»   » ವರದಕ್ಷಿಣೆ ಕಿರುಕುಳ: ಕನ್ನಡ ನಟ ಆನಂದ್ ಬಂಧನ

ವರದಕ್ಷಿಣೆ ಕಿರುಕುಳ: ಕನ್ನಡ ನಟ ಆನಂದ್ ಬಂಧನ

Posted By:
Subscribe to Filmibeat Kannada

ಕನ್ನಡದ ಉದಯೋನ್ಮುಖ ನಟ ಆನಂದ್ ನನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ. ವರದಕ್ಷಿಣೆ ಕಿರುಕುಳ ಹಾಗೂ ಪತ್ನಿ ಮೇಲಿನ ದೌರ್ಜನ್ಯ ಎಸಗಿರುವ ದೂರಿನ ಹಿನ್ನೆಲೆಯಲ್ಲಿ ಆನಂದ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯೂ2 ವಾಹಿನಿಯ ನಿರೂಪಕನಾಗಿ ಆನಂದ್ ಕಿರುತೆರೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು.

ಮದುವೆ ಸಂದರ್ಭದಲ್ಲಿ ಆನತ ಪತ್ನಿ ಭರಣಿ ಅವರಿಗೆ ಆಕೆಯ ಪೋಷಕರು ಕೊಟ್ಟಿದ್ದ ಒಡವೆಗಳನ್ನು ಆನಂದ್ ಮಾರಿಕೊಂಡಿದ್ದ. ಅಷ್ಟೆ ಅಲ್ಲದೆ ಆಕೆಯನ್ನು ಹಣಕ್ಕಾಗಿ ಪೀಡಿಸುತ್ತಿದ್ದ. ತಮಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಎಂದು ಆನಂದ್ ನ ಪತ್ನಿ ಭರಣಿ ತ್ಯಾಗರಾಜನಗರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ತ್ಯಾಗರಾಜನಗರ ಪೊಲೀಸರು ಶುಕ್ರವಾರ (ಮೇ.14) ರಾತ್ರಿ ನಟ ಆನಂದ್ ನನ್ನು ಬಂಧಿಸಿದ್ದಾರೆ. ಆನಂದ್ ಅವರಿಗೆ ಕನ್ನಡದ ನಟಿ ರಮ್ಯಾ ಬಾರ್ನಾ ಜೊತೆ ಅನೈತಿಕ ಸಂಬಂಧವಿದೆ ಎಂದು ಭರಣಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಆನಂದ್ ಜೊತೆ 'ನನ್ನೆದೆಯ ಹಾಡು' ಚಿತ್ರದಲ್ಲಿ ರಮ್ಯಾ ಬಾರ್ನಾ ಅಭಿನಯಿಸಿದ್ದರು.

ಆನಂದ್ ಸೇರಿದಂತೆ ಅವರ ತಂದೆ ಭದ್ರಯ್ಯ ಹಾಗೂ ರಮ್ಯಾ ಬಾರ್ನಾ ಅವರ ಮೇಲೂ ಭರಣಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲಿ, "ನನ್ನದೆಯ ಹಾಡು ಚಿತ್ರ ಹಣಕಾಸು ಮುಗ್ಗಟ್ಟಿನಲ್ಲಿ ಸಿಕ್ಕಿಕೊಂ ಡಿದೆ. ಒಡವೆಗಳನ್ನು ಮಾರಿ ಚಿತ್ರವನ್ನು ಬಿಡಿಸಿಕೊಳ್ಳೋಣ ಎಂದು ಆನಂದ್ ಹೇಳಿದ್ದ. ಅವರ ವೃತ್ತಿಜೀವನಕ್ಕೆ ತೊಂದರೆಯಾಗಬಾರದು ಎಂದು ಯೋಚಿಸಿಎಲ್ಲಾ ಒಡವೆಗಳನ್ನು ಮಾರಿದ್ದೆ" ಎಂದು ಭರಣಿ ಅವರು ತಿಳಿಸಿದ್ದಾರೆ.

" ರು.50 ಲಕ್ಷಕ್ಕೆ ನನ್ನ ಎಲ್ಲಾ ಒಡವೆಗಳನ್ನು ಮಾರಿದ್ದರೂ ಆನಂದ್ ಹಣಕ್ಕಾಗಿ ಪದೇ ಪದೇ ಪೀಡಿಸುತ್ತಿದ್ದ. ನನ್ನ ಪೋಷಕರ ಬಳಿ ಹಣ ತರುವಂತೆ ಒತ್ತಾಯಿಸುತ್ತಿದ್ದ. ದೈಹಿಕವಾಗಿ ನನ್ನನ್ನು ಹೊಡೆಯುತ್ತಿದ್ದ. ಒಂದು ದಿನ ಆನಂದ್ ಗೆ ನಟಿ ರಮ್ಯಾ ಬಾರ್ನಾ ಜೊತೆ ಅನೈತಿಕ ಸಂಬಂಧ ಇದೆ ಎಂಬುದು ಗೊತ್ತಾಯಿತು." ಎಂದಿದ್ದಾರೆ ಭರಣಿ.

ಆನಂದ್ ಇದುವರೆಗೂ 'ಮನಸುಗಳ ಮಾತು ಮಧುರ' ಹಾಗೂ 'ನನ್ನೆದೆಯ ಹಾಡು' ಎಂಬ ಎರಡು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಬೆಳ್ಳಿತೆರೆಗೆ ಅಡಿಯಿಡುವ ಮುನ್ನ ಕಿರುತೆರೆಯಲ್ಲಿ ನಿರೂಪಕನಾಗಿ ತಮ್ಮ ವೃತ್ತಿಯನ್ನು ಆರಂಭಿಸಿದ್ದರು. ಯು2 ವಾಹಿನಿಯ ನಿರೂಪಕನಾಗಿ ಆನಂದ್ ಮನೆಮಾತಾಗಿದ್ದರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada