ಸಾಗರಿಕಾಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ನೆನಪಾಗಲಿಲ್ಲವೆ?

ಪೇನಲ್ ನಲ್ಲಿ ಕರ್ನಾಟಕದ ಮಹಿಳಾ ಹಕ್ಕು ಆಯೋಗದ ಮಾಜಿ ಅಧ್ಯಕ್ಷೆ, ಹಾಲಿ ವಕೀಲೆ ಪ್ರಮಿಳಾ ನೇಸರ್ಗಿ, ರೆಡ್ ಎಫ್ಎಮ್ ಚಾನಲ್ ಆರ್ಜೆ ಮಲಿಶ್ಕಾ, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಪೂರ್ಣಿಮಾ ಅಡ್ವಾಣಿ ಮತ್ತು ದಕ್ಷಿಣದ ಖ್ಯಾತ ಅಭಿನೇತ್ರಿ ಖುಷಬೂ ಅವರು ಭಾಗವಹಿಸಿದ್ದರು.
ನಿಖಿತಾ ಸುತ್ತಲೇ ಗಿರಕಿ ಹೊಡೆಯುತ್ತ ಸಾಗಿದ ಚರ್ಚೆ, ಕನ್ನಡ ಚಿತ್ರರಂಗದಲ್ಲಿ ಮಹಿಳೆಯರನ್ನೇ ದಬ್ಬಾಳಿಕೆಗೆ ಗುರಿಯನ್ನಾಗಿ ಮಾಡಲಾಗುತ್ತಿದೆ ಎಂಬ ಮಾತಿಗೆ ಎಲ್ಲ ಮಹಿಳಾಮಣಿಗಳಿಂದ ಒಕ್ಕೊರಲಿನ ಸಹಮತಿ ಸಿಕ್ಕಿತು.
ದುರದೃಷ್ಟಕರ ಸಂಗತಿಯೆಂದರೆ, ನಿಜಕ್ಕೂ ಅನ್ಯಾಯಕ್ಕೆ ಒಳಗಾಗಿದ್ದ ದರ್ಶನ್ ಹೆಂಡತಿ ವಿಜಯಲಕ್ಷ್ಮಿ ಬಗ್ಗೆ, ಪ್ರಮಿಳಾ ನೇಸರ್ಗಿ ಕೇವಲ ಪ್ರಸ್ತಾಪಿಸಿದ್ದು ಬಿಟ್ಟರೆ, ಒಂದೇ ಒಂದು ಮಾತನ್ನು ಒಬ್ಬೇ ಒಬ್ಬಳು ಮಹಿಳೆಯೂ ಆಡಲಿಲ್ಲ. ಇನ್ನೂ ಆಕೆಯ ಬಗ್ಗೆ ಅನುಕಂಪ ತೋರುವುದು ದೂರವೇ ಉಳಿಯಿತು.
ಮಲಿಷ್ಕಾಳಂತೂ ನಟಿ ನಿಖಿತಾ ಮುಂಬೈ ಹುಡುಗಿ ಎಂಬ ಕಾರಣಕ್ಕೆ ಆಕೆಯ ಮೇಲೆ ನಿಷೇಧದ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವಾದಿಸಿದರು. ಮುಂಬೈನಲ್ಲಾಗಿದ್ದರೆ ನಿಖಿತಾ ಪರವಾಗಿ ಎಲ್ಲ ನಟಿಯರೂ ಚಿತ್ರಗಳಲ್ಲಿ ನಟಿಸುವುದನ್ನೇ ಬಿಟ್ಟುಬಿಡುತ್ತಿದ್ದರೆಂಬ ಮಾತಿನ ಕಿಡಿ ಚಟಪಡಿಸಿದರು.
ಖುಷಬೂ ಅವರು, ಚಿತ್ರರಂಗದಲ್ಲಿ ನಟ ಮತ್ತು ಸುಂದರ ನಟಿಯರ ನಡುವೆ ಆಕರ್ಷಣೆಗಳೂ ಇದ್ದೇ ಇರುತ್ತವೆ. ಇದಕ್ಕೆ ನಟಿಯೊಬ್ಬಳನ್ನೇ ಹೊಣೆಗೇಡಿಯನ್ನಾಗಿ ಮಾಡುವುದು ಸರಿಯಲ್ಲ. ನಿರ್ಮಾಪಕರು ಎಜ್ಯುಕೇಟೆಡ್ ಆಗಿದ್ದರೆ ನಿಷೇಧ ಹೇರುವಂಥ ಹೇಯ ಕೃತ್ಯ ನಡೆಯುತ್ತಿರಲಿಲ್ಲ ಎಂದು ಕನ್ನಡ ಚಿತ್ರ ನಿರ್ಮಾಪಕರ ಮೇಲೆ ನಗುನಗುತ್ತಲೇ ಕಿಡಿ ಕಾರಿದರು.
ಒಟ್ಟಿನಲ್ಲಿ, ಸಾಗರಿಕಾ ಘೋಷ್ ಸೇರಿದಂತೆ ಅನೇಕರಿಗೆ ಕನ್ನಡ ಚಿತ್ರರಂಗದ ಬಗ್ಗೆ ಹೆಚ್ಚಿನ ತಿಳಿವಳಿಕೆ ಇದ್ದಂತೆಯೇ ಕಾಣಲಿಲ್ಲ. ನಿಖಿತಾಗೆ ಅನ್ಯಾಯ ಆಗಿದೆಯೋ ಇಲ್ಲವೋ ಎಂಬ ಬಗ್ಗೆಯೇ ಚರ್ಚೆ ನಡೆಯುತ್ತಿದ್ದರಿಂದ ಪಾಪದ ಹುಡುಗಿ ವಿಜಯಲಕ್ಷ್ಮಿಯನ್ನು ಚರ್ಚೆಯಿಂದ ಸಂಪೂರ್ಣ ಹೊರಗಿಡಲಾಗಿತ್ತು.


Click it and Unblock the Notifications











