»   » ಮುಖ್ಯಮಂತ್ರಿ ಚಿತ್ರಕ್ಕೆ ನ್ಯಾಯಾಧೀಶರೇ ಮೊದಲ ಪ್ರೇಕ್ಷಕ

ಮುಖ್ಯಮಂತ್ರಿ ಚಿತ್ರಕ್ಕೆ ನ್ಯಾಯಾಧೀಶರೇ ಮೊದಲ ಪ್ರೇಕ್ಷಕ

Posted By: Staff
Subscribe to Filmibeat Kannada

ವಿವಾದಕ್ಕೊಳಗಾಗಿರುವ ಮುಖ್ಯಮಂತ್ರಿ ಐಲವ್‌ಯೂ ಚಿತ್ರವನ್ನು ಬಿಡುಗಡೆ ಮಾಡುವ ಮುನ್ನ ತಮಗೆ ಒಮ್ಮೆ ತೋರಿಸಬೇಕೆಂದು ರವಿ ಬೆಳಗೆರೆ ವಿರುದ್ಧ ದೇವೇಗೌಡರು ಹೂಡಿರುವ ಮಾನನಷ್ಟ ಮೊಕದ್ದಮೆಯಲ್ಲಿ ನ್ಯಾಯಾಧೀಶರು ಆದೇಶ ನೀಡಿದ್ದಾರೆ.

ರವಿ ನಿರ್ಮಾಣದ ಮುಖ್ಯಮಂತ್ರಿ ಐಲವ್‌ಯೂ ಚಿತ್ರದಲ್ಲಿ ತಮ್ಮ ಕುಟುಂಬದ ಸದಸ್ಯರನ್ನು ಹೋಲುವ ಪಾತ್ರಗಳನ್ನು ಸೃಷ್ಟಿಸಿ ತೇಜೋವಧೆ ಮಾಡಲಾಗುತ್ತದೆ ಎಂದು ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಅವರು ರವಿ ಬೆಳಗೆರೆ ವಿರುದ್ಧ ಹಾಸನ ನ್ಯಾಯಾಲಯದಲ್ಲಿ 10 ಕೋಟಿ ರು. ಪರಿಹಾರ ಕೋರಿ ಮಾನನಷ್ಟ ಹೂಡಿದ್ದಾರೆ. ಪ್ರಕರಣ ಗುರುವಾರ ವಿಚಾರಣೆಗೆ ಬಂದಿತ್ತು.

ರವಿ ಪರ ವಕೀಲ ದಿವಾಕರ್ ಮತ್ತು ದೇವೇಗೌಡ ಪರ ವಕೀಲ ವೆಂಕಟೇಶ್ ಅವರ ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶ ಶ್ರೀನಿವಾಸ್ ಅವರು ಈ ಆದೇಶವನ್ನು ಇಂದು ಹೊರಡಿಸಿದರು. ಚಿತ್ರದ ಚಿತ್ರೀಕರಣ ಈಗಾಗಲೆ ಮುಕ್ತಾಯದ ಹಂತಕ್ಕೆ ಬಂದಿದೆ.

ಈ ಮೊದಲು ಚಿತ್ರೀಕರಣಕ್ಕೆ ತಡೆಯಾಜ್ಞೆ ನೀಡಬೇಕೆಂದು ದೇವೇಗೌಡರು ಕೋರಿದ್ದ ಅರ್ಜಿಯನ್ನು ನ್ಯಾಯಾಧೀಶರು ತಿರಸ್ಕರಿಸಿ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ದೇವೇಗೌಡರ ಕುಟುಂಬವನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಚಿತ್ರದಲ್ಲಿ ತೇಜೋವಧೆ ಮಾಡಕೂಡದೆಂದು ತಾಕೀತು ಮಾಡಿ ಚಿತ್ರೀಕರಣಕ್ಕೆ ಅವಕಾಶ ನೀಡಿದ್ದರು.

ರಾಧಿಕೆ ನಿನ್ನ ಸರಸವಿದೇನೆ.. ಅಡಿಬರಹವಿರುವ ಮುಖ್ಯಮಂತ್ರಿ ಐಲವ್‌ಯೂ ಚಿತ್ರದಲ್ಲಿ ತಂತ್ರೇಗೌಡ (ಲೋಕನಾಥ್), ಕುಮಾರ(ವಿಜಯ್), ದೇವಣ್ಣ(ರಂಗಾಯಣ ರಘು), ಸುನಿತಾ(ಹರಿಪ್ರಿಯ), ರಾಧಾ(ಭಾವನಾ) ಮೊದಲಾದ ಪಾತ್ರಗಳು ತಮ್ಮ ಕುಟುಂಬದ ಸದಸ್ಯರ ಹೆಸರುಗಳನ್ನೇ ಹೋಲುತ್ತವೆಯೆಂದು ರವಿ ವಿರುದ್ಧ ಗೌಡರು ಕದನ ಸಾರಿದ್ದಾರೆ. ಮುಖಕ್ಕೆ ಬಣ್ಣ ಹಚ್ಚಿರುವ ರವಿ ಕೂಡ ಸಾಕ್ಷಿ ಬೆಳಗೆರೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಪಾತ್ರಗಳೆಲ್ಲ ಕಾಲ್ಪನಿಕವಾಗಿದ್ದು ನಿಜಜೀವನದ ಯಾವುದೇ ಪಾತ್ರಗಳನ್ನು ಹೋಲುವುದಿಲ್ಲ. ಭರ್ತಿ ಮನರಂಜನೆಯಿರುವ ಇದು ಅಪ್ಪಟ ಕಮರ್ಷಿಯಲ್ ಚಿತ್ರ ಎಂಬುದು ರವಿ ವಾದ. ಒಬ್ಬ ಪತ್ರಕರ್ತನ, ಚಿತ್ರನಿರ್ಮಾಪಕನ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರ ಪರ ವಕೀಲರು ವಾದಿಸಿದ್ದಾರೆ.

Read more about: kannada, karnataka, kannada news, bangalore
English summary
Mukhyamantri ILU : Judge to see the first show

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada