»   »  ದಮ್ಮಯ್ಯ, ಕ್ಷಮಿಸಿ -ಪ್ರಜ್ವಲ್ ದೇವರಾಜ್

ದಮ್ಮಯ್ಯ, ಕ್ಷಮಿಸಿ -ಪ್ರಜ್ವಲ್ ದೇವರಾಜ್

Posted By: *ಜಯಂತಿ
Subscribe to Filmibeat Kannada
silent protest by media over prajwal
ತಪ್ಪಾಯ್ತು ತಪ್ಪಾಯ್ತು. ನನ್ನನ್ನು ಕ್ಷಮಿಸಿ ಎಂದು ಮತ್ತೂ ಕೇಳಿಕೊಂಡರು. ಕೋಪ ಕಡಿಮೆಯಾಯಿತು.

'ಗುಲಾಮ' ಸಿನಿಮಾದಲ್ಲಿ ಲೀಲಾಜಾಲವಾಗಿ ಹತ್ತಾರು ವಿಲನ್‌ಗಳನ್ನು ಚಚ್ಚಿಹಾಕಿದ್ದ ಪ್ರಜ್ವಲ್ ದೇವರಾಜ್ ಎನ್ನುವ ಇಪ್ಪತ್ತೊಂದರ ಹರಯದ ಹುಡುಗ, ಶನಿವಾರ ಪತ್ರಕರ್ತರ ಎದುರು ಮುಖ ಕಪ್ಪಾಗಿಸಿಕೊಂಡು ಅಸಹಾಯಕನಾಗಿ ನಿಂತಿದ್ದ. ವಿವಾದ ಶುರುವಾದದ್ದು 'ಗುಲಾಮ'ನ ಕಾರಣದಿಂದಾಗಿಯೇ.

'ಗುಲಾಮ' ಚಿತ್ರದ ವಿಮರ್ಶೆಗಳನ್ನು ನೋಡಿದರೆ ಸೂಸೈಡ್ ಮಾಡ್ಕೊಬೇಕು ಅನ್ಸುತ್ತೆ. ಈ ಪತ್ರಕರ್ತರಿಗೆ ಒಂಚೂರು ಸೌಜನ್ಯವಿಲ್ಲ. ಸಿನಿಮಾ ನೋಡಿದ ನಂತರ ನನ್ನ ಬಳಿ ಅಭಿಪ್ರಾಯ ಹೇಳುವ ಸೌಜನ್ಯವೂ ಅವರಿಗಿಲ್ಲ ಎನ್ನೋದು ಪ್ರಜ್ವಲ್ ಕಂಪ್ಲೇಂಟು. ಈ ಕಂಪ್ಲೇಂಟು 'ಡಿಎನ್‌ಎ' ಪತ್ರಿಕೆಯಲ್ಲಿ ಪ್ರಕಟವಾಗಿತ್ತು.

ಇಂಗ್ಲಿಷ್ ಪತ್ರಿಕೆಯಲ್ಲಿನ ಕನ್ನಡ ಕುವರನ ಬಿಚ್ಚುನುಡಿ ಕನ್ನಡ ಪತ್ರಕರ್ತರ ಸಿಟ್ಟಿಗೆ ಕಾರಣ. 'ನಂ ಕಣ್ಮುಂದಿನ ಹುಡುಗ ಹೀಗನ್ನೋದಾ, ನಂ ದೇವ್ರಾಜು ಮಗ ಈ ರೀತಿ ಮಾತಾಡೋದಾ' ಎಂದು ಕೆಲವು ಹಿರಿಯರು ಸಿಟ್ಟಾಗಿದ್ದರು. ಹುಡುಗರಂತೂ ಕೆಂಡಾಮಂಡಲ.

'ಜೀವ' ಚಿತ್ರದ ಸುದ್ದಿಗೋಷ್ಠಿಯಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಲು ಪ್ರಜ್ವಲ್ ಪ್ರಾರಂಭಿಸಿದಾಗ ಎದುರಾದದ್ದು ಪತ್ರಕರ್ತರ ಧಿಕ್ಕಾರ. ಮೊದಲಿಗೆ, 'ಸೂಸೈಡ್ ಮಾಡ್ಕೊಬೇಕು ಅನ್ನಿಸುತ್ತೆ ಎಂದು ನಾನು ಹೇಳಿಲ್ಲ. ರಿವ್ಯೂಗಳನ್ನು ನೋಡಿದರೆ ಭಯ ಆಗುತ್ತೆ ಎಂದಿದ್ದೆ. ನನ್ನ ಮಾತು ತಪ್ಪಾಗಿ ವರದಿಯಾಗಿದೆ' ಎಂದರು. ಮಾತು ಮುಂದುವರಿದಂತೆ, 'ನಾನು ಆ ವರದಿಯನ್ನೇ ಓದಿಲ್ಲ' ಎಂದರು.

ಪ್ರಜ್ವಲ್ ರಾಜಕಾರಣಿಯಂತೆ ಮಾತಾಡೋದು ನೋಡಿ ಪತ್ರಕರ್ತರು ಇನ್ನೂ ರಾಂಗಾದರು. 'ವರದಿ ತಪ್ಪಾಗಿದೆ ಎಂದಿರಿ. ಓದದೇನೇ ಹೇಗೆ ಹೇಳಿದಿರಿ?' ಎನ್ನೋದು ಪ್ರಶ್ನೆ. 'ತಪ್ಪಾಯ್ತು ತಪ್ಪಾಯ್ತು' ಎಂದರು ಪ್ರಜ್ವಲ್.

'ಜೀವ' ಚಿತ್ರದ ನಿರ್ಮಾಪಕರು, ಪ್ರಚಾರಕರ್ತರು ರಾಜಿಕಬೂಲಿಗೆ ಮುಂದಾದರು. ಪ್ರಜ್ವಲ್‌ರ ಕ್ಷಮಾಪಣೆಯಿಂದಾಗಿ ಸುದ್ದಿಗೋಷ್ಠಿ ಮುಂದುವರೆಯಿತು.

ಇಂಗ್ಲಿಷ್ ಪತ್ರಿಕೆಗಳಲ್ಲಿ ಬಾಯಿ ಹರಿಬಿಡುವ ನಾಯಕ ನಾಯಕಿಯರಿಗೆ ಪ್ರಜ್ವಲ್ ಪ್ರಕರಣ ಪಾಠ ಆಗಬೇಕು ಎನ್ನೋದು ಗಾಂಧಿನಗರದ ಪತ್ರಕರ್ತರ ಒಕ್ಕೊರಲು.

ಪೂರಕ ಓದಿಗೆ: ಪತ್ರಕರ್ತರ ಮೇಲೆ ಪ್ರಜ್ವಲ್ ದೇವರಾಜ್ ಪ್ರತಾಪ!
ಗ್ಯಾಲರಿ: ಪ್ರಜ್ವಲ್ ದೇವರಾಜ್ || ಗುಲಾಮ ||

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada