»   » ಆದಿ ಲೋಕೇಶ್ ಅಸಲಿ ಬಣ್ಣ ಟಿವಿಯಲ್ಲಿ ಬಯಲು

ಆದಿ ಲೋಕೇಶ್ ಅಸಲಿ ಬಣ್ಣ ಟಿವಿಯಲ್ಲಿ ಬಯಲು

Posted By: *ರಾಜೇಂದ್ರ ಚಿಂತಾಮಣಿ
Subscribe to Filmibeat Kannada

ಕನ್ನಡ ಚಿತ್ರರಂಗದ ಖಳ ನಟ ಆದಿ ಲೋಕೇಶ್ ನಿಜ ಜೀವನದಲ್ಲೂ ಖಳ ನಟನಾದ ಘಟನೆ ವರದಿಯಾಗಿದೆ. ಇಂಟರ್ನೆಟ್ ಮೂಲಕ ಚಾಟ್ ಮಾಡಿ ಹಲವಾರು ಹುಡುಗಿಯರನ್ನು ಬಲೆಗೆ ಬೀಳಿಸಿ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವ ಸುದ್ದಿ ಕನ್ನಡ ಚಿತ್ರೋದ್ಯಮವನ್ನು ದಂಗುಬಡಿಸಿದೆ.

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 24 ವರ್ಷದ ಹುಡುಗಿಯೊಬ್ಬಳು ಟಿವಿ 9 ಕಚೇರಿಗೆ ಬಂದು ಆದಿ ಲೋಕೇಶ್ ಲಂಪಟತನವನ್ನು ಬಯಲಿಗೆಳೆದಿದ್ದಾಳೆ.  ಈಕೆಯೊಂದಿಗೆ ಹಲವಾರು ದಿನಗಳಿಂದ ಆದಿ ಲೋಕೇಶ್ ಚಾಟ್ ಮಾಡುತ್ತಿದ್ದ.

ನಿಮ್ಮನ್ನು ಪ್ರೀತಿಸುತ್ತಿದ್ದೇನೆ. ಮದುವೆಯಾಗುತ್ತೇನೆ ಎಂದು ಈಕೆಯನ್ನು ನಂಬಿಸಿದ್ದ. ಅಷ್ಟೇ ಅಲ್ಲದೆ ಈಕೆಯಿಂದ ರು.10 ಲಕ್ಷ ಹಣ ಲಪಟಾಯಿಸಲು ಸಂಚು ರೂಪಿಸಿದ್ದ ಎಂಬ ಅಂಶಗಳು ಬಯಲಾಗಿವೆ.

Aadhi Lokesh

ಆದಿಲೋಕೇಶ್ ನಿಂದ ವಂಚನೆಗೊಳಗಾಗಿರುವ ಯುವತಿ ತನ್ನ ಹೆಸರು ಹಾಗೂ ಮುಖ ತೋರಿಸಲು ಟಿವಿ 9ಗೆ ನಿರಾಕರಿಸಿದ್ದಾರೆ. ''ಅವನಿಂದ ನನ್ನ ಜೀವನ ಹಾಳಾಯಿತು. ತಂದೆ ತಾಯಿ ಮಾತು ಕೇಳದೆ ನಾನು ಮೋಸ ಹೋದೆ ಎಂದು ಆಕೆ ಪರಿತಪಿಸಿದ್ದಾಳೆ.

ಆದಿ ಲೋಕೇಶ್ ಚಿನ್ನಾಭರಣ ತೆಗೆದುಕೊಂಡ ಕುರಿತು ಈಗಾಗಲೇ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಈಕೆ ದೂರು ನೀಡಿದ್ದಳು. ಪೊಲೀಸರು ಮಧ್ಯ ಪ್ರವೇಶಿಸಿ ಚಿನ್ನಾಭರಣಗಳನ್ನು ಈಕೆಗೆ ಆದಿಯಿಂದ ಮರಳಿಸಿ ಕೈತೊಳೆದುಕೊಂಡಿದ್ದರು.

ಆದಿ ಲೋಕೇಶ್ ಗೆ ಮದುಯಾಗಿದೆ ಎಂಬುದನ್ನು ಅರಿತ ಈಕೆ ಆಕ್ಷೇಪ ವ್ಯಕ್ತಪಡಿಸಿದ್ದಳು. ಹೆಂಡತಿಗೆ ವಿವಾಹ ವಿಚ್ಛೇದನ ನೀಡಲು ರು.10 ಲಕ್ಷ ಬೇಕಾಗಿದೆ ಎಂಬ ಬೇಡಿಕೆಯನ್ನು ಆದಿ ಲೋಕೇಶ್ ಈಕೆಯ ಮುಂದಿಟ್ಟಿದ್ದ. ಅಷ್ಟರೊಳಗಾಗಲೇ ಎಚ್ಚೆತ್ತುಕೊಂಡ ಈಕೆ ಸೀದಾ ಟಿವಿ 9 ಕಚೇರಿಗೆ ಬಂದು ಎಲ್ಲವನ್ನೂ ಹೇಳಿ ಆದಿ ಲೋಕೇಶ್ ಮುಖಕ್ಕೆ ಮಂಗಳಾರತಿ ಮಾಡಿದ್ದಾಳೆ.

ಕೇವಲ ಈಕೆಯೊಂದಿಗಷ್ಟೇ ಅಲ್ಲದೆ ಹಲವಾರು ಹುಡುಗಿಯರ ಜೊತೆ ಆದಿ ಲೋಕೇಶ್ ಚಾಟ್ ಮಾಡಿರುವುದು ಗುಟ್ಟಾಗಿ ಉಳಿದಿಲ್ಲ. ಪಲ್ಲವಿ, ಸೌಮ್ಯ....ಮುಂತಾದ ಹುಡುಗಿಯರ ಜತೆ ಚಾಟ್ ಮಾಡಿರುವ ಇಂಟರ್ನೆಟ್ ಕಾಪಿಗಳೇ ಇದಕ್ಕೆ ಸಾಕ್ಷಿಯಾಗಿವೆ.

ಆದಿ ಲೋಕೇಶ್ ಕೇವಲ ತೆರೆಯ ಮೇಲಷ್ಟೇ ಅಲ್ಲ ರಿಯಲ್ ಲೈಫ್ ನಲ್ಲೂ ಖಳನಟ ಎಂಬುದು ಸಾಬೀತಾಗಿದೆ. ಮತ್ತಷ್ಟು ಹುಡುಗಿಯರು ಈತನ ಬಳೆಗೆ ಬೀಳುವ ಮುನ್ನವೇ ಈತನ ಲಂಪಟತನ ಬಯಲಾಗಿದೆ.

ಆದಿ ಲೋಕೇಶ್ ಈಗಾಗಲೇ ಎರಡನೇ ಮದುವೆ ಮಾಡಿಕೊಂಡಿದ್ದಾನೆ. ಮೊದಲ ಹೆಂಡತಿಗೆ ವಿವಾಹ ವಿಚ್ಛೇದನ ನೀಡಲು ಅರ್ಜಿ ಸಲ್ಲಿಸಲಾಗಿದೆ. ಇನ್ನೂ ಡೈವೋರ್ಸ್ ವಿಷಯ ಇತ್ಯರ್ಥವಾಗಿಲ್ಲ.  ಅಷ್ಟರಲ್ಲಾಗಲೇ ಐಟಂ ಡ್ಯಾನ್ಸರ್  ಅನುಷಾರನ್ನು ಮದುವೆಯಾಗಿದ್ದಾರೆ.

ಆಕೆಯೊಂದಿಗೂ ಆದಿ ಲೋಕೇಶ್ ದಾಂಪತ್ಯ ಜೀವನ ಅಷ್ಟಕ್ಕಷ್ಟೆ. ವರದಕ್ಷಿಣೆ ಕಿರುಕುಳ, ದಬ್ಬಾಳಿಕೆ ವಿಷಯಗಳನ್ನು ಮುಂದಿಟ್ಟುಕೊಂಡು ಅನುಷಾ ಈಗಾಗಲೇ ಕೋರ್ಟ್ ಮೆಟ್ಟಿಲೇರಿದ್ದಾರೆ. ಇಷ್ಟೆಲ್ಲಾ ಅವಾಂತರಗಳನ್ನು ಸೃಷ್ಟಿಸಿಕೊಂಡಿರುವ ಆದಿ ಲೋಕೇಶ್ ಮಾತ್ರ ಹುಡುಗಿಯರ ಹಿಂದೆ ಬೀಳುವುದನ್ನು ಬಿಟ್ಟಿಲ್ಲ.

ಮೊದಲ ಹೆಂಡತಿಯಿಂದ ಸದ್ಯಕ್ಕೆ ದೂರವಾಗಿರುವ ಆದಿ ಲೋಕೇಶ್ ಎರಡನೇ ಹೆಂಡತಿ ಅನುಷಾರಿಂದಲೂ ತಿರಸ್ಕೃತನಾಗಿದ್ದಾನೆ. ಆದಿ ಲೋಕೇಶ್ ಸೈಬರ್ ಸೆಕ್ಸ್ ಮಾಡುತ್ತಾನೆ ಎಂದು ಅನುಷಾ ಆಪಾದಿಸಿದ್ದಾರೆ. ತನಗೆ ಈಗಾಗಲೇ ಮದುವೆಯಾಗಿದೆ ಎಂದು ಗೊತ್ತಾದ ಕೂಡಲೆ, ತನ್ನ ಹೆಂಡತಿಗೆ ಕ್ಯಾನ್ಸರ್ ಇದೆ ಎಂದು ಆದಿ ಲೋಕೇಶ್ ಇಂಟರ್ನೆಟ್ ಚಾಟ್ ನಲ್ಲಿ ನಂಬಿಸುತ್ತಿದ್ದ.

ಆದರೆ ಇವೆಲ್ಲಾ ಈಗ ಬಯಲಾಗಿದ್ದು ಆದಿ ಲೋಕೇಶ್ ನಿಜವಾದ ಬಣ್ಣ ಬಯಲಾಗಿದೆ. 'ಅಂಜದಿರು' ಚಿತ್ರದಲ್ಲಿ ಆದಿ ಲೋಕೇಶ್ ಲಂಪಟನ ಪಾತ್ರವನ್ನು ಲೀಲಾಜಾಲವಾಗಿ ಸಹಜ ಎಂಬಂತೆ ಮಾಡಿದ್ದು ಇದೇ ಪುರುಷಾರ್ಥಕ್ಕಾ?

English summary
Mysore Lokesh's son, actor Aadi Lokesh, who has played villain in reel life in movies like Jogi and Anjadiru, has now become real-life villain. His darker side is coming to light after a stranger girl, who declined to reveal her identity in an interview with Kannada news channel TV9, alleged that he promised to marry her and tried to cheat her.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada