»   »  ಸುದೀಪ್ ವಿರುದ್ಧ ನಿರ್ಮಾಪಕರ ಸಂಘಕ್ಕೆ ದೂರು

ಸುದೀಪ್ ವಿರುದ್ಧ ನಿರ್ಮಾಪಕರ ಸಂಘಕ್ಕೆ ದೂರು

Posted By:
Subscribe to Filmibeat Kannada
Actor Sudeep
ಹಣ ಹಿಂತಿರುಗಿಸುತ್ತಿಲ್ಲ ಎಂದು ನಟ ಸುದೀಪ್ ವಿರುದ್ಧ ನಿರ್ಮಾಪಕ ರಮೇಶ್ ಯಾದವ್ ಕರ್ನಾಟಕ ಚಿತ್ರ ನಿರ್ಮಾಪಕ ಸಂಘಕ್ಕೆ ದೂರು ಕೊಟ್ಟಿದ್ದಾರೆ. ಸುಮಾರು ಎರಡು ವರ್ಷಗಳ ಹಿಂದೆ 22 ಲಕ್ಷ ರು.ಗಳನ್ನು ಸುದೀಪ್ ಅವರಿಗೆ ಯಾದವ್ ನೀಡಿದ್ದರು. ಈಗ ಸುದೀಪ್ ತಮ್ಮ ಚಿತ್ರದಲ್ಲಿ ನಟಿಸಲು ಕ್ಯಾತೆ ತೆಗೆಯುತ್ತಿದ್ದು ಹಣ ವಾಪಸ್ ಕೇಳಿದರೆ ಹಿಂತಿರುಗಿಸುತ್ತಿಲ್ಲ ಎಂದು ಯಾದವ್ ಆರೋಪಿಸಿದ್ದಾರೆ.

ಸುದೀಪ್ ತಮ್ಮ ಹಣ ಹಿಂತಿರುಗಿಸುತ್ತಿಲ್ಲ ಎಂದು ಯಾದವ್ ನಿರ್ಮಾಪಕರ ಸಂಘದ ಮೊರೆಹೋಗಿದ್ದಾರೆ. ''ಸುದೀಪ್ ತಮ್ಮ ಬಳಿ ದುಡ್ಡು ತೆಗೆದುಕೊಂಡಿರುವುದು ನಿಜ. ಈ ಸಂಬಂಧ ನಿರ್ಮಾಪಕರ ಸಂಘಕ್ಕೆ ಈಗಾಗಲೇ ದೂರು ಕೊಟ್ಟಿದ್ದೇನೆ. ಹಾಗಾಗಿ ನಾನು ಹೆಚ್ಚಿಗೆ ಈ ಬಗ್ಗ್ಗೆ ಏನೂ ಹೇಳಲಾರೆ '' ಎನ್ನುತ್ತಾರೆ ನಿರ್ಮಾಪಕ ಯಾದವ್.

ಸುದೀಪ್ ರೊಂದಿಗಿನ ಚಿತ್ರಕ್ಕೆ ಯಾದವ್ ಸಹಿ ಹಾಕಿ ಮುಂಗಡವಾಗಿ ರು.22 ಲಕ್ಷಗಳನ್ನು ಕೊಟ್ಟಿದ್ದರು. ಸರಿಸುಮಾರು 18 ತಿಂಗಳು ಕಳೆದರೂ ಚಿತ್ರ ಸೆಟ್ಟೇರಲಿಲ್ಲ. ಡೇಟ್ಸ್ ಗಾಗಿ ಸುದೀಪ್ ಅವರನ್ನು ಯಾದವ್ ಸಂಪರ್ಕಿಸಿದರು. ಕನ್ನಡ ಮತ್ತು ಹಿಂದಿ ಚಿತ್ರಗಳಲ್ಲಿ ಸುದೀಪ್ ಬ್ಯುಸಿಯಾಗಿರುವ ಕಾರಣ ಡೇಟ್ಸ್ ಹೊಂದಾಣಿಕೆಯಾಗಲಿಲ್ಲ. ಯಾದವ್ ವಿಧಿಯಿಲ್ಲದೆ ಹಣ ಹಿಂತಿರುಗಿಸುವಂತೆ ಸುದೀಪ್ ರನ್ನು ಕೇಳಿದ್ದಾರೆ. ಬಡ್ಡಿ ಸಮೇತ ಮುಂಗಡ ಹಣ ಹಿಂತಿರುಗಿಸಿ ಅಥವಾ ಡೇಟ್ಸ್ ಕೊಡಿ ಎಂಬುದು ಯಾದವ್ ಅವರ ಬೇಡಿಕೆ.

ನಿರ್ಮಾಪರು v/s ಕಲಾವಿದರು
ಅತ್ತ ಸುದೀಪ್ ಕರ್ನಾಟಕ ಕಲಾವಿದರ ಸಂಘದ ಮೊರೆ ಹೋಗಿದ್ದು ಯಾದವ್ ವಿರುದ್ಧ ದೂರು ದಾಖಲಿಸಿದ್ದಾರೆ. ಸುದೀಪ್ ಮತ್ತು ಯಾದವ್ ಇಬ್ಬರನ್ನೂ ಕರೆಸಿ ಸಮಸ್ಯೆಯನ್ನು ಬಗೆಹರಿಸುವ ಆಶಾಭಾವದಲ್ಲಿ ನಿರ್ಮಾಪಕರ ಸಂಘ ಇದೆ. ಮತ್ತೊಂದು ಮುಖ್ಯ ಬೆಳವಣಿಗೆಯಲ್ಲಿ ಕಲಾವಿದರ ಮೇಲೆ ನಿರ್ಮಾಪಕರು ದಂಗೆ ಎದ್ದಿದ್ದಾರೆ. ಕಲಾವಿದರು ಸಿಕ್ಕಾಪಟ್ಟೆ ಸಂಭಾವನೆ ಕೇಳುತ್ತಿದ್ದಾರೆ ಎಂಬುದು ಅವರ ಪ್ರಮುಖ ಆರೋಪ.

ಕನ್ನಡದ ಪ್ರಮುಖ ಕಲಾವಿದರು ಚಿತ್ರವೊಂದಕ್ಕೆ ರು.1 ಕೋಟಿ ಸಂಭಾವನೆ ಕೇಳುತ್ತಿದ್ದಾರೆ. ದಿನವೊಂದಕ್ಕೆ 1 ಲಕ್ಷ ರು. ಚಾರ್ಜ್ ಮಾಡುತ್ತಾರೆ. ಈ ವಿಚಾರವನ್ನು ಈಗಾಗಲೇ ಚರ್ಚಿಸಿದ್ದೇವೆ. ಸಂಭಾವನೆ ಕಡಿತಗೊಳಿಸುವ ಸಂಬಂಧ ನಿರ್ಮಾಪಕರ ಸಂಘ ಈಗಾಗಲೇ ದೃಢ ಹೆಜ್ಜೆ ಇಟ್ಟಿದೆ ಎನ್ನುತ್ತವೆ ಗಾಂಧಿನಗರ ಮೂಲಗಳು. ಇಷ್ಟು ದಿನ ಹೊಗೆಯಾಡುತ್ತಿದ್ದ ನಿರ್ಮಾಪಕರು ಮತ್ತು ಕಲಾವಿದರ ನಡುವಿನ ದ್ವೇಷ ಈಗ ಸ್ಪಷ್ಟ ರೂಪ ಪಡೆದುಕೊಳ್ಳುತ್ತಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada