»   » ಅನಂತನಾಗ್‌ ಶಸ್ತ್ರತ್ಯಾಗ!

ಅನಂತನಾಗ್‌ ಶಸ್ತ್ರತ್ಯಾಗ!

Posted By: Staff
Subscribe to Filmibeat Kannada

ದಿನೇಶ್‌ಬಾಬು ಅವರನ್ನು ಶಿಕ್ಷಿಸಲಿಕ್ಕೆ ಫಿಲಂ ಚೇಂಬರ್‌ಗೆ ಯಾವ ಅಧಿಕಾರವಿದೆ. ಚೇಂಬರ್‌ ಏನು ನ್ಯಾಯಾಲಯವಾ? ಧೈರ್ಯವಿದ್ದರೆ ಫಿಲಂ ಚೇಂಬರ್‌ ನನ್ನ ವಿರುದ್ಧ ಕ್ರಮ ಕೈಗೊಳ್ಳಲಿ.
ಶಿಕ್ಷೆಯನ್ನು ಒಪ್ಪಿಕೊಳ್ಳುವುದಾಗಿ ಬಾಬು ಅವರೇ ಹೇಳಿದ ಮೇಲೆ ಯಾರೇನು ಮಾಡಲಿಕ್ಕಾಗ್ತದೆ. ಇಷ್ಟಕ್ಕೂ ಚೇಂಬರ್‌ ಒಂದು ಸಂಸ್ಥೆ . ಅದರ ನಿರ್ಧಾರಗಳನ್ನು ಗೌರವಿಸಬೇಕಾಗ್ತದೆ.

ನಮ್ಮ ನಡುವಿನ ಅಪರೂಪದ ಕಲಾವಿದ ಎಂದು ಹೆಸರಾದ ಅನಂತನಾಗ್‌ ಇತ್ತೀಚಿನ ದಿನಗಳಲ್ಲಿ ನೀಡಿದ ಹೇಳಿಕೆಗಳಿವು. ಈ ಹೇಳಿಕೆಗಳಲ್ಲಿರುವುದು ವಿರೋಧಾಭಾಸವೋ, ಅನುಕೂಲಸಿಂಧು ವಾದವೋ, ಅರಿವಿನ ಪರಿಯೋ ಅನ್ನುವುದರ ನಿರ್ಣಯ ಅವರವರ ಚಿತ್ತಕ್ಕೆ ಬಿಟ್ಟದ್ದು. ಆದರೆ, ಅನಂತ್‌ ನಟರಾಗಿದ್ದವರು, ಆನಂತರ ರಾಜಕಾರಣಿಯಾದವರು, ಮತ್ತೆ ನಟನೆಗೆ ಬಂದವರು ಅನ್ನುವುದನ್ನು ನಾವೆಲ್ಲ ಮರೆಯದಿರೋಣ.

ಅನಂತ್‌ ಅವರನ್ನು ಮತ್ತೆ ನೆನಪಿಸಿಕೊಳ್ಳಲಿಕ್ಕೆ ಕಾರಣವೆಂದರೆ- ಫಿಲಂ ಚೇಂಬರ್‌ ವಿರುದ್ಧ ತೋಳೇರಿಸಿ ಹಣಾಹಣಿಗೆ ನಿಂತಿದ್ದ ಅವರು ಏಕಾಏಕಿ ಶರಣಾಗಿದ್ದಾರೆ. ಸಿನಿಮಾಗಳಲ್ಲಿ ಸೌಮ್ಯ ಪಾತ್ರಗಳಲ್ಲಿ ಮಾತ್ರ ಕಂಡ ಅನಂತರ ರೌದ್ರಾವತಾರವನ್ನು ಕಾಣಲು ಬಯಸಿದವರೆಲ್ಲ ಇದರಿಂದಾಗಿ ನಿರಾಶರಾಗಿದ್ದಾರೆ. ಹಣಿಯಲು ಅವಕಾಶ ಕಾಯುತ್ತಿದ್ದವರಿಗೆ ಸಿಕ್ಕಿದ್ದ ಅವಕಾಶವನ್ನು ಹಾಳು ಮಾಡುವ ಮೂಲಕ ಅನಂತ್‌ ಸೋಲಿನಲ್ಲೂ ನಗುತ್ತಿದ್ದಾರೆ.

ಕರ್ನಾಟಕ ಚಲನಚಿತ್ರ ಮಂಡಳಿಯ ಸೂತ್ರಧಾರರಿಗೆ ತಮ್ಮ ಮಾತುಗಳಿಂದ ನೋವಾಗಿದ್ದರೆ, ಅದಕ್ಕಾಗಿ ವಿಷಾದಿಸುತ್ತೇನೆ ಎನ್ನುವ ಒಕ್ಕಣೆಯ, ಅನಂತ್‌ ಕಳಿಸಿರುವ ಕ್ಷಮಾಪಣೆ ಪತ್ರ ಇದೀಗ ಮಂಡಳಿಯ ಅಧ್ಯಕ್ಷ ಕೆ.ಸಿ.ಎನ್‌.ಚಂದ್ರಶೇಖರ್‌ ಅವರ ಟೇಬಲ್‌ ಮೇಲಿದೆ. ಇದರೊಂದಿಗೆ ತಾವೇ ತಾವಾಗಿ ಸೃಷ್ಟಿಸಿ, ಹೇರಿಕೊಂಡಿದ್ದ ವಿವಾದವೊಂದನ್ನು ಅನಂತ್‌ ನಾಜೂಕಾಗಿ ಕೊನೆಗಾಣಿಸಿದ್ದಾರೆ.

ಅನಂತ್‌ ಇದ್ದಕ್ಕಿದ್ದಂತೆ ತಮ್ಮ ನಿರ್ಧಾರ ಬದಲಿಸಲು ಕಾರಣವೇನು?

ಮೂಲವೊಂದರ ಪ್ರಕಾರ, ಇತ್ತೀಚೆಗಿನ ಅನಂತನ ಅವಾಂತರಗಳ ಬಗೆಗೆ ಅವರ ಧರ್ಮಪತ್ನಿ ಶ್ರೀಮತಿ ಗಾಯತ್ರಿ ತೀವ್ರ ಅಸಮಾಧಾನಗೊಂಡಿದ್ದಾರಂತೆ. ಲೋಕದ ಉಸಾಬರಿ ನಿಮಗೇಕೆ ಎಂದು ಪತಿರಾಯರ ನಾರದ ಕೆಲಸವನ್ನು ಶ್ರೀಮತಿ ಕಟುವಾಗಿ ಖಂಡಿಸಿದ ಮೇಲೆಯೇ ಅನಂತ್‌ ಮೆದುವಾದದ್ದು , ಶಸ್ತ್ರತ್ಯಾಗ ಮಾಡಿದ್ದು !

ಈ ಎಲ್ಲ ಗುಲ್ಲು ಸೊಲ್ಲುಗಳಿಗೆ ಕಾರಣಪುರುಷರಾದ ದಿನೇಶ್‌ಬಾಬು ಕೂಡ ಮಂಡಳಿಗೆ ಕ್ಷಮಾಪಣೆ ಪತ್ರ ಕಳುಹಿಸಿದ್ದಾರೆ ಅನ್ನುವುದೂ, ಈ ಪತ್ರದಿಂದ ಸಂತುಷ್ಟರಾದ ಮಂಡಳಿಯ ದೊರೆಗಳು ಆರು ತಿಂಗಳ ನಿರ್ಬಂಧ ಹಾಗೂ 40 ಸಾವಿರ ರು.ದಂಡದ ಶಿಕ್ಷೆಯನ್ನು ಮನ್ನಾಗೊಳಿಸಿರುವ ಸುದ್ದಿಗಳೂ ಈಗ ಚಲನಟಚಿತ್ರ ವಾಣಿಜ್ಯಮಂಡಳಿಯ ಅಂಗಳದಿಂದ ಕೇಳಿಬರುತ್ತಿವೆ. ಆದರೆ, ಮಂಡಳಿಯ ವಕ್ತಾರರಾದ ಮಾಜಿ ನಿರ್ದೇಶಕ ಹಾಗೂ ವಿಷ್ಣುವರ್ಧನ್‌ಗೆ ಸಾಹಸಸಿಂಹ ಪಟ್ಟ ಕಟ್ಟಿದ ಖ್ಯಾತಿಯ ಜೋಸೈಮನ್‌ ಹೇಳುವುದೇ ಬೇರೆ. ಬಾಬು ಹೊಸ ಚಿತ್ರಗಳನ್ನು ಮಾಡುವಂತಿಲ್ಲ ಅಷ್ಟೇ. ಈಗಾಗಲೇ ಒಪ್ಪಿಕೊಂಡಿರುವ ಚಿಟ್ಟೆ ಮತ್ತು ಪಾಂಚಾಲಿ ಹಾಗೂ ಮನೆ ಮನೆ ಕಥೆ ಧಾರಾವಾಹಿಯಲ್ಲಿ ಬಾಬು ತೊಡಗಿಕೊಳ್ಳಬಹುದು. ಅವುಗಳನ್ನು ಪೂರೈಸುವಷ್ಟರಲ್ಲಿ ಆರು ತಿಂಗಳು ಮುಗಿಯುತ್ತದೆ ಅನ್ನುತ್ತಾರೆ ಜೋ. ಅಲ್ಲಿಗೆ ಶಿಕ್ಷೆಯೆನ್ನುವುದು ನೆಪಮಾತ್ರವಾಗಿ, ಶಿಕ್ಷಿಸಿದ ಖುಷಿಯಲ್ಲಿ ಚೇಂಬರ್‌ ಸಹಿತವಾಗಿ ನಿರ್ಮಾಪಕರೂ, ಶಿಕ್ಷೆ ಅನುಭವಿಸಿದ ಮುಖವಾಡದಲ್ಲಿ ದಿನೇಶ್‌ಬಾಬು ಎಂಬ ನಿರ್ದೇಶಕನೂ ನೋಡುಗರ ಕಣ್ಣಿಗೆ ಮಣ್ಣೆರೆಚಿದ ನಾಟಕಕ್ಕೆ ಪರದೆ ಬೀಳುತ್ತದೆ.

Read more about: kannada, karnataka, film, home
English summary
Ananth nag writes an apology letter to The film chamber regarding Dinesh babu issue
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada