»   » ಲೈಟಾಗಿ ಕಿಚ್ಚ ಸುದೀಪ್ ಕಾಲೆಳೆದರೆ ರವಿಚಂದ್ರನ್?

ಲೈಟಾಗಿ ಕಿಚ್ಚ ಸುದೀಪ್ ಕಾಲೆಳೆದರೆ ರವಿಚಂದ್ರನ್?

Posted By:
Subscribe to Filmibeat Kannada

ಎರಡು ದಶಕಗಳಿಗೂ ಹೆಚ್ಚು ಕಾಲ ನಾಯಕನಟನಾಗಿ ಮೆರೆದ ನಟನೊಬ್ಬ ವಿಲನ್ ಪಾತ್ರದ ಬಗ್ಗೆ ಆಸಕ್ತಿ ತೋರಿಸಿದರೆ ಆಶ್ಚರ್ಯವಾಗದಿರದು. ಆದರೆ ಆ ನಟ ಯಾರು ಎಂಬುದು ನಿಮ್ಮ ಕುತೂಹಲ ತಾನೇ? ಅವರು ಬೇರಾರೂ ಅಲ್ಲ, ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್.

ಹೌದು, ರವಿಚಂದ್ರನ್ ವಿಲನ್ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ವಿಲನ್ ಪಾತ್ರದಲ್ಲಿ ಸಿಗೋ ಮಜಾ ಹೀರೋ ಪಾತ್ರದಲ್ಲಿ ಸಿಗೋದಿಲ್ಲ. ಯಾವುದೇ ಹೀರೋ ಆಗಲಿ, ಅವನಿಗೆ ಅಂತರಂಗದಲ್ಲಿ ವಿಲನ್ ಪಾತ್ರ ಮಾಡಬೇಕೆಂಬ ಆಸೆ ಇದ್ದೇ ಇರುತ್ತೆ. ಆ ಆಸೆ ಸಹಜವಾಗಿ ನನಗೂ ಇದೆ ಎಂದಿದ್ದಾರೆ ರವಿಚಂದ್ರನ್.

ಸಿನಿಮಾದಲ್ಲಿ ವಿಲನ್ ಗೆ ಇರುವಷ್ಟು ಸಕಲ ಸೌಭಾಗ್ಯ ಹೀರೋಗೆ ಇರಲ್ಲ. ನಾಯಕನಾದವನು ಸಿನಿಮಾ ತುಂಬಾ ಒದ್ದಾಡಬೇಕು, ಇಲ್ಲವೇ ಕಣ್ಣೀರು ಸುರಿಸಬೇಕು. ಕ್ಲೈಮ್ಯಾಕ್ಸ್ ಒಂದನ್ನು ಬಿಟ್ಟು ಉಳಿದೆಡೆ ಖಳನಾಯಕ ಜಾಲಿಯಾಗೇ ಇರ್ತಾನೆ.

ಅದೆಂಥ ನಾಯಕನೇ ಆಗಿರಲಿ, ಅವರಿಗೆ ತಾವೂ ಖಳನಾಯಕನ ಪಾತ್ರ ಮಾಡಬೇಕೆಂಬ ಮಹದಾಸೆ ಒಮ್ಮೆಯಾದರೂ ಬಂದಿರುತ್ತದೆ. ಯಾರೂ, ಯಾವ ಚಿತ್ರರಂಗವೂ ಇದಕ್ಕೆ ಹೊರತಲ್ಲ. ಚಿತ್ರ ಪ್ರಾರಂಭವಾದರೆ ಸಾಕು, ವಿಲನ್ ರಂಗುರಂಗಿನ ಬಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಾನೆ.

ಅರಮನೆಯಂಥ ಮನೆಯಲ್ಲಿ ವಾಸ. ಹೊರಗೆ ಓಡಾಡುವಾಗೆಲ್ಲಾ ಸುತ್ತಮುತ್ತ ಸೇವಕರು. ಅವನೋ ಮಹಾ ಸ್ಟೈಲ್ ಕಿಂಗ್. ಬರುವಾಗ, ಹೋಗುವಾಗ, ನಿಲ್ಲುವಾಗ, ಸಿಗರೇಟ್ ಸೇದುವಾಗ, ಡ್ರಿಂಕ್ಸ್ ತೆಗೆದುಕೊಳ್ಳುವಾಗ, ಕಾರು ಹತ್ತುವಾಗ, ಇಳಿಯುವಾಗ, ಮಾತನಾಡುವಾಗ ಎಲ್ಲವೂ ಭಾರೀ ಸ್ಟೈಲ್!

ಇಂಥ ಅವಕಾಶ ಯಾವ ನಾಯಕನಿಗೆ ಇರುತ್ತೆ ಹೇಳಿ! ಆತನ ಸನ್ನಿವೇಶಗಳು ಗೋಳಿನ ಕಥೆಯಿಂದಲೇ ಪ್ರಾರಂಭವಾಗುತ್ತವೆ. ಸಿನಿಮಾ ತುಂಬ ಮಾನಸಿಕ ಒದ್ದಾಟ, ತೊಳಲಾಟ. ಮತ್ತೆ ಮತ್ತೆ ಭಾವಾವೇಶಗೊಳ್ಳಬೇಕು. ಅಳಬೇಕು, ಬೇಸರಿಸಿಕೊಳ್ಳಬೇಕು. ಕೊನೆಯ ಸನ್ನಿವೇಶದಲ್ಲಿ ಸುಖಾಂತ್ಯವಿದ್ದರೆ ಸ್ವಲ್ಪ ನಗಬಹುದು. ಅದೇನಾದರೂ ದುರಂತವಾಗಿದ್ದರೆ ಅಲ್ಲಿಯ ನಗುವಿಗೆ ಕಲ್ಲು ಬಿದ್ದಿರುತ್ತದೆ.

ಇಷ್ಟೆಲ್ಲಾ ಅನುಭವಿಸಿ ಮಾಡುವ ಹೀರೋ ಪಾತ್ರ ಯಾರಿಗೆ ಇಷ್ಟವಾಗುತ್ತದೆ ಹೇಳಿ? ಎಲ್ಲರಿಗೂ ಖಳನಾಯಕನ ಪಾತ್ರದ ಮೇಲೆಯೇ ಕಣ್ಣು! ನಿಜ ಜೀವನದಲ್ಲಿ ಯಾರೂ ವಿಲನ್ ಆಗಬಯಸುವುದಿಲ್ಲ. ಅದು ತೆರೆಯ ಮೇಲಷ್ಟೇ ಸೀಮಿತ. ನನಗೂ ಅಷ್ಟೇ, ನಿಜಜೀವನದಲ್ಲಿ ಒಂದು ಸುಳ್ಳು ಹೇಳುವುದೂ ಕಷ್ಟ ಎಂದು ಮನಬಿಚ್ಚಿ ಮಾತನಾಡಿದ್ದಾರೆ ರವಿಚಂದ್ರನ್.

ಕನ್ನಡ ಚಿತ್ರರಂಗದಲ್ಲಿ ಕೆಲವರು ಹೀರೋ ಆಗಿಯೇ ಅಭಿನಯಿಸುತ್ತಾರೆ. ಅದು ಖುಷಿಯ ವಿಷಯ. ಆದರೆ, ಬೇರೆ ಭಾಷೆಯ ಸಿನಿಮಾ ಇಂಡಸ್ಟ್ರಿಗೆ ಹೋಗಿ ವಿಲನ್ ರೋಲ್ ಮಾಡಿ ಬರುತ್ತಾರಲ್ಲ! ಇಲ್ಲಿ ಒಂದು ರೀತಿ ಮೆರೆದು ಅಲ್ಲಿ ಇನ್ನೊಂದು ರೀತಿ ಮೆರೆದು ಬಂದರೆ ಕನ್ನಡಿಗರಿಗೊಂದು ಗತ್ತು ಸಿಗುತ್ತದೆ ಎಂದು ಹೇಳುವ ಮೂಲಕ ರವಿಚಂದ್ರನ್ ಸುದೀಪ್ ಅವರ ಕಾಲನ್ನು ಎಳೆದಂತೆ ಭಾಸವಾದರೂ ಅದು ಅವರು ಸುದೀಪ್ ಮೆಚ್ಚಿ ಆಡಿದ ಮಾತು ಎಂಬುದು ನಿಸ್ಸಂದೇಹ.

ಖಂಡಿತ ರವಿಚಂದ್ರನ್ ಅವರು ಸುದೀಪ್ ಕಾಲೆಳೆದಿಲ್ಲ. ಬದಲಾಗಿ, ಸುದೀಪ್ ಅವರನ್ನು ತಾವೂ ಅನುಸರಿಸುತ್ತಿದ್ದೇನೆಂದು ಸುತ್ತುಬಳಸಿ ಹೇಳಿದ್ದಾರೆ. ರವಿಚಂದ್ರನ್ ಅವರಿಗೆ ಯಾರಾದರೂ ಹೊಸದೇನನ್ನಾದರೂ ಸಾಧಿಸಿದರೆ ಬಹಳ ಅಚ್ಚುಮೆಚ್ಚು. ತಾವೂ ಅಷ್ಟೇ, ಸದಾ ಹೊಸತನಕ್ಕೆ ತುಡಿಯುವ ತವಕದಲ್ಲೇ ಮೈಮರೆತಿರುತ್ತಾರೆ. ಕೆಲವೊಮ್ಮೆ ಅವರ ಕ್ರಿಯೆಟಿವಿಟಿ ಜನರಿಗೆ ಇಷ್ಟವಾಗುತ್ತೆ. ಕೆಲವೊಮ್ಮೆ ಅದೇ ಕಷ್ಟವಾಗುತ್ತೆ, ಅಷ್ಟೇ.

ಆದರೆ, ಅದ್ಯಾವುದಕ್ಕೂ ಜಗ್ಗದ ರವಿಚಂದ್ರನ್ ತಮ್ಮ ಪಾಡಿಗೆ ತಮಗನ್ನಿಸಿದ್ದನ್ನು ಮಾಡುತ್ತಾ ಹೋಗುತ್ತಾರೆ. ಹೊಸದನ್ನು ಮಾಡಿದವರ ಬೆನ್ನುತಟ್ಟುವುದನ್ನು ರವಿಚಂದ್ರನ್ ಯಾವತ್ತೂ ಬಿಟ್ಟವರಲ್ಲ. ಅದೇ ರೀತಿ ಸುದೀಪ್ ಅವರನ್ನು ಈ ರೀತಿಯಲ್ಲಿ ತಮ್ಮದೇ ಶೈಲಿಯಲ್ಲಿ ಮೆಚ್ಚಿ ಮಾತನಾಡಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್. (ಒನ್ ಇಂಡಿಯಾ ಕನ್ನಡ)

English summary
Crazy Star Ravichandran likes Villon Role. He told all plus points of Villon role in the Kichcha Sudeep movie 'Eega' Press Meet. He told, as everyone he wants to act in Villon role. 
 
Please Wait while comments are loading...