»   »  ರಜನಿಕಾಂತ್ ಚಿತ್ರಗಳಿಗೆ ಎಲ್ಟಿಟಿಇ ಹಣ!

ರಜನಿಕಾಂತ್ ಚಿತ್ರಗಳಿಗೆ ಎಲ್ಟಿಟಿಇ ಹಣ!

Subscribe to Filmibeat Kannada

ದಕ್ಷಿಣ ಭಾರತದ ಖ್ಯಾತ ನಟ ರಜನೀಕಾಂತ್ ಚಿತ್ರಗಳಿಗೆ ಎಲ್ಟಿಟಿಇ ಹಣ ತೊಡಗಿಸಿದೆಯೇ? ಹೌದು ಎನ್ನುತ್ತಿದ್ದಾರೆ ಶ್ರೀಲಂಕಾ ಸರಕಾರದ ಆಪತ್ತು ನಿರ್ವಹಣಾ ಸಚಿವ ಅಬ್ದುಲ್ ರಿಶದ್! ಅವರ ಕೆಲವು ಚಿತ್ರಗಳಿಗೆ ಎಲ್ಟಿಟಿಇ ಭಾರಿ ಪ್ರಮಾಣದ ಹಣ ಸುರಿದು ಚಿತ್ರ ನಿರ್ಮಿಸಿದೆ ಎಂದು ರಶೀದ್ ಗುರುತರ ಆರೋಪ ಮಾಡಿದ್ದಾರೆ.

ನೇರವಾಗಿ ಚಿತ್ರಕ್ಕೆ ಹಣ ಪಾವತಿ ಮಾಡಿಲ್ಲವಾದರೂ ಲಂಡನ್ ನಲ್ಲಿರುವ ತಮಿಳರ ಮುಖಾಂತರ ಕೋಟ್ಯಾಂತರ ರೂಪಾಯಿ ಹಣವನ್ನು ಎಲ್ಟಿಟಿಇ ಚಿತ್ರ ನಿರ್ಮಾಣಕ್ಕೆ ಸುರಿದಿದೆ. ಕೇವಲ ರಜನಿಕಾಂತ್ ಚಿತ್ರಗಳಿಗಷ್ಟೇ ಅಲ್ಲ ಬೇರೆ ಖ್ಯಾತ ನಾಮರ ಚಿತ್ರಗಳಲ್ಲೂ ಎಲ್ಟಿಟಿಇ ಹಣ ತೊಡಗಿಸಿದೆ ಎಂದು ಅವರು ದೈನಿಕವೊಂದಕ್ಕೆ ಹೇಳಿಕೆ ನೀಡಿದ್ದಾರೆ.

ಅಷ್ಟೇ ಅಲ್ಲದೆ ಎಲ್ಟಿಟಿಇ ಪರ ಧ್ವನಿಯೆತ್ತುವ ತಮಿಳುನಾಡಿನ ರಾಜಕೀಯ ನಾಯಕರುಗಳಾದ ಎಂಡಿಎಂಕೆ ಪಕ್ಷದ ಗೋಪಾಲಸ್ವಾಮಿ, ಪಿಎಂಕೆ ಪಕ್ಷದ ರಾಮದಾಸ್ ಮತ್ತು ನೆಡುಮಾರನ್ ಮುಂತಾದವರಿಗೆ ಹಣದ ಸಹಾಯ ಮಾಡಿದೆಯೆಂದು ರಶೀದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ರಜನೀಕಾಂತ್ ಬಗ್ಗೆ ಈ ರೀತಿ ಗಂಭೀರ ಆರೋಪ ಎದುರಾಗಿದ್ದರೂ ಅವರಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲದಿರುವುದು ವಿಶೇಷ.

ರಜನಿ ಚಿತ್ರಗಳಲ್ಲಿ ಎಷ್ಟು ಹಣ ತೊಡಗಿಸಲಾಗಿದೆ ಎಂಬುದನ್ನು ರಶೀದ್ ಸ್ಪಷ್ಟಪಡಿಸಿಲ್ಲ. ಪ್ರಸ್ತುತ 'ಎಂದಿರನ್' ಎಂಬ ಚಿತ್ರದಲ್ಲಿ ರಜನಿಕಾಂತ್ ಬಿಜಿಯಾಗಿದ್ದಾರೆ. ಐಶ್ವರ್ಯ ರೈ ಚಿತ್ರದ ನಾಯಕಿ. ಎ ಆರ್ ರೆಹಮಾನ್ ಸಂಗೀತವುಳ್ಳ ಈ ಚಿತ್ರವನ್ನು ಶಂಕರ್ ನಿರ್ದೇಶಿಸುತ್ತಿರುವುದು ಗೊತ್ತೇ ಇದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada