twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರನಟಿ ಮಂಜುಳಾ ಕೊಲೆ ಪ್ರಕರಣ; ಪತಿಯೇ ಹಂತಕ

    By Rajendra
    |

    Actress Manjula murder case solved
    ಕನ್ನಡ ಚಲನಚಿತ್ರ ಹಾಗೂ ಕಿರುತೆರೆ ನಟಿ ಮಂಜುಳಾ(31) ಹತ್ಯೆ ಪ್ರಕರಣವನ್ನು ಭೇದಿಸಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೋಲೀಸರು ಐದು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಲ್ಲಿ ಮಂಜುಳಾ ಪತಿ ಯೋಗೀಶ್ ಸಹ ಒಬ್ಬರು.

    ಮಂಜುಳಾ ಅವರು 'ಪ್ರಾಣ', 'ಓಂಕಾರ', 'ಅಪ್ಪು' ಚಿತ್ರಗಳು ಸೇರಿದಂತೆ ದೂರದರ್ಶನ ಧಾರಾವಾಹಿ 'ಗುಪ್ತಗಾಮಿನಿ'ಯಲ್ಲಿ ಅಭಿನಯಿಸಿದ್ದರು. ಆರು ತಿಂಗಳ ಹಿಂದೆ ಮಂಜುಳಾ ಕೊಲೆಯಾಗಿದ್ದರು. ಪತ್ನಿ ಶೀಲ ಶಂಕಿಸಿ ಮಂಜುಳಾ ಅವರ 2ನೇ ಪತಿ ಯೋಗೀಶ್ ಹತ್ಯೆ ಮಾಡಿಸಿ ಶವವನ್ನು ತಾವರೆಕೆರೆ ಬಳಿ ಹೂತಿಟ್ಟಿದ್ದ.

    ಘಟನೆಯ ವಿವರಗಳು: ಹತ್ಯೆಗೀಡಾದ ಮಂಜುಳಾ ಅವರು ಬೆಂಗಳೂರಿನ ನಂದಿನಿಲೇಔಟ್ ನಿವಾಸಿ. ಮಂಜುಳಾ ಅವರಿಗೆ ಮದುವೆಯಾಗಿ ಇಬ್ಬರು ಹೆಣ್ಣು ಮಕ್ಕಳಿದ್ದರು. ಪತಿ ಹಾಗೂ ಮಕ್ಕಳನ್ನು ಬಿಟ್ಟು ಬಿಬಿಎಂಪಿ ಗುತ್ತಿಗೆದಾರನಾಗಿದ್ದ ಯೋಗೀಶ್‌ನನ್ನು ಪ್ರೀತಿಸಿ ಮದುವೆಯಾಗಿದ್ದರು.

    ಮೊದಲ ಪತಿಗೆ ವಿವಾಹ ವಿಚ್ಛೇದನ ನೀಡಿ ಯೋಗೀಶ್‌ರನ್ನು ಎರಡನೆ ಮದುವೆ ಮಾಡಿಕೊಂಡಿದ್ದ ಮಂಜುಳಾ ನಂದಿನಿ ಲೇಔಟ್‌ನಲ್ಲಿ ನೆಲೆಸಿದ್ದರು. ಆರ್ಥಿಕವಾಗಿ ಸದೃಢವಾಗಿದ್ದ ಯೋಗೀಶ್ ದುಶ್ಚಟಗಳ ದಾಸನಾಗಿದ್ದ. ಪತ್ನಿಯ ನಡವಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದ. ಆಕೆಯನ್ನು ಎಲ್ಲೂ ಹೊರಗೆ ಕಳುಹಿಸದೆ ಹಲ್ಲೆ ನಡೆಸುತ್ತಿದ್ದ ಎಂದು ಪೊಲೀಸರು ವಿವರ ನೀಡಿದ್ದಾರೆ.

    ಮಂಜುಳಾ ಶೀಲದ ಬಗ್ಗೆ ಶಂಕಿಸುತ್ತಿದ್ದ ಯೋಗೀಶ್ ಈ ವಿಚಾರವಾಗಿ ಪತ್ನಿಯೊಂದಿಗೆ ಆಗಾಗ ಜಗಳವಾಡುತ್ತಿದ್ದ. ಇದರಿಂದ ತೀವ್ರ ಬೇಸತ್ತಿದ್ದ ಆತ ಆಕೆಯನ್ನು ಹೇಗಾದರೂ ಮುಗಿಸಲು ಸಂಚು ರೂಪಿಸಿದ. ಮಂಜುಳಾರನ್ನು ಮುಗಿಸಲು ವಿಕ್ರಮ್ ಮತ್ತು ಆತನ ಸಹಚರರಿಗೆ ಆರು ಲಕ್ಷ ರುಪಾಯಿ ಸುಪಾರಿ ಕೊಟ್ಟಿದ್ದ ಎಂದು ಪೊಲೀಸರು ಹೇಳಿದ್ದಾರೆ.

    ಸುಪಾರಿ ಹಂತಕರಾದ ವಿಕ್ರಮ್ ಮತ್ತು ಆತನ ಸಹಚರರು ಮನೆಗೆ ನುಗ್ಗಿ ಮಂಜುಳಾರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಬಳಿಕ ಶವವನ್ನು ಕಾರಿನಲ್ಲಿ ತೆಗೆದುಕೊಂಡು ತಾವರೆಕೆರೆ ಸಮೀಪದ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಹೂತಿಟ್ಟಿದ್ದರು. ಜುಲೈ10, 2010ರಂದು ಈ ಕೊಲೆ ನಡೆದಿತ್ತು. ಅದಾದ ಎರಡು ದಿನಗಳ ಬಳಿಕ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಯೋಗೀಶ್ ಪತ್ನಿ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದ.

    ಯೋಗೀಶ್ ಬಗ್ಗೆ ಸಂದೇಹ ವ್ಯಕ್ತಪಡಿಸಿ ಮಂಜುಳಾ ಸಹೋದರಿ ಮಮತಾ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಯಲ್ಲಿ ಪೊಲೀಸರು ಯೋಗೀಶನನ್ನು ವಶಕ್ಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬಯಲಾಗಿದ್ದಾಗಿ ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

    ಮಂಜುಳಾ ಅವರ ಪತಿ ಯೋಗೀಶ್ (33), ವಿಕ್ರಮ್ ಉರುಫ್ ಲೋಕಿ (29), ಎ ಅನಿಲ್ (22), ಬಾಬು (26), ಎಚ್ ಅರುಣ್ (22), ಪ್ರಕಾಶ್ (25) ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ ರು.58 ಲಕ್ಷ ನಗದು, 60 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಅರುಣ್, ಬಾಬು ವಿರುದ್ಧ ನೆಲಮಂಗಲ ಪೊಲೀಸ್ ಠಾಣೆಯಲಿ ಅಪಹರಣ ಪ್ರಕರಣ ಹಾಗೂ ಅನಿಲ್ ವಿರುದ್ಧ ಬಸವೇಶ್ವರನಗರ ಠಾಣೆಯಲ್ಲಿ ಡಕಾಯಿತಿ ಪ್ರಕರಣ ದಾಖಲಾಗಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    English summary
    Bangalore Central Crime Branch (CCB) police have solved the murder mystery of a Kannada films and TV serial actress Manjula (31). She was killed in July 10, 2010. Police said that Manjula husband Yogeesh (33) had given a supari of Rs 6 lakh to five men to eliminate her.
    Thursday, December 16, 2010, 12:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X