»   » ಹೌದೆ? ನಾಗಾಭರಣ ಅಷ್ಟು ಡಿಮ್ಯಾಂಡ್ ಮಾಡಿದ್ರಾ

ಹೌದೆ? ನಾಗಾಭರಣ ಅಷ್ಟು ಡಿಮ್ಯಾಂಡ್ ಮಾಡಿದ್ರಾ

Posted By:
Subscribe to Filmibeat Kannada

ಕರ್ನಾಟಕ ಚಲನಚಿತ್ರ ಇತಿಹಾಸದಲ್ಲೇ ಅಭೂತಪೂರ್ವ ಚಿತ್ರ ನಿರ್ಮಿಸಿ ಚಿತ್ರರಂಗದಲ್ಲಿ ಮತ್ತೆ ಮೆರೆಯಬೇಕೆಂಬ ರಾಜಕಾರಣಿ ಕಮ್ ನಟ ಕು ಮಾರ್ ಬಂಗಾರಪ್ಪ ಅವರ ಚಿನ್ನದಂಥ ಆಸೆಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಬಲ್ಲ ಮೂಲಗಳ ಪ್ರಕಾರ ಚಿತ್ರದ ಅಂದಾಜು ವೆಚ್ಚ ಕೋಟಿ ಕೋಟಿಗಳನ್ನು ದಾಟುತ್ತಿದ್ದು, ತನಗೂ ಒಂದಿಷ್ಟು ಕೋಟಿ ಕೊಡಿ ಎಂದು ನಿರ್ದೇಶಕ ಟಿಎಸ್ ನಾಗಾಭರಣ ಬೇಡಿಕೆ ಇಟ್ಟಿದ್ದಾರಂತೆ.

ರೇಣುಕಾಂಬ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಕೆಳದಿ ಶಿವಪ್ಪನಾಯಕ ಚಿತ್ರಕ್ಕೆ ಚಾರಿತ್ರಿಕ ಚಿತ್ರಗಳನ್ನು ನಿರ್ದೇಶಿಸುವುದರಲ್ಲಿ ಸಿದ್ಧಹಸ್ತರಾದ ಟಿಎಸ್ ನಾಗಾಭರಣರೇ ಸರಿ ಎಂದು ನಿರ್ಧರಿಸಿ ಮಾತುಕತೆ ನಡೆಸಿದ್ದ ಕುಮಾರ್ ಈಗ ಮುಂದೇನು ಎಂದು ಚಿಂತಿಸುತ್ತಿದ್ದಾರೆ.ಆದರೆ, ಚಿಂತೆಗೋ, ಸಿಟ್ಟಿಗೊ ತಮ್ಮ ತಲೆಗೂದಲನ್ನು ಕಿತ್ತುಕೊಳ್ಳುವಂತಿಲ್ಲ!. ಕಾರಣ ಶಿವಪ್ಪನಾಯಕನಾಗಿ ಮೆರಯಬೇಕಾಗಿರುವ ಕುಮಾರ್ ಗೆ ಉದ್ದುದ್ದಾ ತಲೆಗೂದಲು ಅನಿವಾರ್ಯ.

ಇಷ್ಟಕ್ಕೂ ನಾಗಾಭರಣ ಕೇಳಿದ್ದರಲ್ಲಿ ತಪ್ಪಿಲ್ಲ ಎನ್ನುತ್ತಿದೆ ಒಂದು ಗುಂಪು. ಚಿತ್ರದ ಬಜೆಟ್ ಎರಡಂಕಿಯನ್ನು ಮೀರಿ ದಾಟಿದಾಗ, ನಿರ್ದೇಶಕನಿಗೆ ಐದಾರು ಕೋಟಿ ಪ್ಯಾಕೇಜ್ ಆದ್ರೂ ಬೇಡ್ವಾ. ಅದೂ ಇಂಡಸ್ಟ್ರಿಯಲ್ಲಿ ಸೀನಿಯರ್ ಡೈರೆಕ್ಟರ್ ಬೇರೆ ಎಂದು ಚರ್ಚೆ ಸಾಗುತ್ತಲೇ ಇದೆ.

ಕುಮಾರ್ ಬಂಗಾರಪ್ಪ ಬಳಗದ ಚಿಂತೆ ಅದಲ್ಲ, ನಾಗಾಭರಣರಿಗೆ ಒಂದಿಷ್ಟು ಹೆಚ್ಚಿಗೆ ಕೊಡೊದಕ್ಕೆ ಏನು ಕಷ್ಟವಿಲ್ಲ. ಆದ್ರೆ ಚಿತ್ರದಲ್ಲಿ ಮೂರು ಜನ ಲಲನಾಮಣಿಗಳು ನಾಯಕಿಯರಾಗಿ ನರ್ತನ ಮಾಡಲಿದ್ದಾರೆ. ಮುಂದೆ, ಸಂಭಾವನೆ ಕಮ್ಮಿಯಾಯಿತು ಎಂದು ತಾಂಡವ ನೃತ್ಯ ಮಾಡಿದರೆ ಏನು ಮಾಡೋದು ಎಂದು ಚಿಂತಿಸತೊಡಗಿದ್ದಾರೆ.

ಎಲ್ಲಕ್ಕೂ ಉತ್ತಮ ಪರಿಹಾರವೆಂದರೆ, ನಾಗಾಭರಣರನ್ನು ಬದಲಿಸಿ ಮತ್ತೊಬ್ಬರನ್ನು ಕಡಿಮೆ ಮೊತ್ತಕ್ಕೆ ಕುದುರಿಸುವುದು. ಆ ಕೆಲಸವೂ ತೆರೆಮರೆಯಲ್ಲಿ ನಡೆದಿದೆಯಂತೆ. ಪುಷ್ಪಕವಿಮಾನ ಖ್ಯಾತಿಯ ಸಿಂಗೀತಂ ಶ್ರೀನಿವಾಸ್ ಅವರನ್ನು ಕರೆತಂದು ಮಲೆನಾಡಿನ ವೀರಯೋಧ ಶಿವಪ್ಪ ನಾಯಕನಿಗೆ ಆಕ್ಷನ್ ಕಟ್ ಹೇಳಿಸುವ ಯೋಜನೆಯಲ್ಲಿದೆ ಕುಮಾರ್ ಬಳಗ. ಯಾವುದಕ್ಕೂ ಕಾದು ನೋಡೋಣ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada