»   »  ಹೈಕೋರ್ಟ್ ಮೆಟ್ಟಿಲೇರಿದ 'ಜಂಭದ ಹುಡುಗಿ'

ಹೈಕೋರ್ಟ್ ಮೆಟ್ಟಿಲೇರಿದ 'ಜಂಭದ ಹುಡುಗಿ'

Subscribe to Filmibeat Kannada

ತಮ್ಮ 'ಜಂಭದ ಹುಡುಗಿ' ಚಿತ್ರ ಸಬ್ಸಿಡಿಯಿಂದ ವಂಚಿತವಾಗಿದೆ ಎಂದು ಆರೋಪಿಸಿ ನಿರ್ದೇಶಕಿ ಪ್ರಿಯಾ ಹಾಸನ್ ಕೋರ್ಟ್ ನ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಅವರು ಕರ್ನಾಟಕ ಹೈಕೋರ್ಟ್ ನಲ್ಲಿ ಬುಧವಾರ ರಿಟ್ ಅರ್ಜಿ ಸಲ್ಲಿಸಿದ್ದರು. ಸಬ್ಸಿಡಿ ಪಟ್ಟಿಗೆ ತಡೆಯಾಜ್ಞೆ ನೀಡುವಂತೆ ನ್ಯಾಯಾಲಯವನ್ನು ಪ್ರಿಯಾ ಕೋರಿದ್ದಾರೆ.

ಇವರ ಅರ್ಜಿಯನ್ನು ಪರಿಗಣಿಸಿರುವ ಹೈಕೋರ್ಟ್ ವಿವರಣೆ ನೀಡುವಂತೆ ಗುರುವಾರ ರಾಜ್ಯ ಸರಕಾರಕ್ಕೆ ಆದೇಶಿಸಿದೆ. ಚಿತ್ರವೊಂದಕ್ಕೆ ಸಬ್ಸಿಡಿ ನೀಡಲು ಯಾವ ಮಾನದಂಡಗಳನ್ನು ಅನುಸರಿಸಲಾಗುತ್ತದೆ ಎಂಬ ವಿವರಗಳನ್ನು ನೀಡಬೇಕು ಎಂದು ರಾಜ್ಯ ಮಾಹಿತಿ ಇಲಾಖೆಯನ್ನು ಹೈಕೋರ್ಟ್ ವಿವರಣೆ ಕೋರಿದೆ.

ಧೂಮಪಾನ, ಮದ್ಯಪಾನಗಳನ್ನು ವಿಜೃಂಭಿಸಿರುವ ಚಿತ್ರಗಳಿಗೆಲ್ಲಾ ಸಬ್ಸಿಡಿ ನೀಡಲಾಗಿದೆ. ಹೊಡೆದಾಟ, ಬಡಿದಾಟದಂತಹ ಹಿಂಸಾಚಾರದಂತಹ ಚಿತ್ರಗಳೂ ಸಬ್ಸಿಡಿ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಲೈಂಗಿಕತೆಯನ್ನು ಪ್ರೇರಿಪಿಸುವ ಚಿತ್ರಗಳೂ ಸಬ್ಸಿಡಿ ದುಡ್ಡನ್ನು ಎಣಿಸಿವೆ. ಹೀಗಿದ್ದೂ ಉತ್ತಮ ಕತೆಯ ತಮ್ಮ ಚಿತ್ರಕ್ಕೆ ಏಕೆ ಸಬ್ಸಿಡಿ ನೀಡಲಿಲ್ಲ ಎಂಬುದು ಅವರ ಪ್ರಮುಖ ಆರೋಪ.

'ಜಂಭದ ಹುಡುಗಿ' ಚಿತ್ರವನ್ನು ನಿರ್ದೇಶಕ ಸೀತಾರಾಂ ಕಾರಂತ್ ಅರ್ಧದಲ್ಲೇ ಕೈಬಿಟ್ಟ ಕಾರಣ ಅದರ ನಿರ್ದೇಶನದ ಜಬಾಬ್ದಾರಿ ಪ್ರಿಯಾ ಹಾಸನ್ ರ ಹೆಗಲಿಗೆ ಬಿದ್ದಿತ್ತು. ಗರ್ಭಾಶಯ ಕಸಿ ಯಂತಹ ಮಹತ್ವದ ಕತೆಯನ್ನು ತಮ್ಮ ಚಿತ್ರ ಒಳಗೊಂಡಿದೆ. ದಿವಂಗತ ನಂಜುಂಡಪ್ಪ ಅವರ ಕಾದಂಬರಿ ಆಧಾರವಾಗಿ ಕತೆಯನ್ನು ತೆರೆಗೆ ತರಲಾಗಿದೆ ಎಂದು ಅವರು ಹೇಳಿದ್ದಾರೆ.

''ಲಂಡನ್ನಿನ ತಾಯಿಯೊಬ್ಬಳು ತನ್ನ ಮಗಳಿಗೆ ಗರ್ಭಕೋಶವನ್ನು ದಾನ ಮಾಡುತ್ತಾಳೆ. ಇಂತಹ ಮಹತ್ವದ ಕತೆಯನ್ನು ಒಳಗೊಂಡಿರುವ ತಮ್ಮ ಚಿತ್ರಕ್ಕೆ ರಾಜ್ಯಪ್ರಶಸ್ತಿಯೂ ಸಿಗಲಿಲ್ಲ. ಸಬ್ಸಿಡಿ ಪಟ್ಟಿಯಿಂದಲೂ ಕೈಬಿಡಲಾಗಿದೆ'' ಎಂದು ಪ್ರಿಯಾ ಹಾಸನ್ ಆರೋಪಿಸಿದ್ದಾರೆ.

ಕರ್ನಾಟಕ ಸರಕಾರ ಜುಲೈ 21ರಂದು 26 ಕನ್ನಡಚಿತ್ರಗಳಿಗೆ ಸಬ್ಸಿಡಿ ಪ್ರಕಟಿಸಿತ್ತು. ಉತ್ತಮ ಗುಣಮಟ್ಟದ ಚಿತ್ರಗಳನ್ನು ಆಯ್ಕೆ ಮಾಡಿ ಪ್ರತಿ ವರ್ಷ ಒಂದಷ್ಟು ಚಿತ್ರಗಳಿಗೆ ಸಬ್ಸಿಡಿ ನೀಡುವುದು ಸರಕಾರದ ಪರಿಪಾಠ. ಆದರೆ ಆಯ್ಕೆ ಸಮಿತಿ ಯಾವ ಮಾನದಂಡಗಳನ್ನು ಅನುಸರಿಸುತ್ತದೆ ಎಂಬುದು ಪ್ರಿಯಾ ಅವರ ಪ್ರಶ್ನೆ.

ಸಬ್ಸಿಡಿಗಾಗಿ 89 ಚಿತ್ರಗಳು ಸ್ಪರ್ಧೆಯಲ್ಲಿದ್ದವು. ಸಿದ್ಧಲಿಂಗಯ್ಯ ಅವರನ್ನೊಳಗೊಂಡ ಆಯ್ಕೆ ಸಮಿತಿ ಕಡೆಗೆ 26 ಚಿತ್ರಗಳನ್ನು ಆಯ್ಕೆ ಮಾಡಿತ್ತ್ತು. ಎರಡು ಮಕ್ಕಳ ಚಿತ್ರಗಳು ಸೇರಿದಂತೆ ಐತಿಹಾಸಿಕ ಮಹತ್ವದ ಮೂರು ಚಿತ್ರಗಳಿಗೆ ತಲಾ ರು.25 ಲಕ್ಷ ಸಬ್ಸಿಡಿ ಹಾಗೂ ಉಳಿದ ಚಿತ್ರಗಳಿಗೆ ತಲಾ ರು.10 ಲಕ್ಷ ಸಬ್ಸಿಡಿ ಪ್ರಕಟಿಸಲಾಗಿತ್ತು.

ಸಬ್ಸಿಡಿಗಾಗಿ ತಾವೂ ಅರ್ಜಿ ಸಲ್ಲಿಸಿದ್ದೆವು. ಆದರೆ ತಮ್ಮ ಜಂಭದ ಹುಡುಗಿಯನ್ನು ಆಯ್ಕೆ ಮಾಡಿಲ್ಲ. ಆ ಚಿತ್ರವನ್ನು ಯಾಕೆ ಕೈಬಿಡಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.ಸೆನ್ಸಾರ್ ಮಂಡಳಿಯಿಂದ 'ಎ' ಪ್ರಮಾಣ ಪತ್ರ ಪಡೆದ ಚಿತ್ರಗಳಿಗೂ ಸಬ್ಸಿಡಿ ನೀಡಲಾಗಿದೆ. ಉತ್ತಮ ಕಥಾಹಂದರವನ್ನು ಒಳಗೊಂಡಿರುವ ನಮ್ಮ ಚಿತ್ರವನ್ನು ಏಕೆ ತಿರಸ್ಕರಿಸಿದ್ದಾರೆ. ಸಬ್ಸಿಡಿ ಏಕೆ ನೀಡಲಿಲ್ಲ ಎಂಬುದು ಪ್ರಿಯಾ ಹಾಸನ್ ಅವರ ಬಿಲಿಯನ್ ಡಾಲರ್ ಪ್ರಶ್ನೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada