For Quick Alerts
  ALLOW NOTIFICATIONS  
  For Daily Alerts

  'ಕರ್ನಾಟಕಕ್ಕೆ ಡಾ.ರಾಜ್ ಕೊಡುಗೆ ಏನೇನೂ ಇಲ್ಲ'

  By Shami
  |
  ರಾಜ್ ಕುಮಾರ್ ಸ್ವಾತಂತ್ರ್ಯ ಹೋರಾಟಗಾರರಲ್ಲ, ಕರ್ನಾಟಕಕ್ಕೆ ಅವರ ಕೊಡುಗೆ ಏನೂ ಅಲ್ಲ ಎಂದು ವಿವಾದದ ಕಿಡಿಯೆಬ್ಬಿಸಿದ್ದ ಮುಕುಂದ್ ರಾಜ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಈ ಬಾರಿ 'ಚಾಂದ್ರಮಾನ' ಎಂಬ ಪುಸ್ತಕದಲ್ಲಿ ವಿಷ್ಣು ಅವರ ಕೆಟ್ಟ ನಟನೆಯಿಂದಾಗಿ ಅವರು ಅಭಿನಯಿಸಿದ್ದ 'ಮಾತಾಡ್ ಮಾತಾಡು ಮಲ್ಲಿಗೆ' ಸೋತಿತ್ತು ಎಂದು ಹೇಳಿ ವಿಷ್ಣು ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

  ಕನ್ನಡ ಚಿತ್ರರಸಿಕರ ಆರಾಧ್ಯ ದೈವ, ವರನಟ, ನಟಸಾರ್ವಭೌಮ, ಗಾನಗಂಧರ್ವ ಡಾ.ರಾಜ್ ಕುಮಾರ್ ಅವರ ಬಗ್ಗೆ ಇದೇ ಮೊದಲ ಬಾರಿಗೆ ತೀವ್ರ ಆಕ್ಷೇಪಾರ್ಹ ಮಾತುಗಳು ಕೇಳಿಬಂದಿವೆ. ಅಣ್ಣಾವ್ರ ಸಾಧನೆ, ರಾಜ್ಯಕ್ಕೆ ಅವರ ಕೊಡುಗೆ ಏನು ಎಂದೇ ನೇರವಾಗಿ ಪ್ರಶ್ನಿಸಿದ್ದಾರೆ ಶಿಕ್ಷಕ ಹಾಗೂ ಕವಿ ಮುಕುಂದರಾಜ್.

  "ರಾಜ್ ಕುಮಾರ್ ಬಗ್ಗೆ ಬಹಳಷ್ಟು ಮಂದಿ ಮಾತನಾಡುತ್ತಾರೆ, ಆದರೆ ಅವರು 'ಸ್ವಾಮಿ ರಾಘವೇಂದ್ರ' ಹಾಗೂ 'ಅಯ್ಯಪ್ಪ' ಚಿತ್ರಗಳ ಮೂಲಕ ಜನರ ಮನಸ್ಸಿನಲ್ಲಿ ಮೌಢ್ಯತೆಯನ್ನು ತುಂಬಿದ್ದಾರೆ. ಒಂದು ವೇಳೆ ರಾಜ್ ಕುಮಾರ್ ಅವರು ಈ ರೀತಿಯ ಚಿತ್ರಗಳಲ್ಲಿ ಅಭಿನಯಿಸದೇ ಇದ್ದಿದ್ದರೆ ಚಿತ್ರರಸಿಕರು ಕುರುಡು ನಂಬಿಕೆ ಬೆಳೆಸಿಕೊಳ್ಳುತ್ತಿರಲಿಲ್ಲ ಎಂದಿದ್ದಾರೆ.

  ಬಳಿಕ ಅವರ ಮಾತು ರಾಜ್ಯ ಸರ್ಕಾರದ ಕಡೆಗೆ ಹೊರಳಿ, ಕಂಠೀರವ ಸ್ಟುಡಿಯೋದಲ್ಲಿ ರಾಜ್ ಕುಮಾರ್ ಸ್ಮಾರಕ ನಿರ್ಮಾಣಕ್ಕೆ ಸ್ಥಳಾವಕಾಶ ಕೊಟ್ಟಿದ್ದನ್ನು ತೀವ್ರವಾಗಿ ಖಂಡಿಸಿದರು. ಇದು ಸಾಲದು ಎಂಬಂತೆ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಸ್ಥಳಾವಕಾಶ ಕೊಡಲು ಸರ್ಕಾರ ಮುಂದಾಗಿರುವುದು ಮತ್ತೊಂದು ಅವಿವೇಕದ ಕೆಲಸ ಎಂದರು. ಬೆಂಗಳೂರಿನಲ್ಲಿ ನಡೆದ ಚಲನಚಿತ್ರ ಮತ್ತು ಸಾಮಾಜಿಕ ಹೊಣೆಗಾರಿಕೆ ಸಂಕಿರಣದಲ್ಲಿ ಮುಕುಂದ ರಾಜ್ ಆಡಿದ ಮಾತುಗಳನ್ನು ಉಲ್ಲೇಖಿಸಿ ಆಂಗ್ಲ ದೈನಿಕ ಡಿಎನ್ ಎ ವರದಿ ಪ್ರಕಟಿಸಿದೆ

  "ರಾಜ್ ಕುಮಾರ್ ಆಗಲಿ ವಿಷ್ಣುವರ್ಧನ್ ಆಗಲಿ ಸ್ವಾತಂತ್ರ್ಯ ಹೋರಾಟಗಾರರಲ್ಲ. ಕರ್ನಾಟಕಕ್ಕೆ ಇವರಿಬ್ಬರ ಕೊಡುಗೆ ಏನೇನೂ ಇಲ್ಲ" ಎಂದು ಕಿಡಿಕಾರಿದ್ದಾರೆ. ಬಳಿಕ ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಅವರನ್ನೂ ತರಾಟೆಗೆ ತೆಗೆದುಕೊಂಡರು.

  ಚಲನಚಿತ್ರ ಅಕಾಡೆಮಿಗೆ ಸರ್ಕಾರ ಕೋಟಿಗಟ್ಟಲೆ ಹಣ ಬಿಡುಗಡೆ ಮಾಡುತ್ತಿದೆ. ಹಾಗೆಯೇ ಕನ್ನಡ ಚಿತ್ರಗಳಿಗೂ ಸಬ್ಸಿಡಿ ರೂಪದಲ್ಲಿ ಲಕ್ಷಾಂತರ ಹಣ ನೀಡಲಾಗುತ್ತಿದೆ. ಆದರೆ ಕನ್ನಡ ಭಾಷೆ ಹಾಗೂ ಸಾಹಿತಿಗಳನ್ನು ಮಾತ್ರ ಕಡೆಗಣಿಸಲಾಗಿದೆ. ಕಳೆದ ವರ್ಷ ಬೆಳಗಾವಿಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ಸಾಹಿತಿಗಳಿಗಾದ ಅವಮಾನ ಅಷ್ಟಿಷ್ಟಲ್ಲ.

  ಸಮ್ಮೇಳನದಲ್ಲಿ ಸಿನೆಮಾ ತಾರೆಗಳಿಗೆ ಹವಾ ನಿಯಂತ್ರಿತ ಕೊಠಡಿಗಳನ್ನು ಒದಗಿಸಲಾಗಿತ್ತು. ಆದರೆ ಸಾಹಿತಿಗಳಿಗೆ ಸಾಮಾನ್ಯ ಕೊಠಡಿಗಳನ್ನು ನೀಡಲಾಗಿತ್ತು. ಸಿನೆಮಾ ತಾರೆಗಳು ಉಳಿದುಕೊಂಡಿದ್ದ ಕೊಠಡಿಗಳ ಬಳಿ ಬಳಹಷ್ಟು ಖಾಲಿ ವಿಸ್ಕಿ ಬಾಟಲಿಗಳು ಪತ್ತೆಯಾಗಿದ್ದವು. ಸರ್ಕಾರ ಅವರಿಗೆ ಮದ್ಯವನ್ನೂ ಸರಬರಾಜು ಮಾಡಿ ಕೃತಾರ್ಥವಾಗಿದೆ ಎಂದು ತಮ್ಮ ಮಾತಿನ ಚಾಟಿ ಬೀಸಿ ಸುಮ್ಮನಾಗಿದ್ದಾರೆ.

  ಮುಕುಂದರಾಜ್ ಅವರ ಈ ಖಾರದ ಪ್ರತಿಕ್ರಿಯೆಗೆ ಪತ್ರಕರ್ತ ಅಗ್ನಿ ಶ್ರೀಧರ್ ಪ್ರತಿಕ್ರಿಯಿಸುತ್ತಾ, "ಮುಕುಂದರಾಜ್ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಸ್ವತಂತ್ರರು. ಆದರೆ ರಾಜ್ ಕುಮಾರ್ ಅವರನ್ನು ಟೀಕಿಸಿರುವುದು ನ್ಯಾಯಸಮ್ಮತವಲ್ಲ" ಎಂದಿದ್ದಾರೆ.

  ಈ ಬಗ್ಗೆ ರಾಘವೇಂದ್ರ ರಾಜ್ ಕುಮಾರ್ ಪ್ರತಿಕ್ರಿಯಿಸುತ್ತಾ, "ರಾಜ್ ಕುಮಾರ್ ಅವರು ಸಾರ್ವಜನಿಕರ ಸ್ವತ್ತು ಇದ್ದಂತೆ. ಕನ್ನಡ ಚಿತ್ರರಂಗಕ್ಕೆ ಅಪ್ಪಾಜಿ ಅವರ ಕೊಡುಗೆ ಏನು ಎಂಬುದು ಗೊತ್ತಿಲ್ಲದೆ ಅವರು ಏನೇನೋ ಮಾತನಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿ ನನ್ನ ಅಮೂಲ್ಯ ಸಮಯ ಹಾಳು ಮಾಡಿಕೊಳ್ಳುವುದು ನನಗಿಷ್ಟವಿಲ್ಲ" ಎಂದಿದ್ದಾರೆ.

  ಕನ್ನಡ ಚಿತ್ರರಂಗಕ್ಕೆ ಅವರ ಅಮೂಲ್ಯ ಕೊಡುಗೆಯನ್ನು ಗಮನಿಸಿಯೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಕೊಟ್ಟಿದ್ದು. ಅವರು ಗೋಕಾಕ್ ಚಳವಳಿಗೆ ಧುಮುಕಿ ಕನ್ನಡಕ್ಕಾಗಿ ಕರ್ನಾಟಕಕ್ಕಾಗಿ ಮಾಡಿದ ಹೊರಾಟ ಇನ್ನೂ ಸಪ್ತಕೋಟಿ ಕನ್ನಡಿಗರು ಮರೆತಿಲ್ಲ. ಇದೆಲ್ಲವನ್ನೂ ಮುಕುಂದರಾಜ್ ಮರೆತಂತಿದೆ. ಅವರಿಗೆ ರಾಜ್ ಅವರ ಕೊಡುಗೆ ಏನು ಎಂಬುದರ ಬಗ್ಗೆ ಕಿಂಚಿತ್ತೂ ಅರಿವಿಲ್ಲ ಎಂದಿದ್ದಾರೆ.

  ಹಾಗೆಯೇ ಟಿ ಎಸ್ ನಾಗಾಭರಣ, ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಅವರು ಮುಕುಂದರಾಜ್ ಅವರ ಮಾತಿಗೆ ಕಿಡಿಕಾರಿದ್ದಾರೆ. (ಮೂಲ: ಡಿಎನ್ಎ)

  English summary
  Teacher-cum-poet Mukunda Raj stirs the hornet nest by saying the contribution of Kannada matinee idol Dr. Rajkumar and Dr Vishnuvardhan to Kannada and Karnataka is nothing. The statement by Mukundraj has come under sharp criticisms by Rajkumar family and Industry reps.
  Thursday, September 26, 2013, 19:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X