»   »  ಮಸ್ಸಂಜೆಯ ಗೆಳತಿ ಚಿತ್ರಕ್ಕೆ ತೀವ್ರ ವಿರೋಧ!

ಮಸ್ಸಂಜೆಯ ಗೆಳತಿ ಚಿತ್ರಕ್ಕೆ ತೀವ್ರ ವಿರೋಧ!

Posted By:
Subscribe to Filmibeat Kannada

'ಮುಸ್ಸಂಜೆಯ ಗೆಳತಿ' ಚಿತ್ರ ಆಗಸ್ಟ್ 28ರಂದು ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ತಂದೆ ಮತ್ತು ಮಗಳು ಪ್ರೇಮಿಗಳಾಗಿ ನಟಿಸಿರುವುದು ಗೊತ್ತೇ ಇದೆ. ತಂದೆ ಮಗಳು ಪ್ರೇಮಿಗಳಾಗಿ ಅಭಿನಯಿಸಿರುವುದು ಹಲವು ಸಂಘನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದು ಅನೈತಿಕ ಸಂಬಂಧಗಳನ್ನು ಪ್ರೇರೇಪಿಸುತ್ತದೆ ಎಂಬ ಕಾರಣಕ್ಕೆ ಈ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಬಿ ಪಿ ಶ್ರೀನಿವಾಸ್ ನಿರ್ದೇಶಿಸಿ ಮುಖ್ಯಪಾತ್ರವನ್ನು ಪೋಷಿಸುತ್ತಿರುವ ಚಿತ್ರ ಮುಸ್ಸಂಜೆಯ ಗೆಳತಿ. ಈ ಚಿತ್ರ ಬಿಡುಗಡೆಯಾಗುತ್ತಿರುವ ಚಿತ್ರಮಂದಿರಗಳ ಬಳಿ ಪ್ರತಿಭಟಿಸುವುದಾಗಿ ಹಲವು ಸಂಘಟನೆಗಳು ಬೆದರಿಕೆಯೊಡ್ಡಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀನಿವಾಸ್, ಹಲವು ಸಂಘಟನೆಗಳು ನಮ್ಮ ವಿರುದ್ಧ ಇವೆ. ಮುಸ್ಸಂಜೆ ಗೆಳತಿ ಬಿಡುಗಡೆಯನ್ನು ತಡೆಯಬೇಕು ಎಂದು ಚಿತ್ರದುರ್ಗದಲ್ಲಿ ದೂರನ್ನೂ ದಾಖಲಿಸಲಾಗಿದೆ ಎಂದರು.

ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಿದ್ದು ನಮ್ಮ ಚಿತ್ರಕ್ಕೆ U/A ಪ್ರಮಾಣ ಪತ್ರವನ್ನು ನೀಡಿದೆ. ''ಚಿತ್ರದಲ್ಲಿ ಶಾಲಿನಿಯೊಂದಿಗೆ ಯಾವುದೇ ಪ್ರಣಯ ಸನ್ನಿವೇಶಗಳಲ್ಲಿ ನಾನು ಕಾಣಿಸುವುದಿಲ್ಲ. ನಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದೇವೆ ಅಷ್ಟೇ. ನಮ್ಮ ನೈಜ ಸಂಬಂಧಗಳಿಗೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ'' ಎಂದು ತಮ್ಮ ಪಾತ್ರಗಳ ಬಗ್ಗೆ ಶ್ರೀನಿವಾಸ್ ವಿವರ ನೀಡುತ್ತಾರೆ.ಪ್ರೊಫೆಸರ್ ಪಾತ್ರದಲ್ಲಿ ಅಭಿನಯಿಸಿರುವ ಶ್ರೀನಿವಾಸ್ ವಿದ್ಯಾರ್ಥಿನಿಯೊಬ್ಬಳ ಪ್ರೇಮದಲ್ಲಿ ಬೀಳುತ್ತಾರೆ. ವಿದ್ಯಾರ್ಥಿನಿಯಾಗಿ ಶ್ರೀನಿವಾಸ್ ಅವರ ಮಗಳು ಶಾಲಿನಿ ನಟಿಸಿದ್ದಾರೆ.

ಈ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಅವರು ನಯವಾಗಿ ನಿರಾಕರಿಸಿದ್ದರು. ತಂದೆ ಮಗಳು ಪ್ರೇಮಿಗಳಾಗಿ ನಟಿಸಿರುವ ಕಾರಣ ಜಯಮಾಲಾ ಬರುವುದಿಲ್ಲ ಎಂದಿದ್ದರಂತೆ. ಈ ಚಿತ್ರವನ್ನು ತಾವೂ ವಿರೋಧಿಸುತ್ತಿರುವುದಾಗಿ ಮತ್ತು ಪ್ರತಿಭಟಿಸುವುದಾಗಿಯೂ ಶ್ರೀನಿವಾಸ್ ಗೆ ಹೇಳಿ ಕಳುಹಿಸಿದ್ದಾರೆ!

ಒಂದರ್ಥದಲ್ಲಿ ಈ ವಿವಾದಗಳೇ ಚಿತ್ರಕ್ಕೆ ಲಾಭವಾಗಿದೆ. ಉಚಿತ ಪ್ರಚಾರವೂ ಸಿಕ್ಕಂತಾಗಿದೆ. ಈ ರೀತಿಯ ಪ್ರತಿಭಟನೆಗಳಿಗೆ ತಾವು ಸೊಪ್ಪು ಹಾಕಲ್ಲ ಎನ್ನುತ್ತಾರೆ ಶ್ರೀನಿವಾಸ್. ಈ ಚಿತ್ರದ ಬಗ್ಗೆ ವಿದ್ಯಾರ್ಥಿಗಳು, ಪೋಷಕರು, ಪ್ರೇಕ್ಷಕರು, ಮನಃಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಮುಸ್ಸಂಜೆಯ ಗೆಳತಿ ಚಿತ್ರ ಸಾಮಾಜಿಕ ಸ್ವಾಸ್ತ್ಯವನ್ನು ಕದಡುತ್ತದೆ ಎಂಬ ಆತಂಕವನ್ನು ಮನಃಶಾಸ್ತ್ರಜ್ಞರು ವ್ಯಕ್ತಪಡಿಸಿದ್ದಾರೆ.

ಎನ್ ಎಂ ಕೆ ಆರ್ ವಿ ಕಾಲೇಜಿನ ಮನಃಶಾಸ್ತ್ರ ವಿಷಯದ ಉಪನ್ಯಾಸಕರಾದ ಎಂ ಶ್ರೀನಿವಾಸ ಮೂರ್ತಿ ಅವರ ಪ್ರಕಾರ, ಈ ಚಿತ್ರ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ರೀಲ್ ಲೈಫ್ ರಿಯಲ್ ಲೈಫನ್ನು ಪ್ರಭಾವಿಸುತ್ತದೆ. ಈ ಚಿತ್ರ ಸಮಾಜಕ್ಕೆ ತಪ್ಪು ಸಂದೇಶ ಕಳುಹಿಸುತ್ತದೆ ಎನ್ನುತ್ತಾರೆ. ಆದರೆ ಇದ್ಯಾವುದನ್ನೂ ತಲೆಗೆ ಹಾಕಿಕೊಳ್ಳುವ ಸ್ಥಿತಿಯಲ್ಲಿ ಶ್ರೀನಿವಾಸ್ ಇಲ್ಲ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada