»   »  ಖ್ಯಾತ ಪಾಪ್ ತಾರೆ ಮೈಕೇಲ್ ಜಾಕ್ಸನ್ ವಿಧಿವಶ

ಖ್ಯಾತ ಪಾಪ್ ತಾರೆ ಮೈಕೇಲ್ ಜಾಕ್ಸನ್ ವಿಧಿವಶ

Subscribe to Filmibeat Kannada

ಲಾಸ್ ಏಂಜಲೀಸ್, ಜೂ. 26 : ಪಾಪ್ ಸಂಗೀತದ ಅದ್ವಿತೀಯ ಸಾಧಕ ಮೈಕೇಲ್ ಜಾಕ್ಸನ್ (50) ಗುರುವಾರ ಮಧ್ಯಾಹ್ನ ಸುಮಾರು 2.26 ಗಂಟೆಗೆ (ಅಮೆರಿಕದ ಸಮಯ) ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಗುರುವಾರ ಅವರು ತೀವ್ರವಾದ ಹೃದಯಾಘಾತಕ್ಕೆ ಒಳಗಾಗಿ ಅರೆಪ್ರಜ್ಞಾವಸ್ಥೆ ಸ್ಥಿತಿಗೆ ತಲುಪಿದ್ದರಿಂದ ಅವರನ್ನು ಲಾಸ್ ಏಂಜಲೀಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಿದರೂ ಅವರು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಜಾಕ್ಸನ್ ಕಚೇರಿ ಮೂಲಗಳು ತಿಳಿಸಿವೆ.

ಕಳೆದ ಕೆಲ ವರ್ಷಗಳಿಂದ ಜಾಕ್ಸನ್ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಆರೋಗ್ಯವನ್ನು ಕುಟುಂಬ ವೈದ್ಯರು ನೋಡಿಕೊಳ್ಳುತ್ತಿದ್ದರು. ಆದರೆ, ಗುರುವಾರ ಇದ್ದಕ್ಕಿದ್ದ ಹಾಗೆ ಮೈಕೆಲ್ ಆರೋಗ್ಯದಲ್ಲಿ ತುಂಬಾ ಏರುಪೇರು ಕಂಡು ಬಂದಿತು. ತಕ್ಷಣ ಲಾಸ್ ಏಂಜಲೀಸ್ ಆಸ್ಪತ್ರೆಗೆ ದಾಖಲಿಸಿ ಸುಮಾರು ಒಂದೇ ಗಂಟೆಗಳ ಕಾಲ ಚಿಕಿತ್ಸೆ ನೀಡಲಾಯಿತು. ಆದರೆ ಅವರ ಉಸಿರಾಟ ಅದಾಗಲೇ ನಿಂತು ಹೋಗಿತ್ತು ಎಂದು ಜಾಕ್ಸನ್ ಸಹೋದರ ಜರ್ಮೈನ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಮೈಕೇಲ್ ಜಾಕ್ಸನ್ ಪಾಪ್ ಜಗತ್ತಿನ ಅನಭಿಷಿಕ್ತ ದೊರೆ. ಅವರ ಮಾದಕ ಧ್ವನಿ ಮತ್ತು ಡ್ಯಾನ್ಸ್ ಮೂಲಕ ಜಗತ್ತಿನಾದ್ಯಂತ ಬಿಲಿಯನ್ ಗಟ್ಟಲೆ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಭಾರತದಲ್ಲಿ ಕೂಡಾ ಜಾಕ್ಸನ್ ಅಭಿಮಾನಿ ಬಳಗ ಕೋಟ್ಯಂತರ ಸಂಖ್ಯೆಯಲ್ಲಿದ್ದಾರೆ. ಅತ್ಯಂತ ಪ್ರತಿಭಾವಂತ ಪಾಪ್ ತಾರೆ ಜಾಕ್ಸನ್ ಅವರಿಗೆ ಈಗ ಕೇವಲ 50 ವರ್ಷ. ಇಷ್ಟು ಬೇಗ ಅವರು ಇಹಲೋಕ ತ್ಯಜಿಸಿದ್ದು, ಅವರ ಅಭಿಮಾನಿಗಳಿಗೆ ತೀವ್ರ ನೋವು ತರುವ ಸಂಗತಿಯಾಗಿದೆ.

ಮೈಕೇಲ್ ಜಾಕ್ಸನ್ ಪಾಪ್ ಜಗತ್ತಿನಲ್ಲಿ ಎಷ್ಟು ಪ್ರಸಿದ್ಧರಾಗಿದ್ದರೂ ಅಷ್ಟೆ ಪ್ರಮಾಣದಲ್ಲಿ ಅವರನ್ನು ವಿವಾದಗಳು ಸುತ್ತಿಕೊಂಡಿದ್ದವು. ಲೈಂಗಿಕ ಕಿರುಕುಳದಂತ ಪ್ರಕರಣಗಳು ಜಾಕ್ಸನ್ ಅವರನ್ನು ಬೆನ್ನುಬಿಡದೆ ಕಾಡಿದವು. ಇತ್ತೀಚೆಗೆ ಮೈಕೇಲ್ ಜಾಕ್ಸನ್ ಅವರು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದರು.

(ಏಜನ್ಸೀಸ್)

ಮೈಕಲ್ ಜಾಕ್ಸನ್ ಜೀವನ ಮತ್ತು ಚಿತ್ರ ಪರಿಚಯ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada