Don't Miss!
- Technology
ಇನ್ಮುಂದೆ ನಿಮ್ಮ ಕೆಮ್ಮು ಮತ್ತು ಗೊರಕೆಗಳನ್ನು ಕೂಡ ಟ್ರ್ಯಾಕ್ ಮಾಡಲು ಗೂಗಲ್ ಪ್ಲಾನ್!
- Automobiles
ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಬಹುನೀರಿಕ್ಷಿತ ಕಾರು ಮಾದರಿಗಳಿವು!
- Sports
RCB vs RR: ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ಸಿಬಿ ಹೀನಾಯ ಸೋಲಿಗೆ ಈ 6 ಆಟಗಾರರೇ ಕಾರಣ!
- News
ಪಂಕ್ಚರ್ ಅಂಗಡಿ ಅನಕ್ಷರಸ್ಥನಿಂದ ವರ್ಷಕ್ಕೆ 7 ಕೋಟಿ ಸಂಪಾದನೆ
- Lifestyle
Today Rashi Bhavishya: ಶನಿವಾರದ ದಿನ ಭವಿಷ್ಯ: ಈ ರಾಶಿಯ ವ್ಯಾಪಾರಿಗಳಿಗೆ ಅದೃಷ್ಟದ ದಿನ
- Finance
ಕಾರು, ಬೈಕು ಖರೀದಿಗೆ ಮುನ್ನ ಗಮನಿಸಿ, ಜೂನ್ 1ರಿಂದ ವಿಮೆ ಮೊತ್ತ ಏರಿಕೆ
- Education
KCET 2022 Syllabus : 2022ರ ಸಿಇಟಿ ಪರೀಕ್ಷೆಯ ಪಠ್ಯಕ್ರಮ ರಿಲೀಸ್
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬದಲಾವಣೆಗೆ ಅವಕಾಶವನ್ನು ಹೊತ್ತು ತಂದಿದೆ 2021: ಮಂಸೋರೆ
ಮನುಕುಲದ ಕರಾಳ ವರ್ಷಗಳಲ್ಲಿ 2020 ಸಹ ಒಂದು ಈ ವರ್ಷ ಅನುಭವಿಸಿದ ಸಾವು-ನೋವು, ರೋಗದ ಭಯ, ಹಸಿವು, ಅಭದ್ರತೆ ಪ್ರಸ್ತುತ ಬದುಕಿರುವ ಯಾರೂ ಅನುಭವಿಸಿರಲಿಲ್ಲವೇನೋ. ಆದರೆ ಇಂದು ಎಷ್ಟು ಕರಾಳವಾಗಿರುತ್ತದೆಯೋ ಭವಿಷ್ಯದ ಬಗ್ಗೆ ನಿರೀಕ್ಷೆ ಅಷ್ಟೇ ತೀವ್ರವಾಗಿರುತ್ತದೆ.
2020 ರಲ್ಲಿ ಸಿಹಿಯುಂಡ ಕನ್ನಡ ಸಿನಿಮಾರಂಗದ ಕೆಲವೇ ಜನರಲ್ಲಿ ನಿರ್ದೇಶಕ ಮಂಸೋರೆ ಸಹ ಒಬ್ಬರು. ಅವರ ನಿರ್ದೇಶನದ ಸಿನಿಮಾ ಆಕ್ಟ್ 1978 ಹಿಟ್ ಎನಿಸಿಕೊಂಡಿದ್ದು ಮಾತ್ರವಲ್ಲದೆ ವಿಮರ್ಶಕರಿಂದಲೂ ಭೇಷ್ ಎನಿಸಿಕೊಂಡಿತು. ಅವರೇ ಹೇಳಿಕೊಳ್ಳುವಂತೆ, 'ನಮ್ಮ ಸಿನಿಮಾ ಆಕ್ಟ್-1978 ಜನರನ್ನು ಸೆಳೆದಿದ್ದು ಶೇ 10 ರಷ್ಟು ಸಂತಸ ತಂದಿದೆ. ಆದರೆ ಈ ವರ್ಷದಲ್ಲಿ ಸಾಲು-ಸಾಲು ಸಾವು-ನೋವು 90% ದುಃಖ ತಂದಿದೆ'.
ವರ್ಷ 2020 ತಮ್ಮ ಪಾಲಿಗೆ ಹೇಗಿತ್ತು, 2021 ರ ಬಗ್ಗೆ ನಿರೀಕ್ಷೆಗಳು, ವ್ಯಕ್ತಿಗತ ನೆಲೆಯಲ್ಲಿ ಹಾಕಿಕೊಂಡಿರುವ ಗುರಿಗಳು, ಸಿನಿಮಾ ರಂಗದ ಮೇಲೆ ನಿರೀಕ್ಷೆಗಲು, ಆಗಬಹುದಾಗಿರುವ ಬದಲಾವಣೆಗಳು ಇನ್ನೂ ಹಲವು ವಿಷಯಗಳ ಬಗ್ಗೆ ಮಂಸೋರೆ 'ಫಿಲ್ಮೀಬೀಟ್' ಜೊತೆ ಮಾತನಾಡಿದ್ದಾರೆ.

ಮೊದಲು ಕೊರೊನಾ ಭೀತಿ ತೊಲಗಬೇಕಿದೆ: ಮಂಸೋರೆ
2021 ರ ಹೊಸ ವರ್ಷದಲ್ಲಿ ತುರ್ತಾಗಿ ಆಗಬೇಕಾದುದ್ದು, ಕೊರೊನಾ ಭೀತಿ ಹೋಗಬೇಕಿದೆ. ಮನುಕುಲವನ್ನು ಆತಂಕಕ್ಕೆ ತಳ್ಳಿರುವ ಈ ವೈರಸ್ ಹೋಗಿ ನೆಮ್ಮದಿಯ ಉಸಿರು ಬಿಡುವಂತಾದರೆ, ಜನರು ನಿರ್ಭೀತಿಯಿಂದ ಬದುಕುವಂತಾದರೆ ಸಾಕು. ಈಗೇನೋ ಹೊಸ ವೈರಸ್ ಬಂದಿದೆ ಎಂದು ಮಾಧ್ಯಮಗಳು ಅದೇ ತಮ್ಮ ಧಾವಂತದ ಶೈಲಿಯಲ್ಲಿ ವರದಿ ಮಾಡುತ್ತಿವೆ, ಇದು ಜನರನ್ನು ಇನ್ನಷ್ಟು ಭೀತಗೊಳಿಸುತ್ತಿದೆ. ಕೊರೊನಾ ಹೋಗುವ ಜೊತೆಗೆ ನಮ್ಮ ಮಾಧ್ಯಮಗಳು ಇನ್ನಷ್ಟು ಸೂಕ್ಷ್ಮತೆಯನ್ನು ರೂಡಿಸಿಕೊಳ್ಳುವಂತಾಗಬೇಕು' ಎಂದರು ಮಂಸೋರೆ.

ಕರೋನೋತ್ತರ ಕಾಲ ಸಿನಿಮಾರಂಗಕ್ಕೆ ಮಹತ್ವದ ಕಾಲ: ಮಂಸೋರೆ
ಸಿನಿಮಾರಂಗದ ಬಗ್ಗೆ ಮಾತು ಹೊರಳಿಸಿದ ಮಂಸೋರೆ, 'ಕೊರೊನೋತ್ತರ ಕಾಲ ಸಿನಿಮಾರಂಗಕ್ಕೆ ಅತ್ಯಂತ ಪ್ರಮುಖವಾದುದು. ಕೊರೊನಾ ಸಮಯದಲ್ಲಿ ಬಹುದೊಡ್ಡ ಬಿಡುವು ಎಲ್ಲರಿಗೂ ದೊರೆತಿದೆ. ಈ ಅವಧಿಯಲ್ಲಿ ಪ್ರೇಕ್ಷಕರೂ ಸಹ 'ಅಪ್‌ಗ್ರೇಡ್' ಆಗಿದ್ದಾರೆ. ಸಿನಿಕರ್ಮಿಗಳು ಸಹ ತಮ್ಮನ್ನು ತಾವು ಅಪ್‌ಗ್ರೇಡ್ ಮಾಡಿಕೊಳ್ಳಲು ಇದು ಸಕಾಲ. ಇನ್ನೂ ಅದೇ ಹಳೆಯ ಕ್ಲೀಷೆ ಮಾದರಿಯ ಸಿನಿಮಾ ಕಂಟೆಂಟ್‌ಗಳಿಂದ ಹೊರಬರಲೇ ಬೇಕಾದ ಪರಿಸ್ಥಿತಿ ಕನ್ನಡ ಸಿನಿಮಾ ರಂಗದ ಎದುರಿಗಿದೆ' ಎಂದರು ಮಂಸೋರೆ.

'ನಾಲ್ಕು ಹಾಡು, ಐದು ಫೈಟ್' ಸೂತ್ರದಿಂದ ಹೊರಬರಬೇಕಿದೆ'
'ನಾಲ್ಕು ಹಾಡು, ಐದು ಫೈಟ್' ಮಾದರಿ ಸಿನಿಮಾಗಳಿಂದ ಹೊರಗೆ ಯೋಚನೆ ಮಾಡಬೇಕಿದೆ. ಇದು ಒಬ್ಬಿಬ್ಬರ ಕಾರ್ಯವಲ್ಲ, ಇದು ಸಂಘಟಿತ ಕಾರ್ಯವಾಗಿ ನಡೆಯಬೇಕಿದೆ. ಕೊರೊನಾ ಕಾಲದಲ್ಲಿ ಯಾರೂ ಸಹ ಮಾಸ್ ಸಿನಿಮಾಗಳ ಬಗ್ಗೆ ಮಾತನಾಡಿಲ್ಲ, ಚರ್ಚೆ ಆಗಿರುವುದು ಉತ್ತಮ ಕಂಟೆಂಟ್ ಇದ್ದ ಸಿನಿಮಾಗಳ ಬಗ್ಗೆ. ಜನರ ಜೀವನವನ್ನು ಅವರಿಗೆ ಕಟ್ಟಿಕೊಡಬೇಕಿದೆ, ಸಿನಿಮಾದಲ್ಲಿ ತಮ್ಮ ಜೀವನ ಹಾಗೂ ಅದರಲ್ಲಿನ ಸಮಸ್ಯೆಗಳಿಗೆ ಪರಿಹಾರವನ್ನು ಪ್ರೇಕ್ಷಕ ಹುಡುಕುವಂತೆ ಮಾಡಬೇಕಿದೆ. ಜನರ ಮನಸ್ಸು ತಟ್ಟುವ ಸಿನಿಮಾಗಳನ್ನು ನಾವು ಮಾಡಲೇ ಬೇಕಿದೆ ಎಂದರು ಮಂಸೋರೆ.

ರಾಣಿ ಅಬ್ಬಕ್ಕನ ಸಿನಿಮಾಕ್ಕೆ ತಯಾರಿ
2021 ರ ಗುರಿಗಳ ಬಗ್ಗೆ ಮಾತನಾಡಿದ ಮಂಸೋರೆ, '2020 ನ್ನು ತುಸು ಪಾಸಿಟಿವ್ ಆಗಿಯೇ ಮುಗಿಸಿದ್ದೇವೆ, ಈಗ ರಾಣಿ ಅಬ್ಬಕ್ಕನ ಕತೆ ಹೇಳಲು ಸಿದ್ಧತೆಯಲ್ಲಿ ತೊಡಗಿದ್ದೇನೆ. ಇದು ಬಹು ದೊಡ್ಡ ಕ್ಯಾನ್ವಸ್‌ನ ಸಿನಿಮಾ. ಐತಿಹಾಸಿಕ ಕತೆಯನ್ನು ಪ್ರಸ್ತುತ ಕಾಲಮಾನದ ಸಮಸ್ಯೆಗಳನ್ನು 'ಅಡ್ರೆಸ್' ಮಾಡುವ ರೀತಿ ತೆರೆಗೆ ತರುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ. ಅದೇ ಕೆಲಸದ ಮೇಲೆ ಮಂಗಳೂರು ಸೇರಿದಂತೆ ಹಲವು ಕಡೆಗಳು ಓಡಾಟಗಳು ನಡೆಸುತ್ತಿದ್ದೇನೆ' ಎಂದು ತಮ್ಮ ಮುಂದಿನ ಸಿನಿಮಾ ಬಗ್ಗೆ ಹೇಳಿದರು ಮಂಸೋರೆ.

ಈ ವರ್ಷವಾದರೂ ಮದುವೆ ಆಗಬೇಕೆಂದಿದ್ದೇನೆ: ಮಂಸೋರೆ
'ವೈಯಕ್ತಿಕ ಮಟ್ಟಿಗೆ ಹೇಳುವುದಾದರೆ ಹಳೆಯ ವರ್ಷ ಪೂರ್ಣಗೊಳಿಸಲಾಗದ ರೆಸಲ್ಯೂಷನ್‌ಗಳನ್ನು ಈ ವರ್ಷವೂ ಮುಂದುವರೆಸುತ್ತಿದ್ದೇನೆ. ಈ ವರ್ಷ ಓದಲಾಗದಿದ್ದ ಸಿನಿಮಾಗಳು, ನೋಡಲಾಗದ ಸಿನಿಮಾಗಳು, ವೆಬ್ ಸರಣಿಗಳು ಸಾಕಷ್ಟಿವೆ. 2021 ರಲ್ಲಿ ಅವನ್ನು ಮುಗಿಸುವ ಗುರಿ ಇದೆ. ಈ ವರ್ಷವಾದರೂ ಮದುವೆ ಆಗುವ ನಿರ್ಣಯ ಮಾಡಿದ್ದೇನೆ. ಕುಟುಂಬಕ್ಕೆ ಈ ವರ್ಷ ಹೆಚ್ಚು ಸಮಯ ಕೊಡಬೇಕು ಜೊತೆಗೆ ಹಳೆಯ ಸಾಲಗಳನ್ನು ತೀರಿಸಬೇಕು ಎಂದುಕೊಂಡಿದ್ದೇನೆ ಎಂದರು ಮಂಸೋರೆ.