»   »  ಪ್ರೇಮ್ ಕಹಾನಿ ಶೀರ್ಷಿಕೆಗೆ ಮಂಡಳಿ ಹಸಿರು ನಿಶಾನೆ

ಪ್ರೇಮ್ ಕಹಾನಿ ಶೀರ್ಷಿಕೆಗೆ ಮಂಡಳಿ ಹಸಿರು ನಿಶಾನೆ

Subscribe to Filmibeat Kannada
Prem Kahani movie still
'ಪ್ರೆಮ್ ಕಹಾನಿ'ಚಿತ್ರದ ಶೀರ್ಷಿಕೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಸಿರು ನಿಶಾನೆ ತೋರಿದೆ. 'ಪ್ರೇಮ್ ಕಹಾನಿ' ಎಂದು ಹಿಂದಿ ಶೀರ್ಷಿಕೆ ಇಟ್ಟಿರುವ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಕ್ಷೇಪಣೆ ವ್ಯಕ್ತಪಡಿಸಿತ್ತು. ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಈ ಸಂದರ್ಭದಲ್ಲಿ ಶೀರ್ಷಿಕೆ ಬದಲಾಯಿಸುವುದರಿಂದ ಸಿನಿಮಾ ಮೇಲೆ ಹೊಡೆತ ಬೀಳುತ್ತದೆ. ಅದೇ ಶೀರ್ಷಿಕೆಗೆ ಒಪ್ಪಿಗೆ ನೀಡಬೇಕು ಎಂದು ನಿರ್ಮಾಪಕರ ಮನವಿ ಮಾಡಿಕೊಂಡಿದ್ದರು.

ಕಡೆಗೆ ವಾಣಿಜ್ಯ ಮಂಡಳಿ ಸಭೆ ಕರೆದು 'ಪ್ರೇಮ್ ಕಹಾನಿ'ಶೀರ್ಷಿಕೆಗೆ ಒಪ್ಪಿಗೆ ನೀಡಿದೆ. ಈ ಕುರಿತು ವಿವರ ನೀಡಿದ ವಾಣಿಜ್ಯ ಮಂಡಳಿ ಪ್ರಧಾನ ಕಾರ್ಯದರ್ಶಿ ಥಾಮಸ್ ಡಿಸೋಜಾ, ಚಿತ್ರ ಬಿಡುಗಡೆ ಹಂತದಲ್ಲಿದೆ. ಶೀರ್ಷಿಕೆಯನ್ನು ಬಹಳ ಹಿಂದೆಯೇ ನೋಂದಣಿ ಮಾಡಿಕೊಳ್ಳಲಾಗಿತ್ತು. ಹಾಗಾಗಿ ಆ ಚಿತ್ರಕ್ಕೆ ಒಪ್ಪಿಗೆ ನೀಡಲಾಯಿತು ಎಂದರು. ಆದರೆ ಮುಂದೆ ಪರಭಾಷಾ ಶೀರ್ಷಿಕೆಗಳಿಗೆ ಮಾನ್ಯತೆ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಚಲನಚಿತ್ರವಾಣಿಜ್ಯ ಮಂಡಳಿಯ ನಿರ್ಧಾರದಿಂದ ನಿರ್ದೇಶಕ ಆರ್ ಚಂದ್ರು ಖುಷಿಯಾಗಿದ್ದಾರೆ. ತಮ್ಮ 'ಪ್ರೇಮ್ ಕಹಾನಿ' ಚಿತ್ರಕ್ಕೆ ಎಲ್ಲ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸದ್ಯ ರೀರೆಕಾರ್ಡಿಂಗ್ ಕಾರ್ಯ ನಡೆಯುತ್ತಿದ್ದು ಚಿತ್ರವನ್ನು ಸಂಪೂರ್ಣ ಡಿಐ ತಂತ್ರಜ್ಞಾನದಲ್ಲಿ ತರಲಾಗುತ್ತಿದೆ ಎಂದರು. ಒಟ್ಟಿನಲ್ಲಿ ಹಾಲಿವುಡ್ ರೇಂಜ್ ನಲ್ಲಿ ಪ್ರೇಮ್ ಕಹಾನಿ ಇರುತ್ತದೆ ಎನ್ನುತ್ತಾರೆ ಚಂದ್ರು. ಜುಲೈ 25 ರಂದು ಚಿತ್ರವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತ್ತಿದೆ.

ಪ್ರೇಮ್ ಕಹಾನಿ ಚಿತ್ರಕ್ಕೆ ಇಳಯರಾಜ ಸಂಗೀತ, ಕೆ.ಎಂ.ಚಂದ್ರಶೇಖರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ರವಿವರ್ಮ ಸಾಹಸವನ್ನು ಒಳಗೊಂಡಿದೆ. ನೃತ್ಯ ಸಂಯೋಜನೆ ಮದನ್ ಹರಿಣಿ, ರಘು, ಇಮ್ರಾನ್ ಮತ್ತು ಹರ್ಷ. ಚಿತ್ರ ಸಾಹಿತಿ ಕೆ.ಕಲ್ಯಾಣ್, ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ಅವರ ಸಾಹಿತ್ಯ ಪ್ರೇಮ್ ಕಹಾನಿ ಚಿತ್ರಕ್ಕಿದೆ. ಅಜಯ್, ಶೀಲಾ, ರಂಗಯಾಣ ರಘು, ರಾಜೇಶ್, ಸುಧಾ ಬೆಳವಾಡಿ, ಲೋಕನಾಥ್, ಮೈಕೊ ನಾಗರಾಜ್, ಟೆನ್ನಿಸ್ ಕೃಷ್ಣ ಚಿತ್ರದ ಪಾತ್ರಧಾರಿಗಳು. ವಿಶೇಷ ಪಾತ್ರದಲ್ಲಿ ಮಹಾಲಕ್ಷ್ಮಿ ಬಡಾವಣೆ ಹಾಲಿ ಶಾಸಕ ನೆ.ಲ.ನರೇಂದ್ರ ಬಾಬು ನಟಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada