Don't Miss!
- Sports
ರಿಷಭ್ ಪಂತ್ ಆರೋಗ್ಯದಲ್ಲಿ ಭಾರೀ ಚೇತರಿಕೆ: ಈ ವಾರವೇ ಆಸ್ಪತ್ರೆಯಿಂದ ಡಿಶ್ಚಾರ್ಜ್ ಸಾಧ್ಯತೆ
- News
Mangaluru cooker blast: ಸುಟ್ಟಗಾಯಗಳಿಂದ ಚೇತರಿಸಿಕೊಂಡ ಆರೋಪಿಯನ್ನು ವಶಕ್ಕೆ ಪಡೆಯಲಿರುವ ಎನ್ಐಎ
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಂದರ್ಶನ: 'ಗೋರಿ’ಯಿಂದ ಬಂದ ಬಂಗಾರಿ ಶ್ವೇತಾ!
ಕನ್ನಡದಲ್ಲಿ ಶ್ವೇತಾ ಎನ್ನುವ ನಟಿಯರಿಗೆ ಕೊರತೆಯಿಲ್ಲ. ಶ್ವೇತಾ ಪಂಡಿತ್, ಶ್ವೇತಾ ಶ್ರೀವತ್ಸ, ಶ್ವೇತಾ ಚೆಂಗಪ್ಪ.. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇವರ ನಡುವೆ ಹೊಸದಾಗಿ ಬಂದಿರುವ ಶ್ವೇತಾ ಕನ್ನಡಕ್ಕೆ ಎಂಟ್ರಿಯಾಗಿರುವ ಚಿತ್ರದ ಹೆಸರು ಗೋರಿ. ಹಾಗಂತ ಮುಂದೆ ಗೋರಿ ಶ್ವೇತಾ ಅಂತ ಫೇಮಸ್ಸಾಗ್ತಾರೋ ಗೊತ್ತಿಲ್ಲ. ಬಾಲಿವುಡ್ ಮಂದಿಯಂತೂ ಈಕೆಯನ್ನು 'ಗೋರಿ ಶ್ವೇತಾ' ಎಂದು ಖಂಡಿತವಾಗಿ ಒಪ್ಪಬಹುದು! ಯಾಕೆಂದರೆ ಈಕೆ ಬಿಳಿ ಮೈಬಣ್ಣದ ಸುಂದರಿಯೂ ಹೌದು.
ಸದ್ಯಕ್ಕೆ ಕನ್ನಡದಲ್ಲಿ ಎರಡು, ಮೂರು ಚಿತ್ರಗಳಲ್ಲಿ ನಟಿಸುತ್ತಿರುವ ಶ್ವೇತಾ ಮೂಲತಃ ಧಾರವಾಡದವರು. ಆದರೆ ಮಂಗಳೂರಿನಲ್ಲಿ ವೈದ್ಯಕೀಯ ವಿಭಾಗದಲ್ಲಿ ವೃತ್ತಿಯಲ್ಲಿರುವ ಶ್ವೇತಾಗೆ ಸಿನಿಮಾರಂಗದ ಪ್ರವೇಶವಾಗಿದ್ದು ಆಕಸ್ಮಿಕ. ಅದು ಕೂಡ ತುಳು ಸಿನಿಮಾದ ಮೂಲಕ. ಎಲ್ಲಿಯ ತುಳು? ಎಲ್ಲಿಯ ಉತ್ತರ ಕರ್ನಾಟಕ? ಕೋರಿ ರೊಟ್ಟಿ' ಎನ್ನುವ ಆ ಚಿತ್ರದಿಂದ ಗೋರಿ' ತನಕದ ಪಯಣವನ್ನು ಶ್ವೇತಾ ಅವರು ಫಿಲ್ಮೀಬೀಟ್ ಜತೆಗೆ ಇಲ್ಲಿ ಹಂಚಿಕೊಂಡಿದ್ದಾರೆ.

ನಿಮ್ಮ ಎಂಟ್ರಿ ತುಳು ಸಿನಿಮಾ ಮೂಲಕ ಆಗಿದ್ದು ಹೇಗೆ?
ನಾನು ಉತ್ತರ ಕರ್ನಾಟಕದ ಹುಡುಗಿಯಾದರೂ, ಯಾಕೋ ಮೊದಲಿನಿಂದಲೂ ಮಂಗಳೂರು ಅಂದರೆ ನನಗೆ ತುಂಬ ಇಷ್ಟ! ಧಾರವಾಡದಲ್ಲೇ ಡಿಪ್ಲೊಮ ಇನ್ ಮೆಡಿಕಲ್ ಲ್ಯಾಬರೇಟರಿ ಟೆಕ್ನಾಲಜಿ ಮುಗಿಸಿದ ಬಳಿಕ, ನನಗೆ ಬೆಂಗಳೂರಲ್ಲೇ ಇಂಟನ್ಷಿಪ್ ದೊರಕಿದರೂ ಬದಲಾಯಿಸಿಕೊಂಡು ಮಂಗಳೂರಿಗೆ ಬಂದೆ! ಮಂಗಳೂರಲ್ಲಿ ತುಳು ಚಿತ್ರರಂಗ ಚೆನ್ನಾಗಿ ಬೆಳೆದು ನಿಂತಿದೆ. `ಕೋರಿರೊಟ್ಟಿ' ಎನ್ನುವ ಸಿನಿಮಾದ ನಿರ್ದೇಶಕರು ಫೇಸ್ಬುಕ್ ನಲ್ಲಿ ನನ್ನ ಫೊಟೋ ನೋಡಿ, ತಮ್ಮ ಚಿತ್ರದ ಒಂದು ಬೋಲ್ಡ್ ಪಾತ್ರಕ್ಕೆ ನಾನೇ ಸೂಟ್ ಆಗುವುದಾಗಿ ತಿಳಿಸಿ ಭೇಟಿಯಾದರು. ಚಿತ್ರಕ್ಕೆ ನಾಯಕಿಯಾಗಿ ನಿರೂಪಕಿ ಅನುಶ್ರೀಯವರು ಆಯ್ಕೆಯಾಗಿದ್ದರು. ಅದುವರೆಗೆ ಸಿನಿಮಾ ಬಗ್ಗೆ ಯೋಚಿಸಿರಲಿಲ್ಲವಾದರೂ, ಹೊಸದೊಂದು ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳೋಣ ಎನ್ನುವ ತೀರ್ಮಾನಕ್ಕೆ ಬಂದೆ. ಹಾಗೆ ನಟಿಯಾದೆ.

ಒಂದೇ ಚಿತ್ರದ ಬಳಿಕ ತುಳುವಿನಿಂದ ಕನ್ನಡದತ್ತ ಹೊರಳಿದ್ದೇಕೆ?
ತುಳು ಸಿನಿಮಾ ಸ್ಥಳೀಯವಾಗಿ ಮಾತ್ರ ಗುರುತಿಸಲ್ಪಡುತ್ತದೆ. ನನ್ನ ಊರಿನ ಮಂದಿಗೂ ತೋರಿಸುವ, ಅರ್ಥ ಮಾಡಿಸುವ ಹಾಗೆ ಇರುವುದಿಲ್ಲ. ಅದಕ್ಕಾಗಿ ನನ್ನ ಮನೆಯಲ್ಲಿಯೂ ತುಳು ಚಿತ್ರ ಮಾಡಬೇಡ ಎಂದರು. ಮಂಗಳೂರು ಕರಾವಳಿಯಲ್ಲಿ ತುಳು ಸಿನಿಮಾಗಳು ಉತ್ತಮ ಪ್ರದರ್ಶನವನ್ನೇ ಕಾಣುತ್ತವೆ. ಹಾಗಾಗಿ `ಕೋರಿರೊಟ್ಟಿ' ಕೂಡ ಚೆನ್ನಾಗಿಯೇ ಜನಮನರಂಜಿಸಿತ್ತು. ಆದರೆ ಅದರ ಚಿತ್ರೀಕರಣ ಪೂರ್ತಿಯಾಗುವ ಮುನ್ನವೇ ನನಗೆ `ಲೈಟ್ ಆಗಿ ಲವ್ವಾಗಿದೆ' ಎನ್ನುವ ಚಿತ್ರದಲ್ಲಿ ಆಫರ್ ಬಂತು. ಅದು ಉತ್ತರ ಕರ್ನಾಟಕದ ಮಂದಿಯ ಚಿತ್ರವಾಗಿತ್ತು. ಗಾಯಕ ಚೆನ್ನಪ್ಪ ಹುದ್ದಾರ್ ಮೊದಲಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಕಳೆದ `ವ್ಯಾಲಂಟೈನ್ ಡೇ' ಯಂದು ಚಿತ್ರ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪ್ರದರ್ಶನ ಕಂಡಿತ್ತು.

ಇದೀಗ ನಾಲ್ಕಾರು ಚಿತ್ರಗಳಲ್ಲಿ ನಟಿಸಿದ್ದೀರಿ. ವಿಭಿನ್ನ ಪಾತ್ರಗಳು ದೊರಕಿವೆಯೇ?
`ಕೋರಿ ರೊಟ್ಟಿ'ಯಲ್ಲಿ ಸಿಗರೇಟ್ ಸೇದುವ ಮೊದಲಾದ ಬೋಲ್ಡ್ ದೃಶ್ಯಗಳಿದ್ದವು. `ಲೈಟ್ ಆಗಿ ಲವ್ ಆಗಿದೆ' ಸಿನಿಮಾದಲ್ಲಿ ಬಬ್ಲಿಯಾಗಿ ವರ್ತಿಸುತ್ತಾ ಹುಡುಗರನ್ನು ಯಾಮಾರಿಸುವಂಥ ಪಾತ್ರ ನನ್ನದಾಗಿತ್ತು. ಅದು ಉತ್ತರ ಕರ್ನಾಟಕದಲ್ಲಿ 25 ದಿನಗಳ ಕಾಲ ಪ್ರದರ್ಶನ ಕಂಡಿದೆ. ಈ ಚಿತ್ರದ ಸೆಕೆಂಡ್ ಶೆಡ್ಯೂಲ್ ಶೂಟ್ ನಡೆಯುತ್ತಿರಬೇಕಾದರೇನೇ `ಗೋರಿ' ಚಿತ್ರದ ಆಫರ್ ಬಂದಿತ್ತು. ಅದರಲ್ಲಿ ನನ್ನ ಪಾತ್ರಕ್ಕೆ ಮೂರು ಶೇಡ್ ಗಳಿವೆ.
ಹಿಂದು, ಮುಸಲ್ಮಾನ್ ಮತ್ತು ಕ್ರಿಶ್ಚಿಯನ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ! ಗೋರಿಯಲ್ಲಿನ ಮೂರು ಶೇಡ್ ಕೂಡ ಸಂಪ್ರದಾಯಬದ್ಧವಾದ ಸ್ತ್ರೀಯರನ್ನು ಪ್ರತಿನಿಧಿಸುವಂಥ ಪಾತ್ರ. `ರಿಯಾ'ದಲ್ಲಿ ನಾಯಕಿಯಾಗಿದ್ದು, `ಮಹಾರಾಣಿ' ಧಾರಾವಾಹಿಯ ವಿನೋದ್ ಪಾಟೀಲ್ ಗೆ ಜೋಡಿಯಾಗಿ ನಟಿಸಿದ್ದೇನೆ. `ಯುವರತ್ನ'ದಲ್ಲಿ ನಾಯಕಿಯ ಸ್ನೇಹಿತೆಯ ಪಾತ್ರದಲ್ಲಿ ಮೆಡಿಕಲ್ ಪ್ರೊಫೆಸರ್ ಆಗಿ ಕಾಣಿಸಿಕೊಂಡಿದ್ದೇನೆ.

ಬಾಲ್ಯದಲ್ಲಿ ನಿಮಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿ ಇತ್ತೇ?
ಶಾಲಾ ದಿನಗಳಲ್ಲಿ ನಾನು ಸಾಂಸ್ಕೃತಿಕ ವಿಭಾಗಕ್ಕಿಂತ ಆಟೋಟ ಸ್ಪರ್ಧೆಗಳಲ್ಲಿ ಗುರುತಿಸಿಕೊಂಡಿದ್ದೆ! ಬೆಸೆಲ್ ಮಿಷನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಬಳಿಕ ಧಾರವಾಡದ ಕರ್ನಾಟಕ ಕಾಲೇಜ್ ನಲ್ಲಿ ಪ್ರಥಮ ಪಿಯುಸಿ ಮಾಡಿದೆ. ಆದರೆ ಎರಡನೇ ವರ್ಷ ಪೂರ್ತಿ ಮಾಡಿದ್ದು ಹುಬ್ಬಳ್ಳಿಯ ಚೇತನಾ ಕಾಲೇಜ್ ನಲ್ಲಿ. ಮಂಗಳೂರಿನಲ್ಲಿ ಪ್ಯಾತಲಾಜಿಸ್ಟ್ ಆಗಿ ಲ್ಯಾಬ್ ಟೆಕ್ನಿಶಿಯನ್ ಎಂದು ಗುರುತಿಸಿಕೊಂಡ ಬಳಿಕ ನನ್ನ ಹವ್ಯಾಸಗಳೆಂದರೆ ಬೆಳಿಗ್ಗೆ `ತಣ್ಣೀರು ಬಾವಿ' ಎನ್ನುವ ಬೀಚ್ ಪಕ್ಕ ಹೋಗಿ ಯೋಗಾಸನ ಮಾಡುವುದು, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವುದು ಅಷ್ಟೇ ಆಗಿತ್ತು.
ಇದುವರೆಗೆ ಟಿಕ್ಟಾಕ್, ಡಬ್ಸ್ಮಾಶ್ ಏನೂ ಮಾಡಿರದ ನನ್ನನ್ನು ನಟಿಯಾಗುವಂತೆ ಮಾಡಿದ್ದು ಸಮಯ, ಸಂದರ್ಭ ನೀಡಿದಂಥ ಅವಕಾಶ ಎಂದಷ್ಟೇ ನಾನು ಹೇಳಬಲ್ಲೆ. ಆದರೆ ಈಗ ಸಿನಿಮಾಗೆ ಸಂಬಂಧಿಸಿದಂತೆ ಡ್ಯಾನ್ಸ್ ತರಬೇತಿ ಪಡೆಯುತ್ತಿದ್ದೇನೆ. ಚಿತ್ರರಂಗದಲ್ಲಿ ಉತ್ತಮ ನಟಿಯಾಗಿ ಒಳ್ಳೆಯ ಹೆಸರು ಮಾಡಬೇಕೆನ್ನುವ ಆಕಾಂಕ್ಷೆ ಇದೆ. ಸಣ್ಣ ಪಾತ್ರವೇ ಆದರೂ ಅದಕ್ಕೆ ಚಿತ್ರದಲ್ಲಿ ಪ್ರಾಮುಖ್ಯತೆ ಇರಬೇಕು ಎಂದು ಬಯಸುತ್ತೇನೆ.

ಹೊಸ ಸಿನಿಮಾ ವಿಶೇಷಗಳ ಬಗ್ಗೆ ಹೇಳಿ
ಪ್ರಸ್ತುತ `ಗ್ರಂಥಾಲಯ' ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಅದರಲ್ಲಿ ಉಡುಪಿಯ ವಿಕಾಸ್ ಶೆಟ್ಟಿ ನಾಯಕ. `ಯುವರತ್ನ' ಚಿತ್ರದ ಸೆಟ್ ನಲ್ಲಿ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿಯಾಗಿ ಮಾತನಾಡಿದ್ದು ಕೂಡ ನನ್ನ ಪಾಲಿಗೆ ವಿಶೇಷವೇ. ಇನ್ನು ಸದ್ಯಕ್ಕೆ `ಗೋರಿ' ಸಿನಿಮಾ ಬಿಡುಗಡೆಯ ತಯಾರಿ ನಡೆದಿದೆ. ಅದನ್ನು ಮಾಡಬೇಕಾದರೆ ನಮ್ಮೂರಿನವರ ಸಿನಿಮಾ ಎನ್ನುವ ಆತ್ಮೀಯತೆ ನನ್ನೊಳಗಿತ್ತು. ಅದರಲ್ಲಿ ನಾನು ನಾಯಕಿಯಾದರೂ ಯಾವತ್ತೂ ನಾಯಕಿಯಂತೆ ತೋರಿಸಿಕೊಂಡಿಲ್ಲ. ಸೆಟ್ ನಲ್ಲಿ ಕಸ ಹೊಡೆಯುವುದಕ್ಕೂ ಸಿದ್ಧವಾಗಿದ್ದೆ! ಅದು ನಾವೆಲ್ಲ ಸೇರಿ ಕಷ್ಟಪಟ್ಟು, ಇಷ್ಟಪಟ್ಟು ಮಾಡಿರುವ ಚಿತ್ರ. ಒಳ್ಳೆಯ ವಿಚಾರಗಳಿವೆ. ನಾಯಕರಾಗಿ ನವನಟ ಕಿರಣ್ ಚೆನ್ನಾಗಿ ನಟಿಸಿದ್ದಾರೆ. ನಿಮ್ಮೆಲ್ಲರ ಪ್ರೋತ್ಸಾಹ ಇರಲಿ.