»   »  ಮಾತ್ ಮಾತಲ್ಲಿ ಕಿರಿಕ್ ಮಾಡಿಕೊಂಡ ರಮ್ಯಾ

ಮಾತ್ ಮಾತಲ್ಲಿ ಕಿರಿಕ್ ಮಾಡಿಕೊಂಡ ರಮ್ಯಾ

Subscribe to Filmibeat Kannada

ಚಿತ್ರನಟಿ ರಮ್ಯಾ ಕನ್ನಡ ಚಿತ್ರರಸಿಕರಿಗೆ ಉತ್ತಮ ನಟನೆಯ ಅಮೃತಧಾರೆ ಸುರಿಸಿದಷ್ಟೇ ಚಿತ್ರನಿರ್ಮಾಪಕರಿಗೆ, ತಂತ್ರಜ್ಞರಿಗೆ, ಪತ್ರಕರ್ತರಿಗೆ, ನಟರಿಗೆ ಕಿರಿಕಿರಿಯ ಔತಣ ಬಡಿಸಿದ್ದಾರೆ. ರಮ್ಯಾ ಮತ್ತು ಕಾಂಟ್ರೋವರ್ಸಿ ನಾಣ್ಯದ ಎರಡು ಮುಖವಿದ್ದಂತೆ ಎನ್ನಿಸುವಷ್ಟು ಸಾಕಷ್ಟು ಕಿರಿಕಿರಿಗೆ ಕಾರಣವಾಗಿದ್ದಾರೆ. ಅದು ಯಾವ ಮಟ್ಟಕ್ಕೆ ಹೋಗಿದೆಯೆಂದರೆ ಈ ನಟನಿಗೆ ಸರಿಯಾಗಿ ಅಪ್ಪಿಕೊಳ್ಳಲೂ ಬರುವುದಿಲ್ಲ ಎನ್ನುವ ರಮ್ಯಾ ಅವರ ಹೇಳಿಕೆ ಕೂಡ ವಿವಾದಕ್ಕೆ ಕಾರಣವಾಗುತ್ತದೆ.

ಹೊಚ್ಚ ಹೊಸ ವಿವಾದವೇನೆಂದರೆ, ಚಿತ್ರೀಕರಣ ವೇಳೆಗೆ ನೃತ್ಯ ತಂಡದ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ, ನೃತ್ಯ ನಿರ್ದೇಶಕರನ್ನು ಹೀಯಾಳಿಸಿದ್ದಾರೆಂಬ ಕಾರಣ ನೀಡಿ ರಮ್ಯಾ ವಿರುದ್ಧ ಚಲನಚಿತ್ರ ನೃತ್ಯ ನಿರ್ದೇಶಕರ ಸಂಘ ಮತ್ತು ನೃತ್ಯ ಕಲಾವಿದರ ಸಂಘದ ಸಹೋದರರೆಲ್ಲ ರಮ್ಯಾ ವಿರುದ್ಧ ಸಿಡಿದೆದ್ದಿದ್ದಾರೆ.

ಕಿಚ್ಚ ಸುದೀಪ್ ಜೊತೆ ನಟಿಸುತ್ತಿರುವ 'ಜಸ್ಟ್ ಮಾತ್ ಮಾತಲ್ಲಿ' ಚಿತ್ರೀಕರಣ ಸಂದರ್ಭದಲ್ಲಿ ರಮ್ಯಾ ಅವರು ನೃತ್ಯ ನಿರ್ದೇಶಕ 'ಗೆಳೆಯ' ಖ್ಯಾತಿಯ ಹರ್ಷ ಅವರನ್ನುದ್ದೇಶಿ, "ಮೊದಲು ನೃತ್ಯ ಮೋಡೋದನ್ನ ನೀವು ಕಲಿತುಕೊಳ್ಳಿ, ನಂತರ ನನಗೆ ಹೇಳಿಕೊಡಿ" ಎಂದು ಜಸ್ಟ್ ಮಾತ್ ಮಾತಲ್ಲೇ ಹೀಯಾಳಿಸಿದ್ದಾರೆ. ಅಷ್ಟಲ್ಲದೇ, ಸಹ ಕಲಾವಿದರ ಮೇಲೆ ಕೂಡ ಅವರು ಕೂಗಾಡಿದ್ದಾರೆ. ಇದರಿಂದ ನೊಂದಿರುವ ಹರ್ಷ ಅವರು ಇನ್ನು ಮುಂದೆ ರಮ್ಯಾ ನಟಿಸುತ್ತಿರುವ ಚಿತ್ರಕ್ಕೆ ನೃತ್ಯ ಕಲಾವಿದರ ಸಂಘದ ಕಲಾವಿದರ್ಯಾರೂ ಸಹಕಾರ ನೀಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಪ್ರಕರಣವನ್ನು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯವರೆಗೂ ತೆಗೆದುಕೊಂಡು ಹೋಗುವುದಾಗಿ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ್ ಹೇಳಿದ್ದಾರೆ.

ಈ ಪ್ರಕರಣದಿಂದಾಗಿ ಜಸ್ಟ್ ಮಾತ್ ಮಾತಲ್ಲಿ ಚಿತ್ರದ ನಟ ಸುದೀಪ್ ಕೂಡ ಕೆಂಡವಾಗಿದ್ದಾರೆ. ವಿನಾಕಾರಣ ನನ್ನ ಮೇಲೂ ರಮ್ಯಾ ಆರೋಪ ಹೊರಿಸುತ್ತಿದ್ದಾರೆ. ಇದರಿಂದ ಇಡೀ ಚಿತ್ರತಂಡಕ್ಕೆ ಬೇಜಾರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಂಗ ಎಸ್ಎಸ್ಎಲ್ ಸಿ ಚಿತ್ರದಲ್ಲಿ ನಟಿಸುವಾಗಲೂ ರಮ್ಯಾ ಅವರು ಸುದೀಪ್ ಜೊತೆ ಕಿರಿಕ್ ಮಾಡಿಕೊಂಡಿದ್ದರು. ನಂತರ ಅವರ ಜೊತೆ ನಟಿಸುವುದಿಲ್ಲ ಎಂದು ಹೇಳಿದ್ದ ಸುದೀಪ್ ಕೆಲ ವರ್ಷಗಳ ನಂತರ ಮುಸ್ಸಂಜೆ ಮಾತು ಚಿತ್ರದಲ್ಲಿ ಮತ್ತೆ ಒಟ್ಟಿಗೆ ನಟಿಸಿದ್ದರು. ಈಗ ಜಸ್ಟ್ ಮಾತ್ ಮಾತಲ್ಲಿ ಮತ್ತು ಕಿಚ್ಚ ಹುಚ್ಚ ಚಿತ್ರದಲ್ಲಿಯೂ ರಮ್ಯಾ ಸುದೀಪ್ ಜೊತೆ ನಟಿಸುತ್ತಿದ್ದಾರೆ.

ಆದರೆ, ಎಂದಿನಂತೆ ರಮ್ಯಾ ಈ ಆರೋಪಗಳನ್ನೆಲ್ಲ ತಳ್ಳಿ ಹಾಕಿದ್ದಾರೆ. ನನ್ನ ವಿರುದ್ಧ ಸುದೀಪ್ ಸೇರಿದಂತೆ ಇಡೀ ಚಿತ್ರತಂಡ ಅಪಪ್ರಚಾರ ಮಾಡುತ್ತಿದೆ. ಪಬ್ಲಿಸಿಟಿ ಸಲುವಾಗಿ ಸುದೀಪ್ ಈ ಮಟ್ಟಕ್ಕೆ ಇಳಿಯಬಾರದಿತ್ತು ಎಂದು ಪ್ರತ್ಯಾರೋಪ ಮಾಡಿದ್ದಾರೆ. ನಾನು ಕೂಡ ಕಲಾವಿದೆ. ಇನ್ನೊಬ್ಬ ಕಲಾವಿದನನ್ನು ಬೈಯುವಷ್ಟು ಕೆಟ್ಟ ಬುದ್ಧಿ ನನಗಿಲ್ಲ ಎಂದು ಹರಿಹಾಯ್ದಿದ್ದಾರೆ ರಮ್ಯಾ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada