For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಮುಟ್ಟಿ ಬಂದ ಮೇದಿನಿಗೆ ಕನ್ನಡಿಗರ ಮನ ಮುಟ್ಟುವಾಸೆ

  |

  ಬಾಲಿವುಡ್‌ಗೆ ಕೆಲ ಕಲ್ಟ್ ಕ್ಲಾಸಿಕ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶನದ ಸಿನಿಮಾದಲ್ಲಿ ನಟಿಸಿ ಬಂದಿರುವ ಮೇದಿನಿ ಕೆಳಮನೆ ಅಪ್ಪಟ ಕನ್ನಡದ ಯುವತಿ. ಇದೇ ಸಾಗರದ ಹೆಗ್ಗೋಡಿನವರು. ಈಗಾಗಲೇ ಎರಡು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಮೇದಿನಿಗೆ ಹೆಚ್ಚು-ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸುವಾಸೆ. ಆ ಮೂಲಕ ತಮ್ಮ ನೆಲದ ಪ್ರೇಕ್ಷಕರಿಗೆ ಹತ್ತಿರವಾಗುವಾಸೆ.

  ಮೇದಿನಿಗೆ ನಟನೆ ಬಹಳ ಹಳತು. ಎಳವೆಯಲ್ಲೇ, ರಂಗಕರ್ಮಿ, ಅಪ್ಪ ಕೆ.ಜಿ ಕೃಷ್ಣಮೂರ್ತಿ ಅವರ 'ಕಿನ್ನರಮೇಳ' ತಂಡದ ನಾಟಕಗಳಲ್ಲಿ ನಟಿಸುತ್ತಾ ಬೆಳೆದರು. ಶಿಕ್ಷಣದೊಂದಿಗೆ ನಟನೆಯೂ ಜೊತೆ-ಜೊತೆಯಾಗಿ ಸಾಗಿ ಬಂದಿತು. ಸ್ನಾತಕೋತ್ತರ ಪದವಿ ಮುಗಿದ ಕೂಡಲೇ ನಟನೆಯನ್ನು ಶಾಸ್ತ್ರೀಯವಾಗಿ ಅಭ್ಯಸಿಸಲು ಎನ್‌ಎಸ್‌ಡಿ (ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ) ಸೇರಿ ನಟನೆಯನ್ನು ಪ್ರಮುಖ ವಿಷಯವನ್ನಾಗಿ ಆಯ್ಕೆ ಮಾಡಿ ಅಭ್ಯಸಿಸಿದರು.

  2014ರ ವೇಳೆಗೆ ಎನ್‌ಎಸ್‌ಡಿಯಿಂದ ಹೊರಬಂದ ಮೇದಿನಿ ದೆಹಲಿ ಮುಂಬೈಗಳಲ್ಲಿ ವಿವಿಧ ರಂಗತಂಡಗಳೊಂದಿಗೆ ನಟಿಸುತ್ತಾ ತಮ್ಮ ನಟನಾ ಕೌಶಲಕ್ಕೆ ಇನ್ನಷ್ಟು ಸಾಣೆ ಹಿಡಿದುಕೊಂಡರು. ಈ ಅವಧಿಯಲ್ಲಿ ಹಲವು ರಂಗ ಪ್ರಯೋಗಗಳು, ಭಿನ್ನ ಮಾದರಿಯ ನಾಟಕಗಳಲ್ಲಿ ನಟಿಸಿದ್ದಾಗಿ ಮೇದಿನಿ 'ಫಿಲ್ಮಿಬೀಟ್ ಕನ್ನಡ'ದ ಜೊತೆಗಿನ ಮಾತುಕತೆಯಲ್ಲಿ ನೆನಪು ಮಾಡಿಕೊಂಡರು.

  'ನಾನು ಲೇಡೀಸ್' ಮೇದಿನ ನಟಿಸಿದ ಮೊದಲ ಕನ್ನಡ ಸಿನಿಮಾ. ಇಬ್ಬರು ಯುವತಿಯರ ಪ್ರೇಮಕತೆಯುಳ್ಳ ಸಿನಿಮಾ ಇದು. ಕನ್ನಡದ ಮಟ್ಟಿಗೆ 'ನಾನು ಲೇಡೀಸ್' ಮೊದಲ ಲೆಸ್ಬಿಯನ್ ಚಲನಚಿತ್ರ. ಆಗಷ್ಟೆ ಎನ್‌ಎಸ್‌ಡಿ, ದೆಹಲಿ, ಮುಂಬೈ ಪ್ರಯೋಗಾತ್ಮಕ ರಂಗಭೂಮಿಯಿಂದ ಬಂದಿದ್ದ ಮೇದಿನೆಗೆ 'ನಾನು ಲೇಡೀಸ್‌' ಹೇಳುತ್ತಿದ್ದ ಶಕ್ತ ಸಂದೇಶ ಇಷ್ಟವಾಗಿ ಸಿನಿಮಾದಲ್ಲಿ ತೊಡಗಿಕೊಂಡರು. 'ನಾನು ಲೇಡೀಸ್' ಬಹಳ ಒಳ್ಳೆಯ ಕತೆ. ಈವರೆಗೆ ಕನ್ನಡದ ಮಟ್ಟಿಗೆ ಯಾರೂ ಹೇಳದಿದ್ದ ವಿಷಯವೊಂದನ್ನು ಹೇಳಲು ಹೊರಟಿದ್ದೇವೆ. ಸಿನಿಮಾಕ್ಕಾಗಿ ಕೆಲ ತಿಂಗಳ ಕಾಲ ಇಂಟೆನ್ಸ್ ಆದ ಕಾರ್ಯಾಗಾರ ಮಾಡಿಕೊಂಡೆವು. ಪಾತ್ರಕ್ಕಾಗಿ ತಯಾರಾದೆವು. ಸಿನಿಮಾದ ನಿರ್ದೇಶಕಿ ಶೈಲಜಾ ಪಡಿಂದಲ ನನ್ನ ಸಹ ನಟಿ, ಇಬ್ಬರ ನಡುವೆ ಕೆಮಿಸ್ಟ್ರಿ ಮೂಡಲು ಈ ರೀತಿಯ ತರಬೇತಿ ಕಾರ್ಯಾಗಾರಗಳು ಅವಶ್ಯಕವಾಗಿದ್ದವು'' ಎಂದು ತಮ್ಮ ಮೊದಲ ಸಿನಿಮಾವನ್ನು ನೆನಪಿಸಿಕೊಂಡರು ಮೇದಿನಿ.

  ಎಲ್ಲರೂ ನೋಡುವಂತೆ ಸಿನಿಮಾ ಪ್ರೆಸೆಂಟ್ ಮಾಡಲಾಗಿದೆ: ಮೇದಿನಿ

  ಎಲ್ಲರೂ ನೋಡುವಂತೆ ಸಿನಿಮಾ ಪ್ರೆಸೆಂಟ್ ಮಾಡಲಾಗಿದೆ: ಮೇದಿನಿ

  ''ನಾನು ಲೇಡೀಸ್ ಬಹಳ ಬೋಲ್ಡ್ ಆದ ವಿಷಯವನ್ನು ಒಳಗೊಂಡಿದೆಯಾದರೂ ಸಿನಿಮಾದ ಪ್ರೆಸೆಂಟೇಶನ್ ಬಹಳ ಚೆನ್ನಾಗಿದೆ. ನಮ್ಮ ಪಕ್ಕದ ಮನೆಯವರೂ ಸಹ ಕುಳಿತುಕೊಂಡು ನೋಡಬೇಕು, ಸಿನಿಮಾದ ಕತೆಯ ಬಗ್ಗೆ ಚರ್ಚಿಸಬೇಕು ಎಂಬ ಉದ್ದೇಶದಿಂದ ಮಾಡಲಾದ ಸಿನಿಮಾ ಅದು. ಈಗಾಗಲೇ ತಸ್ವೀರ್ ಸೌಥ್ ಏಷ್ಯನ್ ಸಿನಿಮೋತ್ಸವದಲ್ಲಿ 'ನಾನು ಲೇಡೀಸ್' ಸ್ಕ್ರೀನಿಂಗ್ ಆಗಿದೆ. ಇನ್ನಷ್ಟು ಸಿನಿಮೋತ್ಸವಗಳಲ್ಲಿ ಸ್ಕ್ರೀನಿಂಗ್ ಆಗಲಿದೆ. ಆ ನಂತರ ಸಿನಿಮಾವನ್ನು ಚಿತ್ರಮಂದಿರದಲ್ಲಿ ಅಥವಾ ನೇರ ಒಟಿಟಿಗೆ ಬಿಡುಗಡೆ ಮಾಡುವ ಉದ್ದೇಶ ಚಿತ್ರತಂಡಕ್ಕೆ ಇದೆ'' ಎಂದು ಮಾಹಿತಿ ನೀಡಿದರು ಮೇದಿನಿ. ಮೊದಲ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಅವರಿಗಿದೆ.

  ''ಪರ್ಯಾಯ ಸಿನಿಮಾಗಳು ಹೆಚ್ಚು ಜನರನ್ನು ತಲುಪುವಂತಾಗಬೇಕು''

  ''ಪರ್ಯಾಯ ಸಿನಿಮಾಗಳು ಹೆಚ್ಚು ಜನರನ್ನು ತಲುಪುವಂತಾಗಬೇಕು''

  ಮೇದಿನಿ ಆಯ್ದುಕೊಂಡ ಎರಡನೇ ಸಿನಿಮಾ ಯುವ ಪ್ರತಿಭಾವಂತ ನಿರ್ದೇಶಕ ನಟೇಶ್ ಹೆಗಡೆಯದ್ದು. ನಟೇಶ ನಿರ್ದೇಶಿಸಿದ ಮೊದಲ ಫೀಚರ್ ಫಿಲಂ 'ಪೆದ್ರೊ'ದಲ್ಲಿ ಮೇದಿನಿಯವರದ್ದು ಪ್ರಮುಖ ಪಾತ್ರಗಳಲ್ಲೊಂದು. 'ಪೆದ್ರೊ' ಸಿನಿಮಾ ಈಗಾಗಲೇ ಪ್ರತಿಷ್ಠಿತ ಬೂಸಾನ್ ಮತ್ತು ಲಂಡನ್ ಸಿನಿಮೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಚೀನಾದ ಪಿಂಗ್ಯಾವ್ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರಶಸ್ತಿಯನ್ನೂ ಗೆದ್ದಿದೆ. ಇನ್ನಷ್ಟು ಅಂತರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಾಣುವ ಸಾಧ್ಯತೆ ಇದೆ. 'ಪೆದ್ರೊ' ಸಿನಿಮಾದ ವಸ್ತು, ಚಿತ್ರೀಕರಣದ ವಿಧಾನ, ಸಿನಿಮಾ ಮೂಡಿಬಂದಿರುವ ಬಗೆಯ ಬಗ್ಗೆ ಮೇದಿನಿಗೆ ಖುಷಿಯಿದೆ. ''ಪರ್ಯಾಯ ಸಿನಿಮಾಗಳು ಹೆಚ್ಚು-ಹೆಚ್ಚು ಜನರನ್ನು ತಲುಪುವ ಕಾಲ ಬೇಗನೇ ಬರಬೇಕು'' ಎನ್ನುತ್ತಾರೆ ಮೇದಿನಿ.

  ವಿನಯ್ ರಾಜ್‌ಕುಮಾರ್ ನಟನೆಯ ಸಿನಿಮಾದಲ್ಲಿ ನಟನೆ

  ವಿನಯ್ ರಾಜ್‌ಕುಮಾರ್ ನಟನೆಯ ಸಿನಿಮಾದಲ್ಲಿ ನಟನೆ

  ಮೇದಿನಿ ತಮ್ಮ ಮೂರನೇ ಕನ್ನಡ ಸಿನಿಮಾದಲ್ಲಿ ಇದೀಗ ನಟಿಸುತ್ತಿದ್ದಾರೆ. ದೊಡ್ಮನೆ ಹುಡುಗ ವಿನಯ್ ರಾಜ್‌ಕುಮಾರ್ ನಟಿಸುತ್ತಿರುವ 'ಪೆಪೆ' ಸಿನಿಮಾದಲ್ಲಿ ಗಟ್ಟಿ ಪಾತ್ರವೊಂದು ಮೇದಿನಿಯವರನ್ನು ಅರಸಿ ಬಂದಿದೆ. ''ಪೆಪೆ' ಕಮರ್ಷಿಯಲ್ ಅಂಶಗಳಿರುವ ಆದರೆ ಕಂಟೆಂಟ್ ಆಧರಿತ ಸಿನಿಮಾ. ಇದನ್ನು ಕಮರ್ಶಿಯಲ್ ಹಾಗೂ ಆರ್ಟ್‌ ಫಿಲಂನ ಮಧ್ಯದ ಹಾದಿಯ ಸಿನಿಮಾ ಎನ್ನಬಹುದು. ಸಿನಿಮಾದ ಒಂದು ಪಾತ್ರಕ್ಕಾಗಿ ಬಹಳ ಹುಡುಕಾಟ ನಡೆಸಿದ ಚಿತ್ರತಂಡ ಕೊನೆಗೆ ನನ್ನನ್ನು ಕೇಳಿದರು. ಪಾತ್ರ ಬಹಳ ಗಟ್ಟಿಯಾಗಿತ್ತು, 'ಗ್ಲಾಮರಸ್' ರೋಲ್ ಎಂದು ಹೇಳಲಾಗದು ಆದರೆ ನಟನೆಗೆ ಅವಕಾಶವಿರುವ ಪಾತ್ರವಾದ್ದರಿಂದ ಸಿನಿಮಾವನ್ನು ಒಪ್ಪಿ ನಟಿಸುತ್ತಿದ್ದೇನೆ. ಸಿನಿಮಾವನ್ನು ಶ್ರೀಲೇಶ್ ಎಸ್ ನಾಯರ್ ನಿರ್ದೇಶಿಸುತ್ತಿದ್ದಾರೆ'' ಎಂದರು ಮೇದಿನಿ. ತಮ್ಮ ಮೊದಲ ಕಮರ್ಶಿಯಲ್ ಕನ್ನಡ ಸಿನಿಮಾ ಬಗ್ಗೆ, ಸಿನಿಮಾದಲ್ಲಿ ನಿರ್ವಹಿಸಿರುವ ಪಾತ್ರದ ಗಟ್ಟಿತನದ ಬಗ್ಗೆ ಹೆಮ್ಮೆ ಇದೆ ಅವರಿಗೆ.

  ಹಿಂದಿ ಸಿನಿಮಾದಲ್ಲಿ ನಟಿಸಿದ ಅನುಭವ

  ಹಿಂದಿ ಸಿನಿಮಾದಲ್ಲಿ ನಟಿಸಿದ ಅನುಭವ

  ಅನುರಾಗ್ ಕಶ್ಯಪ್ ಸಿನಿಮಾದಲ್ಲಿ ನಟಿಸಿದ ಅನುಭವದ ಬಗ್ಗೆ ಉತ್ಸಾಹದಿಂದ ಮಾತಿಗಿಳಿದ ಮೇದಿನಿ, ''ಆ ಅನುಭವವನ್ನು ನಾನು ಎಂದೂ ಮರೆಯುವುದಿಲ್ಲ. ಅದೊಂದು ಬೇರೆಯದ್ದೇ ಲೋಕ. ಅನುರಾಗ್ ಕಶ್ಯಪ್ ಮತ್ತು ತಂಡ ಬಹಳ ವೃತ್ತಿಪರರು. 'ದೊಬಾರ' ಸಿನಿಮಾದಲ್ಲಿ ನನ್ನದು ಬಹಳ ಪ್ರಮುಖ ಪಾತ್ರವಲ್ಲ ಆದರೆ ಗುರುತಲ್ಲಿ ಉಳಿಯುವಂತಹಾ ಪಾತ್ರ. ಎಲ್ಲ ಪಾತ್ರಗಳಿಗೂ ಪ್ರಾಧಾನ್ಯತೆ ನೀಡುವ ಅವರ ರೀತಿ, ನಟ-ನಟಿಯರಿಗೆ ನೀಡುವ ಪ್ರಾಮುಖ್ಯತೆ ನನಗೆ ಆಶ್ಚರ್ಯ ತಂದಿತು. ಕಲಾವಿದರಿಗೆ ಬೇಕಾದ್ದು ಕೊಟ್ಟು, ನಟನೆ ಪಡೆಯುವ ರೀತಿ ಬಹಳ ವೃತ್ತಿಪರ ಎನಿಸಿತು. ಸಿನಿಮಾದಲ್ಲಿ ನನಗೊಂದು ಸಣ್ಣ ಆಕ್ಷ್ಯನ್ ದೃಶ್ಯವಿದೆ. ಅದಕ್ಕಾಗಿ ನನ್ನನ್ನು ಕೆಲ ದಿನ ಮೊದಲೇ ಸೆಟ್‌ಗೆ ಕರೆಸಿಕೊಂಡು ನುರಿತ ಆಕ್ಷ್ಯನ್ ಪಟುಗಳಿಂದ ತರಬೇತಿ ಕೊಡಿಸಿದರು. ಸೆಟ್‌ನಲ್ಲಿ ಇದ್ದಾಗಲೂ ನಟ-ನಟಿಯರು ಕಂಫರ್ಟ್‌ನಿಂದಿರುವಂತೆ ನೋಡಿಕೊಂಡರು'' ಎಂದು ಬಾಲಿವುಡ್ ಸಿನಿಮಾದ ಅನುಭವ ಹಂಚಿಕೊಂಡರು.

  ಅನುರಾಗ್ ಕಶ್ಯಪ್ ಬಹಳ ಸ್ವೀಟ್ ಮನುಷ್ಯ: ಮೇದಿನಿ

  ಅನುರಾಗ್ ಕಶ್ಯಪ್ ಬಹಳ ಸ್ವೀಟ್ ಮನುಷ್ಯ: ಮೇದಿನಿ

  ''ಅನುರಾಗ್ ಕಶ್ಯಪ್ ಬಗ್ಗೆ ಹೊರಗಿನವರಿಗೆ ಸಾಕಷ್ಟು ತಪ್ಪು ಕಲ್ಪನೆಗಳಿವೆ. ಅನುರಾಗ್ ಕೋಪಿಷ್ಟ, ದೂರ್ವಾಸಮುನಿ ಎಂದುಕೊಂಡಿದ್ದಾರೆ. ಆದರೆ ಅವರು ನಿಜಕ್ಕೂ ಬಹಳ ಸ್ವೀಟ್ ಮನುಷ್ಯ. ಎಲ್ಲರೊಂದಿಗೆ ನಗುತ್ತಾ ಕಾಲ ಕಳೆಯುತ್ತಾರೆ. ನಾವು ಸಹ ಅವರ ಬಗ್ಗೆ ತಮಾಷೆ ಮಾಡಿ ನಗುವ ಮಟ್ಟಿಗೆ ಅವರು ಸಲುಗೆ ನೀಡುತ್ತಾರೆ. ನಾನಂತೂ ಅವರ ಈ ಹಿಂದಿನ ಸಿನಿಮಾಗಳ ಬಗ್ಗೆ ತಮಾಷೆ ಮಾಡುತ್ತಾ, 'ನೀವು ಬಹಳ ಡಾರ್ಕ್ ಎಂದು ಕಾಲೆಳೆದೆ. ಹೊರಗೆ ಹೋಗಿ ನನ್ನ ಬಗ್ಗೆ ಹೀಗೆ ಸುಳ್ಳು ಸುದ್ದಿ ಹರಡಬೇಡ' ಎಂದು ನಗುತ್ತಲೇ ಎಚ್ಚರಿಸಿದರು'' ಎಂದು ಅನುರಾಗ್ ಹಾಸ್ಯಪ್ರಜ್ಞೆಗೆ ಉದಾಹರಣೆ ಕೊಟ್ಟರು ಮೇದಿನಿ.

  ಒಳ್ಳೆಯ ನಿರ್ದೇಶಕರೊಟ್ಟಿಗೆ ಕೆಲಸ ಮಾಡುವ ಹಂಬಲ

  ಒಳ್ಳೆಯ ನಿರ್ದೇಶಕರೊಟ್ಟಿಗೆ ಕೆಲಸ ಮಾಡುವ ಹಂಬಲ

  ಮತ್ತೆ ಕನ್ನಡ ಸಿನಿಮಾಗಳೆಡೆಗೆ ಮಾತುಹರಿಸಿದ ಮೇದಿನಿ, ''ನಟಿಯಾಗಿ ನನಗೆ ಎಲ್ಲ ರೀತಿಯ ಪಾತ್ರಗಳಲ್ಲಿಯೂ ನಟಿಸುವಾಸೆ. ಕನ್ನಡದ ಹೆಸರಾಂತ ನಿರ್ದೇಶಕರುಗಳ ಜೊತೆ ಕೆಲಸ ಮಾಡಬೇಕೆಂಬ ಆಸೆಯಿದೆ. ಸೂರಿ, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಭಟ್ಟರು, ಪವನ್ ಕುಮಾರ್, ಸತ್ಯ ಇನ್ನೂ ಹಲವು ನಿರ್ದೇಶಕರುಗಳು ಬಹಳ ಒಳ್ಳೋಳ್ಳೆ ಸಿನಿಮಾ ಮಾಡುತ್ತಿದ್ದಾರೆ. ಅವರ ಬಳಿ ಕೆಲಸ ಮಾಡುವ ಆಸೆಯಿದೆ. ನಟಿಯಾಗಿ ನನಗೆ ಪ್ರತ್ಯೇಕ ಗುರುತು ಸಂಪಾದಿಸಬೇಕೆನ್ನುವ, ಸಿನಿ ಪ್ರೇಕ್ಷಕರಿಗೆ ಹತ್ತಿರವಾಗಬೇಕೆಂಬ ಹಂಬಲವಿದೆ. ಆರ್ಟ್, ಕಮರ್ಷಿಯಲ್ ಎಂಬ ವರ್ಗೀಕರಣ ವೈಯಕ್ತಿಕವಾಗಿ ನನಗೆ ಇಷ್ಟವಿಲ್ಲ. ಯಾವುದೇ ಮಾದರಿ ಸಿನಿಮಾಗಳಾಗಲಿ ಅದು ಹೆಚ್ಚು-ಹೆಚ್ಚು ನೋಡುಗರನ್ನು ತಲುಪಬೇಕು ಎಂಬುದಷ್ಟೆ ಸಿನಿಮಾಕರ್ಮಿಗಳ ಮೂಲ ಉದ್ದೇಶವಾಗಿರಬೇಕು'' ಎಂದರು.

  ಹೆಚ್ಚು ಸಿನಿಮಾಗಳಲ್ಲಿ ನಟಿಸುವಾಸೆ: ಮೇದಿನಿ

  ಹೆಚ್ಚು ಸಿನಿಮಾಗಳಲ್ಲಿ ನಟಿಸುವಾಸೆ: ಮೇದಿನಿ

  ''ಈಗ ಎರಡು ಸಿನಿಮಾಗಳು ಸರತಿಯಲ್ಲಿವೆ ಆದರೆ ಕೊರೊನಾ ತಂದೊಡ್ಡಿದ ಸಮಸ್ಯೆಗಳಿಂದಾಗಿ ನಿಂತಿವೆ. ಅವು ಶೀಘ್ರದಲ್ಲಿಯೇ ಪ್ರಾರಂಭವಾಗುವ ನಿರೀಕ್ಷೆ ಇದೆ. ಹೆಚ್ಚು-ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಬೇಕು ಎಂಬ ಆಸೆಯಂತೂ ಇದೆ' ಎಂದರು ಮೇದಿನಿ.

  English summary
  Actress Medini Kelamane acted in Hindi movie Dobaara and two Kannada movies also. She talks about her movie experience and future projects.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X