ್ನು ಇಲ್ಲಿ ಆಯ್ದುಕೊಂಡು ಪ್ರಕಟಿಸುತ್ತಿದ್ದೇವೆ. ಇನ್ನು ನೀವುಂಟು ಈ ಪುಸ್ತಕವುಂಟು-ಸಂಪಾದಕ

ನಿರ್ಜನ ರಸ್ತೆ. ಮಿಣುಕು ದೀಪ. ಆ ಕಡೆ ಶೇಷಾದ್ರಿಪುರದಿಂದ ಬಂದರೆ ಆನಂದರಾವ್ ಸರ್ಕಲ್‌ನ ಎಡಮೂಲೆಗಿದೆ ಗಣೇಶನ ದೇವಸ್ಥಾನ. ಈ ಘಟನೆ ನಡೆದದ್ದು ಇದೇ ದೇವಸ್ಥಾನದ ಮುಂದೆ. ಗಣೇಶನ ಸಾಕ್ಷಿಯಲ್ಲಿ. ಸುಮಾರು ಇಪ್ಪತ್ತೆಂಟು ವರ್ಷಗಳ ಹಿಂದೆ ಈ ಜಾಗ ಹೇಗಿರಬೇಕಿತ್ತೋ ಹಾಗಿತ್ತು.

ಅಂದು ಮಂಗಳವಾರ ರಾತ್ರಿ 11ರ ಸಮಯ. ಹೆಸರಿಗೊಂದು ಉದ್ಯೋಗವಿತ್ತು: 'ಚಿತ್ರದೀಪ' ಸಿನಿಮಾ ಪತ್ರಿಕೆಯಲ್ಲಿ ಸಬ್ ಎಡಿಟರ್. ಯಾವುದೋ ಪ್ರೆಸ್‌ಮೀಟ್ ಮುಗಿಸಿ ಹಿಂದಿರುಗುತ್ತಿದ್ದ ಸಮಯ. ಬಸ್ಸು ಹಿಡಿಯುವ ಧಾವಂತದಲ್ಲಿ ಎದುರಾ ಬದುರಾ ಸಿಕ್ಕವರೇ ರವೀ ಉರುಫ್ ಕೆ ಎಸ್ ಎಲ್ ಸ್ವಾಮಿ ಉರುಫ್ ರಾಧಾರವಿ. ದೊಡ್ಡ ನಿರ್ದೇಶಕರು.

ನಾನು ಮತ್ತು ಸುಬ್ಬು (ಬಾ.ನಾ. ಸುಬ್ರಹ್ಮಣ್ಯ) ರವೀಯವರನ್ನು ಕಾಣುತ್ತಲೇ ನಿಂತೆವು. ಅವರು ಎಂದಿನಂತಿರಲಿಲ್ಲ. ಏನೋ ಹೇಳಬೇಕೆಂದುಕೊಂಡರು. ಮಾತು ತಡವರಿಸುತ್ತಿತ್ತು. ಏಕಾಏಕಿ ವ್ಯಗ್ರರಾದರು. ನಮ್ಮನ್ನು ಕೆಕ್ಕರಗಣ್ಣಿನಿಂದ ನೋಡುತ್ತಾ ಅಬ್ಬರಿಸತೊಡಗಿದರು: "ಯೂ ಬಾಸ್ಟರ್ಡ್ಸ್. ನೀವು ಪತ್ರಕರ್ತರು ಬೀದಿಗೆ ಹುಟ್ಟಿದವರು. ನಿಮ್ಗೆ ಮಾನ ಮರ್ಯಾದೆ ಇದೆಯಾ? ಈಗ ತಾನೇ ಕಣ್ಣು ಬಿಡುತ್ತಿರುವವರ ವಿರುದ್ಧ ಬರೀತೀರಿ. ತಾಕತ್ತಿದ್ದರೆ ರಾಜ್‌ಕುಮಾರ್ ಬಗ್ಗೆ ಬರೀರೋ ಬಾಸ್ಟರ್ಡ್ಸ್..." ಬೈಗುಳ ಸುರಿಮಳೆ.

ನಾವು ದಿಗ್ಭ್ರಾಂತರಾದೆವು. ಏನು ಮಾಡಬೇಕೆಂದೂ ತೋಚದೇ ಸ್ತಂಭೀಭೂತರಾಗಿ ನಿಂತೇ ಇದ್ದೆವು. ಆ ಹಿರಿಯ ನಿರ್ದೇಶಕ ವಾಚಾಮಗೋಚರ ಬೈಯುವುದನ್ನು ಮುಂದುವರಿಸುತ್ತಲೇ ಇದ್ದಾರೆ. ಇಷ್ಟಕ್ಕೂ ನಾವು ಮಾಡಿದ ತಪ್ಪಾದರೂ ಏನು? ರವೀ ನಿರ್ದೇಶಿಸುತ್ತಿರುವ 'ಜಿಮ್ಮಿಗಲ್ಲು' ಎಂಬ ಚಿತ್ರದ ಪುಟ್ಟ ಸುದ್ದಿಯೊಂದನ್ನು ಹಿಂದಿನ ವಾರವಷ್ಟೇ 'ಚಿತ್ರದೀಪ'ದಲ್ಲಿ ಪ್ರಕಟಿಸಿದ್ದೆವು.

ವೇಣುಗೋಪಾಲ ಕಾಸರಗೋಡು ಅವರ ಕಾದಂಬರಿ ಆಧಾರಿತ ಚಿತ್ರ 'ಜಿಮ್ಮಿಗಲ್ಲು' ಎಂದು ಅವರು ಜಾಹೀರಾತು ನೀಡಿದ್ದರು. ಆದರೆ ನಮಗೆ ತಿಳಿದಿರುವಂತೆ ವೇಣುಗೋಪಾಲ ಅವರು ಕಾದಂಬರಿ ಬರೆದಿರಲಿಲ್ಲ. ಚಿತ್ರಕ್ಕಾಗಿ ಕಥೆ ಬರೆದಿದ್ದರು. ಅದನ್ನು ಮುಂದೊಮ್ಮೆ ಕಾದಂಬರಿಯನ್ನಾಗಿ ಪ್ರಕಟಿಸಲು ಸಿದ್ಧತೆ ನಡೆಸಿದ್ದರು.

ಇದನ್ನು ಸ್ವತಃ ವೇಣುಗೋಪಾಲ್ ಅವರೇ ನಮ್ಮ ಬಳಿ ಹೇಳಿದ್ದರು. ಹೀಗಾಗಿ ಕನ್‍ಫ್ಯೂಸ್ ಮಾಡಿಕೊಳ್ಳುವ ಪ್ರಮೇಯವೇ ಇರಲಿಲ್ಲ. ಆ ನಿರ್ದೇಶಕರ ಕೋಪಕ್ಕೆ ಇದು ಕಾರಣವಾಗಬೇಕೆ? ಪತ್ರಿಕಾರಂಗಕ್ಕೆ ಹೊಸಬರಾಗಿದ್ದ ನಾನು ಥರಗುಟ್ಟಿ ಬಿಟ್ಟೆವು. ಬೆವರು ಕಿತ್ತು ಬಂತು. ಎದುರಾಡುವ ಧೈರ್ಯವಿಲ್ಲದ ಬಚ್ಚಾಗಳು ನಾವು. ಏನು ಮಾಡಬೇಕೆಂದು ತೋಚದೆ ಎಡಬಿಡಂಗಿಗಳಂತೆ ಅವರ ಬೈಗುಳವನ್ನ್ನು ಕೇಳುತ್ತಾ ನಿಂತು ಬಿಟ್ಟೆವು.

ತೃಪ್ತಿಯಾಗುವವರೆಗೆ ಬೈಯ್ದು ಸುಸ್ತಾದ ರವೀ ಬುಸುಗುಟ್ಟುತ್ತಾ ಹೊರಟು ಹೋದ ಮೇಲೆ ನಾವು ನೇರವಾಗಿ ಹೊರಟಿದ್ದು ಸಂಪಾದಕಾದ ಆರ್ ನರಸಿಂಹ ಅವರ ಮನೆಗೆ. ನಡುರಾತ್ರಿ ಸಮಯ. ನರಸಿಂಹ ಅವರ ಮನೆ ಕಲಾಸಿಪಾಳ್ಯ ಬಳಿಕ ಜರ್ನಲಿಸ್ಟ್ ಕಾಲೋನಿಯಲ್ಲಿತ್ತು. ಬಾಗಿಲು ಬಡಿದಾಗ ನರಸಿಂಹ ಅವರೇ ಬಂದು ತೆರೆದರು.

ನಮ್ಮ ಗಾಬರಿಯನ್ನು ಕಂಡು ಬೆಚ್ಚಿಬಿದ್ದ ಅವರು, ಮನೆಯೊಳಗೆ ಕರೆಸಿಕೊಂಡು ವಿಚಾರಿಸಿದರು. ನಾವು ನಡೆದದ್ದೆಲ್ಲವನ್ನೂ ವರದಿ ಒಪ್ಪಿಸಿದೆವು. ಎಲ್ಲವನ್ನೂ ಕೇಳಿಸಿಕೊಂಡ ನರಸಿಂಹ ಹೇಳಿದ್ದು ಒಂದೇ ಮಾತು: "ಈಗ ನೀವು ನನ್ನ ಬಳಿ ಏನೇನೆಲ್ಲವನ್ನೂ ಹೇಳಿದ್ದೀರೋ ಅವೆಲ್ಲವನ್ನೂ ಚಾಚೂ ತಪ್ಪದೆ ಬರೆದುಕೊಡಿ. ಗಾಬರಿ ಬೀಳುವ ಅವಶ್ಯಕತೆಯಿಲ್ಲ. ನಾನಿದ್ದೇನೆ. ಹೆದರಬೇಡಿ. ಈಗ ನೆಮ್ಮದಿಯಾಗಿ ಮನೆಗೆ ಹೋಗಿ ನಿದ್ದೆ ಮಾಡಿ..."

ನಾವು ಹಾಗೆಯೇ ಮಾಡಿದೆವು. ಮಾರನೇ ಬೆಳಿಗ್ಗೆ ವರದಿಯನ್ನು ಬರೆದು ಕೊಟ್ಟೆವು. ಮುಂದಿನ 'ಚಿತ್ರದೀಪ' ಸಂಚಿಕೆಯಲ್ಲಿ ಅದು ಪ್ರಕಟವಾಯಿತು. ಸಂಚಿಕೆ ಮಾರುಕಟ್ಟೆಗೆ ಹೋಗುತ್ತಿರುವಂತೆಯೇ ನಿರ್ದೇಶಕ ರವೀ ಮತ್ತೆ ಅಬ್ಬರಿಸಿದರು. ಅಷ್ಟರಲ್ಲೇ ರಾಜ್ ಕುಮಾರ್ ಮನೆಯವರ ಕಡೆಯಿಂದ ಆವಾಜ್ ಹಾಕಿದ್ದರಿಂದ ರವೀ ಸ್ವಲ್ಪ ಮೆತ್ತಗಾಗಿದ್ದರು.

ವಿವಾದ ಕಾವೇರತೊಡಗಿತು. ರವೀಯವರ ದಾಷ್ಟ್ಯದ ಮಾತುಗಳಿಂದ ಕೆರಳಿ ಕೆಂಡವಾದ ಇತರ ಸಿನಿಮಾ ಪತ್ರಕರ್ತರು ಇದನ್ನು ದೊಡ್ಡ ಇಶ್ಯೂ ಮಾಡಿದರು. ರವೀಯವರನ್ನು ಬ್ಯಾನ್ ಮಾಡುವ ಬಗ್ಗೆ ನಿರ್ಧರಿಸಲಾಯಿತು. ಜಿಮ್ಮಿಗಲ್ಲು ಚಿತ್ರದ ಸುದ್ದಿ, ಚಿತ್ರಗಳನ್ನು ಪ್ರಕಟಿಸದಿರುವಂತೆ ನಿರ್ಣಯ ತೆಗೆದುಕೊಳ್ಳಲಾಯಿತು.

ಈ ಹಂತದಲ್ಲಿ ರವೀಯವರ ಆವೇಶ ಜರ್ರನೆ ಇಳಿಯಿತು. ಬೇರೆ ದಾರಿ ಕಾಣದೇ ಆಗಿನ ಚಲನಚಿತ್ರ ಪತ್ರಕರ್ತರ ಪರಿಷತ್ ನ ಅಧ್ಯಕ್ಷರಾಗಿದ್ದ ಕೆ ಎಸ್ ನಾರಾಯಣಸ್ವಾಮಿ (ಕನ್ನಡ ಪ್ರಭ) ಯವರ ಮೊರೆ ಹೋದರು ರವೀ. ಜತೆಗೆ ಹಿರಿಯ ಪತ್ರಕರ್ತರಾದ ರಾಮಕೃಷ್ಣಯ್ಯನವರು ಎದ್ದು ನಿಂತರು. ಸಂಧಾನದ ಮಾತುಕತೆಯಾಯಿತು. ನನ್ನ ನೆನಪು ಸರಿಯಾಗಿದ್ದರೆ ಈ ಮಾತುಕತೆ ನಡೆದದ್ದು ಅದೇ ಆನಂದರಾವ್ ಸರ್ಕಲ್ ಬಳಿಯಿರುವ ಸಂಗೀತಾ ಹೋಟೆಲಿನ ರೂಮೊಂದರಲ್ಲಿ.

ನಾವು ಪಟ್ಟು ಬಿಡಲಿಲ್ಲ: "ಸಂಧಾನಕ್ಕೆ ಸೈ. ಆದರೆ ಕ್ಷಮೆ ಕೇಳಬೇಕು." ಸ್ವಾಭಿಮಾನಿ ರವೀ ಸುತಾರಾಂ ಒಪ್ಪಲಿಲ್ಲ. "ಒಪ್ಪದಿದ್ದರೆ ನಾವು ಹೊರಟೆವು" ಎಂದು ಹೇಳುತ್ತಾ ಅಲ್ಲಿಂದ ಕಳಚುವ ಹಂತದಲ್ಲಿ ರವೀ ಹೇಳಿದರು: "ಹೋಗ್ಲಿ ಬಿಡಿ, ಮೊನ್ನೆ ರಾತ್ರಿ ನಾನು ಏನು ಹೇಳಿದ್ದೇನೋ ಅವೆಲ್ಲವನ್ನೂ ವಾಪಾಸ್ಸು ಪಡೆದುಕೊಳ್ಳುತ್ತಿದ್ದೇನೆ. ಆ ಘಟನೆಯಿಂದ ನಿಮ್ಮ ಮನಸ್ಸಿಗೆ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ ಬಿಡಿ..."

ಅಲ್ಲಿಗೆ ಜಿಮ್ಮಿಗಲ್ಲು ವಿವಾದ ಪ್ರಕರಣ ಮುಕ್ತಾಯವಾಯಿತು. ವಿಷ್ಣುವರ್ಧನ್ ಅಭಿನಯದ ಜಿಮ್ಮಿಗಲ್ಲು ಚಿತ್ರ ತೆರೆಕಂಡಿತು. ಸಾಧಾರಣ ಯಶಸ್ಸು ಪಡೆದ ಈ ಚಿತ್ರದ ನಿರ್ಮಾಪಕರು ಆರ್ ಲಕ್ಷ್ಮಣ್. ಬಂಗಾರದ ಮನುಷ್ಯ ಚಿತ್ರದ ಪಾರ್ಟನರ್ ಆಗಿದ್ದ ಇವರು ನಿರ್ದೇಶಕ ನಾಗಣ್ಣ ಅವರ ತಂದೆ.

ನಾಯಕ ನಟರಾಗಿ ನಟಿಸಿದ ವಿಷ್ಣುವರ್ಧನ್ ಇಲ್ಲ, ನಿರ್ಮಾಪಕ ಆರ್ ಲಕ್ಷ್ಮಣ್ ಇಲ್ಲ. ಕಥೆ ಬರೆದ ವೇಣುಗೋಪಾಲ್ ಕಾಸರಗೋಡು ಅವರು ಬದುಕಿ ಉಳಿದಿಲ್ಲ. ಡಾ.ರಾಜ್ ಕುಮಾರ್ ಅವರೂ ಕಾಲವಾಗಿದ್ದಾರೆ. ಇಡಿಯ ವಿವಾದಕ್ಕೆ ಕಾರಣೀಭೂತರಾದ ರವೀ ಈಗ ನಿರ್ದೇಶಕರಾಗಿ ಉಳಿದಿಲ್ಲ. ಕಿರುತೆರೆಯ ಜನಪ್ರಿಯ ನಟರಾಗಿರುವ ಅವರು ತಮ್ಮ ಪೊಗರು ನಡೆನುಡಿಯನ್ನು ಕಿಂಚಿತ್ತೂ ಕಮ್ಮಿ ಮಾಡಿಕೊಳ್ಳದೇ ಕಾಪಾಡಿಕೊಂಡು ಬಂದಿದ್ದಾರೆ. ನಾವು 'ಹಿರಿಯ ಪತ್ರಕರ್ತ'ರಾಗಿದ್ದೇವೆ! (ಕೃಪೆ: 'ಆಫ್ ದಿ ರೆಕಾರ್ಡ್')

English summary
Kannada film journalist Ganesh Kasaragodu's book Off The Record released recently. The book throws light on Kannada film industries other side. Here is one article about Kannada renowned director KSL Swamy and his controversial statement on Kannada matinee idol Dr. Rajkumar.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more