»   » ನಗ್ಮಾ ಸಂದರ್ಶನ :

ನಗ್ಮಾ ಸಂದರ್ಶನ :

Posted By: Staff
Subscribe to Filmibeat Kannada

* ಎಂ.ವಿ. ಮೆನನ್‌

ಚೆನ್ನೈ : ಗಂಗೂಲಿ ಬ್ಯಾಟನ್ನು ಜಾರಿಸುತ್ತಿರುವ ಹೊಸ ಗ್ರಿಪ್ಪು ಅನ್ನಲಾಗುತ್ತಿರುವ ನಟಿ ನಗ್ಮಾ ಮೊನ್ನೆ ಜಿಲ್ಲಾಧಿಕಾರಿ ಸೆಟ್ಟಿನಲ್ಲಿ ತುಟಿ ಪಿಟಿಕ್‌ ಅನ್ನಲಿಲ್ಲ . ಸ್ವಲ್ಪ ಕಾಲ ಕೈಲಿ ಸಣ್ಣ ಸಿನಿಮಾ ಕೆಲಸವೂ ಇಲ್ಲದೆ ಸುದ್ದಿಯಿಂದ ದೂರಾಗಿದ್ದ ಈಕೆ ಈಗ ಸೆನ್ಸೇಷನ್‌. ಜೊತೆಗೆ ಕನ್ನಡ, ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ಕೆಲ ಅವಕಾಶಗಳೂ ಸಿಕ್ಕಿರುವುದು ಸುದ್ದಿಗಾರರ ಕೈಗೆ ಸುಲಭವಾಗಿ ಈಕೆ ಎಟುಕುವಂತಾಗಿದೆ. ಬೆಂಗಳೂರಲ್ಲಿ ಮುಗುಮ್ಮಾಗಿದ್ದ ನಗ್ಮಾ ಚೆನ್ನೈನಲ್ಲಿ ಮನಬಿಚ್ಚಿ ಮಾತಾಡಿದ್ದಾರೆ. ಗಂಗೂಲಿ- ನಾನು ಜಸ್ಟ್‌ ಫ್ರೆಂಡ್ಸ್‌ ಅಂತ ಹೇಳಿದ್ದಾರೆ...

ಶರತ್‌ ಕುಮಾರ್‌ ಆಯಿತು, ದಾವೂದ್‌ ಇಬ್ರಾಹಿಂ ಆಯಿತು. ಈಗ ಗಂಗೂಲಿ- ನಗ್ಮಾ ಗಾಳಿಯಲ್ಲಿ ತೇಲುತ್ತಿದ್ದಾರೆ. ಇದಕ್ಕೆ ನೀವೇನಂತೀರಿ ?
ಮಾಧ್ಯಮಗಳು ಇಷ್ಟಿದ್ದರೆ ಅಷ್ಟು ಮಾಡಿ ಬರೆಯುತ್ತವೆ. ಕೆಲವೊಮ್ಮೆ ಇಲ್ಲ ಸಲ್ಲದ್ದನ್ನೂ ಸೇರಿಸಿ ತಮ್ಮ ಪ್ರೊಡಕ್ಟ್‌ ಸೇಲ್‌ ಮಾಡಿಕೊಳ್ಳಲು ನಮ್ಮನ್ನ ಉಪಯೋಗಿಸಿಕೊಳ್ಳುತ್ತವೆ. ಇದಕ್ಕೆ ನಾನೇನು ಮಾಡಲಿ ?

ಅಂದರೆ ಗಂಗೂಲಿ ಜೊತೆ ನಿಮ್ಮ ಒಡನಾಟ ಸುಳ್ಳೆ ?
ನಾವು ಜನರ ಕಣ್ಣಿಗೆ ಬಿದ್ದದ್ದು ದೇವಸ್ಥಾನದಲ್ಲಿ ; ಹೊಟೇಲಿನ ರೂಮಿನಲ್ಲಲ್ಲ. ಇದನ್ನೇ ಮಾಧ್ಯಮಗಳು ಬಣ್ಣ ಕಟ್ಟಿ ಬೇಕಾದಂತೆ ಹುಯಿಲೆಬ್ಬಿಸಿ ಬರೆದವು. ಒಂದು ಇಂಗ್ಲಿಷ್‌ ಪತ್ರಿಕೆಯಂತೂ ನನ್ನ ಮತ್ತು ಗಂಗೂಲಿ ಸುದ್ದಿಯನ್ನು 'ವಿಕೆಡ್‌ ಮೇಡನ್‌" ಅನ್ನೋ ಶೀರ್ಷಿಕೆ ಕೊಟ್ಟು ಬರೆಯಿತು. ಇದೇ ಮೊದಲೇನಲ್ಲ. ಹಿಂದೆಯೂ ಒಮ್ಮೆ ನಮ್ಮ ಬಗ್ಗೆ ಇಂಥಾ ಇಲ್ಲ ಸಲ್ಲದ್ದು ಕೇಳಿಬಂದಿತ್ತು . ನಾನು- ಗಂಗೂಲಿ ಒಳ್ಳೆ ಗೆಳೆಯರು ಅನ್ನೋದಷ್ಟೆ ಸತ್ಯ.

ನಿಮ್ಮ ತಂಗಿ ಜ್ಯೋತಿಕಾ ಯಶಸ್ಸೇ ನಿಮಗೆ ಮುಳುವಾಯಿತು ಅಂತಾರಲ್ಲ. ಅದಕ್ಕೆ ನೀವು ಕರುಬುತ್ತಿರುವಿರಿ ಎಂಬ ಆರೋಪವೂ ಕೇಳಿ ಬರುತ್ತಿದೆ. ನೀವೇನಂತೀರಿ?
ನಾನು ಸಿನಿಮಾ ಜಗತ್ತಿನಲ್ಲಿ ಎತ್ತರಕ್ಕೆ ಏರಿದ್ದ ಕಾಲವೂ ಒಂದಿತ್ತು ಅನ್ನೋದನ್ನ, ಬರೆಯುವವರು ಮರೆಯಕೂಡದು. ತಂಗಿ ಜ್ಯೋತಿಕಾ ಯಶಸ್ಸಿಗೆ ನಮ್ಮ ಮನೆಯವರೆಲ್ಲಾ ಖುಷಿ ಪಟ್ಟಿದ್ದೇವೆ. ವೈಯಕ್ತಿಕವಾಗಿ ನಾನೂ ಅವಳ ಮೆಚ್ಚಿದ್ದೇನೆ. ಈಗ ಆಕೆ ಒಂದು ಚಿತ್ರ ನಿರ್ಮಾಣಕ್ಕೂ ಕೈಹಾಕುವ ಯೋಚನೆಯಲ್ಲಿದ್ದಾಳೆ. ಅದರ ಸ್ಕಿೃಪ್ಟ್‌ ಬಗ್ಗೆ ನಾನು ತಲೆಕೆಡಿಸಿಕೊಳ್ಳುತ್ತಿದ್ದೇನೆ. ಹೀಗಿರುವಾಗ ಕರುಬುವ ಮಾತೆಲ್ಲಿ ?

ಈಗ ನೀವು ಎಷ್ಟರ ಮಟ್ಟಿಗೆ ಬ್ಯುಸಿ?
ಕನ್ನಡದಲ್ಲಿ ಜಿಲ್ಲಾಧಿಕಾರಿಯಲ್ಲಿ ಮಾಡ್ತಿದೀನಿ. ಸಿಟಿಜನ್‌ ಅನ್ನೋ ತಮಿಳು ಚಿತ್ರದಲ್ಲಿ ಸಿಬಿಐ ಪಾತ್ರ ನಿರ್ವಹಿಸಿದ್ದೇನೆ. ಒಂದೆರಡು ತೆಲುಗು ಚಿತ್ರಗಳಲ್ಲೂ ಕೆಲಸ ಮಾಡ್ತಿದೀನಿ. ನನಗೆ ಕಂ ಬ್ಯಾಕ್‌ ಆದ ದೀನಾ ಚಿತ್ರದಲ್ಲಿ ಒಂದೇ ಒಂದು ಹಾಡಲ್ಲಿ ಕಾಣಿಸಿಕೊಂಡೆ. ಚಿತ್ರ ಸೂಪರ್‌ ಹಿಟ್‌ ಆಗಿದೆ.

ಸಿನಿಮಾ ಬಿಟ್ಟು ನಿಮ್ಮ ಗಮನ ಈಗ ಎತ್ತ ?
ಚೆನ್ನೈನಲ್ಲಿ ಈ ವರ್ಷದ ಕೊನೆ ಹೊತ್ತಿಗೆ ಶಾಲೆಯಾಂದನ್ನು ಕಟ್ಟಬೇಕು ಅಂತಿದೀನಿ. ಆರ್ಟ್‌ ಆಫ್‌ ಲಿವಿಂಗ್‌ ಅನ್ನುವ ಧ್ಯಾನಕ್ಕೆ ಈಗ ಹೆಚ್ಚು ಒತ್ತು ಕೊಡುತ್ತಿದ್ದೇನೆ. ಬಾಲಿವುಡ್‌ ನಟ ಸಂಜಯ್‌ ದತ್‌ ಪತ್ನಿ ರಿಯಾ ಪಿಳ್ಳೈ ನನಗೆ ಈ ಧ್ಯಾನ ಪರಿಚಯಿಸಿದರು. ಈಗ ನಾನು ಸಾಕಷ್ಟು ಖುಷಿಯಾಗಿರುತ್ತೇನೆ. ನನ್ನನ್ನು ನಾನೇ ಶೋಧಿಸಿಕೊಳ್ಳುತ್ತೇನೆ. ಅಂಥಾ ಘಳಿಗೆಯಲ್ಲಿ ನಾನು ಪರಿಪೂರ್ಣ ಎನಿಸುತ್ತದೆ.

ನಿಮ್ಮ ಕೊನೆ ಮಾತು ?
ಸ್ಟಾರ್‌ಡೋಮ್‌ಗೆ ಈಗಾಗಲೇ ದಂಡ ತೆತ್ತಿದ್ದೇನೆ.

ಈಗ ಸಾಲದ್ದಕ್ಕೆ ಈ ಇಲ್ಲಸಲ್ಲದ ವಿವಾದಗಳು. ಸಿಕ್ಕಾಪಟ್ಟೆ ಬೇಜಾರಾಗುತ್ತೆ...

ಈಚೆಗೆ ಮಾತಿಗೇ ಸಿಗದ ನಗ್ಮಾ ಇಷ್ಟು ಮಾತಾಡಿದ್ದೇ ಹೆಚ್ಚು . ಮಾತು ಮುಗಿಸೋ ಹೊತ್ತಿಗೆ ಈಗ ಸ್ಲಿಮ್ಮೂ ಆಗಿರುವ ಅವರ ಬಿಳಿಚಿದ ಮುಖ ಯಾವುದೋ ದೊಡ್ಡ ಬಂಡೆ ತಲೆ ಮೇಲೆ ಬಿದ್ದ ಭಾವವನ್ನು ಬಿಂಬಿಸುತ್ತಿತ್ತು.

Read more about: ನಗ್ಮಾ, nagma
English summary
myself and ganguly are just good friends, says Nagma
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada