»   » ಶಬರಿಮಲೈಯಲ್ಲಿ ಶಿವರಾಜ್ ಗೆ ಅವಮಾನ

ಶಬರಿಮಲೈಯಲ್ಲಿ ಶಿವರಾಜ್ ಗೆ ಅವಮಾನ

Posted By:
Subscribe to Filmibeat Kannada

ಶಬರಿಮಲೈ ದೇಗುಲದಲ್ಲಿ ನಟ ಶಿವರಾಜ್ ಕುಮಾರ್ ಅವರ ಜತೆ ಅಲ್ಲಿನ ರಕ್ಷಣಾ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ ಘಟನೆ ಮಂಗಳವಾರ ನಡೆದಿದೆ. ಶಿವರಾಜ್ ಕುಮಾರ್ ಹಾಗೂ ಪುನೀತ್ ಅವರ ಬಳಿ ವಿಐಪಿ ಕಾರ್ಡ್ ಇತ್ತು ಹಾಗೂ ಅವರು ವಿಶೇಷ ದರ್ಶನ ಪಡೆಯಬಹುದಿತ್ತು. ಆದರೆ, ತಮ್ಮ ಪರಿವಾರದೊಡನೆ ತಾವು ಕೂಡ ಸಾಮಾನ್ಯರ ಸಾಲಿನಲ್ಲಿ ಸಾಗಿ ದರ್ಶನ ಪಡೆಯಲು ರಾಜ್ ಪುತ್ರರು ಮನಸ್ಸು ಮಾಡಿದರು.

ಸಾಮಾನ್ಯರ ಸಾಲಿನಲ್ಲಿ ಬಂದದ್ದರಿಂದ ಕನ್ನಡದ ಮೇರು ನಟರು ಹಾಗೂ ಅವರ ಪರಿವಾರವನ್ನು ಗುರುತಿಸಲು ಆಗದ ಅಲ್ಲಿನ ಸಿಬ್ಬಂದಿ, ಶಿವಣ್ಣ ಅವರ ಕತ್ತಿನ ಪಟ್ಟಿ ಹಿಡಿದು ಎಳೆದಾಟಿ, ಗದರಿಸಿದರು ಎನ್ನಲಾಗಿದೆ. ನಂತರ ತಮ್ಮ ತಪ್ಪಿನ ಆರಿವಾಗಿ ,ದೇಗುಲದ ರಕ್ಷಣಾ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಶಿವರಾಜ್ ಕುಮಾರ್ ಅವರ ಕ್ಷಮೆ ಕೋರಿದೆ. ಇದಕ್ಕೂ ಮುನ್ನ ಶಿವರಾಜ್ ಅವರಿಗೆ ಅಪಮಾನ ಆದ ಸುದ್ದಿ ತಿಳಿದು ಅಲ್ಲಿ ನೆರೆದಿದ್ದ ಕರ್ನಾಟಕ ಮೂಲದ ಭಕ್ತರೆಲ್ಲ ಒಗ್ಗೂಡಿ ಪ್ರತಿಭಟನೆ ನಡೆಸಿದರು ಎಂದು ನಿರ್ದೇಶಕ ರಘುರಾಂ ಹೇಳಿದರು. ಇದೊಂದು ಸಣ್ಣ ಪ್ರಮಾಣದ ಪ್ರಮಾದ, ಕ್ಷಮೆ ಕೋರಿದ್ದಾರೆ ಏನೂ ತೊಂದರೆಯಿಲ್ಲ ಎಂದು ಪುನೀತ್ ರಾಜ್ ಕುಮಾರ್ ಅವರು ಅಭಿಮಾನಿಗಳಿಗೆ ಆಕ್ರೋಶವನ್ನು ತಣಿಸಿದ್ದಾರೆ.

ಡಾ. ರಾಜ್ ಕುಮಾರ್ ಅವರು ನಡೆದ ಹಾದಿಯಲ್ಲೇ ಸಾಗುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು, ತಮ್ಮ ಪರಿವಾರದೊಡನೆ ಶಬರಿಮಲೈ ಯಾತ್ರೆಗೆ ತೆರಳಿದ್ದರು. ನಾಗವಾರದಲ್ಲಿರುವ ತಮ್ಮ ಸ್ವಗೃಹದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ಪೂರೈಸಿಕೊಂಡು, ಕನ್ನಡ ಚಿತ್ರರಂಗದ ಅನೇಕ ಆಸ್ತಿಕ ನಟರನ್ನು ಒಟ್ಟುಗೂಡಿಸಿಕೊಂಡು, ಹಿರಿಯ ನಟ ಶಿವರಾಂ ಅವರ ಮಾರ್ಗದರ್ಶನದಲ್ಲಿ ಅಯ್ಯಪ್ಪನ ಆಶೀರ್ವಾದ ಬೇಡಲು ಕೇರಳಕ್ಕೆ ಪ್ರವಾಸ ಕೈಗೊಂಡಿದ್ದರು.

ರಾಜ್ ಅವರ ಕಾಲದಿಂದಲೂ ಅಯ್ಯಪ್ಪ ಮಾಲೆ ಧರಿಸುತ್ತಾ ಬಂದಿರುವ ಗುರು ಸ್ವಾಮಿ ಸ್ಥಾನಕೇರಿರುವ ಹಿರಿಯನಟ ಶಿವರಾಂ ಅವರ ನೇತೃತ್ವದಲ್ಲಿ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ತರುಣ್ ಶ್ರೀಧರ್, ನಿರ್ದೇಶಕ ರಘುರಾಮ್ ಸೇರಿದಂತೆ ಚಿತ್ರರಂಗದ 37ಜನರನ್ನು ಹೊತ್ತ ಕೆ ಎಸ್ ಟಿಡಿಸಿ ವೊಲ್ವೋ ಬಸ್ ಪಂಪಾ ತಲುಪಿತ್ತು. ಇನ್ನೆರಡು ದಿನಗಳಲ್ಲಿ ಅಲ್ಲಿನ ದೇಗುಲಗಳನ್ನು ಸುತ್ತಿ ನಗರಕ್ಕೆ ತಂಡ ಹಿಂದುರುಗಲಿದೆ.

ಇದಕ್ಕೂ ಮುನ್ನ ರಾಜ್ ಕುಟುಂಬದ ಹಿರಿಯರಾದ ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ಅವರು ಎಲ್ಲರನ್ನು ಆಶೀರ್ವದಿಸಿ,ಶುಭ ಹಾರೈಸಿದ್ದರು. ರಾಜ್ ಕುಟುಂಬದ ಮೂವರೂ ಸೊಸೆಯರು ಸಹ ಉಪಸ್ಥಿತರಿದ್ದರು. ಎಲ್ಲರೂ ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಭಕ್ತಿಪೂರಕ ಘೋಷಣೆ ಕೂಗು ಹಾಕಿ ಯಾತ್ರೆ ಆರಂಭಿಸಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada