»   » ಇಂದ್ರಜಿತ್ ವಿರುದ್ಧ ಫಿಲಂ ಚೇಂಬರ್ ಗೆ ಖೇಣಿ ದೂರು

ಇಂದ್ರಜಿತ್ ವಿರುದ್ಧ ಫಿಲಂ ಚೇಂಬರ್ ಗೆ ಖೇಣಿ ದೂರು

Posted By:
Subscribe to Filmibeat Kannada

ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತು ನೈಸ್ ನ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ನಡುವಿನ ಸಮಸ್ಯೆ ಮತ್ತೆ ಬಿಗಡಾಯಿಸಿದೆ. ಅಶೋಕ್ ಖೇಣಿ ಅವರ ಮೂರು ಚಿತ್ರಗಳನ್ನು ಮುಗಿಸುವವರೆಗೂ ಇಂದ್ರಜಿತ್ ಯಾವುದೇ ಚಿತ್ರವನ್ನು ನಿರ್ದೇಶಿಸುವಂತಿಲ್ಲ ಎಂದು ಕಳೆದ ವರ್ಷ ತೀರ್ಮಾನವಾಗಿತ್ತು. ಆದರೆ ಇಂದ್ರಜಿತ್ ಲಂಕೇಶ್ ಈ ಒಪ್ಪಂದವನ್ನು ಮುರಿದು ಈಗ 'ತುಂಟ ತುಂಟಿ' ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಖೇಣಿ ಮತ್ತೊಮ್ಮೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲನ್ನು ಹತ್ತಿದ್ದಾರೆ.

ಖೇಣಿ ಕೊಟ್ಟಿದ್ದ ದೂರಿನ ಪತ್ರವನ್ನು ಮರು ಟಪಾಲಿನಲ್ಲಿ ಇಂದ್ರಜಿತ್ ಅವರಿಗೆ ಫಿಲಂ ಚೇಂಬರ್ ರವಾನಿಸಿದೆ. ''ಇಬ್ಬರೂ ಚೇಂಬರ್ ನ ಸದಸ್ಯರು. ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಳ್ಳುವುದು ಸರಿಯಲ್ಲ. ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ. ಹತ್ತು ತಿಂಗಳ ಹಿಂದೆ ಇಂದ್ರಜಿತ್ ವಿರುದ್ಧ ಖೇಣಿ ದೂರು ಸಲ್ಲಿಸಿದಾಗ ಇಬ್ಬರನ್ನೂ ಕರೆಸಿ ಸಮಸ್ಯೆ ಬಗ್ಗೆ ಚರ್ಚಿಸಿದ್ದೆವು'' ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ ತಿಳಿಸಿದ್ದಾರೆ.

ಏತನ್ಮಧ್ಯೆ 'ತುಂಟ ತುಂಟಿ' ಚಿತ್ರೀಕರಣ ಏಪ್ರಿಲ್ 12ರಿಂದ ಗೋವಾದಲ್ಲಿ ಆರಂಭವಾಗಿದೆ ಎಂಬುದು ಸಮಾಚಾರ. ಖೇಣಿ ಹಾಗೂ ಇಂದ್ರಜಿತ್ ನಡುವಿನ ತಗಾದೆ ಕಾರಣ ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರದಲ್ಲಿ ನಟಿಸಲು ಆಸಕ್ತಿ ತೋರಲಿಲ್ಲ ಎನ್ನಲಾಗಿದೆ. ಗಣೇಶ್ ಸ್ಥಾನಕ್ಕೆ ಸಮೀರ್ ದತ್ತಾನಿ ಅಲಿಯಾಸ್ ಧ್ಯಾನ್ ಬಂದಿದ್ದಾರೆ. ಚಿತ್ರದ ನಾಯಕಿ ಸದಾ. ಈ ಹಿಂದೆ ಇಂದ್ರಜಿತ್ ಲಂಕೇಶರ ಮೊನಾಲಿಸಾ ಚಿತ್ರದಲ್ಲಿ ಈಕೆ ನಟಿಸಿದ್ದರು.

ಎರಡು ವರ್ಷಗಳ ಹಿಂದೆ ನಡೆದದ್ದೇನು?
ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ 'ನೈಸ್" ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ಅವರಿಗೆ ಇಂದ್ರಜಿತ್ ಹದಿನೈದು ಕೋಟಿ ರುಪಾಯಿ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದು ಹೊಸ ಆರೋಪವೇನಾಗಿರಲಿಲ್ಲ. ಇಂದ್ರಜಿತ್ ಹಾಗೂ ಖೇಣಿ ನಡುವಣ ನಂಟು ಹಾಗೂ ಗಂಟಿಗೆ ಸಂಬಂಧಿಸಿದ ಜಗಳ ಕೂಡ ಹೊಸತಲ್ಲ.

'ಶಾದಿ ಕೆ ಆಫ್ಟರ್ ಎಫೇಕ್ಟ್ಸ್" ಎನ್ನುವ ಹಿಂದಿ ಚಿತ್ರವನ್ನು ಖೇಣಿ ಕಂಪನಿಗಾಗಿ ಇಂದ್ರಜಿತ್ ನಿರ್ದೇಶಿಸಿದ್ದರು. ಅಶೋಕ ಹೋಟೆಲ್‌ನಲ್ಲಿ ನಡೆದ ಸಂತೋಷಕೂಟವೊಂದರಲ್ಲಿ ಚಿತ್ರದ ಹಾಡುಗಳನ್ನು ಪ್ರದರ್ಶಿಸಲಾಗಿತ್ತು. ಈ ಸುದ್ದಿಗೋಷ್ಠಿಯಲ್ಲಿ ಖೇಣಿ ತಮ್ಮ ಸಿನಿಮಾ ಕುರಿತು ಕನಸುಗಳನ್ನು ಹಂಚಿಕೊಂಡಿದ್ದರು. ನೂರಾರು ಕೋಟಿ ವೆಚ್ಚದಲ್ಲಿ ಫಿಲಂ ಸಿಟಿ ನಿರ್ಮಾಣ, ವರ್ಷಕ್ಕೆ ಹತ್ತಾರು ಕನ್ನಡ ಸಿನಿಮಾ, ಹೊಸ ಪ್ರತಿಭೆಗಳಿಗೆ ಅವಕಾಶ, ಇತ್ಯಾದಿ ಇತ್ಯಾದಿ. ತಮ್ಮ ಸಂಸ್ಥೆಯ ಮುಂದಿನ ಹತ್ತು ಕನ್ನಡ ಸಿನಿಮಾಗಳನ್ನು ಇಂದ್ರಜಿತ್ ಅವರೇ ನಿರ್ದೇಶಿಸುತ್ತಾರೆ ಎಂದೂ ಖೇಣಿ ಪ್ರಕಟಿಸಿದ್ದರು.

ಮದುವೆಯ ಪ್ರಣಯ ಮುರಿದು ಬಿದ್ದದ್ದು ಮುಂದಿನ ಚಿತ್ರದಲ್ಲಿ. 'ಬ್ಲಾಕ್ ಡೈಮಂಡ್" ಎನ್ನುವ ಮತ್ತೊಂದು ಹಿಂದಿ ಚಿತ್ರದ ಶೂಟಿಂಗ್‌ಗೆಂದು ಇಂದ್ರಜಿತ್ ಚಿತ್ರತಂಡವನ್ನು ದಕ್ಷಿಣ ಆಫ್ರಿಕಾಕ್ಕೆ ಕರೆದೊಯ್ದರು. ಲೆಕ್ಕ ತಪ್ಪತೊಡಗಿದ್ದು ಅಲ್ಲಿಂದಲೇ. ಕೋಟ್ಯಂತರ ರುಪಾಯಿಗಳಿಗೆ ಇಂದ್ರಜಿತ್ ಲೆಕ್ಕ ಕೊಟ್ಟಿಲ್ಲ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಿನಿಮಾ ಉದ್ಯಮಿಯೊಬ್ಬರು ಹೇಳಿದ್ದರು.

ಮುಂದಿನ ಚಿತ್ರಗಳಿಗೆಂದು ಹಲವು ತಂತ್ರಜ್ಞರಿಗೆ ಮುಂಗಡ ಹಣ ಕೊಟ್ಟಿರುವುದಾಗಿ ಇಂದ್ರಜಿತ್ ಹೇಳಿಕೊಂಡಿದ್ದರೂ, ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳಿಲ್ಲ ಎನ್ನುವುದು ಆರೋಪವಾಗಿತ್ತು. ಈ ಹಿನ್ನೆಲೆಯಲ್ಲಿ ಖೇಣಿ ಪೊಲೀಸರಿಗೆ ದೂರು ನೀಡಿದ್ದರು. ಇಂದ್ರಜಿತ್ ಕೂಡ ಖೇಣಿ ವಿರುದ್ಧ ಚೆಕ್‌ಬೌನ್ಸ್ ದೂರು ನೀಡಿದ್ದರು.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X