»   »  ಬೋಳಿಸಿಕೊಂಡ ನಿರ್ಮಾಪಕ, ಬೋಳಿಸಿದ ನಿರ್ದೇಶಕ

ಬೋಳಿಸಿಕೊಂಡ ನಿರ್ಮಾಪಕ, ಬೋಳಿಸಿದ ನಿರ್ದೇಶಕ

Subscribe to Filmibeat Kannada

"ಪ್ರೇಮ್‌ ಕಹಾನಿ" ಇಪ್ಪತ್ತೈದು ವಾರ ಓಡಿಯೇ ಓಡುತ್ತದೆ ಎಂದು ರೈಲು ಬಿಟ್ಟಿದ್ದ ಮೊಸಳೆ ಕಣ್ಣೀರಿನ ನಿರ್ದೇಶಕ ಆರ್.ಚಂದ್ರು ನಿರ್ದೇಶಕರ ಸಂಘದ ಸಭೆಗೆ ಹೋಗಿ ತಲೆತಗ್ಗಿಸಿ ಬಂದಿದ್ದಾರಂತೆ. ಚಿತ್ರದ ನಿರ್ಮಾಪಕರು ಕೆಎಂ ವಿಶ್ವನಾಥ್ ಅವರು, ತಮ್ಮನ್ನು ಚಂದ್ರು ವಿನಾಕಾರಣ ಬೋಳಿಸಿದರು ಎಂದು ನಿರ್ದೇಶಕರ ಸಂಘಕ್ಕೆ ದೂರು ಕೊಟ್ಟಿದ್ದರ ಫಲವಿದು.

ಸ್ಲಂ ಹುಡುಗನ ಕಥೆಯನ್ನು ಸಿನಿಮಾ ಮಾಡಲು ನಾಲ್ಕು ನಾಲ್ಕೂವರೆ ಕೋಟಿ ಹಣವನ್ನು ಯಾರಾದರೂ ಖರ್ಚು ಮಾಡಿಸುತ್ತಾರಾ ಅನ್ನೋದು ನಿರ್ಮಾಪಕರ ಪ್ರಶ್ನೆ. ಚಂದ್ರು ತಮ್ಮದೇ ಆದ ಸಮರ್ಥನೆಗಳನ್ನು ನಿರ್ದೇಶಕರ ಸಂಘದಲ್ಲಿ ಕೊಟ್ಟರೂ ಅವರು ಬೋಳಿಸಿದ್ದು ಸರಿಯಲ್ಲ ಎಂಬ ತೀರ್ಮಾನ ಅಲ್ಲಿ ಹೊಮ್ಮಿದೆ. ನಾಯಕಿ ಹಾಗೂ ತಂತ್ರಜ್ಞರಿಗೆ ದೊಡ್ಡ ಮೊತ್ತದ ಸಂಭಾವನೆ ಕೊಡಿಸಿ ಚಂದ್ರು ಬೀಗಿದ್ದೂ ಇದಕ್ಕೆ ಕಾರಣ. ಅವರ ಮುಂದಿನ "ಮಳೆ" ಚಿತ್ರಕ್ಕೆ ಕೊಡೆ ಹಿಡಿಯಲು ನಿರ್ಮಾಪಕರು ಹಿಂದುಮುಂದೂ ನೋಡುತ್ತಿರುವ ಸುದ್ದಿ ಇದೆ.

ಇಷ್ಟಕ್ಕೂ ದೂರು ಕೊಟ್ಟ ನಿರ್ಮಾಪಕರಿಗೆ ಕೆಟ್ಟ ಮೇಲೆ ಬುದ್ಧಿ ಬಂದದ್ದು ಯಾಕೋ? ಸಿನಿಮಾ ಬಿಡುಗಡೆಯಾದ ನಂತರ ಹೆಲಿಕಾಪ್ಟರ್‌ನಲ್ಲಿ ಪ್ರಚಾರ ಮಾಡಿದ ಅವರ ಮಂಕುಬುದ್ಧಿಗೆ ಏನನ್ನೋಣ? ಇಷ್ಟಾದ ಮೇಲೂ ಚಂದ್ರು ಪ್ರೇಮ್‌ಕಹಾನಿ ಅದ್ಭುತ ಚಿತ್ರ ಎಂದೇ ತಮ್ಮ ಅಂಗಾಂಗಳನ್ನು ಮುಟ್ಟಿ ಪ್ರಮಾಣ ಮಾಡುತ್ತಿದ್ದಾರಂತೆ! ವಿಪರ್ಯಾಸವೆಂದರೆ, ಚಿತ್ರದ ನಾಯಕ ಅಜಯ್ ರಾವ್ ಪ್ರೇಮ್ ಕಹಾನಿ ಚಿತ್ರವನ್ನು ಫ್ಲಾಪ್ ಚಿತ್ರ ಎಂದು ಘೋಷಿಸಿದ್ದೂ ಆಗಿದೆ. ಚಿತ್ರದಲ್ಲಿ ನಾಯಕನಿಗಿಂತ ನಾಯಕಿ ಶೀಲಾಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು ಚಿತ್ರಕ್ಕೆ ಮುಳುವಾಯಿತು. ಚಿತ್ರದ ಕ್ಲೈಮ್ಯಾಕ್ಸ್ ಅಂತೂ ನಾನಂದುಕೊಂಡದ್ದಕ್ಕಿಂತ ಭಿನ್ನವಾಗಿತ್ತು ಎಂದು ಅಜಯ್ ಅಲವತ್ತುಕೊಂಡಿದ್ದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada