ರು.22 ಲಕ್ಷಕ್ಕೆ ರಮ್ಯಾ ಬೇಡಿಕೆ; ಪ್ರೀತಂ ಗುಬ್ಬಿ ತಬ್ಬಿಬ್ಬು
ಚಿತ್ರನಟಿ ರಮ್ಯಾ ಮತ್ತೆ ಸುದ್ದಿ ಮಾಡಿದ್ದಾರೆ. ಪ್ರೀತಂ ಗುಬ್ಬಿ ನಿರ್ದೇಶಿಸಲಿರುವ 'ಜಾನಿ ಮೇರಾ ನಾಮ್' ಚಿತ್ರಕ್ಕೆ ಕೈ ಕೊಡುವ ಮೂಲಕ ರಮ್ಯಾ ಕಿರಿಕಿರಿ ಮತ್ತೊಮ್ಮೆ ಸಾಬೀತಾಗಿದೆ. ನಿರ್ಮಾಪಕ ವಲಯದಆಪ್ತ ಮೂಲಗಳ ಪ್ರಕಾರ, ದುನಿಯಾ ವಿಜಯ್ ನಾಯಕ ನಟನಾಗಿರುವ ಚಿತ್ರವನ್ನು ರಮ್ಯಾ ನಿರಾಕರಿಸಿದ್ದಾರೆ.
ವಿತರಕ ಜಯಣ್ಣ ತಮ್ಮ ಗೆಳಯರೊಂದಿಗೆ ಕೂಡಿ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಚಿತ್ರಕ್ಕೆ ರಮ್ಯಾರನ್ನು ಆಯ್ಕೆ ಮಾಡಿರುವ ಬಗ್ಗೆ ಅಧಿಕೃತವಾಗಿ ಇನ್ನೂ ಪ್ರಕಟಿಸಿಲ್ಲ. ರಮ್ಯಾ ಜೊತೆಗೆ ಮಾತುಕತೆ ನಡೆದಿದ್ದು ಅವರು ಚಿತ್ರದಲ್ಲಿ ನಟಿಸಲು ಒಪ್ಪಿದ್ದರಂತೆ. ಆದರೆ ಕಡೆಯ ಘಳಿಗೆಯಲ್ಲಿ ಸಂಭಾವನೆ ವಿಚಾರವಾಗಿ ಒಮ್ಮತ ಅಭಿಪ್ರಾಯ ಮೂಡದೆ ರಮ್ಯಾ ಕೆ ಎತ್ತಿದ್ದಾರೆ ಎನ್ನುತ್ತವೆ ಮೂಲಗಳು.
ಸಂಭಾವನೆ ವಿಚಾರವಾಗಿ ಒಂಚೂರು ಹೆಚ್ಚಾದರೆ ಪರ್ವಾಗಿಲ್ಲ, ಆದರೆ ಕಡಿಮೆಯಾದರೆ ಮಾತ್ರ ರಮ್ಯಾ ಬಿಲ್ ಕುಲ್ ಎಂದರೂ ಒಪ್ಪಲ್ಲವಂತೆ. ಚಿತ್ರದ ನಿರ್ದೇಶಕ, ನಿರ್ಮಾಪಕ ಯಾರೇ ಆಗಿರಲಿ ರಮ್ಯಾ ಮಾತ್ರ ಕ್ಯಾರೆ ಎನ್ನಲ್ಲವಂತೆ. ಪ್ರೀತಂ ಗುಬ್ಬಿ ಚಿತ್ರಕ್ಕೆ ಆಕೆ ಇಟ್ಟ ಬೇಡಿಕೆ ರು.22 ಲಕ್ಷಗಳು. ರಮ್ಯಾ ಬೇಡಿಕೆಗೆ ಪ್ರೀತಂ ಗುಬ್ಬಿ ತಬ್ಬಿಬ್ಬಾದರಂತೆ.
ಕಡೆಗೆ ಹಾಗೂ ಹೀಗೂ ಸರ್ಕಸ್ ಮಾಡಿ ಚಿತ್ರದ ನಿರ್ಮಾಪಕ ಜಯಣ್ಣ ರು.20 ಲಕ್ಷ ಕೊಡಲು ಒಪ್ಪಿದ್ದರಂತೆ. ಆದರೆ ರಮ್ಯಾ ರು.22 ಲಕ್ಷ ಕೊಟ್ಟರೆ ಮಾತ್ರ ಎಂದಿದ್ದಾಗಿ ಮೂಲಗಳು ತಿಳಿಸಿವೆ. ಕಡೆಗೆ ವಿಧಿಯಿಲ್ಲದೆ ಜಯಣ್ಣ ರಮ್ಯಾರನ್ನು ಕೈಬಿಟ್ಟು ಐಂದ್ರಿತಾ ರೇರನ್ನು ಕರೆತರಲು ಸಿದ್ಧತೆ ನಡೆಸಿದ್ದಾರೆ.
ದುನಿಯಾ ವಿಜಯ್ ಜೊತೆ ಐಂದ್ರಿತಾ ರೇ 'ಜಂಗ್ಲಿ' ಚಿತ್ರದಲ್ಲಿ ಅಭಿನಯಿಸಿದದ್ದರು. ಇಬ್ಬರದ್ದೂ ಒಳ್ಳೆ ಜೋಡಿ ಎನ್ನಿಸಿಕೊಂಡಿತ್ತು. ಈಗ 'ಜಾನಿ ಮೇರಾ ನಾಮ್' ಚಿತ್ರದಲ್ಲಿಒಂದಾಗುವ ಛಾನ್ಸ್ ಸಿಕ್ಕಿದೆ. ಐಂದ್ರಿತಾ ರೇ ಅಭಿನಯದ ಸುದೀಪ್ ಮುಖ್ಯ ಭೂಮಿಕೆಯ 'ವೀರ ಪರಂಪರೆ' ಚಿತ್ರವೂ ಬಿಡುಗಡೆ ಸಜ್ಜಾಗಿದೆ. ರಮ್ಯಾ ಗೆ ಕೈತಪ್ಪಿದ ಅವಕಾಶ ಐಂದ್ರಿತಾ ಪಾಲಾಗಿದೆ.


Click it and Unblock the Notifications











