ಶಕಲಕ ಬೇಬಿ ಶಕೀರಾ ಬೆರಳಿನುಂಗುರ ಕದ್ದ ಅಭಿಮಾನಿ
ಕೊಲಂಬಿಯಾ ಪಾಪ್ ತಾರೆ ಶಕಲಕ ಬೇಬಿ ಶಕೀರಾ ಶುಕ್ರವಾರ ಯಾರ ಮುಖ ನೋಡಿದ್ದರೋ ಏನೋ ಗೊತ್ತಿಲ್ಲ. ಪಾಪ ಆಕೆಯ ಪ್ರಿಯಕರ ಕೊಟ್ಟಿದ್ದ ಉಂಗುರವನ್ನು ಆಕೆ ಕಳೆದುಕೊಂಡಿದ್ದಾಳೆ. ಶಕೀರಾಗೆ ಶೇಕ್ ಹ್ಯಾಂಡ್ ಕೊಡುವ ನೆಪದಲ್ಲಿ ಭೂಪನೊಬ್ಬ ಆಕೆಯ ಕೈಬೆರಳಿನ ಉಂಗುರ ಎಗರಿಸಿದ್ದಾನೆ. ಮೆಕ್ಸಿಕೋದಲ್ಲಿ ಆಕೆ ಸಂಗೀತ ಕಚೇರಿ ನಡೆಸುವುದಕ್ಕೂ ಮುನ್ನ ಈ ಘಟನೆ ನಡೆದಿದೆ.
ತನ್ನ ಅಭಿಮಾನಿಗಳ ಕಡೆಗೆ ಕೈಬೀಸುತ್ತಾ ಶಕೀರಾ ಮುನ್ನಡೆಯುತ್ತಿರಬೇಕಾದರೆ ಅಭಿಮಾನಿ ಎಂದು ಹೇಳಿದ ಒಬ್ಬ ಆಕೆಯ ಕೈಕುಲುಕಿದ. ಸ್ವಲ್ಪ ಸಮಯದ ಬಳಿಕ ಆಕೆ ಕೈ ನೋಡಿಕೊಂಡರೆ ಉಂಗುರ ಮಂಗಮಾಯವಾಗಿತ್ತು. ಕಂಗಾಲಾದ ಶಕೀರಾ ಕಕ್ಕಾಬಿಕ್ಕಿಯಾಗಿ ನೋಡುತ್ತಿರುವ ವಿಡಿಯೋ ಕ್ಲಿಪ್ಪಿಂಗ್‌ಗಳು ಈಗ ಜನಪ್ರಿಯ ಸಾಮಾಜಿಕ ತಾಣ ಯೂ ಟ್ಯೂಬ್ ಸೇರಿಕೊಂಡಿವೆ.
ಶಕೀರಾ ಅವರನ್ನು 34ರ ಹರೆಯದ ಯುವಕನೊಬ್ಬ ಹಿಂಬಾಲಿಸುತ್ತಿರುವುದು, ಪಕ್ಕದಲ್ಲೇ ಆಕೆಯ ಅಂಗರಕ್ಷಕ ಇರುವುದು. ಆತನಿಗೇ ಗೊತ್ತಿಲ್ಲದಂತೆ ಆಕೆಯ ಬೆರಳಿನುಂಗುರ ಮಂಗಮಾಯವಾಗಿರುವ ದೃಶ್ಯಗಳು ಗಮನಸೆಳೆಯುತ್ತಿವೆ. ಬಳಿಕ ಸಾವರಿಸಿಕೊಂಡ ಶಕೀರಾ ತಮ್ಮ ಸಂಗೀತ ಕಚೇರಿಯನ್ನು ನಡೆಸಿಕೊಟ್ಟಿದ್ದಾರೆ.
ಶಕೀರಾ ಉಂಗುರ ಬೆಲೆ ಎಷ್ಟು? ಅದು ವಜ್ರ ಉಂಗುರವೇ? ಬಂಗಾರದ್ದೇ? ಪ್ಲಾಟಿನಂ ಅಥವಾ ಬೆಳ್ಳಿಯದೇ ಅಥವಾ ಫ್ಯಾನ್ಸಿಯದೆ ಎಂಬುದು ತಿಳಿದುಬಂದಿಲ್ಲ. ಚಿನ್ನದ ಉಂಗುರವಾದರಂತೂ ಬೆಲೆ ಗ್ರಾಂಗೆ ರು.2000 ದಾಟಿದೆ. ಅಂದಹಾಗೆ ಈ ಉಂಗುರವನ್ನು ಶಕೀರಾ ಗೆಳೆಯ ಫುಟ್‌ಬಾಲ್ ಆಟಗಾರ ಗೆರಾರ್ಡ್ ಪಿಕ್ಯು ಉಡುಗೊರೆಯಾಗಿ ನೀಡಿದ್ದನಂತೆ.


Click it and Unblock the Notifications











