»   » 'ಬಿಗ್ ಬಾಸ್' ರನ್ನರ್ ಸೃಜನ್ ಲೋಕೇಶ್ ಸಂದರ್ಶನ

'ಬಿಗ್ ಬಾಸ್' ರನ್ನರ್ ಸೃಜನ್ ಲೋಕೇಶ್ ಸಂದರ್ಶನ

Posted By: ರಾಜೇಂದ್ರ ಚಿಂತಾಮಣಿ
Subscribe to Filmibeat Kannada

'ಬಿಗ್ ಬಾಸ್' ಮನೆಯಲ್ಲಿ ತಮ್ಮದೇ ಆದಂತಹ ವಿಶಿಷ್ಟ ಹಾಸ್ಯಪ್ರಜ್ಞೆಯಿಂದ ಎಲ್ಲರ ಗಮನಸೆಳೆದ ಸ್ಪರ್ಧಿ ಎಂದರೆ ನಟ ಸೃಜನ್ ಲೋಕೇಶ್. 'ಬಿಗ್ ಬಾಸ್  ಕನ್ನಡ 2' ಟೈಟಲ್ ಅವರಿಗೆ ಒಂದೇ ಒಂದು ಹೆಜ್ಜೆ ಅಂತರದಲ್ಲಿ ಮಿಸ್ ಆಯಿತು. ಎಲ್ಲರೂ ಸೃಜನ್ ಅವರಿಗೇ ಪಟ್ಟ ಗ್ಯಾರಂಟಿ ಎಂದೇ ಭಾವಿಸಿದ್ದರೂ ಫಲಿತಾಂಶ ಉಲ್ಟಾಪಲ್ಟಾ ಆಗಿದ್ದು ಗೊತ್ತಿರುವುದೆ.

'ಬಿಗ್ ಬಾಸ್' ಮನೆಯಿಂದ ಬಂದ ಮೇಲೆ ಸೃಜನ್ ಲೋಕೇಶ್ ಅವರು ಸುಮಾರು 15 ಕೆ.ಜಿ ತೂಕ ಕಳೆದುಕೊಂಡಿದ್ದಾರೆ ಎಂಬುದನ್ನು ಹೊರತುಪಡಿಸಿದರೆ ಅವರು ಗಳಿಸಿಕೊಂಡಿರುವುದು ಮಾತ್ರ ಸಾಕಷ್ಟಿದೆ. ಅದೇನು ಎಂಬುದನ್ನು ಅವರು 'ಫಿಲ್ಮಿಬೀಟ್' ಜೊತೆಗೆ ಹಂಚಿಕೊಂಡಿದ್ದಾರೆ ಓದಿ.

* ಹೇಗಿತ್ತು ಸೃಜನ್ 'ಬಿಗ್ ಬಾಸ್' ಅನುಭವ?
ಸೂಪರ್ ಆಗಿತ್ತು. ಸಂತೋಷ ಇತ್ತು, ಬೇಜಾರಿತ್ತು ಒಂದು ರೀತಿ ಮಿಶ್ರ ಅನುಭವಗಳನ್ನು ಕೊಟ್ಟಿದೆ. ಒಟ್ಟಾರೆಯಾಗಿ ಬಿಗ್ ಬಾಸ್ ಅನುಭವ ಚೆನ್ನಾಗಿಯೇ ಇತ್ತು.

* ಬಿಗ್ ಬಾಸ್ ಗೆಲ್ಲಲಿಲ್ಲ ಎಂಬ ಬೇಸರ ಇದೆಯೇ?
ಬಿಗ್ ಬಾಸ್ ಗೆಲ್ತೀನಿ, ಗೆಲ್ಲಲಿಲ್ಲ ಎಂಬ ಬೇಸರಕ್ಕಿಂತ ಜನರ ಒಂದು ರಿಯಾಕ್ಷನ್ ಬಗ್ಗೆ ಅಪಾರವಾದ ಪ್ರೀತಿ ಇದೆ. ಯಾರೂ ಅನುಭವಿಸುವುದಕ್ಕೆ ಆಗದೆ ಇರುವಂತಹ ಖುಷಿಯನ್ನು ನಾನು ಅನುಭವಿಸುತ್ತಿದ್ದೇನೆ. ಜನ ಇಷ್ಪಟ್ಟಿರುವುದರಿಂದ ನನಗೂ ತುಂಬಾ ಸಂತೋಷವಾಗಿದೆ.

*ಬಿಗ್ ಬಾಸ್ ನಿಂದ ಮರಳಿದ ಬಳಿಕ ಸೃಜನ್ ಬದಲಾಗಿದ್ದಾರಾ?
ಇಲ್ಲ ಇಲ್ಲ ನನಗೆ ಹಾಗೆನ್ನಿಸುತ್ತಿಲ್ಲ. ಬದಲಾಗಕ್ಕೆ ಹೋಗುವಂತಹ ಶೋ ಅದಲ್ಲ. ನಾವಾಗಿ ನಾವೇ ಆಯ್ಕೆ ಮಾಡಿಕೊಂಡು ಹೋಗಿರುವಂತಹ ಶೋ. ಅಲ್ಲಿ ಹೋಗಿ ಬದಲಾಗಬೇಕು ಎಂದುಕೊಂಡರೆ ಜನ ನಮ್ಮನ್ನು ಸ್ವೀಕರಿಸಲ್ಲ. ನಾವು ನಾವಾಗಿ ಹೋಗಿದ್ದಕ್ಕೆ ಜನ ಇಷ್ಟಪಟ್ಟಿರುವುದು. ನಾವು ಹೇಗಿರ್ತೀವೋ ಹಾಗೆಯೇ ಇದ್ದಿದ್ದಕ್ಕೆ ಎಲ್ಲರಿಗೂ ಇಷ್ಟವಾಗಿರುವುದು.

*ಬಿಗ್ ಬಾಸ್ ಎಲ್ಲರ ಮುಖವಾಡ ಕಳಚುವಲ್ಲಿ ಯಶಸ್ವಿಯಾಗಿದೆಯಾ?
ನನಗೆ ಗೊತ್ತಿಲ್ಲ. ಯಾಕೆಂದರೆ ನಾನು ಇನ್ನೂ ಆ ಎಪಿಸೋಡ್ ಗಳನ್ನು ನೋಡಿಲ್ಲ. ಯಾರ್ಯಾರು ಏನೇನು ಮಾತನಾಡಿದ್ದಾರೆ, ಆಚೆ ಕಡೆ ಹೇಗಿದ್ದಾರೆ ಎಂಬುದು ಏನೂ ಗೊತ್ತಿಲ್ಲ.

* ಬಿಗ್ ಬಾಸ್ ಮನೆಯಲ್ಲಿ ಏನು ಪಡೆದುಕೊಂಡಿರಿ, ಏನು ಕಳೆದುಕೊಂಡಿರಿ?
ಜನರನ್ನು ಪಡೆದುಕೊಂಡೆ, ಟೈಟಲನ್ನು ಕಳೆದುಕೊಂಡೆ.

* ನಿಮ್ಮ ಪ್ರಕಾರ ಬಿಗ್ ಬಾಸ್ ಅಂದ್ರೆ ಯಾರು?
ಬಿಗ್ ಬಾಸ್ ಆಟ ಆಡುವಂತಹ ಒಂದು ವೇದಿಕೆ. ಇಲ್ಲಿ ನೀವು ಹೇಗೆ ಆಡ್ತೀರ ಎಂಬುದಲ್ಲ, ಹೇಗೆ ನಡೆದುಕೊಳ್ತೀರ ಎಂಬುದು ಮುಖ್ಯ. ತನ್ನ ಕೋಪತಾಪ, ತಾಳ್ಮೆಗಳನ್ನು ಯಾರು ಸೂಕ್ತವಾಗಿ ಸಂಭಾಳಿಸುತ್ತಾರೋ, ಯಾರು ಅತ್ಯುತ್ತಮ ಉದಾಹರಣೆಯಾಗಿ ನಿಲ್ಲುತ್ತಾರೋ, ನಾನು ಇವನ ತರಹ ಇರಬೇಕು ಎಂದು ನಾಲ್ಕು ಜನ ಹೇಳುವಂಗೆ ಮಾಡುವವನೇ ಬಿಗ್ ಬಾಸ್.

Srujan Lokesh interview2

*ಬಿಗ್ ಬಾಸ್ ಮೊದಲೇ ಫಿಕ್ಸ್ ಆಗಿತ್ತು ಎಂಬ ಮಾತುಗಳಿಗೆ ನಿಮ್ಮ ಉತ್ತರ?
ಒಂದು ವೇಳೆ ನಿಮಗೆ ಉತ್ತರ ಸಿಕ್ಕಿದರೆ ದಯವಿಟ್ಟು ತಿಳಿಸಿ. ನನಗೂ ಬಹಳ ಕುತೂಹಲ ಇದೆ. ನಾನೂ ಅಷ್ಟೇ ಕುತೂಹಲದಿಂದ ನಿಮ್ಮ ಉತ್ತರಕ್ಕೆ ಕಾಯುತ್ತೇನೆ. ಫಿಕ್ಸ್ ಆಗಿದೆಯೋ ಇಲ್ಲವೋ ನನಗೇಗೆ ಗೊತ್ತು. ನನ್ನ ಮಟ್ಟಿಗೆ ಆ ರೀತಿ ಆಗಿರಲು ಸಾಧ್ಯವಿಲ್ಲ.

* ಬಿಗ್ ಬಾಸ್ ನಿಮ್ಮ ವೃತ್ತಿಜೀವನಕ್ಕೆ ಎಷ್ಟರ ಮಟ್ಟಿಗೆ ಸಹಕಾರಿಯಾಗಿದೆ?
ಬಂದು ಎರಡು ದಿನ ಆಗಿದೆ. ಇಲ್ಲಿಯವರೆಗೂ ಯಾವುದೇ ಆಫರ್ ಬಂದಿಲ್ಲ. ಇನ್ನೊಂದು ವಾರದಲ್ಲಿ ಏನಾದರೂ ಬರಬಹುದು. ಇದೆಲ್ಲಕ್ಕಿಂತಲೂ ಮುಖ್ಯವಾಗಿ ನನಗೆ ಸಿಕ್ಕಿರುವ ಜನರ ಪ್ರತಿಕ್ರಿಯೆ ತುಂಬಾ ಪಾಸಿಟೀವ್ ಆಗಿದೆ. ಫೇಸ್ ಬುಕ್ ನಲ್ಲಿ ನಾನು ಹಾಕಿರುವಂತಹ ಒಂದೊಂದು ಪೋಸ್ಟ್ ಗಳಿಗೆ ಸಾವಿರಸಾವಿರ ಸಂಖ್ಯೆಯಲ್ಲಿ ಲೈಕ್ಸ್ ಬರುತ್ತಿದೆ.

ಐವತ್ತು ಸಾವಿರ ಲೈಕ್ಸ್, ಆರು ಸಾವಿರ ಕಾಮೆಂಟ್ಸ್ ಬಂದಿದೆ. ಫೇಸ್ ಬುಕ್ ನಲ್ಲಿ ಯಾರೂ ಅಷ್ಟೆಲ್ಲಾ ಕಾಮೆಂಟ್ಸ್, ಲೈಕ್ಸ್ ಮಾಡಲ್ಲ. ಟ್ವಿಟ್ಟರ್ ನಲ್ಲೂ ಅದೇ ರೀತಿ ರೆಸ್ಪಾನ್ಸ್ ವ್ಯಕ್ತವಾಗಿದೆ. ಅದರಲ್ಲೇ ಗೊತ್ತಾಗುತ್ತದೆ ಜನ ಎಷ್ಟೆಲ್ಲಾ ವೈಯಕ್ತಿಕವಾಗಿ ತೆಗೆದುಕೊಂಡಿದ್ದಾರೆ ಎಂಬುದು. ನೀವು ಸೋತಿಲ್ಲ, ನಮ್ಮನ್ನು ಸೋಲಿಸಿದ್ದಾರೆ ಎಂಬಂತೆ ಜನ ಫೀಲ್ ಮಾಡಿಕೊಳ್ಳುತ್ತಿದ್ದಾರೆ.

Srujan Lokesh interview3

* ತುಂಬಾ ತಮಾಷೆಯಾಗಿರುತ್ತಿದ್ದ ಸೃಜನ್ ಬಿಗ್ ಬಾಸ್ ನಲ್ಲಿ ಯಾಕೆ ಡಲ್ ಆಗಿ ಕಾಣುತ್ತಿದ್ದರು?
ಇಲ್ಲಿ ಒಂದು ಗಂಟೆ ನನ್ನನ್ನು ನೋಡುತ್ತಿದ್ದರು. ಅಲ್ಲಿ ನಾನು 2,400 ಗಂಟೆಗಳನ್ನು ಕಳೆದಿದ್ದೀನಿ. ಅಂದರೆ ನೀವು ನೋಡಿರುವುದು ಕೇವಲ 100 ಗಂಟೆಗಳಷ್ಟು ಮಾತ್ರ. ಅಲ್ಲಿ ನಾನು ಹೋಗಿರುವುದು ಸಣ್ಣಪುಟ್ಟ ಮನರಂಜನೆ ನೀಡಲು ಅಲ್ಲ. ಶೋ ಇರುವುದು ವ್ಯಕ್ತಿಯ ಬಗ್ಗೆ ಅಲ್ಲವೇ ಅಲ್ಲ, ವ್ಯಕ್ತಿತ್ವದ ಬಗ್ಗೆ. ಒಬ್ಬ ದೊಡ್ಡ ಆಕ್ಷನ್ ಹೀರೋ ಬಂದ ಎಂದು ಅವನು ಇಪ್ಪತ್ತನಾಲ್ಕು ಗಂಟೆ ಫೈಟ್ ಮಾಡ್ತಿರಬೇಕಾ ಹೇಳಿ. ಮನೆಯವರ ಬಗ್ಗೆ ಯೋಚನೆ ಬಂದಾಗ, ಒತ್ತಡ ಪರಿಸ್ಥಿತಿಗಳು ಎದುರಾದಾಗ ಹೇಗೆ ನಿಭಾಯಿಸುತ್ತಾನೆ ಎಂಬುದು ಅಲ್ಲಿ ಮುಖ್ಯ. ಅಲ್ಲಿ ಎಲ್ಲರೊಂದಿಗೂ ಕಾಮಿಡಿ ಮಾಡಿಕೊಂಡಿದ್ರೆ ಅದನ್ನೇ ಸ್ಟ್ರಾಟೆಜಿ ಎಂದು ಭಾವಿಸುವ ಸಾಧ್ಯತೆಗಳೂ ಇವೆ. ಇದು ಡಲ್ ಅಲ್ಲ ಬುದ್ಧಿವಂತಿಕೆಯಿಂದ ಆಡಿದ್ದೇನೆ.

*ಮುಂದಿನ ಯೋಜನೆಗಳೇನು?
ಸೋಮವಾರದಿಂದ ಕೆಲಸಗಳನ್ನು ಆರಂಭಿಸುತ್ತಿದ್ದೇನೆ. ಈಗಾಗಲೆ ಎಲ್ಲಾ ಚಾನಲ್ ಗಳು ತಮ್ಮನ್ನು ಸಂಪರ್ಕಿಸಿವೆ. ಯಾವುದನ್ನು ಆಯ್ಕೆ ಮಾಡಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಮುಂದಿನ ವಾರದಲ್ಲಿ ಗೊತ್ತಾಗಬಹುದು.

English summary
The biggest reality shows in Kannada television 'Bigg Boss Kannanda 2' runner up Srujan Lokesh interview. He proudly says, "I truly feel like a winner". The reality star made himself free and shared his Bigg Boss experiences with Filmibeat Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada