»   »  ದಿಗಂತ್, ಪ್ರಿಯಾ ವಿರಸಕ್ಕೆ ಕಾರಣವಾದ ಇ ಪ್ರೀತಿ

ದಿಗಂತ್, ಪ್ರಿಯಾ ವಿರಸಕ್ಕೆ ಕಾರಣವಾದ ಇ ಪ್ರೀತಿ

Subscribe to Filmibeat Kannada

'ಇ ಪ್ರೀತಿ' ಚಿತ್ರದ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ನಟ ದಿಗಂತ್ ಚಿತ್ರೀಕರಣಕ್ಕೆ ಬರುತ್ತಿಲ್ಲ ಎಂದು 'ಇ ಪ್ರೀತಿ' ಚಿತ್ರದ ನಿರ್ದೇಶಕಿ ಪ್ರಿಯಾ ಭಾರತಿ ಈ ಹಿಂದೆ ಆರೋಪಿಸಿದ್ದರು. ಈಗ ಹೊಸ ವರಸೆಯಲ್ಲಿ ನಟ ದಿಗಂತ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

''ಚಿತ್ರದ ನಾಯಕಿಯರಾದ ತೇಜಸ್ವಿನಿ ಮತ್ತು ನೀನಾರೊಂದಿಗೆ ಒಂದೇ ಹಾಸಿಗೆಯಲ್ಲಿ ದಿಗಂತ್ ಮಲಗಿದ್ದ. ಅಷ್ಟೇ ಅಲ್ಲ ಯುಎಸ್ ನ ನಮ್ಮ ಮನೆಯ ಹಲವಾರು ಸ್ಥಳಗಳಲ್ಲಿ ಆಲ್ಕೋಹಾಲ್ ಬಾಟಲ್ ಗಳನ್ನು ಬಚ್ಚಿಟ್ಟಿದ್ದ'' ಎಂದು ಪ್ರಿಯಾ ಭಾರತಿ ಆರೋಪಿಸಿದ್ದಾರೆ.

ಪ್ರಿಯಾ ಭಾರತಿ ಅವರ ಆರೋಪಕ್ಕೆ ದಿಗಂತ್ ಮೌನ ಮುರಿದಿದ್ದು, 'ಇ ಪ್ರೀತಿ' ಚಿತ್ರದ ಹಣವನ್ನು ಪ್ರಿಯಾ ಭಾರತಿ ಬೇಕಾಬಿಟ್ಟಿ ಬಳಸಿಕೊಂಡಿದ್ದಾರೆ. ಚಿತ್ರದ ನಿರ್ಮಾಪಕರು ಸಹ ಈಗ ಲೆಕ್ಕಾ ಕೇಳುತ್ತಿದ್ದಾರೆ. ನಿರ್ಮಾಪಕರನ್ನು ದೂರಲು ಸಾಧ್ಯವಿಲ್ಲ.ಪ್ರಿಯಾ ಭಾರತಿಗೆ ಉಳಿದಿರುವ ಒಂದೇ ಒಂದು ದಾರಿ ಎಂದರೆ ನನ್ನನ್ನು ಬಕರಾ ಮಾಡುವುದು ಎಂದು ದಿಗಂತ್ ವಿವರ ನೀಡಿದ್ದಾರೆ.

''ಪ್ರಿಯಾ ಹೇಳುವುದೆಲ್ಲಾ ರೀಲು. ಅವರನ್ನು ಯಾರೂ ಬೆಂಬಲಿಸುತ್ತಿಲ್ಲ. ಹಾಗಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ನಾವೆಲ್ಲಾ ಒಂದೇ ಹಾಸಿಗೆಯಲ್ಲಿ ಇದ್ದೆವು ಎಂಬ ಮಾತು ಅಪ್ಪಟ ಸುಳ್ಳು. ಇನ್ನು ಮನೆಯಲ್ಲಿ ಬಚ್ಚಿಟ್ಟಿರುವ ಆಲ್ಕೋಹಾಲ್ ಬಾಟಲ್ ಗಳಂತೂ ಅವರದೇ ಆಗಿರುವ ಸಾಧ್ಯತೆ ಇದೆ ಎನ್ನುತ್ತಾರೆ ದಿಗಂತ್.

ಅವರ ಕ್ರೆಡಿಟ್ ಕಾರ್ಡನ್ನ್ನು ಬಳಸಿಕೊಂಡಿದ್ದೀರಿ ಎಂಬ ಆರೋಪವನ್ನೂ ಪ್ರಿಯಾ ಭಾರತಿ ಮಾಡಿದ್ದಾರಲ್ಲಾ? ಎಂದರೆ, ಯಾರಾದರೂ ಕ್ರೆಡಿಟ್ ಕಾರ್ಡ್ ಕೊಡ್ತಾರಾ ನೀವೇ ಹೇಳಿ? ಎಂದು ಮರುಪ್ರಶ್ನಿಸುತ್ತಾರೆ ದಿಗಂತ್. ಅವರಿಗೆ 30 ವರ್ಷ ವಯಸ್ಸಾಗಿದೆ. ಇನ್ನೂ ಬುದ್ಧಿ ಬೆಳೆದಿಲ್ಲ. ನಿರ್ದೇಶಕನಿಗೆ ಇರಬೇಕಾದ ಕೌಶಲ್ಯಗಳು ಅವರಲಿಲ್ಲ ಎಂದರು.

ಚಿತ್ರೀಕರಣದ ದಿನದಿಂದಲೂ ಇ ಪ್ರೀತಿ ಚಿತ್ರ ಒಂದಿಲ್ಲೊಂದು ವಿವಾದಗಳಿಂದ ಸುದ್ದಿ ಮಾಡುತ್ತಲೇ ಇದೆ. ಹೀಗಾಗಲು ನಿರ್ದೇಶಕರೇ ಕಾರಣ. ಈಗಾಗಲೇ ಮೂರು ಸಲ ಛಾಯಾಗ್ರಾಹಕರನ್ನು ಎರಡು ಬಾರಿ ಪ್ರೊಡಕ್ಷನ್ ಮೆನೇಜರ್ ಗಳನ್ನು ಬದಲಾಯಿಸಲಾಗಿದೆ. ಪ್ರಿಯಾ ಅವರಿಗೆ ಚಿತ್ರ ನಿರ್ಮಾಣದ ಎಬಿಸಿಡಿ ಗೊತ್ತಿಲ್ಲ.ನಿರ್ಮಾಪಕರ ಮೇಲಿನ ಅಭಿಮಾನದಿಂದಾಗಿ ನಾನು ಚಿತ್ರವನ್ನು ಮುಗಿಸಿಕೊಡುತ್ತೇನೆ ಎಂದು ದಿಗಂತ್ ಹೇಳಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada