»   »  ನಟಿ ಸಾಂಡ್ರಾ ಬುಲಕ್ ಒಡಲಾಳದ ಕಥೆಗಳು

ನಟಿ ಸಾಂಡ್ರಾ ಬುಲಕ್ ಒಡಲಾಳದ ಕಥೆಗಳು

Posted By:
Subscribe to Filmibeat Kannada

ಇನ್ನೊಬ್ಬರ ಖಾಸಗಿ ಬದುಕಿನಲ್ಲಿ ಮೂಗು ತೂರಿಸಿದರೆ ಅವರಿಗೆ ಎಷ್ಟು ಮುಜಗರ ಉಂಟಾಗುತ್ತದೆ ಎನ್ನುವುದನ್ನು ಈ ಜನ್ಮದಲ್ಲಿ ಅರ್ಥವೇ ಮಾಡಿಕೊಳ್ಳದ ಜನ ಇಲ್ಲಿ ಅಲ್ಲಿ ಎಲ್ಲೆಲ್ಲೂ ಇರುತ್ತಾರೆ. ಎಡಪಕ್ಕದ ಮನೆಯ ಆಗುಹೋಗುಗಳ ಎಲೆಅಡಿಕೆ ಜಗಿಯುವ ಹವ್ಯಾಸ ಇನ್ನಾದರೂ ಬಿಡಿ ಎಂದು ನೀವು ಬಲಪಕ್ಕದ ಮನೆಯವರಿಗೆ ಹೇಳಲೇಬೇಕಾದ ಕಾಲ ಇದೀಗ ನಿಮ್ಮ ಮನೆ ಬಾಗಿಲ ಬಳಿಬಂದು ನಿಂತಿದೆ. ಪರಿಸ್ಥಿತಿ ಹಾಗಿದೆ. "ನಿಮ್ಮ ಗಂಡ ಎಲ್ಲಿ ಕೆಲಸ ಮಾಡುತ್ತಾರೆ?" "ಎಷ್ಟು ಹೊತ್ತಿಗೆ ಮನೆಗೆ ಬರ್ತಾರೆ?" "ನೀವು ಹಾಕಿರುವ ಕಾಸಿನ ಸರ ಎಷ್ಟು ತೊಲ ಇದೆ?" "ನಿಮ್ಮ ಮನೆಗೆ ಹೋಗೋಬರೋರು ತುಂಬಾ ಜಾಸ್ತಿ ಅಲ್ವೇನ್ರಿ?".. ಇದಕ್ಕಿಂತ ಕೆಟ್ಟದಾಗಿರುವ ಥರಥರಾವರಿ ಪ್ರಶ್ನೆಗಳನ್ನು ಕೇಳದಿದ್ದರೆ ಅನೇಕರಿಗೆ ತಿಂದ ಅನ್ನ ಜೀರ್ಣವಾಗುವುದಿಲ್ಲ. ಜನ ಯಾಕೆ ಹೀಗೆ ಪ್ರಶ್ನೆಗಳನ್ನು ಕೇಳ್ತಾರೆ?

ಮೊನ್ನೆ ಮತ್ತೆ ಹೀಗಾಯಿತು. ತಾನಾಯಿತು ತನ್ನ ಪಾಡಾಯಿತು ಎಂದು ಹಾಯಾಗಿರುವ ಹಾಲಿವುಡ್ಡಿನ ಆಗರ್ಭ ಶ್ರೀಮಂತ ಸಿನಿಮಾ ನಟಿಯನ್ನು ಜನ ನೆಮ್ಮದಿಯಿಂದ ಇರುವುದಕ್ಕೆ ಬಿಡುತ್ತಿಲ್ಲ. "ನಿನಗೆ ಮಕ್ಕಳು ಯಾಕಾಗಿಲ್ಲ? ನಿನಗಿನ್ನೂ ಮಕ್ಕಳು ಯಾಕೆ ಆಗಿಲ್ಲ" ಎಂದು ಜನರು ಪದೇಪದೇ ಪ್ರಶ್ನಿಸುವುದನ್ನು ಕೇಳಿಕೇಳಿಕೇಳಿ ನನಗೆ ತಲೆ ಚಿಟ್ಟು ಹಿಡಿದು ಹೋಗಿದೆ ಎಂದು ಬೇಸರ ಪಟ್ಟುಕೊಂಡಿದ್ದಾರೆ ನಟಿ ಸಾಂಡ್ರಾ ಬುಲಕ್. ಇಂಥ ಮುಜಗರದ ಪ್ರಶ್ನೆಯನ್ನು ಕೇಳಿಸಿಕೊಳ್ಳುವ ಅನೇಕ ಮಹಿಳೆಯರು ನಮ್ಮ ಜತೆಗೇನೇ ಇದ್ದಾರೆ. ಆದರೆ, ಸಾಂಡ್ರಾ ಸುಪ್ರಸಿದ್ಧ ನಟಿ ಆಗಿರುವುದರಿಂದ, ಪಾಪ ಆಕೆ ಅನುಭವಿಸುವ ಮಾನಸಿಕ ಹಿಂಸೆಯನ್ನು ಮಾಧ್ಯಮದವರು ಬೆರಳಚ್ಚು ಮಾಡುತ್ತಾರೆ. ಕಡೆಯಪಕ್ಷ ಆಕೆಗೆ ಆಗುವ ಕಿರಿಕಿರಿ ಜನಸಾಮಾನ್ಯ ಹೆಣ್ಣುಮಕ್ಕಳಿಗೂ ಆಗದಿರಲಿ ಎನ್ನುವುದೇ ಮಾಧ್ಯಮಗಳ ಉದ್ದೇಶ ಇದ್ದರೂ ಇರಬಹುದು.

ಸಾಂಡ್ರಾ ಬುಲಕ್ ಅಮೆರಿಕಾದ ಹೆಸರಾಂತ ಅಭಿನೇತ್ರಿ. ಯಶಸ್ವಿ ಚಿತ್ರಗಳಾದ ಸ್ಪೀಡ್, ವೈಲ್ ಯು ವರ್ ಸ್ಲೀಪಿಂಗ್ (1990)ಮುಂತಾದ ಚಿತ್ರಗಳಲ್ಲಿ ನೀಡಿದ ಮನೋಜ್ಞ ಅಭಿನಯದಿಂದ ಅವರು ಪ್ರಸಿದ್ಧಿಗೆ ಬಂದದ್ದು. ಆನಂತರ ಹಾಲಿವುಡ್ಡಿನ ಪ್ರಮುಖ ಸಾಲಿನ ಅಭಿನೇತ್ರಿಯರ ಸಾಲಿಗೆ ಸೇರ್ಪಡೆಯಾಗಿ ಮಿನುಗು ತಾರೆಯಾದರು. ಮಿಸ್ ಕೊಜಿನಿಯಾಲಿಟಿ ಮತ್ತು 2005 ಕ್ರಾಶ್ ಆಕೆಗೆ ಮತ್ತಷ್ಟು ಕೀರ್ತಿಯನ್ನು ತಂದುಕೊಟ್ಟಿತು. ಅಷ್ಟೇ ಅಲ್ಲ, 2007ರಲ್ಲಿ ಚಿತ್ರ ಜಗತ್ತಿನ ಅತ್ಯಂತ ಶ್ರೀಮಂತ ನಟಿಯರ ಪಟ್ಟಿಯಲ್ಲಿ 14ನೇ ಸ್ಥಾನಕ್ಕೇರಿದರು. ಒಟ್ಟು ಆಸ್ತಿ 85 ಮಿಲಿಯನ್ ಡಾಲರು!

ಆಕೆಗೆ ಒಂದು ಮದುವೆಯಾಗಿತ್ತು. ಗಂಡ ನಟ ಟೇಟ್ ಡೊನೊವಾನ್ ಅಂತ. ಲವ್ ಪೋರ್ಶನ್ ನಂ9 ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಅವರು ಪರಸ್ಪರ ಆಕರ್ಷಿತರಾಗಿದ್ದರು. ಆದರೆ ಮದುವೆ ಕಂಬವನ್ನು ಅವರು ಸುತ್ತಿದ್ದು ಕೇವಲ ನಾಲಕ್ಕು ವರ್ಷ. ಮದುವೆ ಚೌಕಟ್ಟಿಗೆ ಬರದ ಪ್ರೇಮ ಪ್ರಸಂಗಗಳನ್ನು ಆಕೆ ಎಷ್ಟೋ ಬಾರಿ ಎಷ್ಟೋ ಗಂಡುಗಳ ಜತೆ ಅನುಭಿಸಿದ್ದರು. ಬಂಧಗಳಾಗಿದ್ದವು ಆದರೆ ಅನುಬಂಧ ಕೂಡಿಬರಲಿಲ್ಲ. ಫುಟ್ ಬಾಲ್ ಆಟಗಾರ ಟ್ರಾಯ್ ಅಯ್ ಕ್ಮನ್, ಸಂಗೀತಗಾರ ಬಾಬ್ ಶಿನೆಡರ್ ಅಲ್ಲದೆ ನಟರಾದ ಮ್ಯಾಥ್ಯೂ ಮೆಕೆನೋಗಿ, ರಯಾನ್ ಗಾಸ್ ನಿಂಗ್ ಜತೆ ಆಕೆ ಯಾವುದಾವುದೋ ದಿನಾಂಕಗಳಂದು ಡೇಟಿಂಗ್ ಮಾಡಿದ್ದುಂಟು.

ಅದೆಲ್ಲ ಹಳೆ ಕಥೆಗಳಾದವು. 2005ರಲ್ಲಿ ಮೋಟಾರ್ ಸೈಕಲ್ ನಿರ್ಮಾಪಕ ಜೆಸ್ಸಿ ಜೇಮ್ಸ್ ಜತೆ ಸಾಂಡ್ರಾ ಸಪ್ತಪದಿ ತುಳಿದರು. ಈ ಮಧ್ಯೆ ಆಕೆಗೆ ಮಕ್ಕಳಿರಲಿಲ್ಲ. ಅಂದರೆ, ಮಕ್ಕಳನ್ನು ಪ್ರಜ್ಞಾಪೂರ್ವಕವಾಗಿ ಮಾಡಿಕೊಂಡಿರಲಿಲ್ಲ. ಅದಕ್ಕೂ ಕಾರಣವಿತ್ತು. ನನಗೆ ಮಕ್ಕಳಾದರೆ ಅದು ಗಂಡನಿಂದ ಮಾತ್ರವೇ ಹೊರತು ಅನ್ಯರಿಂದಲ್ಲ ಎನ್ನುವಂಥ ಹೇಳಿಕೆಯನ್ನು ಸಾಂಡ್ರಾ ಯಾವತ್ತೋ ಕೊಟ್ಟಿದ್ದರು. ವಿಚಾರ ಏನೆಂದರೆ, ಜೆಸ್ಸಿಯನ್ನು ಮದುವೆ ಆಗುವ ಮುಂಚೆಯೇ ಮಕ್ಕಳನ್ನು ದತ್ತು ಪಡೆದಿದ್ದರು. ಅವರೀಗ ಮೂರು ದತ್ತು ಮಕ್ಕಳು. ದೇವರ ಮಕ್ಕಳ ಹೆಸರು : ಚಾಂಡ್ಲರ್ (15), ಜೆಸ್ಸಿ ಜ್ಯೂನಿಯರ್(12) ಮತ್ತು ಸನ್ನಿ (5).

ಗಂಡನಿಂದ ಮಾತ್ರ ಮಕ್ಕಳನ್ನು ಪಡೆಯುವೆ ಎಂದು ಆಕೆ ಹೇಳಿದ್ದರಿಂದಲೋ ಏನೋ ಆಕೆಯ ಅಭಿಮಾನಿಗಳು ಸಾಂಡ್ರಾಗೆ ಪದೇಪದೇ ಮಕ್ಕಳಾಗಲಿಲ್ಲವಾ ಮಕ್ಕಳಾಗಲಿಲ್ಲವಾ ಎಂದು ಕೇಳುವುದು ಸಾಮಾನ್ಯವಾಗಿಬಿಟ್ಟಿದೆ. ಗಂಡ ಇದ್ದೂ ಮಕ್ಕಳು ಏಕಾಗಿಲ್ಲ ಎನ್ನುವುದೇ ಅಭಿಮಾನಿಗಳು ಎಸೆಯುತ್ತಿರುವ 85 ಮಿಲಿಯನ್ ಡಾಲರ್ ಪ್ರಶ್ನೆ. ಈ ಪ್ರಶ್ನೆಗಳನ್ನು ಕೇಳಿ ಸಾಂಡ್ರಾಗೆ ರೋಸಿ ಹೋಗಿದೆ. ನನ್ನ ಖಾಸಗಿ ವಿಚಾರ, ಖಾಸಗಿ ನಂಬಿಕೆಗಳನ್ನು ನೀವೇಕೆ ಪ್ರಶ್ನಿಸುವಿರಿ ಎಂದು ಸಾಂಡ್ರಾ ಮತ್ತೊಮ್ಮೆ ತಮ್ಮ ಅಭಿಮಾನಿಗಳಿಗೆ ಮರುಸವಾಲೆಸಿದ್ದಾರೆ. ಗರ್ಭಧರಿಸದೆ ನಾನು ಮೂರು ಮಕ್ಕಳ ತಾಯಿ ಆಗಿದ್ದೇನೆ. ಅದು ಕೊಡುವ ಸಂತೋಷ ನನ್ನ ಒಡಲಾಳಕ್ಕೆ ಮಾತ್ರ ಗೊತ್ತು ಎಂದಿರುವ ಸಾಂಡ್ರಾ ಬುಲಕ್ (44) ಮೊನ್ನೆ ಬ್ರಿಟನ್ನಿನ ಟೈಮ್ಸ್ ಪತ್ರಿಕೆಯೊಂದಿಗೆ ಮಾತನಾಡುತ್ತಾ ಒಟ್ಟಾರೆ ಹೇಳಿದ್ದು "ನನ್ನ ಗರ್ಭಕೋಶದ ಬಗ್ಗೆ ನಿಮಗೇಕೆ ಚಿಂತೆ, ನಾನೇನಾದರೂ ನಿಮ್ಮ ತಂಟೆಗೆ ಬಂದಿದ್ದೇನಾ?"

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada